Year end 2022; ಸ್ವಿಗ್ಗಿ ವರ್ಷದ ವ್ಯಕ್ತಿ ಕಿರೀಟ ಬೆಂಗಳೂರಿಗನಿಗೆ!
2022ನೇ ವರ್ಷ ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ದೇಶದಲ್ಲಿ ಆಹಾರ ಡೆಲಿವರಿಯಲ್ಲಿ ಸ್ವಿಗ್ಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಾಗಾದರೆ ಸ್ವಿಗ್ಗಿಯಲ್ಲಿ ವರ್ಷದಲ್ಲಿ ಒಂದೇ ದಿನ ಅತಿ ಹೆಚ್ಚು ರೂಪಾಯಿಗಳ ಆರ್ಡರ್ ಮಾಡಿದವರು ಯಾರು? ಎಂಬುದು ಸದ್ಯದ ಪ್ರಶ್ನೆ.
ಈ ವರ್ಷ ಒಂದೇ ದಿನ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿರುವುದು ಬೆಂಗಳೂರಿನ ವ್ಯಕ್ತಿ. ಹೌದು ಸ್ವಿಗ್ಗಿ ಈ ಕುರಿತು ಮಾಹಿತಿ ನೀಡಿದೆ. ದೀಪಾವಳಿ ಸಮಯದಲ್ಲಿ ಉದ್ಯಾನ ನಗರಿ ವ್ಯಕ್ತಿಯೊಬ್ಬರು 75,378 ರೂಪಾಯಿಗಳ ಆರ್ಡರ್ ಮಾಡಿದ್ದಾರೆ. 2ನೇ ಸ್ಥಾನ 71,229 ರೂ. ಬುಕ್ ಮಾಡಿದ ಪುಣೆಯ ವ್ಯಕ್ತಿ ಪಾಲಾಗಿದೆ.
'ನಮ್ಮಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ವ್ಯಕ್ತಿ ಬೆಂಗಳೂರಿನವರು. ಅಕ್ಟೋಬರ್ ತಿಂಗಳಿನಲ್ಲಿ ಅವರು 75,378 ರೂ. ಆರ್ಡರ್ ಮಾಡಿದ್ದಾರೆ. ಪುಣೆಯ ವ್ಯಕ್ತಿ ತಮ್ಮ ತಂಡಕ್ಕಾಗಿ ಬರ್ಗರ್‌ಗಾಗಿಯೇ 71,229 ರೂ. ವೆಚ್ಚ ಮಾಡಿದ್ದಾರೆ' ಎಂದು ಸ್ವಿಗ್ಗಿ ಹೇಳಿದೆ.

ಬೆಂಗಳೂರಿನ ಮತ್ತೊಬ್ಬ ವ್ಯಕ್ತಿ ಒಂದು ವಾರದಲ್ಲಿ 118 ಬಾರಿ ಒಂದೇ ಖಾದ್ಯವನ್ನು ಆರ್ಡರ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸ್ವಿಗ್ಗಿ ಉಚಿತ ಡೆಲಿವರಿಯನ್ನು ಬಳಕೆ ಮಾಡಿರುವವರಲ್ಲಿ ಬೆಂಗಳೂರಿನವರೇ ಮೊದಲಿಗರು.
ಉಚಿತ ಡೆಲಿವರಿ ಮಾಹಿತಿ; ಸ್ವಿಗ್ಗಿ ಒನ್ ಸಬ್‌ಸ್ಕ್ರೈಬ್ ಮಾಡಿಕೊಂಡರೆ ಉಚಿತ ಡೆಲಿವರಿ ನೀಡಲಾಗುತ್ತದೆ. ಇದನ್ನು ಬಳಕೆ ಮಾಡಿದವರಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ, ಹೈದರಾಬಾದ್ ಮತ್ತು ನವದೆಹಲಿ ಇದೆ.
2022ರಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ ಬಿರಿಯಾನಿಯಾಗಿದೆ. ಕಂಪನಿಯ ಮಾಹಿತಿ ಅನ್ವಯ ಒಂದು ನಿಮಿಷದಲ್ಲಿ 137 ಪ್ಲೇಟ್ ಬಿರಿಯಾನಿ ಆರ್ಡರ್ ಮಾಡಲಾಗಿದೆ. 2021ರಲ್ಲಿ ಪ್ರತಿ ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ ಮಾಡಲಾಗಿತ್ತು.

ಮಸಾಲೆ ದೋಸೆ ದೇಶದಲ್ಲಿ ಹೆಚ್ಚು ಆರ್ಡರ್ ಮಾಡಿದ 2ನೇ ಖಾದ್ಯ. ನಂತರದ ಸ್ಥಾನದಲ್ಲಿ ಚಿಕನ್ ಫ್ರೈಡ್ ರೈಸ್ ಇದೆ. ಸಮೋಸಾ 4 ಮಿಲಿಯನ್ ಆರ್ಡರ್ ಆಗಿದ್ದು, ಅತಿ ಹೆಚ್ಚು ಆರ್ಡರ್ ಮಾಡಿದ ಸ್ನ್ಯಾಕ್ಸ್ ಆಗಿದೆ. ಭಾರತದಲ್ಲಿ ಈ ಬಾರಿ ವಿದೇಶಿ ಖಾದ್ಯಗಳ ಆರ್ಡರ್ ಸಹ ಹೆಚ್ಚಾಗಿದೆ ಇಟಾಲಿಯನ್ Ravioli ಮತ್ತು ಕೊರಿಯನ್‌ನ Bibimbapಗೆ ಬೇಡಿಕೆ ಹೆಚ್ಚಿತ್ತು.
ಮಾಂಸದ ಡೆಲಿವರಿ ವಿಭಾಗದಲ್ಲಿ ಚಿಕನ್‌ಗೆ ಬೇಡಿಕೆ ಹೆಚ್ಚು. 29.86 ಲಕ್ಷ ಆರ್ಡರ್‌ಗಳು ಬಂದಿವೆ. ಮಾಂಸದ ಡೆಲಿವರಿ ವಿಭಾಗದಲ್ಲಿಯೂ ಬೆಂಗಳೂರು ಪ್ರಥಮ, ಹೈದರಾಬಾದ್ 2ನೇ ಸ್ಥಾನದಲ್ಲಿವೆ. ಚೆನ್ನೈ 3ನೇ ಸ್ಥಾನ ಪಡೆದಿದೆ.












Click it and Unblock the Notifications