Woman: ವಿಚ್ಛೇದನದ ನಂತರ ಮಹಿಳೆಯರು ಹೆಚ್ಚು ಸಂತೋಷವಾಗಿರುವುದು ಏಕೆ? ನಿಮಗೆ ಗೊತ್ತಿಲ್ಲದ ಕಾರಣಗಳನ್ನು ತಿಳಿಯಿರಿ
ಇತ್ತೀಚೆಗೆ ವಿಚ್ಚೇದನ ಪಡೆಯುವುದು ತುಂಬಾ ಸುಲಭವಾಗಿದೆ. ವಿವಾಹವಾಗಿ ಕೇವಲ ಹತ್ತು ನಿಮಿಷದಲ್ಲಿ ವಿಚ್ಚೇದನ ಪಡೆದ ಜೋಡಿಗಳನ್ನು ನಾವು ಸಮಾಜದಲ್ಲಿ ನೋಡಿದ್ದೇವೆ. ಕ್ಷುಲ್ಲಕ ಕಾರಣಗಳಿಗೆ ವಿಚ್ಚೇದನ ಪಡೆಯುವುದು, ದಾಂಪತ್ಯ ಕಲಹದಿಂದ ಬೇಸರಗೊಂಡು ವಿಚ್ಚೇದನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ ವಿವಾಹವಾಗಿ ಕೆಲವೇ ಗಂಟೆ, ಕೆಲವೇ ದಿನ, ಕೆಲವೇ ತಿಂಗಳುಗಳಲ್ಲಿ ಅಥವಾ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆಯುವ ಮಹಿಳೆಯರು ಸಂತೋಷವಾಗಿರುತ್ತಾರಾ? ವಿಚ್ಚೇದನದತ್ತ ಒಲವು ಹೆಚ್ಚಾಗುತ್ತಿರುವುದೇಕೆ? ಮದುವೆಯ ನಂತರ ವಿವಾಹಿತರು ಬಂಧನಕ್ಕೊಳಗಾಗುತ್ತಾರಾ?
ಹೌದು... ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿ ಹೆಣ್ಣು-ಗಂಡಿನಲ್ಲಿ ಸಾಕಷ್ಟು ಕನಸು, ಆಸೆಗಳು ಚಿಗುರೊಡೆಯುವ ಸಮಯ. ತಮ್ಮ ವೈವಾಹಿಕ ಬದುಕು ಹೀಗೆ ಇರಬೇಕು, ಇಬ್ಬರಲ್ಲೂ ಅನ್ಯೋನ್ಯತೆ, ಪ್ರೀತಿ, ವಿಶ್ವಾಸ ಕೊನೆಯ ಕ್ಷಣದವರೆಗೂ ಉಳಿಯಬೇಕು ಎಂಬೆಲ್ಲಾ ಇಚ್ಚೆಯನ್ನು ಹೊಂದುವ ಗಳಿಗೆ. ಆದರೆ ಇತ್ತೀಚಿನ ಮದುವೆಗಳು ಹೆಚ್ಚು ಸಮಯ ಉಳಿಯುತ್ತಿಲ್ಲ. ಮದುವೆ ಆದ ಕೆಲವೇ ದಿನಗಳಲ್ಲಿ ಹೆಣ್ಣು ಗಂಡುವಿನ ನಡುವೆ ಹೊಂದಾಣಿಕೆಯಾಗದೆ ವೈವಾಹಿಕ ಸಂಬಂಧಗಳು ಮುರಿದು ಬೀಳುತ್ತಿವೆ. ಇದಕ್ಕೆ ಕಾರಣ ಏನು? ವಿವಾಹ ವಿಚ್ಚೇದನದ ಬಳಿಕ ಮಹಿಳೆಯರು ಹೆಚ್ಚು ಖುಷಿಯಾಗಿರುತ್ತಾರಾ? ತಪ್ಪು ವ್ಯಕ್ತಿಯನ್ನು ಮದುವೆಯಾಗುವುದಕ್ಕಿಂತ ಒಂಟಿಯಾಗಿರುವುದು ಹೆಚ್ಚು ಅನುಕೂಲಕರ ಪರಿಸ್ಥಿತಿ ಎಂದೆನಿಸಲು ಶುರುವಾಗಿದಿಯಾ?

