• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಕಲ್ ದಿನ: ಸ್ವಾವಲಂಬನೆ ಕಲಿಸಿದ ಸೈಕಲ್ ಕಲಿಕೆ ಮರೆಯೋದು ಹೇಗೆ?

|

"ಸೈಕಲ್ ಓಡ್ಸದು, ಅದ್ನ ಪಂಕ್ಚರ್ ಮಾಡಿದಷ್ಟು ಸುಲಭ ಅಂದ್ಕಂಡ್ಯಾ..?" ಚಿಕಪ್ಪ ತಲೆ ಮೊಟಕುತ್ತ ಸೈಕಲ್ ಹತ್ತು ಎನ್ನುತ್ತಿದ್ದರೆ ಮೈ ಎಲ್ಲಾ ಗಢ ಗಢ!

"ನಾ ಯಾವಾಗ್ಲೂ ಸೈಕಲ್ ಪಂಕ್ಚರ್ ಮಾಡಿದ್ನಿಲ್ಲೆ, ಆಗಾಗ ಬ್ಲೋ ತೆಗಿತಿದ್ದಿ ಅಷ್ಟೆ!"ಎಂದು ಸಮರ್ಥಿಸಿಕೊಳ್ಳುತ್ತ ಇದ್ದಬದ್ದ ದೇವರನ್ನೆಲ್ಲ ನೆನಪಿಸಿಕೊಂಡು, ಶ್ಲೋಕ ಹೇಳಿ ಸೈಕಲ್ ಗೆ ಒಂದು ನಮಸ್ಕಾರ ಹೊಡೆದು ಕೂರುವುದಕ್ಕೆ ಅಣಿಯಾಗಿದ್ದಾಯ್ತು! ಚಿಕ್ಕಪ್ಪ ಸೈಕಲ್ ಹಿಡಿದಿರುವಷ್ಟು ಹೊತ್ತು ಓಕೆ. ಆದ್ರೆ ಅವರು ಸೈಕಲ್ ಬಿಟ್ಟರೆ ನನ್ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿ ಸೈಕಲ್ ಏರದೆ ಹಾಗೆಯೇ ನಿಂತೆ!

ಸೈಕಲ್ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಸೈಕಲ್ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

"ಯಾವುದೇ ಕಾರಣಕ್ಕೂ ನೀನು ನಂಗೆ ಗೊತ್ತಿಲ್ಲದೆ ಸೈಕಲ್ ಬಿಡೋ ಹಾಗಿಲ್ಲ" ಅಂತ ಚಿಕ್ಕಪ್ಪನಿಗೆ ಷರತ್ತು ಹಾಕಿ, ಅವರ ಬಳಿ ಪ್ರಾಮಿಸ್ ಮಾಡಿಸಿಕೊಂಡ ಮೇಲೆ ಕೊಂಚ ಸಮಾಧಾನವಾಗಿ ಸೈಕಲ್ ಏರಿ ಕೂತಿದ್ದಾಯ್ತು.

"ಒಂದೇ ದಿನದಲ್ಲಿ ಸೈಕಲ್ ಕಲ್ತು ಬರ್ತೀ ಅಂತ ಅಪ್ಪನತ್ರ ಸೊಕ್ಕು ಮಾಡಿದ್ಹಂಗಲ್ಲ. ಓಡ್ಸು ಮೊದಲು" ಆ ಉರಿಬಿಸಲಿಲ್ಲಿ ಪಾಪ ಚಿಕ್ಕಪ್ಪ ನನಗೆ ಸೈಕಲ್ ನ 'ಶ್ರೀಗಣೇಶಾಯ ನಮಃ' ಶುರು ಮಾಡಿದ್ದರು.

