World Coconut Day 2024: ಇಂದು ವಿಶ್ವ ತೆಂಗು ದಿನಾಚರಣೆ: ಈ ದಿನದ ಇತಿಹಾಸ ವಿಶೇಷತೆ ತಿಳಿಯಿರಿ
ಕಾಮಧೇನು, ಕಲ್ಪವೃಕ್ಷ ಇರುವ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ ಎನ್ನುವ ಮಾತಿದೆ. ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗಿನ ಮರ ಅಥವಾ ತೆಂಗಿನ ಕಾಯಿಗೆ ನಮ್ಮಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹಾಗೂ ಶ್ರೇಷ್ಠತೆ ಇದೆ. ತೆಂಗಿನ ಮರ ಅಥವಾ ಕಾಯಿಯ ಯಾವ ಭಾಗವೂ ನಿರುಪಯೋಗವಲ್ಲ ಹೀಗಾಗಿ ತೆಂಗಿನ ಮರ ಇರುವ ಕಡೆಗಳಲ್ಲಿ ಸಮೃದ್ಧಿ ಇರುತ್ತದೆ ಎನ್ನುವುದು ನಂಬಿಕೆ.
ಕೇವಲ ಆಹಾರ ವಸ್ತುವಾಗಿ ಅಲ್ಲದೇ ತೆಂಗಿನ ಕಾಯಿಯನ್ನು ಪೂಜ್ಯ ಭಾವನೆಯಿಂದ ನೋಡಲಾಗುತ್ತಿದೆ. ಪ್ರತಿಯೊಂದು ಕಾರ್ಯದಲ್ಲೂ ತೆಂಗಿನ ಕಾಯಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಕೇವಲ ಒಂದು ಪ್ರಾಂತ್ಯಕ್ಕಲ್ಲದೇ ಪ್ರಪಂಚದಾದ್ಯಂತ ಬಳಸುವ ಪ್ರಮುಖ ಆಹಾರವೇ ತೆಂಗಿನ ಕಾಯಿ. ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ತೆಂಗಿನ ಕಾಯಿಗೆ ಪ್ರತಿ ವರ್ಷ ಒಂದು ದಿನವನ್ನು ವಿಶೇಷವಾಗಿ ಮೀಸಲಿಡಲಾಗುತ್ತದೆ.

ಪ್ರತಿ ವರ್ಷ ಸೆಪ್ಟೆಂಬರ್ 2ರಂದು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ಏಷ್ಯಾದ ದೇಶಗಳಲ್ಲಿ ತೆಂಗಿನಕಾಯಿ ಬೆಳೆ ಉತ್ಪಾದನೆ, ಮಾರಾಟ ಮತ್ತು ರಫ್ತುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ದಿನವನ್ನು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ. ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯವು ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತದೆ. ತೆಂಗಿನಕಾಯಿ ಕೃಷಿ ಮಹತ್ವ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯದವರಿಗೆ ತಿಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ತೆಂಗಿನ ಕಾಯಿಯ ಉಪಯೋಗ
ತೆಂಗಿನ ಕಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ.
ತೆಂಗಿನ ಕಾಯಿ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ತೆಂಗಿನ ನೀರು ನೈಸರ್ಗಿಕ ಎಲೆಕ್ಟ್ರೋಲೈಟ್-ಸಮೃದ್ಧ ಪಾನೀಯವಾಗಿದೆ.
ತೆಂಗಿನಕಾಯಿಯಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ತೆಂಗಿನ ಎಣ್ಣೆಯು ಜನಪ್ರಿಯ ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ.
ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯುತ್ತದೆ.
ಚಳಿಗಾಲದಲ್ಲಿ ತೆಂಗಿನ ಎಣ್ಣೆನ್ನು ಚರ್ಮ ಮತ್ತು ಕಾಲಿನ ಪಾದಕ್ಕೆ ಹಚ್ಚುವುದರಿಂದ ಮೈ-ಒಡಕು ಹಾಗೂ ಕಾಲಿನ ಒಡಕು ಕಮ್ಮಿಯಾಗುತ್ತದೆ.
ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ತೆಂಗಿನ ಚಿಪ್ಪು ಸುಟ್ಟ ಇದ್ದಿಲನ್ನು ಸುಟ್ಟ ಗಾಯದ ಕಲೆಗೆ ಹಚ್ಚಿದರೆ ಕಲೆ ಕಡಿಮೆಯಾಗುತ್ತದೆ.
ತೆಂಗಿನ ಕಾಯಿಯಿಂದ ಮಾಡಬಹುದಾದ ರುಚಿಕರ ಖಾದ್ಯಗಳು
ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಎಲ್ಲಾ ರೀತಿಯ ಅಡುಗೆಗಳಿಗೂ ತೆಂಗಿನ ಕಾಯಿ ಬಳಸಲಾಗುತ್ತದೆ. ಮೀನು ಸಾರು, ಚಿಕನ್ ಸುಕ್ಕ, ಸೀಗಡಿ ಸುಕ್ಕ, ಪಲ್ಯಗಳು, ಚಟ್ನಿ ಪುಡಿಗಳಿಗೆ ತೆಂಗಿನ ಕಾಯಿ ಮುಖ್ಯವಾಗಿರುತ್ತದೆ. ಆದರೆ ಬರೀ ತೆಂಗಿನ ಕಾಯಿಂದಲೇ ಮಾಡುವ ಕೆಲವು ಖಾದ್ಯಗಳು ಇಲ್ಲಿದೆ. ಕೊಬ್ಬರಿ ಮಿಠಾಯಿ, ಕಾಯಿ ಬೆಲ್ಲ, ಕಾಯಿ ಹಾಲು ಪಾಯಸ, ಕಾಯಿ ಚಟ್ನಿ, ಕಾಯಿ ಅನ್ನ, ಐಸ್ ಕ್ರೀಮ್ ಸೇರಿದಂತೆ ಕೆಲವು ರುಚಿಕರ ಖಾದ್ಯಗಳನ್ನು ತೆಂಗಿನ ಕಾಯಿ ಬಳಸಿ ಮಾಡಲಾಗುತ್ತದೆ.












Click it and Unblock the Notifications