Year End Special 2024: ಜೋಡಿಗಳನ್ನು ಸೆಳೆದ ಭಾರತದ ಟಾಪ್ 5 ಹನಿಮೂನ್ ತಾಣಗಳು
ಜನರ ಪ್ರವಾಸ ಹೋಗುವ ಸ್ಥಳಗಳ ಆಯ್ಕೆಗಳು ಬದಲಾಗುತ್ತಿವೆ. ಅದರಲ್ಲೂ 2024ರಲ್ಲಿ ಭಾರತದ ಜೋಡಿಗಳು ಮಧುಚಂದ್ರಕ್ಕೆ ಆಯ್ಕೆ ಮಾಡಿದ ಸ್ಥಳಗಳು ಯಾವುದು?. ಡಿಸೆಂಬರ್ ಅಂತ್ಯದಲ್ಲಿ ಈ ಕುರಿತು ಪಟ್ಟಿ ಹೊರ ಬಂದಿದೆ. ಮೊದಲು ಜೋಡಿಗಳು ವಿದೇಶಕ್ಕೆ ಹಾರುತ್ತಿದ್ದರು. ಆದರೆ ಈ ವರ್ಷ ಭಾರತದ ವಿವಿಧ ಸ್ಥಳಗಳನ್ನು ಹನಿಮೂನ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ. ಅಂತಹ ಟಾಪ್ 5 ಪ್ರವಾಸಿ ತಾಣಗಳ ಮಾಹಿತಿ ಈಗ ಬಹಿರಂಗವಾಗಿದೆ.
ಬೀಚ್‌ಗಳಿಂದ ಹಿಡಿದು ಬೆಟ್ಟಗುಡ್ಡದ ತನಕ ಭಾರತದ ವಿವಿಧ ಪ್ರವಾಸಿ ತಾಣಗಳಿಗೆ ಈ ವರ್ಷ ಹನಿಮೂನ್‌ಗೆ ಜೋಡಿಗಳು ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ದೇಶದ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಾಗಿದೆ, ಜೋಡಿಗಳ ಹನಿಮೂನ್ ಖರ್ಚು ಸಹ ಕಡಿಮೆಯಾಗಿದೆ. ಈ ವರ್ಷ ಜೋಡಿಗಳು ಹೆಚ್ಚಾಗಿ ವಿದೇಶಕ್ಕೆ ಹೋಗಿಲ್ಲ ಎಂಬ ಮಾಹಿತಿ ಈಗ ಗೊತ್ತಾಗಿದೆ.

2024ರಲ್ಲಿ ಭಾರತದ ಹಲವು ಪ್ರವಾಸಿ ತಾಣಗಳು ಜೋಡಿಗಳ ಗಮನ ಸೆಳೆದಿವೆ. ಗೂಗಲ್‌ನಲ್ಲಿ ಹುಟುಕಾಟ ನಡೆಸಿ, ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಜೋಡಿಗಳು ದೇಶದಲ್ಲೇ ಹನಿಮೂನ್ ಮುಗಿಸಿದ್ದಾರೆ. ಈ ವರ್ಷದ ಟಾಪ್ 5 ಹನಿಮೂನ್ ಪ್ರದೇಶಗಳು ಯಾವುದು? ಎಂದು ಎನ್‌ಡಿಟಿವಿ ಪಟ್ಟಿ ಮಾಡಿದೆ. ಈ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಿದ ಅಂಕಿ-ಸಂಖ್ಯೆಗಳ ಮಾಹಿತಿ ಅನ್ವಯ ಈ ಪಟ್ಟಿ ತಯಾರು ಮಾಡಲಾಗಿದೆ.
