ನಾವೆಲ್ಲರೂ ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸೋಣ
ಕೊರೊನಾದ ಎರಡನೇ ಅಲೆ ಸುನಾಮಿಯಂತೆ ಕಾಡುತ್ತಿದೆ. ಸೋಂಕಿತರ ಸಂಖ್ಯೆ ಒಂದೆಡೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಶೀಘ್ರಗತಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಕೊರೋನಾ ಮಹಾಮಾರಿಯ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದು ಜನ ಮನೆಯೊಳಗೆ ಬಂಧಿಯಾಗುವುದು ಅನಿವಾರ್ಯವಾಗಿದೆ.
ಪ್ರತಿಯೊಬ್ಬರಿಗೂ ಈಗ ಜೀವವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಜೀವ ಉಳಿದರೆ ಜೀವನ ಎಂಬಂತಹ ಸ್ಥಿತಿ ಈಗ ಇದೆ. ಕಳೆದ ಬಾರಿಯ ಲಾಕ್ ಡೌನ್‍ನಿಂದ ಇನ್ನೂ ಎಚ್ಚೆತ್ತುಕೊಳ್ಳಲಾಗಲಿಲ್ಲ. ಹೀಗಿರುವಾಗ ಮತ್ತೊಮ್ಮೆ ಲಾಕ್ ಡೌನ್ ಮಾಡಲಾಗಿದೆ. ಇದು ಜನ ಸಾಮಾನ್ಯನಿಗೆ ಗಾಯದ ಮೇಲೆ ಎಳೆದ ಬರೆಯಾಗಿದೆ. ಆದರೆ ಹೆಚ್ಚುತ್ತಿರುವ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಇದೊಂದು ಮಾರ್ಗವನ್ನು ಹೊರತು ಪಡಿಸಿದರೆ ಮತ್ಯಾವ ಮಾರ್ಗವೂ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಾವೇ ಸ್ವಯಂ ನಿರ್ಧಾರದೊಂದಿಗೆ ಕೋವಿಡ್ ತಡೆಗೆ ಕೈ ಜೋಡಿಸಬೇಕಾಗಿದೆ.
ಬಹುಶಃ ನಾವೆಲ್ಲರೂ ಅವತ್ತು ಮೈಮರೆತಿದ್ದೇ ಇವತ್ತಿನ ಪರಿಸ್ಥಿತಿಗೆ ಕಾರಣ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಕೊರೋನಾ ಕಾಲದಲ್ಲಿ ಸಂಕಷ್ಟ ಅನುಭವಿಸಿದ್ದೆವು. ಆದರೆ ಕೊರೋನಾ ಸೋಂಕು ಇನ್ನೂ ದೂರವಾಗಿರಲಿಲ್ಲ. ಸೋಂಕಿತರ ಸಂಖ್ಯೆ ಒಂದಷ್ಟು ಕಡಿಮೆಯಾಗಿತ್ತಷ್ಟೆ. ಆದರೆ ಸರ್ಕಾರ ಸೇರಿದಂತೆ ಜನ ಮೈಮರೆತು ಬಿಟ್ಟರು. ಹಿಂದೆ ಮಾಡಿದ್ದ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಜನ ಗುಂಪು ಸೇರಲಾರಂಭಿಸಿದರು. ಪ್ರವಾಸ ಹೆಚ್ಚಾಯಿತು. ಒಂದೆಡಯಿಂದ ಮತ್ತೊಂದೆಡೆಗೆ ಜನ ಎಗ್ಗಿಲ್ಲದೆ ಓಡಾಡ ತೊಡಗಿದರು. ಅದರ ಪರಿಣಾಮವನ್ನು ಈಗ ಎದುರಿಸಬೇಕಾಗಿದೆ.

ಓಡಾಟಕ್ಕೆ ಬ್ರೇಕ್ ಹಾಕಬೇಕಾಗಿತ್ತು
ಇವತ್ತು ಸೋಂಕಿತರ ಟ್ರಾವೆಲ್ ಹಿಸ್ಟ್ರಿ ನೋಡಿದರೆ ಅವರೆಲ್ಲರೂ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡಿರುವುದು ಕಾಣಿಸುತ್ತಿದೆ. ಒಂದಷ್ಟು ದಿನ ತಮ್ಮ ಓಡಾಟಕ್ಕೆ ಕಡಿವಾಣ ಹಾಕಿದ್ದಿದ್ದರೆ ಬಹುಶಃ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಸರ್ಕಾರ ಕೂಡ ಚುನಾವಣೆಯನ್ನು ಮುಂದೂಡಿದ್ದರೆ, ರಾಜಕೀಯ ನಾಯಕರು ಚುನಾವಣಾ ಪ್ರಚಾರ, ಪ್ರವಾಸಗಳಿಗೆ ಬ್ರೇಕ್ ಹಾಕಿದ್ದಿದ್ದರೆ ಆಗುತ್ತಿತ್ತೇನೋ? ಆದರೆ ಕಾಲ ಮಿಂಚಿ ಹೋಗಿದೆ. ಜನ ಕಷ್ಟ ಅನುಭವಿಸುವುದರೊಂದಿಗೆ ಕೊರೊನಾ ಮಹಾಮಾರಿ ತಮಗೆಲ್ಲಿ ಅಟಕಾಯಿಸಿಕೊಂಡು ಬಿಡುತ್ತದೆಯೋ ಎಂಬ ಭಯದಲ್ಲಿ ಕಾಲ ನೂಕುವಂತಾಗಿದೆ.

