• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ವಿಶ್ವ ಪ್ರವಾಸಿ ದಿನ: ಬೆಣ್ಣೆ ಮುದ್ದೆಯಂತಹ ಬೆಣ್ಣೆ ಹೊಳೆ ಜಲಧಾರೆ ನೋಡಬನ್ನಿ

|

ಶಿರಸಿ, ಸೆಪ್ಟೆಂಬರ್ 27: ಮಳೆಗಾಲದ ಅಬ್ಬರ ಕೊಂಚ ತಗ್ಗುತ್ತಿದ್ದಂತೆ, ಹಬ್ಬ ಹರಿದಿನಗಳ ನೆಪದಲ್ಲಿ ಸಾಲು ರಜೆಗಳು ಸಿಗುತ್ತಿರುವಂತೆಯೇ ಪ್ರವಾಸಾಸಕ್ತ ಮನಸುಗಳು ಹಸಿರಾಗುತ್ತವೆ.

ಆಗಾಗ ದರ್ಶನ ಕೊಡುವ ಮಳೆ, ನೆತ್ತಿ ಮೇಲಿದ್ದರೂ ಸುಡದೆ ಹಿತ ಎನಿಸುವಂತಹ ಬಿಸಿಲ ಗಾಳಿಯನ್ನು ಸೂರ್ಯ ಸಣ್ಣನೆ ಹಾಯಿಸುತ್ತಿದ್ದಾನೇನೋ ಎನ್ನುವಂತಹ ವಾತಾವರಣ ಮಲೆನಾಡಿನಲ್ಲಿ ಈಗ. ಭೂರಮೆ ತಂಪಾಗಿ ಎಲ್ಲೆಡೆ ಹಸಿರು ತುಂಬಿಕೊಂಡಿದೆ. ಮೋಡಗಳು ಭೂಮಿಗೆ ಅವುಚಿಕೊಂಡಂತೆ ಬೆಟ್ಟಗುಡ್ಡಗಳ ಸಾಲಿನಲ್ಲಿ ಅಡ್ಡಾಡುತ್ತಿವೆ.

ಈ ಹೊತ್ತಲ್ಲಿ ಮಲೆನಾಡಿನ ಪ್ರವಾಸ ನೀಡುವ ಆಹ್ಲಾದವೇ ಬೇರೆ. ಅದರಲ್ಲಿಯೂ ಜಲಪಾತಗಳ ಸಾಂಗತ್ಯ ದೊರೆತರೆ ಅಲ್ಲಿಂದ ವಾಪಸ್ ಹೋಗದಂತೆ ಮನಸ್ಸು ಹಠ ಹಿಡಿಯುತ್ತದೆ.

ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!

ಅದರಲ್ಲಿಯೂ ಜಲಧಾರೆಗಳ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಸಣ್ಣ ಪುಟ್ಟ ಝರಿಗಳೂ ಜೀವಕಳೆ ಮರಳಿ ಪಡೆದುಕೊಂಡಿವೆ. ಒಂದರ ಪಕ್ಕ ಇನ್ನೊಂದರಂತೆ ಅವುಗಳ ಕುಟುಂಬ ತಲೆ ಎತ್ತಿವೆ. ಜಲಧಾರೆಯನ್ನು ಹುಡುಕುತ್ತಾ ಕಾಡ ಹಾದಿಯನ್ನು ಹಿಡಿದರೆ, ಹತ್ತಾರು ಸಣ್ಣಪುಟ್ಟ ಜಲಕನ್ನಿಕೆಯರು ಕಿರುನಗೆ ಬೀರುತ್ತಾ ಸ್ವಾಗತಿಸುತ್ತಾರೆ.

ಮಳೆಗಾಲದಲ್ಲಿ ಹೀಗೆ ಮೈದುಂಬಿಕೊಳ್ಳುವ ಚೆಲುವಾದ ಜಲಪಾತಗಳಲ್ಲಿ ಒಂದು ಬೆಣ್ಣೆ ಹೊಳೆ ಜಲಪಾತ.

ಎಲ್ಲಿದೆ ಜಲಪಾತ?