ಸ್ವತಂತ್ರವಾಗಿ ಬದುಕುವುದು ಎಲ್ಲರ ಹಕ್ಕು. ಆದರೆ ಮದುವೆ ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತದೆ. ಈ ಸವಾಲುಗಳನ್ನು ಎದುರಿಸಲು ಆಗದ ಜೋಡಿಗಳು ವಿಚ್ಛೇದನ ಪಡೆಯುತ್ತಾರೆ. ಅದರಿಂದ ತಾವು ಸ್ವಾತಂತ್ರರಾಗಿರುವ ಹಾಗೂ ಸಂತೋಷವಾಗಿರುವ ಸಮಯವನ್ನು ಕಂಡುಕೊಳ್ಳುತ್ತಿದ್ದಾರೆ. ಸರಳವಾಗಿ ಹೇಳುವುದಾದರೆ, ಅನೇಕ ಮಹಿಳೆಯರು ವಿಚ್ಛೇದನ ಪಡೆದ ನಂತರ ಮತ್ತೆ ಸಂತೋಷವನ್ನು ಪಡೆಯಲು ಮೊದಲು ಮಾಡುವ ಕೆಲವು ವಿಷಯಗಳು ಇಲ್ಲಿವೆ. ಇವುಗಳನ್ನು ತಿಳಿದುಕೊಂಡರೆ ವಿಚ್ಚೇದನದಂತಹ ಸಮಸ್ಯೆಗಳಿಂದ ದೂರವಿರಬಹುದು.
ಬೆಂಬಲ ವ್ಯವಸ್ಥೆಗಳಿಗೆ ತಿರುಗುವುದು
ಪ್ರೌಢಾವಸ್ಥೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ಪೋಷಕರ ಬೆಂಬಲವನ್ನು ಹೊಂದಿರುತ್ತಾರೆ. ವಿವಾಹದ ಬಳಿಕ ಈ ಸಂಬಂಧಗಳಿಂದ ದೂರವಿರಬೇಕಾದ ಸ್ಥಿತಿ ಎದುರಾಗುವುದರಿಂದ, ದಾಂಪತ್ಯದಲ್ಲಿ ಸಣ್ಣ ಮನಸ್ತಾಪವಾದರೂ ಮಹಿಳೆಯರು ಕುಟುಂಬಸ್ಥರನ್ನು ಸಂಪರ್ಕಿಸಬಹುದು.
ಇತ್ತೀಚೆಗೆ ವಿಚ್ಛೇದನ ಪಡೆದ ಮಹಿಳೆಯರು ತಮ್ಮ ಪೋಷಕರು, ಒಡಹುಟ್ಟಿದವರು ಮತ್ತು ವಿಸ್ತೃತ ಕುಟುಂಬದ ಮೇಲೆ ಹೆಚ್ಚು ಒಲವು ತೋರುತ್ತಾರೆ ಎನ್ನಲಾಗುತ್ತಿದೆ. ಇದಲ್ಲದೆ ವಿಚ್ಛೇದನದ ನಂತರ ಮಹಿಳೆಯರು ಉದ್ಯೋಗದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಇದರೊಂದಿಗೆ ಜೀವನವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸುತ್ತಾರೆ. ಇದಕ್ಕೆಲ್ಲಾ ಗಂಡನ ಮನೆಯಲ್ಲೇ ಅವಕಾಶವಿದ್ದರೆ ಬಹುಶ: ವಿಚ್ಚೇದನಂತಹ ಸಮಸ್ಯೆಗಳಿಗೆ ಅವಕಾಶಗಳು ಇರುವುದಿಲ್ಲ ಎನಿಸುತ್ತದೆ.

ಹೊಸ ಅನುಭವಗಳಿಗೆ ಮುಕ್ತವಾಗಿರುವುದು
ವಿಚ್ಛೇದನವು ಕೆಲವು ಮಹಿಳೆಯರಿಗೆ ಹೊಸ ಜೀವನಕ್ಕೆ ಬಾಗಿಲು ತೆರೆಯುತ್ತದೆ. ಮಹಿಳೆಯರು ಹೊಸ ನಗರಕ್ಕೆ ತೆರಳಲು, ಪ್ರಯಾಣಿಸಲು, ಹೊಸ ಹವ್ಯಾಸವನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಿಂದೆ ಸಮಯವಿಲ್ಲದ ಕೈಬಿಟ್ಟಿದ್ದ ಸ್ಥಳಗಳಿಗೆ ಭೇಟಿ ನೀಡುವುದು, ತಮ್ಮ ಹವ್ಯಾಸಗಳನ್ನು ಮುಂದುವರೆಸುವುದು, ಹೆಚ್ಚು ಸಮಯವನ್ನು ವಿಶ್ರಾಂತಿ ಪಡೆಯಲು ಬಳಸಿಕೊಳ್ಳಬಹುದು. ಹೊಸ ಅನುಭವಗಳಿಗೆ ಮುಕ್ತವಾಗಿ ತಾವು ಇಷ್ಟಪಡುವದನ್ನು ಮಾಡಲು ಇಷ್ಟಪಡುತ್ತಾರೆ.
