Mysore Silk Sarees: ಹೆಂಗಳೆಯರ ಮನಗೆದ್ದ ಮೈಸೂರು ಸಿಲ್ಕ್ ಸೀರೆ: ಇದರ ವಿಶೇಷತೆಗಳೇನು?

ಮೈಸೂರು, ಆಗಸ್ಟ್‌ 24: ಮೈಸೂರನ್ನು ಆಳಿದ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಮಹಾತ್ಕಾರ್ಯಗಳು, ನೀಡಿದ ಕೊಡುಗೆಗಳು ಇವತ್ತಿಗೂ ಮೈಸೂರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗುವಂತೆ ಮಾಡಿವೆ. ಇಲ್ಲಿನ ಐತಿಹಾಸಿಕ ದಸರಾ ಸೇರಿದಂತೆ ಹಲವು ಉತ್ಪನ್ನಗಳು ಇಂದಿಗೂ ತನ್ನದೇ ಆದ ಖ್ಯಾತಿಯನ್ನು ಪಡೆದಿದ್ದು, ಎಲ್ಲರೂ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದೆ. ಹೀಗಾಗಿಯೇ ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರಲ್ಲದೆ, ಮೈಸೂರು ಪಾಕ್ ಸೇವಿಸಿ, ಮೈಸೂರು ಮಲ್ಲಿಗೆ ಮುಡಿದು, ಮೈಸೂರ್ ಸಿಲ್ಕ್ ಸೀರೆಗಳನ್ನು ಖರೀದಿಸಿ ತಮ್ಮ ಊರಿಗೆ ಹಿಂತಿರುಗುತ್ತಾರೆ.

ಸಾಮಾನ್ಯವಾಗಿ ದೂರದಿಂದ ಬರುವ ಪ್ರವಾಸಿಗರು ಮೈಸೂರಿಗೆ ತೆರಳಿದರೆ ಮೈಸೂರು ಸಿಲ್ಕ್ ಸೀರೆಯನ್ನು ಖರೀದಿಸಲೇ ಬೇಕೆಂಬ ಸಂಕಲ್ಪ ಮಾಡಿಕೊಂಡು ಬರುವುದನ್ನು ನಾವು ಕಾಣಬಹುದಾಗಿದೆ. ಮೈಸೂರು ಸಿಲ್ಕ್ ಅಷ್ಟರ ಮಟ್ಟಿಗೆ ಹೆಂಗಳೆಯರ ಮನಗೆದ್ದಿದೆ. ಈ ಸೀರೆ ರಾಜರ ಕಾಲದಿಂದಲೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳು ಮೈಸೂರು ಸಿಲ್ಕ್ ಸೀರೆಯನ್ನು ಜೀವನದಲ್ಲಿ ಒಮ್ಮೆಯಾದರೂ ಉಡಲೇ ಬೇಕೆಂದು ಬಯಸುತ್ತಾರೆ. ಕಾರಣ ಹಗುರವಾಗಿ ಶರೀರಕ್ಕೆ ಉಲ್ಲಾಸ ನೀಡುತ್ತದೆ.

What Are The Special Features Of Mysore Silk Sarees

ಇನ್ನು ಮೈಸೂರು ಸಿಲ್ಕ್ ತನ್ನದೇ ಆದ ವಿಶೇಷತೆಯಿಂದ ಹೆಣ್ಮಕ್ಕಳಿಗೆ ಇಷ್ಟವಾಗುತ್ತದೆ. ಇತರೆ ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಇದು ಜರಿ, ಕುಸುರಿ, ವಿನ್ಯಾಸ ಹೀಗೆ ಹತ್ತು ಹಲವು ವಿಶೇಷತೆಗಳಿರುವುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನುರಿತ ಕುಶಲಕರ್ಮಿಗಳು ಇದನ್ನು ತಯಾರು ಮಾಡುತ್ತಾ ಬಂದಿರುವುದು ಕೂಡ ವಿಶೇಷವಾಗಿದೆ. ಈ ಸೀರೆಯ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುವುದು ಗಮನಾರ್ಹವಾಗಿದ್ದರೆ, ಕುಸುರಿ ವಿನ್ಯಾಸದ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಇಲ್ಲಿರುವುದನ್ನು ಕಾಣಬಹುದಾಗಿದೆ.