ಟಾಪ್ 5 ಹನಿಮೂನ್ ತಾಣಗಳು: ಜೋಡಿಗಳ ಹನಿಮೂನ್ ತಾಣದ ಮೊದಲ ಆಯ್ಕೆ ಮನಾಲಿಯಾಗಿತ್ತು. ನೈಸರ್ಗಿಕ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಸೆಳೆಯುವ ತಾಣ ಮನಾಲಿ ಹಿಮಾಚಲ ಪ್ರದೇಶದಲ್ಲಿದೆ. ಮನಾಲಿಗೆ ಭೇಟಿ ನೀಡಿ ನಿಸರ್ಗ ಸೌಂದರ್ಯ ಸವಿಯುವ ಜೊತೆಗೆ ವಿವಿಧ ಸಾಹಸ ಕ್ರೀಡೆಗಳಲ್ಲಿ ಸಹ ಪಾಲ್ಗೊಳ್ಳಬಹುದು. ಆದ್ದರಿಂದ ಮನಾಲಿ ಈ ವರ್ಷ ಜೋಡಿಗಳ ಗಮನ ಸೆಳೆದಿದೆ. ಪ್ಯಾರಾ ಗೈಡಿಂಗ್, ಟ್ರಕ್ಕಿಂಗ್ ಸೇರಿದಂತೆ ವಿವಿಧ ಕ್ರೀಡೆಗಳು ಮನಾಲಿಯಲ್ಲಿದ್ದು, ಜೋಡಿಗಳು ಈ ವರ್ಷ ಅತಿ ಹೆಚ್ಚು ಈ ತಾಣಕ್ಕೆ ಭೇಟಿ ನೀಡಿ ರಿಲ್ಯಾಕ್ಸ್ ಆಗಿದ್ದಾರೆ.
ಈ ವರ್ಷ ಜೋಡಿಗಳ ಗಮನ ಸೆಳೆದ ಮತ್ತೊಂದು ಪ್ರವಾಸಿ ತಾಣ ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್. ಇದು ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಹಿಮಭರಿತ ಮತ್ತು ಅಂಕುಡೊಂಕಾದ ವಾಕಿಂಗ್ ಟ್ರ್ಯಾಕ್‌ಗಳನ್ನು, ಕಣಿವೆಗಳನ್ನು ಹೊಂದಿರುವ ಈ ಪ್ರದೇಶ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿನ ಸ್ವಚ್ಚಂಧವಾದ ಪರಿಸರ ಪ್ರವಾಸಿಗರನ್ನು ಸದಾ ಸೆಳೆಯುತ್ತದೆ. ಕಾಂಚನಜುಂಗಾ ಬೆಟ್ಟಕ್ಕೆ ಭೇಟಿ ನೀಡಿ ವಿಭಿನ್ನ ಅನುಭವವನ್ನು ಜೋಡಿಗಳು ಪಡೆದಿದ್ದಾರೆ. ಡಾರ್ಜಿಲಿಂಗ್‌ನಲ್ಲಿ ಪ್ರವಾಸಿಗರಿಗೆ ಇರುವ ಸೌಲಭ್ಯಗಳ ಹಿನ್ನಲೆಯಲ್ಲಿ ಸಹ ಇದು ಈ ವರ್ಷ ಜೋಡಿಗಳನ್ನು ಸೆಳೆದಿದೆ.
2024ರಲ್ಲಿ ನವ ಜೋಡಿಗಳನ್ನು ಸೆಳೆದ ಮತ್ತೊಂದು ಪ್ರದೇಶ ಶ್ರೀನಗರ. ಜಮ್ಮು ಮತ್ತು ಕಾಶ್ಮೀರ ಸದಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹಿಮಾವೃತವಾದ ಬೆಟ್ಟಗುಡ್ಡಗಳು, ಚುಮು ಚುಮು ಚಳಿ, ಹೌಸ್ ಬೋಟ್ ವಾಸ್ತವ್ಯ ಮುಂತಾದ ಕಾರಣಗಳಿಗೆ ಶ್ರೀನಗರಕ್ಕೆ ಅತಿ ಹೆಚ್ಚಿನ ಜೋಡಿಗಳು ಭೇಟಿ ನೀಡಿದ್ದಾರೆ. ಅದರಲ್ಲೂ ಹಿಮಾ ಬೀಳುವುದು ಆರಂಭವಾದ ಬಳಿಕ ಹಲವು ಜೋಡಿಗಳು ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಗೋವಾ ನವ ಜೋಡಿಗಳ 2024ರ ಹನಿಮೂನ್ ಪ್ರದೇಶದ ಆಯ್ಕೆಯಲ್ಲಿ ಸೇರಿವೆ. ಸಮುದ್ರವನ್ನು ಇಷ್ಟ ಪಡುವವರು, ಕರಾವಳಿ ಭಾಗದ ಆಹಾರವನ್ನು ಅತಿಯಾಗಿ ಇಷ್ಟಪಡುವ ಜೋಡಿಗಳು ಗೋವಾದತ್ತ ಹೆಚ್ಚಾಗಿ ಆಗಮಿಸಿದ್ದಾರೆ. ಆದರೆ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಡಿಮೆ. ಜೋಡಿಗಳ ನೆಚ್ಚಿನ ಭಾರತದ ಹನಿಮೂನ್ ತಾಣಗಳಲ್ಲಿ ಗೋವಾ 4ನೇ ಸ್ಥಾನದಲ್ಲಿದೆ. ಉತ್ತರ ಗೋವಾಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಗೋವಾದತ್ತ ಹೆಚ್ಚಿನ ಜೋಡಿಗಳು ಆಗಮಿಸಿದ್ದಾರೆ. ಪಾರ್ಟಿ, ಬೀಚ್‌ಗಳು, ಜಲ ಸಾಹಸ ಕ್ರೀಡೆಗಳು, ಕರಾವಳಿಯ ತಹೇವಾರಿ ಖಾದ್ಯಗಳಿಗಾಗಿ ಗೋವಾದತ್ತ ಜೋಡಿಗಳು ಆಗಮಿಸಿದ್ದಾರೆ.
ಲಕ್ಷದ್ವೀಪ ಭಾರತದಲ್ಲಿ ಜೋಡಿಗಳ ಹನಿಮೂನ್ ತಾಣಗಳಲ್ಲಿ 5ನೇ ಸ್ಥಾನದಲ್ಲಿದೆ. ಬೀಚ್ ಇಷ್ಟಪಡುವವರು ಲಕ್ಷದ್ವೀಪದತ್ತ ಹೆಚ್ಚು ಆಗಮಿಸಿದ್ದಾರೆ. ಬೇರೆ ದೇಶಗಳ ಬೀಚ್‌ಗಳಿಗೆ ಹೋಗುವ ಆಗುವ ಖರ್ಚಿಗಿಂತ ಕಡಿಮೆ ಖರ್ಚಿನಲ್ಲಿ ಲಕ್ಷದ್ವೀಪದಲ್ಲಿ ಹನಿಮೂನ್ ಮುಗಿಸಬಹುದು. ಭಾರತ ಸರ್ಕಾರ ಸಹ ಲಕ್ಷದ್ವೀಪ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜಲ ಸಾಹಸ ಕ್ರೀಡೆಗಳು, ಶಾಂತಿಯುತ ವಾತಾರಣದ ಕಾರಣಕ್ಕೆ ಲಕ್ಷದ್ವೀಪ ನವ ಜೋಡಿಗಳಿಗೆ ಅತಿ ಹೆಚ್ಚು ಇಷ್ಟವಾಗಿದೆ.
ಪ್ರವಾಸಿ ಪ್ಯಾಕೇಜ್ ಆಯೋಜನೆ ಮಾಡುವವರ ಮಾಹಿತಿಯಂತೆ ಈ ವರ್ಷ ಜೋಡಿಗಳು ಹೆಚ್ಚಾಗಿ ಭಾರತದಲ್ಲಿನ ಪ್ರದೇಶಗಳನ್ನೇ ಮಧುಚಂದ್ರದ ತಾಣವಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಬೀಚ್‌ಗಳಿಂದ ಬೆಟ್ಟಗುಡ್ಡಗಳ ತನಕ ವಿವಿಧ ಪ್ರದೇಶಗಳು ಸೇರಿವೆ. ಇನ್ನೂ ಡಿಸೆಂಬರ್ ತಿಂಗಳಿನಲ್ಲಿ ದಿನಗಳು ಬಾಕಿ ಇದ್ದು, ವರ್ಷಾಂತ್ಯಕ್ಕೆ ವಿವಿಧ ಪ್ರವಾಸಿ ತಾಣಗಳಿಗೆ ಜೋಡಿಗಳು ಮತ್ತೊಮ್ಮೆ ಲಗ್ಗೆ ಇಡುವ ನಿರೀಕ್ಷೆಯೂ ಇದೆ.











Click it and Unblock the Notifications