ಗೃಹಿಣಿಯರಿಗೆ ಹೆಚ್ಚಿನ ಒತ್ತಡ
ಪ್ರಸ್ತುತ ಹೆಚ್ಚಿನ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂರ್ಣ ಸಮಯವನ್ನು ತಮ್ಮ ಉದ್ಯೋಗದಲ್ಲಿ ಕಳೆಯುತ್ತಾರೆ. ಆದರೆ ವಿವಾಹವಾದ ಬಳಿಕ ಹೆಚ್ಚಿನ ಮಹಿಳೆಯರು ಹೆಚ್ಚಿನ ಸಮಯವನ್ನು ಮನೆಗೆಲಸದಲ್ಲಿ ಕಳೆಯುತ್ತಾರೆ. ಈ ಅಸಮತೋಲನವು ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ವಿಶೇಷವಾಗಿ ಹತಾಶೆಯನ್ನು ಉಂಟುಮಾಡಬಹುದು. ಅವರು ಪೂರ್ಣ ಸಮಯದ ಕೆಲಸವನ್ನು ಹೊಂದಿದ್ದರೂ ಸಹ, ಎಲ್ಲಾ ಶಿಶುಪಾಲನಾ ಜವಾಬ್ದಾರಿಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ಈ ಮಹಿಳೆಯರಲ್ಲಿ ಕೆಲವರು ಸಂಗಾತಿಯೊಂದಿಗೆ ವಾಸಿಸುವುದಕ್ಕಿಂತ ಹೆಚ್ಚು ದೂರವಿರಲು ಬಯಸುತ್ತಾರೆ. ವಿಚ್ಛೇದನ ಪಡೆದ ಮಹಿಳೆ ತನ್ನನ್ನು ಮತ್ತು ತನ್ನ ಮಕ್ಕಳನ್ನು ಮಾತ್ರ ಕಾಳಜಿ ವಹಿಸಬೇಕಾಗುತ್ತದೆ ಎಂದು ಯೋಚಿಸುತ್ತಾರೆ.

ಸ್ವ-ಆರೈಕೆ
ವಿಚ್ಛೇದನದ ಬಳಿಕ ಮಹಿಳೆಗೆ ಸ್ವಯಂ-ಆರೈಕೆಗಾಗಿ ಹೆಚ್ಚು ಸಮಯ ಸಿಗುತ್ತದೆ ಎಂದು ಅರ್ಥವಲ್ಲ. ಆದರೆ ಮಹಿಳೆಯು ತನ್ನ ವಿಚ್ಚೇದನದ ಬಳಿಕ ಇರುವ ಬಿಡುವಿನ ವೇಳೆಯಲ್ಲಿ ತನ್ನನ್ನು ತಾನು ಮೊದಲು ಸಾಧ್ಯವಾಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾಳೆ. ಈ ಹಿಂದೆ ಸಂಗಾತಿಗಾಗಿ ಮನೆಕೆಲಸಗಳನ್ನು ಮಾಡಲು ಅಥವಾ ಡೇಟ್ ನೈಟ್‌ಗಳಿಗಾಗಿ ಹೊರಗೆ ಹೋಗುತ್ತಿದ್ದ ಸಮಯವನ್ನು ವಿಚ್ಚೇದನದ ಬಳಿಕ ಅವಳು ಆಯ್ಕೆಮಾಡುವ ಯಾವುದೇ ರೀತಿಯಲ್ಲಿ ಕಳೆಯಬಹುದು.
ಹೀಗೆ ವಿಚ್ಚೇದನದ ಬಳಿಕ ಮಹಿಳೆಯರು ತಮ್ಮ ಬಿಡುವಿನ ಸಮಯವನ್ನು ತಮಗಾಗಿ ಕಳೆಯಲು ಬಯಸುತ್ತಾರೆ. ಇದು ಅವರಿಗೆ ಮದುವೆಯ ನಂತರದಕ್ಕಿಂತ ವಿಚ್ಚೇದನದ ಬಳಿಕ ಹೆಚ್ಚು ಸ್ವತಂತ್ರ್ಯರನ್ನಾಗಿರಿಸಿದಂತೆ ಕಾಣಿಸುತ್ತದೆ. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ರತಿಯೊಬ್ಬರು ಈ ಬಗ್ಗೆ ಅರಿತುಕೊಂಡಿದ್ದರೆ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳಲು ಅವಕಾಶಗಳು ಇರುವುದಿಲ್ಲ. ಪರಸ್ಪರ ಅರ್ಥ ಮಾಡಿಕೊಂಡು, ಗೃಹಿಣಿಯರ ಕೆಲಸದಲ್ಲಿ ಪುರುಷರೂ ಭಾಗಿ ಆಗಿ, ಮಹಿಳೆಯರಿಗೆ ಅವರದ್ದೇ ಆದ ಬಿಡುವಿನ ಸಮಯ ಕಳೆಯಲು ಬಿಟ್ಟರೆ ದಾಂಪತ್ಯ ಸಂತೋಷದಿಂದ ಕೂಡಿರುತ್ತದೆ.











Click it and Unblock the Notifications