ಮೊದಲಿಗೆ ಥಿಯರಿ ಪಾಠ

ಮೊದಲಿಗೆ ಥಿಯರಿ ಪಾಠ

"ಇದು ಫ್ರಂಟ್ ಬ್ರೇಕ್, ಇದು ರೇರ್(ಬ್ಯಾಕ್) ಬ್ರೇಕ್, ಇದು ಪೆಡಲ್... " ಅಂತ ಚಿಕ್ಕಪ್ಪ ಥಿಯರಿ ಶುರು ಮಾಡಿದ್ದರೆ, ಅದೆಲ್ಲ ಓಕೆ, ಈ ವ್ಹೀಲ್ ನಲ್ಲಿ ಬ್ಲೋ ಇದ್ದು ತಾನೆ?" ಎಂದು ಸಂಬಂಧವೇ ಇಲ್ಲದ ಪ್ರಶ್ನೆ ಕೇಳಿದ್ದೆ. ಪಾಪ ಉರಿಬಿಸಿಲಲ್ಲಿ ಕೆಲಸ ಎಲ್ಲ ಬಿಟ್ಟು ನನಗೆ ಸೈಕಲ್ ಪಾಠ ಮಾಡೋಕೆ ಬಂದಿದ್ದ ಚಿಕ್ಕಪ್ಪನಿಗೆ ರೇಗಿ ಹೋಗಿತ್ತು! ಚಿಕ್ಕ ವಯಸ್ಸಿನಲ್ಲಿ ಇದ್ದಬಿದ್ದ ಸಿನಿಮಾವನ್ನೆಲ್ಲ ನೋಡಿ ಅದರಲ್ಲಿ ಸೈಕಲ್ ಪಂಕ್ಚರ್ ಮಾಡುವ, ಅಥವಾ ಯಾವುದೇ ತರಲೆ ಕೆಲಸ ಮಾಡುವ ದೃಶ್ಯಗಳನ್ನು ಮನಸ್ಸಿನಲ್ಲಿ ಹಾಗೆಯೇ ಬಟ್ಟಿಇಳಿಸಿಕೊಂಡು, ಅವನ್ನು ಶಿರಸಾ ವಹಿಸಿ ಪಾಲಿಸುವಲ್ಲಿ ನಾವೆಲ್ಲ ಸಿದ್ಧಹಸ್ತರಾಗಿದ್ದ ಕಾಲ ಅದು!

"ಬ್ಲೋ ಇಲ್ಲ ಅಂದ್ರೆ ನಿಂದೇ ಕಿತಾಪತಿ ಆಗಿರುತ್ತೆ. ತಮಾಷೆ ಬಿಟ್ಟು ಓಡ್ಸು ಮೊದಲು... ಇಂಥದ್ದಕ್ಕೇನು ಕಮ್ಮಿ ಇಲ್ಲ" ಎಂದು ಆ ದಿನಕ್ಕೆಲ್ಲ ಸಾಕಾಗುವಷ್ಟು ತುಂಬು ಹೃದಯದಿಂದ ಬೈಗುಳ ಕೊಟ್ಟಿದ್ದರು!

ಮಡ್ ಗಾರ್ಡ್ ನ ದೌರ್ಭಾಗ್ಯವೇ!

ಮಡ್ ಗಾರ್ಡ್ ನ ದೌರ್ಭಾಗ್ಯವೇ!

"ನೋಡು ಕೂಸೆ, ಸೈಕಲ್ ಕಲಿಯೋದು ಒಂದು ಟ್ರಿಕ್. ಮೊದಲು ಬ್ಯಾಲೆನ್ಸಿಂಗ್ ಕಲೀಬೇಕು. ಅದ್ನ ಕಲಿತ್ರೆ ಸೈಕಲ್ ಕಲಿತ ಹಾಗೇನೆ" ಎಂದು ಎರಡು ಗಂಟೆ ತಾವೂ ಸೈಕಲ್ ಹಿಡಿದು ಬ್ಯಾಲೆನ್ಸಿಂಗ್ ಕಲಿಸಿದ್ದರು. 'ನೀನು ರಸ್ತೆ ನೋಡು, ಹ್ಯಾಂಡಲ್ ನೋಡ್ಬೇಡ' ಎಂದು ನೂರು ಬಾರಿ ಹೇಳಿದ್ದರೂ ನಾನು ಮಾತ್ರ ಹ್ಯಾಂಡಲ್ ನೋಡುತ್ತ ಸೈಕಲ್ ಓಡಿಸಿ ಕರೆಂಟ್ ಕಂಬಕ್ಕೆ ಹೋಗಿ ಗುದ್ದಿದ್ದೆ! ಕಲಿಯೋಕು ಮೊದಲು ಹೇಳಿದ್ದ ಶ್ಲೋಕದಿಂದಲೋ ಏನೋ, ನಾನು ಮಾತ್ರ ಬಿದ್ದಿರಲಿಲ್ಲ! ಇಳಿದು ನೋಡಿದರೆ ಸೈಕಲ್ ಮುಂಭಾಗದ ಮಡ್ ಗಾರ್ಡ್ ನ ಒಂದು ಭಾಗ ಮುರಿದು ಬಿದ್ದಿತ್ತು! "ಅಯ್ಯೋ ಪಾಪ, ಮಡ್ ಗಾರ್ಡ್ ನ ದೌರ್ಭಾಗ್ಯವೇ!" ಎಂದು ಆ ಟ್ರಾಜಡಿಯಲ್ಲಿ ಕಾಮಿಡಿ ಮಾಡುವುದಕ್ಕೆ ಹೊರಟಿದ್ದ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಚಿಕ್ಕಪ್ಪನನ್ನು ನೋಡಿ, ತೆಪ್ಪಗಾಗಿದ್ದೆ!

