ವಿಶೇಷ ವರದಿ: ದಶಕದ ಬಳಿಕ 110 ಅಡಿ ದಾಟಿದ ವಾಣಿವಿಲಾಸ ಸಾಗರ ನೀರಿನ ಮಟ್ಟ

ಚಿತ್ರದುರ್ಗ, ಅಕ್ಟೋಬರ್ 7: ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ ಹಾಗೂ ರಾಜ್ಯದ ಅತ್ಯಂತ ಹಳೆಯ ಜಲಾಶಯಗಳಲ್ಲಿ ಒಂದಾಗಿರುವ 112 ವರ್ಷ ಇತಿಹಾಸವಿರುವ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ದಶಕದ ನಂತರ ಗುರುವಾರ 110.20 ಅಡಿ ತಲುಪಿದೆ.

ಕಳೆದ ಮೂರು ತಿಂಗಳಿಂದ ಭದ್ರಾ ಜಲಾಶಯದಿಂದ ಹರಿಯುತ್ತಿರುವ ನೀರಿನಿಂದ ಡ್ಯಾಂನಲ್ಲಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಮಟ್ಟದ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಕಳೆದ ಎರಡು ವರ್ಷಗಳ ಹಿಂದೆ ಬತ್ತಿ ಹೋಗಿ ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ ದಿನ ಕಳೆದಂತೆ ನೀರಿನ ಮಟ್ಟ ಹೆಚ್ಚುತ್ತಿರುವುದು ಎಲ್ಲರಿಗೂ ಖುಷಿ ನೀಡುತ್ತಿದೆ. ಎತ್ತ ಕಣ್ಣು ಹಾಯಿಸಿ ನೋಡಿದರೂ ದೂರ ದೂರಕ್ಕೆ ಕಾಣುವ ನೀರಿನ ಜಲರಾಶಿ. ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ತುಂಬುತ್ತಿರುವ ಜಲಾಶಯದ ನೀರಿನ ದೃಶ್ಯ. ಕಳೆದ ಎರಡ್ಮೂರು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

 ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು

ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು

ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಸಂಭವಿಸಿತ್ತು ಹಾಗೂ ತೋಟಗಳು ಒಣಗಿ ತೀವ್ರ ಸಂಕಷ್ಟಕ್ಕೆ ರೈತರು ಸಿಲುಕಿದ್ದರು. ಇದೀಗ ನೀರಿನ ಬವಣೆ ನೀಗಿಸಲು ಭದ್ರಾ ಜಲಾಶಯದಿಂದ ಪ್ರತಿದಿನ ನೀರು 615 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ. ಅಜ್ಜಂಪುರ ಭಾಗದಲ್ಲಿ ಮಳೆಯಾಗಿದ್ದರಿಂದ ಬುಧವಾರ ಹಾಗೂ ಗುರುವಾರ 2878 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ‌ಸೇರುತ್ತಿದೆ. ಇನ್ನೊಂದೆರಡು ದಿನಗಳ ಕಾಲ ಆ ಭಾಗದಲ್ಲಿ ಮಳೆ ಸುರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಆಶಾಭಾವನೆ ಮೂಡಿಸಿದೆ.

 100 ರಿಂದ 200 ಅಡಿಗೆ ನೀರು ಸಿಗುತ್ತಿದೆ

100 ರಿಂದ 200 ಅಡಿಗೆ ನೀರು ಸಿಗುತ್ತಿದೆ

ಇನ್ನು ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಜಲಾಶಯ ಸುತ್ತಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 100 ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು, ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

 10 ವರ್ಷಗಳ ಬಳಿಕ 112 ಅಡಿ ತಲುಪುವ ಸಾಧ್ಯತೆ

10 ವರ್ಷಗಳ ಬಳಿಕ 112 ಅಡಿ ತಲುಪುವ ಸಾಧ್ಯತೆ

ಅಕ್ಟೋಬರ್ ತಿಂಗಳ 15ರವರೆಗೆ ಜಲಾಶಯಕ್ಕೆ ನೀರು ಹರಿಯಲಿದ್ದು, 10 ವರ್ಷಗಳ ಬಳಿಕ 112 ಅಡಿ ತಲುಪುವ ಸಾಧ್ಯತೆ ಇದೆ. ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಜಲಾಶಯ ತುಂಬುವ ಹಂತಕ್ಕೆ ಬಂದಿರುವುದು, ರೈತ ಸಮುದಾಯದಲ್ಲಿ ಚೈತನ್ಯ ಮೂಡಿಸಿದರೆ, ಮತ್ತೊಂದು ಕಡೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದಂತಾಗಿದೆ. ಸತತ ಬರದಿಂದ ಕೃಷಿಯನ್ನೇ ಮರೆತಿದ್ದ ರೈತರು, ಹಗಲಿರುಳು ತಮ್ಮ ಜಮೀನು, ತೋಟಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವಂತೆ ವಾಣಿವಿಲಾಸ ಜಲಾಶಯ ಮಾಡಿದೆ.

 ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಲಾಶಯ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಲಾಶಯ

1911ರಲ್ಲಿ ಪ್ರಥಮ ಬಾರಿಗೆ ನೀರಿನ ಮಟ್ಟ 109.66 ಅಡಿ ಮುಟ್ಟಿತ್ತು. 1933ರಲ್ಲಿ 135.25 ಅಡಿ ದಾಖಲೆಯಲ್ಲಿ ನೀರು ಸಂಗ್ರಹವಾಗಿತ್ತು. 2000ರಲ್ಲಿ 122.50 ಅಡಿ ನಂತರ 2010 ರಲ್ಲಿ 112.75 ಸಂಗ್ರಹವಾಗಿದ್ದು, ಬಿಟ್ಟರೆ ಇದೀಗ ಹತ್ತು ವರ್ಷಗಳ ನಂತರದಲ್ಲಿ 110.20 ಅಡಿ ನೀರು ಹರಿದು ಬಂದಿದೆ.

112 ವರ್ಷಗಳ ಇತಿಹಾಸ ಹೊಂದಿರುವ 30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಗುರುವಾರ ಅರ್ಧದಷ್ಟು ತುಂಬಿ, ರಮಣೀಯವಾಗಿ ನೋಡುಗರನ್ನು ಕಣ್ಮನ ಸೆಳೆಯುವಂತೆ ಮಾಡಿದೆ.

 58ನೇ ಬಾರಿಗೆ ಜಲಾಶಯ ನೀರಿನ ಮಟ್ಟ 100 ಅಡಿ ದಾಟಿದೆ

58ನೇ ಬಾರಿಗೆ ಜಲಾಶಯ ನೀರಿನ ಮಟ್ಟ 100 ಅಡಿ ದಾಟಿದೆ

ಗುರುವಾರದ ವರದಿಯಲ್ಲಿ ಜಲಾಶಯದ ಒಟ್ಟು ನೀರಿನ ಸಂಗ್ರಹ 110.20 ಅಡಿಗೆ ಬಂದು ತಲುಪಿದೆ. ಇನ್ನೂ ಪೂರ್ಣಮಟ್ಟ ತಲುಪಲು 19.20 ಅಡಿ ಬಾಕಿ ಇದ್ದು, ಈ ಬಾಕಿ ಇರುವ ನೀರು ಹರಿದು ಬಂದರೆ ಜಲಾಶಯ ತುಂಬುತ್ತದೆ. ಜಲಾಶಯದ ಲೈವ್ ಸ್ಟೋರೇಜ್ 13.99 ಟಿಎಂಸಿ ಇದೆ. 14 ಟಿಎಂಸಿ ನೀರು ಬಂದಲ್ಲಿ ಎರಡನೇ ಬಾರಿಗೆ ಕೋಡಿಯಲ್ಲಿ ನೀರು ಹರಿಯಬಹುದು. 58ನೇ ಬಾರಿಗೆ ಜಲಾಶಯ ನೀರಿನ ಮಟ್ಟ 100 ಅಡಿ ದಾಟಿದೆ. ವಿಶ್ವೇಶ್ವರಯ್ಯ ನೀರಾವರಿ ಜಲ ನಿಗಮದವರು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರು ಗಟ್ಟಿ ನಿರ್ಧಾರ ಕೈಗೊಂಡು ಅಕ್ಟೋಬರ್ 15ರವರೆಗೆ ಇರುವ ಭದ್ರಾ ಜಲಾಶಯದಿಂದ ನೀರನ್ನು ಹರಿಸುವ ಆದೇಶವನ್ನು ಜನವರಿ 2022 ರವರೆಗೆ ಮುಂದುವರಿಸಿದರೆ ಜಲಾಶಯದಲ್ಲಿ ನೀರು 120 ಅಡಿ ದಾಟುವ ಎಲ್ಲ ಲಕ್ಷಣಗಳಿವೆ.

ಒಟ್ಟಾರೆಯಾಗಿ ಮಳೆ ಇಲ್ಲದೆ ಬಳಲಿ ಬೆಂಡಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರದಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಇಡೀ ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ಆ ಮೂಲಕ ಜಿಲ್ಲೆಗೆ ಅಂಟಿದ್ದ ಬರದ ಕರಿನೆರಳು ದೂರ ಸರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+