ಮನಕ್ಕೊಪ್ಪುವ ಸೀರೆಗಳ ಖರೀದಿಗೆ ಅವಕಾಶ

ಇದೆಲ್ಲದರ ಕಾರಣಕ್ಕಾಗಿಯೇ ಮೈಸೂರು ಸಿಲ್ಕ್ ಸೀರೆ ಎಂದರೆ ಎಲ್ಲ ಹೆಂಗಳೆಯರು ಕುತೂಹಲದ ನೋಟ ಬೀರುತ್ತಾರೆ. ಇದೆಲ್ಲದರ ನಡುವೆ ದೂರದಿಂದ ಬರುವ ಪ್ರವಾಸಿಗರಿಗೆ ಮೈಸೂರು ಸಿಲ್ಕ್ ಹೆಸರಲ್ಲಿ ಮೋಸ ಮಾಡಬಹುದು ಎಂಬ ಕಾರಣಕ್ಕಾಗಿಯೇ ನಗರದ ಪ್ರಮುಖ ಸ್ಥಳಗಳಾದ ಜೆಎಲ್‌ಬಿ ರಸ್ತೆ, ನೀಲಗಿರಿ ರಸ್ತೆ ಹಾಗೂ ಮೃಗಾಲಯದ ಬಳಿ ಸೇರಿದಂತೆ ಹಲವೆಡೆ ಮಾರಾಟದ ಮಳಿಗೆ ತೆರೆಯಲಾಗಿದೆ. ಇಷ್ಟೇ ಅಲ್ಲದೆ ನೇರವಾಗಿ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಗೆ ತೆರಳಿ ತಮಗೊಪ್ಪುವ ರೇಷ್ಮೆ ಸೀರೆಗಳನ್ನು ಖರೀದಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.

What Are The Special Features Of Mysore Silk Sarees

ಮೈಸೂರಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ದಸರಾ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ವಾಸ್ತವ್ಯ ಹೂಡುತ್ತಾರೆ. ಹೀಗೆ ಬರುವ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಲ್ಲದೆ ರೇಷ್ಮೆ ಸೀರೆಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಇಲ್ಲಿ ಸೀರೆಯ ಜರಿ, ವಿನ್ಯಾಸ ಹೀಗೆ ಅದರ ವಿಶೇಷತೆಗಳ ಮೇಲೆ ದರವನ್ನು ನಿಗದಿಪಡಿಸಲಾಗಿದ್ದು, ಲಕ್ಷದವರೆಗೆ ಸೀರೆಯ ದರವಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಸೀರೆಗಳನ್ನು ಖರೀದಿಸುವುದು ಕಂಡು ಬರುತ್ತದೆ.

ಬ್ರಿಟನ್ ರಾಜಮನೆತನದ ರೇಷ್ಮೆ ವಸ್ತ್ರ ಪ್ರೇರಣೆ

ಇದೆಲ್ಲದರ ನಡುವೆ ಮೈಸೂರಿನಲ್ಲಿ ರೇಷ್ಮೆ ಸೀರೆಗಳ ತಯಾರಿಕೆಯ ಕಾರ್ಖಾನೆ ಆರಂಭದ ಬಗ್ಗೆ ಹೇಳಲೇ ಬೇಕಾಗುತ್ತದೆ. ಇವತ್ತು ನಾವೆಲ್ಲರೂ ಹೆಮ್ಮೆ ಪಡುವ ಮೈಸೂರು ಸಿಲ್ಕ್ ಸ್ಥಾಪನೆಯಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎನ್ನುವುದೇ ಖುಷಿಪಡುವ ವಿಚಾರವಾಗಿದೆ. 1912ರಲ್ಲಿ ಬ್ರಿಟನ್‌ನಲ್ಲಿ ನಡೆದ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತೆರಳಿದ್ದರು. ಆಗ ಅಲ್ಲಿನ ರಾಜ ಮನೆತನದವರು ಧರಿಸಿದ್ದ ಯಂತ್ರ ನಿರ್ಮಿತ ರೇಷ್ಮೆ ವಸ್ತ್ರಗಳು ಅವರ ಗಮನಸೆಳೆಯಿತು. ಇದನ್ನು ಮೈಸೂರಿನಲ್ಲೇ ಏಕೆ ತಯಾರಿಸಬಾರದು ಎಂದು ಆಲೋಚಿಸಿದ ಅವರು ಆ ಕುರಿತಂತೆ ಮಾಹಿತಿ ಪಡೆದು ಸ್ವಿಟ್ಜರ್ ಲ್ಯಾಂಡ್ ನಿಂದ 32 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡು ರೇಷ್ಮೆ ಸೀರೆ ತಯಾರಿಸುವ ಕಾರ್ಖಾನೆಗೆ ಚಾಲನೆ ನೀಡಿದರು.