ನಾಳೆ ಟಿವೀಲಿ ಮಾಲಾಶ್ರೀ ಪಿಚ್ಚರ್... ಶಾಲೆಗೆ ಗ್ಯಾರಂಟಿ ಚಕ್ಕರ್!ನಾಳೆ ಟಿವೀಲಿ ಮಾಲಾಶ್ರೀ ಪಿಚ್ಚರ್... ಶಾಲೆಗೆ ಗ್ಯಾರಂಟಿ ಚಕ್ಕರ್!

ಪಾಠ ಮುಗಿದಿದ್ದೇ ಗೊತ್ತಾಗಲಿಲ್ಲ!

ಪಾಠ ಮುಗಿದಿದ್ದೇ ಗೊತ್ತಾಗಲಿಲ್ಲ!

ಆದರೂ ಚಿಕ್ಕಪ್ಪ ಏನೂ ಹೇಳದೆ ಸುಮ್ಮನಿದ್ದರು. ಮೂರ್ನಾಲ್ಕು ಗಂಟೆಯ ಸತತ ಕಲಿಕೆಯ ನಂತರ ಒಂದು ಲೆವಲ್ಲಿಗೆ ಸೈಕಲ್ ಓಡಿಸೋ ಅಷ್ಟು ಆತ್ಮವಿಶ್ವಾಸ ಬಂದಿತ್ತು! ಇನ್ನೇನು ಟೈಮ್ ಆಯ್ತು ಹೊರಡೋಣ ಬಾ, ಊಟ ಮಾಡಿ ಆಮೇಲೆ ಮತ್ತೆ ಕಲಿಬಹುದು ಎಂದರು ಚಿಕ್ಕಪ್ಪ. ಆಯ್ತು, ಎಂದು ರಸ್ತೆ ಏರಿಯ ಮೇಲೆ ಸೈಕಲ್ ಹತ್ತಿ ಕುಳಿತೆ. ಹಿಂದೆ ಸೈಕಲ್ ಹಿಡಿದ ಚಿಕ್ಕಪ್ಪ, ಹ್ಯಾಂಡಲ್ ನೋಡದೆ, ರಸ್ತೆ ನೋಡುತ್ತ ಓಡ್ಸು ಎಂದರು. ಸರಿ ಎಂದು ಬ್ರೇಕ್ ಬಿಟ್ಟು ಒಂದೆರಡು ಹೆಜ್ಜೆ ಪೆಡಲ್ ತುಳಿದೆ ಅಷ್ಟೆ. ರಸ್ತೆ ಡೌನ್ ಇದ್ದಿದ್ದರಿಂದ ಸುಲಭವಾಗಿ ಸೈಕಲ್ ಕೆಳಗೆ ಬಂದಿತ್ತು, ಬ್ಯಾಲೆನ್ಸಿಂಗ್ ಗೊತ್ತಾಗಿದ್ದರಿಂದ ಇಳಿಜಾರು ರಸ್ತೆ ಮುಗಿದ ಮೇಲೂ ಪೆಡಲ್ ತುಳಿಯುತ್ತ ಮುಂದೆ ಬಂದೆ.

ಹಿಂದೆ ಚಿಕ್ಕಪ್ಪ ಇರಲಿಲ್ಲ!

ಹಿಂದೆ ಚಿಕ್ಕಪ್ಪ ಇರಲಿಲ್ಲ!

