H.T.Sangliana: ಈಗ ಹೇಗಿದ್ದಾರೆ ಅಂದಿನ ಖಡಕ್ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ?
ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಕೆಲ ಖಡಕ್ ಪೊಲೀಸ್ ಅಧಿಕಾರಿಗಳ ಹೆಸರು ಎಷ್ಟೇ ವರ್ಷಗಳಾದರೂ ಮಾಸುವುದಿಲ್ಲ. ಈ ಸಾಲಿನಲ್ಲಿ ಖಡಕ್ ಐಪಿಎಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಎಚ್.ಟಿ.ಸಾಂಗ್ಲಿಯಾನ ಅವರದ್ದು ಒಂದು ಮೈಲಿಗಲ್ಲು ಎಂತಲೇ ಹೇಳಲಾಗುತ್ತದೆ. ಅವರ ಕಾರ್ಯವೈಖರಿಯಿಂದಲೇ ಕರ್ನಾಟಕ ಪೊಲೀಸ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು ಸಾಂಗ್ಲಿಯಾನ.
ಇನ್ನು ಇವರು ಇಲಾಖೆಯಲ್ಲಿ ದಕ್ಷ ಅಧಿಕಾರಿಗಳ ಪೈಕಿ ಮುಂಚೂಣಿಯಲ್ಲಿದ್ದರಿಂದ ಮೊದಲೆಲ್ಲ ಪೊಲೀಸ್ ಎಂದರೆ ಅವರ ಬಾಯಿಗೆ ಸಾಂಗ್ಲಿಯಾನ ಎನ್ನುವ ಹೆಸರು ಬರುವಷ್ಟು ಮನೆಮಾತಾಗಿದ್ದರು. ಇನ್ನು ಇವರಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ನಟ ಶಂಕರ್‌ನಾಗ್ ಅಭಿನಯದ ಸಾಂಗ್ಲಿಯಾನ ಸಿನಿಮಾ ಕೂಡ ತೆರೆಕಂಡು ಸಖತ್ ಹಿಟ್ ಕಂಡಿತ್ತು. ಈ ಪಾತ್ರಕ್ಕೆ ನಿಜವಾದ ಪ್ರೇರಣೆ ಕೂಡ ಸಾಂಗ್ಲಿಯಾನ ಅವರೇ ಆಗಿದ್ದರು.

ವರ್ಷಗಳು ಕಳೆದಂತೆ ಅವರ ಪೊಲೀಸ್ ವೃತ್ತಿಯಿಂದ ಅವರು ದೂರ ಸರಿದಿದ್ದಾರೆ. ಆದರೆ ಅವರ ಹೆಸರು ಇನ್ನೂ ಮಾಸಿಲ್ಲ. ಎಸ್.ಪಿ.ಸಾಂಗ್ಲಿಯಾನ ಸಿನಿಮಾ ಬಂದ ನಂತರವಂತೂ ಈ ಹೆಸರು ಇನ್ನಷ್ಟು ಪ್ರಚಲಿತವಾಗಿದ್ದು ಸುಳ್ಳಲ್ಲ. ಆದರೆ, ಹಲವು ವರ್ಷಗಳ ನಂತರ ಸಾಂಗ್ಲಿಯಾನ ಅವರು ಈಗ ಹೇಗಿದ್ದಾರೆ? ಎನ್ನುವ ಕುತೂಹಲ ಬಹುತೇಕರಲ್ಲಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಂಗ್ಲಿಯಾನ ಅವರಿಗೆ ವಯಸ್ಸಾಗಿದ್ದು, ಕೈಯಲ್ಲಿ ಕೋಲು ಹಿಡಿದು ನಡೆದಾಡುತ್ತಿರುವ ವಿಡಿಯೋ ಅನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಕರ್ನಾಟಕದ ಟಾಪ್ ಪೋಲೀಸ್ ಆಫೀಸರ್ ಆಗಿದ್ದ ಸಾಂಗ್ಲಿಯಾನ ಸರ್.. ಇಂದು ಹೀಗಿದ್ದಾರೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಖಡಕ್ ಪೋಲೀಸ್ ಅಧಿಕಾರಿಗಳಾಗಿ ಹೆಸರು ಮಾಡಿದ ಸಾಂಗ್ಲಿಯಾನ ಅವರು ಮಿಜೋರಾಂನವರು. 1942ರ ಜೂನ್ 1ರಂದು ಜನಿಸಿದ ಸಾಂಗ್ಲಿಯಾನ ಅವರು ಭಾರತೀಯ ಪೋಲಿಸ್ ಸೇವೆಯ (ಐಪಿಎಸ್) 1967ರ ಬ್ಯಾಚ್‌ನಿಂದ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಬಂದರು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೊದಲಿಗೆ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ ಸಾಂಗ್ಲಿಯಾನ ಅವರು ಬಳಿಕ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ತಮ್ಮ ಸೇವೆ ಮೂಲಕ ಖಡಕ್ ಅಧಿಕಾರಿ ಎಂದು ಹೆಸರುವಾಸಿಯಾದರು.