ಶಿರಸಿ-ಸಿದ್ದಾಪುರ ರಸ್ತೆಯಲ್ಲಿ ರಾಹಿ ಹೊಸಹಳ್ಳಿ ಎಂಬ ಊರಿನ ಸಮೀಪ ಈ ಬೆಣ್ಣೆಯ ನೀರಿನ ದರ್ಶನವಾಗುತ್ತದೆ. ಕಸಗೆ ಎಂಬ ದಟ್ಟ ಕಾನನ ನಡುವೆ ಜಲಧಾರೆ ಸಮೃದ್ಧವಾಗಿದ್ದ ಧುಮ್ಮಿಕ್ಕುತ್ತಿದೆ. ಶಿರಸಿ ಮತ್ತು ಕುಮಟಾದಿಂದ ಇಲ್ಲಿಗೆ ಸುಮಾರು 30-35 ಕಿ.ಮೀ. ದೂರ. ಇಲ್ಲಿ ಸಮೀಪದಲ್ಲಿ ಹೋಟೆಲ್, ಅಂಗಡಿಗಳು ಸಿಗಲಾರದು. ಹೀಗಾಗಿ ಬರುವಾಗಲೇ ಬೇಕಾದಷ್ಟು ಆಹಾರ, ನೀರು ತರುವುದು ಅಗತ್ಯ.

ಮೈಸೂರು ದಸರೆಗೆ ಸಜ್ಜಾಗಿ ನಿಂತ ಟೆಂಟ್ ಟೂರಿಸಂ

ದಾರಿ ಹೇಗೆ?

ದಾರಿ ಹೇಗೆ?

ಪ್ರವಾಸಕ್ಕೆಂದು ಹೊರಡುವವರು ಸ್ವಂತ ವಾಹನದಲ್ಲಿ ಬಂದರೆ ಒಳಿತು. ಬಸ್‌ನಲ್ಲಿ ಬಂದು ಇಲ್ಲಿಗೆ ತೆರಳುವುದು ಕಷ್ಟ. ಶಿರಸಿಯಿಂದ ಕುಮಟಾ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ಹೋದ ಬಳಿಕ ಜಲಪಾತದ ನೆತ್ತಿಯವರೆಗೂ ಕರೆದೊಯ್ಯುವ ಕಚ್ಚಾ ರಸ್ತೆ ಸಿಗುತ್ತದೆ. ಅವಾಂತರಕಾರಿ ರಸ್ತೆಯ ಸಂಕಟದ ಪಯಣವನ್ನು ಏಳೆಂಟು ಕಿ.ಮೀ. ಸಹಿಸಿಕೊಳ್ಳುವುದು ಅನಿವಾರ್ಯ. ಜಲಪಾತದ ಸಮೀಪ ತೆರಳಲು ಸುಮಾರು ಒಂದು ಕಿ.ಮೀ. ನಡೆಯಬೇಕಾಗುತ್ತದೆ.

ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ

ಅಘನಾಶಿನಿಯ ಉಪನದಿ

ಅಘನಾಶಿನಿಯ ಉಪನದಿ

ಬೆಣ್ಣೆ ಹೊಳೆ ಕಾಡಿನ ನಡುವೆ ಹುಟ್ಟಿ ಹರಿಯುತ್ತಾ ತನ್ನ ಬಲವನ್ನು ವೃದ್ಧಿಸಿಕೊಂಡು ಸಾಗುತ್ತದೆ. ಅಂತಿಮವಾಗಿ ಜಲಪಾತದ ಸ್ವರೂಪ ಪಡೆದುಕೊಳ್ಳುವ ಹೊತ್ತಿಗೆ ಪುಟ್ಟ ಹೊಳೆಯ ಆಕಾರ ಹೊಂದುತ್ತದೆ. ಹೀಗೆ ಕಾಡಿನ ನಡುವೆ ಬಳುಕುತ್ತಾ ಹರಿದು ಕೊನೆಗೆ ಅಘನಾಶಿನಿ ನದಿಯನ್ನು ಸೇರಿಕೊಳ್ಳುತ್ತದೆ.

ಬೆಣ್ಣೆ ಮುದ್ದೆ

ಬೆಣ್ಣೆ ಮುದ್ದೆ

ಕಾಡಿನಲ್ಲಿ ಹರಿದು ಬರುವ ನೀರು ಮಳೆಗಾಲದಲ್ಲಿಯೂ ಸ್ಪಟಿಕದಷ್ಟೇ ಶುಭ್ರ. ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರು ಕೆಂಪಾಗುತ್ತದೆ. ಆದರೆ, ಬೆಣ್ಣ ಹೊಳೆಯ ಬೆಣ್ಣೆಯ ಬಣ್ಣ ಬದಲಾಗುವುದಿಲ್ಲ. ಬಂಡೆಗಳ ಸಂದಿಯಿಂದ ಧುಮ್ಮಿಕ್ಕುವಾಗ ಆಗಷ್ಟೇ ಕಡೆದ ಬೆಣ್ಣೆ ಮುದ್ದೆಯಂತೆ ಕಾಣಿಸುವುದರಿಂದ ಇದಕ್ಕೆ ಬೆಣ್ಣೆ ಹೊಳೆ ಎಂಬ ಹೆಸರು ಬಂದಿರಬಹುದು.