ಆದರೆ ಯಾಕೋ ಚಿಕ್ಕಪ್ಪ ಹಿಂದೆ ಸೈಕಲ್ ಹಿಡಿದಿಲ್ಲ ಅನ್ನಿಸೋಕೆ ಶುರುವಾಯ್ತು. ಬ್ರೇಕ್ ಹಾಕಿ ಹಿಂದೆ ನೋಡಿದರೆ... ಹೌದು, ಚಿಕ್ಕಪ್ಪ ಇಲ್ಲ! ಅವರು ಯಾವಾಗಲೋ ಸೈಕಲ್ ಅನ್ನು ಬಿಟ್ಟು ಇಳಿಜಾರು ಇಳಿಯುತ್ತ ನಗುತ್ತ ಬರುತ್ತಿದ್ದರು! ಅಂದ್ರೆ.... ನಾನು ಒಬ್ಳೇ ಸೈಕಲ್ ಓಡಿಸ್ತಿದ್ದೀನಾ? ನಂಬೋಕೆ ಆಗಲಿಲ್ಲ. ಖುಷಿ, ಆತಂಕ, ಹೆಮ್ಮೆ ಎಲ್ಲ ಒಟ್ಟೊಟ್ಟಿಗೇ ಹುಟ್ಟಿ ಕುಣಿದುಬಿಡುವಂತಾಗಿತ್ತು. ರಸ್ತೆಯ ಏರಿ ಇಳಿದು ಬರುತ್ತಿದ್ದ ಚಿಕ್ಕಪ್ಪ, 'ಅಂತೂ ಕೂಸು ಸೈಕಲ್ ಕಲ್ತೇ ಬಿಟ್ಳು' ಎಂದರು. 'ಹೌದು ಚಿಕ್ಕಪ್ಪ, ಎಲ್ಲ ನಿಮ್ಮಿಂದ. ಅಪ್ಪನಿಗೆ ಮಾಡಿದ ಚಾಲೆಂಚ್ ಉಳಿಸಿಕೊಂಡೆ' ಎಂದೆ ಬೀಗುತ್ತ. 'ಚಾಲೆಂಜೇನೋ ಉಳಿಸ್ಕೊಂಡೆ! ಆದ್ರೆ ನನ್ನ ಸೈಕಲ್ ಉಳಿಸಿಕೊಳ್ಳೋಕಾಗ್ಲಿಲ್ಲ ನೋಡು' ಎಂದರು ಕರೆಂಟ್ ಕಂಬಕ್ಕೆ ತಾಗಿ ಮುರಿದು ಹೋಗಿದ್ದ ಮಡ್ ಗಾರ್ಡ್ ಕಡೆ ನೋಡಿ ನಗುತ್ತ! ಇಬ್ಬರ ನಗುವಲ್ಲಿ ಸೈಕಲ್ ನ ಟ್ರಿಣ್ ಟ್ರಿಣ್ ಜೊತೆಯಾಗಿತ್ತು!

ಶೋಕಿಯಲ್ಲ, ಸ್ವಾಲಂಬನೆಯ ಮೊದಲ ಹೆಜ್ಜೆ

ಶೋಕಿಯಲ್ಲ, ಸ್ವಾಲಂಬನೆಯ ಮೊದಲ ಹೆಜ್ಜೆ

ಮನೆಯವರೆಗೆ ಒಬ್ಬಳೇ ಸೈಕಲ್ ಓಡಿಸಿಕೊಂಡು ಹೋಗುವಾಗ ಏನನ್ನೋ ಸಾಧಿಸಿದ ಹೆಮ್ಮೆ. ಸೈಕಲ್ ಕಲಿಯೋದೇನು ಮಹಾನ್ ಸಾಧನೆ ಅಲ್ಲ. ಆದರೆ ಆ ಚಿಕ್ಕ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾವಲಂಬನೆಯ ಅನುಭವವನ್ನು ನೀಡಿದ್ದು ಈ ಸೈಕಲ್ ಕಲಿಕೆ. ಇಂದು 'ವಿಶ್ವ ಸೈಕಲ್ ದಿನ' ಎಂಬುದನ್ನು ಕೇಳಿ ಬಾಲ್ಯದ ಆ ದಿನಗಳು ಮತ್ತೊಮ್ಮೆ ನೆನಪಿಗೆ ಬಂದವು. ಪರಿಸರ ಮಾಲಿನ್ಯ, ಆರೋಗ್ಯ ಕಾಳಜಿ ಎಂದು ಸೈಕಲ್ ಮತ್ತೊಮ್ಮೆ ತನ್ನ ಪ್ರಸ್ತುತತೆಯನ್ನು ಕಂಡುಕೊಳ್ಳುತ್ತಿರುವ ಹೊತ್ತು ಇದು. ಈ ಹೊತ್ತಲ್ಲಿ ಸ್ವಾವಲಂಬನೆಯ ಹಾದಿ ತೋರಿ, ಆತ್ಮವಿಶಾಸ ಹೆಚ್ಚಿಸಿದ ಸೈಕಲ್ ಕಲಿಕೆ ಮತ್ತೊಮ್ಮೆ ನೆನಪಾಗುತ್ತಿದೆ. ಬಾಲ್ಯದ ಮಧುರ ಅನುಭವಗಳ ದ್ಯೋತಕವಾಗಿ ಟ್ರಿಣ್ ಟ್ರಿಣ್ ಸದ್ದು ಅನುರಣಿಸುತ್ತಿದೆ...

English summary
Here is my childhood memories of learning cycle. To encourage and create environmental awareness World Bicycle Day 2019 is celebrated on the June 3 by the U.N in collaboration with 56 other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X