ಕೆಲವರಿಗೆ ಲಾಕ್ ಡೌನ್ ಶಿಕ್ಷೆ
ಕೊರೊನಾದಿಂದಾಗಿ ಬಹಳಷ್ಟು ಮಂದಿಗೆ ಮನೆಯಲ್ಲಿಯೇ ದಿನ ಕಳೆಯುವುದು ಅಭ್ಯಾಸವಾಗಿದೆ. ಮನೆಯಲ್ಲಿದ್ದುಕೊಂಡು ಕೆಲಸ ಮಾಡುವುದಕ್ಕೆ ಇನ್ನೊಂದಷ್ಟು ಜನ ಹೊಂದಿಕೊಂಡಿದ್ದಾರೆ. ಆದರೆ ಮನೆಯಲ್ಲಿ ಹೆಚ್ಚಾಗಿ ಇರದೆ ಹೊರಗೆ ಅಡ್ಡಾಡುವವರಿಗೆ ಲಾಕ್ ಡೌನ್ ಒಂದು ರೀತಿಯ ಶಿಕ್ಷೆಯಾಗಿದೆ. ಕೆಲಸವಿಲ್ಲದೆ ಹೊರಗೆ ಅಡ್ಡಾಡುವವರಿಂದಲೇ ಸೋಂಕು ಹೆಚ್ಚು ಹರಡುತ್ತಿರುವುದು ಎಂಬುದನ್ನು ಅರ್ಥ ಮಾಡಿಕೊಂಡರೆ ಬಹುಶಃ ಒಳ್ಳೆಯದು. ಆದರೆ ಬದುಕು ಹೀಗೆಯೇ ಇರುತ್ತದೆ ಎಂಬ ನಂಬಿಕೆಯಿಂದ ತಮ್ಮ ಸಂಪಾದನೆಗೆ ತಕ್ಕಂತೆ ಮಾಡಿಕೊಂಡ ಕಮಿಟ್ ಮೆಂಟ್ ಈಗ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದೆ. ಮನೆಯಲ್ಲಿಯೇ ಕುಳಿತಾಗ ಚಿಂತೆಗಳು ಹೆಚ್ಚು ಹೆಚ್ಚು ಕಾಡುತ್ತವೆ. ಜತೆಗೆ ಸಂಸಾರದಲ್ಲಿ ಹೊಂದಾಣಿಕೆಯಿಲ್ಲದವರಿಗಂತು ಇದೊಂದು ರೀತಿಯ ಕಠಿಣ ಶಿಕ್ಷೆ. ಇಂತಹ ಸಂದರ್ಭಗಳಲ್ಲಿ ತಮಗರಿವಿಲ್ಲದಂತೆ ಮಾನಸಿಕ ಸಮಸ್ಯೆಗಳು ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು
ಇಂತಹ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ನಾವೇ ಅರಿತುಕೊಂಡು ಮುನ್ನಡೆದರೆ ನಮಗೆ ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ಜನಕ್ಕೂ ಒಳ್ಳೆಯದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಮಯವಾಗಿದ್ದು, ಅಪಾಯಕಾರಿ ಕಾಲದಲ್ಲಿಯೂ ಆಶಾಕಿರಣದ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಕುಟುಂಬ, ಆರೋಗ್ಯ ಹೀಗೆ ಎಲ್ಲವನ್ನೂ ರೂಪಿಸುವ ಜವಬ್ದಾರಿ ಎಲ್ಲರ ಮೇಲಿದೆ.