ಸಂಬಂಧಿಕರು ಅನೇಕ

ಸಂಬಂಧಿಕರು ಅನೇಕ

ಬೆಣ್ಣೆ ಹೊಳೆಯ ಸೊಬಗು ಸವಿಯಲು ಹೋಗುವ ಪ್ರವಾಸಿಗರಿಗೆ ಮುದ ನೀಡಲು ಬೆಣ್ಣೆ ಹೊಳೆಯ ಸಂಬಂಧಿಕರೂ ಸಿಗುತ್ತಾರೆ.

ಬೆಣ್ಣೆ ಹೊಳೆ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಅನೇಕ ಸಣ್ಣ ಪುಟ್ಟ ಝರಿಗಳಿವೆ. ಮರಗಳ ನಡುವಿನಿಂದ ಜುಳುಜುಳನೆ ಸದ್ದು ಮಾಡುತ್ತಾ ಹರಿಯುವ ಈ ನೀರಿನ ಹಾದಿ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದ ಜಾಗ.

ಈಜಲು ಸಾಧ್ಯವಿಲ್ಲ

ಈಜಲು ಸಾಧ್ಯವಿಲ್ಲ

ಜಲಪಾತದ ನೀರು ಬೀಳುವ ಭಾಗದಲ್ಲಿ ಆಳವಾದ ಗುಂಡಿ ಇರುವುದರಿಂದ ಇಲ್ಲಿ ಈಜುವ ಸಾಹಸಕ್ಕೆ ಮುಂದಾಗದಿರುವುದು ಒಳಿತು. ಮಳೆಗಾಲದಲ್ಲಿ ಈ ಜಲಪಾತಕ್ಕೆ ಅಭಿಮುಖವಾಗಿ ನಿಂತು ಜಲಪಾತ ನೋಡುವುದು ಕಷ್ಟಕರ. ಒಂದು ಪಾರ್ಶ್ವದಿಂದ ಮಾತ್ರ ವೀಕ್ಷಣೆಗೆ ಸಿಗುತ್ತದೆ.

ಸಾಹಸಪಟ್ಟು ಅದರ ಮುಂಭಾಗಕ್ಕೆ ಇಳಿದರೂ, ಬಂಡೆಗಲ್ಲಿಗೆ ರಭಸದಿಂದ ಸಿಡಿದು ಭೋರ್ಗರೆಯುವ ಮಳೆಯಂತೆ ಮುಖಕ್ಕೆ ರಾಚುವ ನೀರ ಹನಿಗಳು ಆ ಜಲಪಾತದ ಸೊಬಗನ್ನು ನೋಡಲು ಬಿಡಲಾರದು.

ಈಗ ಸೂಕ್ತ ಸಮಯ

ಈಗ ಸೂಕ್ತ ಸಮಯ

ಮಳೆಗಾಲದಲ್ಲಿ ಅಬ್ಬರಿಸುವ ಜಲಪಾತ, ಬೇಸಿಗೆಯಲ್ಲಿ ಎಲ್ಲ ಜಲಪಾತಗಳಂತೆ ಕೃಶವಾಗುತ್ತದೆ. ಬಿರು ಮಳೆಗಾಲದ ಅವಧಿಯಲ್ಲಿ ಇಂಬಳದ ಕಾಟದ ನಡುವೆ ಅಲ್ಲಿಗೆ ಹೋಗುವುದು ಕಷ್ಟ. ಹೀಗಾಗಿ ಮಳೆಯ ಆರ್ಭಟ ಕಡಿಮೆಯಾದ ಸೆಪ್ಟೆಂಬರ್‌ನಿಂದ ಬೇಸಿಗೆ ಆರಂಭವಾಗುವ ಫೆಬ್ರುವರಿ ತಿಂಗಳ ಅವಧಿ ಬೆಣ್ಣೆ ಹೊಳೆಯನ್ನು ನೋಡಲು ಸೂಕ್ತ ಸಮಯ.

English summary
Benne Hole Falls situated at village called Kasage near Sirsi- Kumta road of Uttara Kannada District. Reacalling its beauty in this World Tourism Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X