What Are The Special Features Of Mysore Silk Sarees

ಅವತ್ತಿನಿಂದ ಇವತ್ತಿನವರೆಗೆ ಹಲವು ವಿಧದಲ್ಲಿ ಅಭಿವೃದ್ಧಿಗೊಂಡು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಕಾರ್ಖಾನೆ ಹಲವು ರೀತಿಯ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತಾ ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಶೇಕಡ ನೂರರಷ್ಟು ಉತ್ತಮ ರೇಷ್ಮೆ ಮತ್ತು ಚಿನ್ನದ ಜರಿ ಮಿಶ್ರಣದಿಂದ ಸೀರೆ ತಯಾರಾಗುತ್ತಿರುವುದಾಗಿದೆ. ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕವಾದ ಮೈಸೂರು ಸಿಲ್ಕ್ ನೇಯ್ಗೆ ಕಾರ್ಖಾನೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ಆಗಿ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

ಸಂಸ್ಕೃತಿಯ ಪ್ರತೀಕವಾದ ಮೈಸೂರು ರೇಷ್ಮೆ

ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಟಿಪ್ಪು ಸುಲ್ತಾನ್ ಪರಿಚಯಿಸಿದರೂ ಅದಕ್ಕೊಂದು ಉದ್ಯಮದ ಮಾನ್ಯತೆ ನೀಡಿ ಜಗದ್ವಿಖ್ಯಾತವಾಗುವಂತೆ ಮಾಡಿದವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಇವತ್ತಿಗೂ ಮದುವೆ ಇನ್ನಿತರ ಯಾವುದೇ ಶುಭಸಮಾರಂಭಗಳಲ್ಲಿ ಮೈಸೂರು ಸಿಲ್ಕ್ ಸೀರೆಯನ್ನುಟ್ಟು ಭಾಗವಹಿಸುವುದೇ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮವಾಗಿದ್ದು, ಸಂಸ್ಕೃತಿಯ ಪ್ರತೀಕವಾಗಿದೆ ಎಂದರೂ ತಪ್ಪಾಗಲಾರದು.

ಸರ್ಕಾರಿ ಅಧೀನದಲ್ಲಿರುವ ಕಾರ್ಖಾನೆ (ಕೆಎಸ್‌ಐಸಿ)ಯಲ್ಲಿ ಪೈಪೋಟಿಗೆ ತಕ್ಕಂತೆ ವಿವಿಧ ಸೀರೆಗಳನ್ನು ತಯಾರಿಸಲಾಗುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯ ಸೀರೆ ತಯಾರಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಇವತ್ತು ರೇಷ್ಮೆ ನೂಲು ತೆಗೆಯುವುದರಿಂದ ಆರಂಭವಾಗಿ ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸ ಮಾತ್ರವಲ್ಲದೆ ಗುಣಮಟ್ಟವನ್ನು ಮೊದಲಿನಂತೆಯೇ ಉಳಿಸಿಕೊಂಡು ಬಂದಿರುವುದು ಮೈಸೂರು ಸಿಲ್ಕ್ ನ ಹಿರಿಮೆಗೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+