ಸಾಂಗ್ಲಿಯಾನ ಅವರು ಸೇವೆ ಸಲ್ಲಿಸಿದ ಭಾಗಗಳಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ಅವರು ಕಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಅಲ್ಲದೆ ಅವರು ಟ್ರಾಫಿಕ್ ವಿಭಾಗದ ಮುಖ್ಯಸ್ಥರಾದಾಗ ಅವರು ಮುಖ್ಯವಾಗಿ ಅಡ್ಡಾದಿಡ್ಡಿ ಪಾರ್ಕಿಂಗ್, ವಾಹನ ಚಾಲನೆ, ರಸ್ತೆ ದಾಟುವಾಗ ಜನರ ನಿರ್ಲಕ್ಷ್ಯ ಸೇರಿದಂತೆ ಕಾನೂನಿನ ಬಗ್ಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತಿದ್ದರು ಎನ್ನುತ್ತದೆ ಇತಿಹಾಸ.
ಮುಖ್ಯವಾಗಿ ಸಾಂಗ್ಲಿಯಾನ ಅವರು ಯಾವುದೇ ರಾಜಕೀಯ ಒತ್ತಡಗಳಿಗೆ ಬಗ್ಗುತ್ತಿರಲಿಲ್ಲ. ಈ ವಿಚಾರದಿಂದಲೇ ಅವರು ಪ್ರಖ್ಯಾತಿ ಪಡೆದಿದ್ದರು. ಅಲ್ಲದೆ ವಿಶೇಷ ಪೋಲೀಸ್ ಕಮಿಷನರ್ ಆಗಿದ್ದಾಗ ಸಾಂಗ್ಲಿಯಾನ ಅವರು ಹಿರಿಯ ಅಧಿಕಾರಿಯ ಪತ್ನಿ ಮನೆಗೆ ತರಲು ಪೊಲೀಸ್ ವಾಹನ ಬಳಸಿದ್ದಕ್ಕೆ ಅವರ ವಿರುದ್ಧವೇ ಕೇಸ್ ದಾಖಲಿಸಿದ್ದರು ಎಂದು ಹತ್ತಿರದಿಂದ ಕಂಡಿದ್ದ ಪೊಲೀಸರು ಈಗಲೂ ನೆನೆಯುತ್ತಾರೆ.
ಪೊಲೀಸ್ ವೃತ್ತಿಯ ಬಳಿಕ ಅವರು ರಾಜಕೀಯದತ್ತ ಪ್ರವೇಶ ಮಾಡಿದ್ದರು. ವಿಶೇಷವೆಂದರೆ 2008ರಲ್ಲಿ ಅಮೆರಿಕದ ಅಧ್ಯಕ್ಷರಾದ ಬರಾಕ್ ಒಬಾಮ ಅವರು 160 ಅಂತರರಾಷ್ಟ್ರೀಯ ಮಟ್ಟದ ವಿಶಿಷ್ಟ ವ್ಯಕ್ತಿಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರಲ್ಲಿ ಸಾಂಗ್ಲಿಯಾನ ಕೂಡಾ ಇದ್ದರು ಎನ್ನಲಾಗಿದೆ.












Click it and Unblock the Notifications