ಮನುಷ್ಯನಿಗೆ ಜೀವಿತಾವಧಿಯ ಸವಾಲ್
ಕೋವಿಡ್ ಜೀವಕ್ಕೆ ಕುತ್ತು ತರುವ ಮತ್ತು ವ್ಯಕ್ತಿಯನ್ನು ಏಕಾಂಗಿಯಾಗಿಸುವ ಕಾಯಿಲೆ. ಇಲ್ಲಿ ಏಕಾಂಗಿಯಾಗಿದ್ದುಕೊಂಡು ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಮತ್ತು ಬೇರೆಯವರಿಗೆ ನಮ್ಮಿಂದ ಸೋಂಕು ತಗುಲದಂತೆಯೂ ಎಚ್ಚರವಾಗಿರಬೇಕು. ಇದೊಂದು ಮನುಷ್ಯನಿಗೆ ಜೀವಿತಾವಧಿಯಲ್ಲೊಂದು ಸವಾಲ್ ಎಂದರೆ ತಪ್ಪಾಗಲಾರದು. ಇಲ್ಲಿ ಎಲ್ಲವೂ ನಾನು ಅಂದುಕೊಂಡಂತೆಯೇ ನಡೆಯಬೇಕು ಎಂಬ ಅಹಂ ಬಿಟ್ಟು ಕುಟುಂಬದೊಂದಿಗೆ ಖುಷಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಪಾಸಿಟಿವ್ ಆಗಿರುವುದನ್ನು ಕಲಿಯಿರಿ
ಕೊರೊನಾ ಪಾಸಿಟಿವ್ ನಿಂದ ದೂರವಾಗ ಬೇಕಾದರೆ ನಾವು ಎಲ್ಲವನ್ನು ಪಾಸಿಟಿವ್ ಆಗಿ ನೋಡುವುದನ್ನು ಕಲಿಯಬೇಕು. ಕೆಲವೊಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದಕ್ಕಿಂತ ಹಂಚಿಕೊಂಡು ಹಗುರವಾಗಬೇಕು. ಸದಾ ಕೆಲಸ, ವ್ಯಾಪಾರ ಅಂತಹ ಹೊರಗೆ ಇದ್ದವರು ಅಯ್ಯೋ ಮನೆಯಲ್ಲಿರಬೇಕಲ್ಲ, ವ್ಯಾಪಾರ ನಷ್ಟವಾಯಿತಲ್ಲ ಎಂದು ಚಿಂತೆ ಮಾಡದೆ ಮನೆಯವರೊಂದಿಗೆ ಕಾಲ ಕಳೆಯಲು ಸಮಯ ಸಿಕ್ಕಿತಲ್ಲ ಎಂದು ಖುಷಿಪಡಿ. ತುಂಬಾ ಸಲ ಚಿಕ್ಕ ಚಿಕ್ಕ ಖುಷಿಗಳೇ ನಮ್ಮನ್ನು ಸುಖವಾಗಿಡುವುದು ಎಂಬುದನ್ನು ಮರೆಯದಿರಿ.
ಒಂದಷ್ಟು ಜಾಗವಿದ್ದರೆ ಒಳ್ಳೆಯ ಗಿಡಗಳನ್ನು ನೆಡಿ, ಆಟವಾಡಿ ಇನ್ನಿತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಮನೆಯಲ್ಲಿ ಇತರೆ ಸದಸ್ಯರೊಂದಿಗೆ ಕೆಲಸದಲ್ಲಿ ಸಹಕರಿಸಿ. ಮಕ್ಕಳೊಂದಿಗೆ ಮಜಾ ಮಾಡಿ, ಪುಸ್ತಕ ಓದಿ, ಚಿತ್ರಬಿಡಿಸಿ, ಯಾವತ್ತೋ ಏನೋ ಮಾಡಬೇಕೆಂದು ಯೋಚಿಸಿದ್ದು, ಸಮಯವಿಲ್ಲದೆ ದೂರವಿಟ್ಟಿದ್ದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದು ತಿಳಿದು ಪ್ರಯೋಗ ಕೈಗೊಳ್ಳಿ. ಅದು ನಿಮ್ಮ ಮನಸ್ಸಿಗೆ ಮುದ ನೀಡಬಹುದು.

ಕೊರೋನಾ ತಡೆಗೆ ಪಣ ತೊಡೋಣ
ನಾವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದರೊಂದಿಗೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಕೆಗೆ ಆದ್ಯತೆ ನೀಡುತ್ತಾ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾ ಬದುಕೋಣ.. ಮೊದಲಿಗೆ ನಮ್ಮಲ್ಲಿ ಆತ್ಮಬಲ ಹೆಚ್ಚಿಸಿಕೊಳ್ಳೋಣ ಹಾಗೆಯೇ ಕೊರೊನಾ ವೈರಸ್ ಮಟ್ಟಹಾಕಲು ಬೇಕಾದ ಇಮ್ಯುನಿಟಿಯನ್ನು ಲಸಿಕೆ ಮೂಲಕ ಪಡೆದುಕೊಳ್ಳೋಣ. ನಾವು ಮತ್ತು ನಮ್ಮ ಸುತ್ತಮುತ್ತ ಇರುವ ಎಲ್ಲರೂ ಆರೋಗ್ಯವಾಗಿರಲಿ ಎಂದು ಬಯಸುತ್ತಾ ಸದಾ ಎಚ್ಚರಿಕೆಯಿಂದಲೇ ಬದುಕು ಸಾಗಿಸುತ್ತಾ ಕೊರೋನಾವನ್ನು ಹೊಡೆದೋಡಿಸಲು ಪಣ ತೊಡೋಣ.












Click it and Unblock the Notifications