Valentine's Day: ಪ್ರೀತಿಯ ಆ ಕ್ಷಣ ಮಧುರವಾಗಿಸಲು ಚಾಕೋಲೆಟ್ ಏಕೆ ನೀಡಬೇಕು?
ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಚಾಕೋಲೆಟ್ ನೀಡಿ ಮನಪೂರ್ವಕ ಐ ಲವ್ ಯೂ ಎಂದು ಬಿಡಿ.. ಏಕೆ ಗೊತ್ತಾ? ನಿಮ್ಮ ಪ್ರೇಮ ಚಿರವಾಗಿ ಉಳಿಯ ಬೇಕಾದರೆ ಒಳ್ಳೆಯ ಹೃದಯ ಬೇಕು ಮತ್ತು ಆ ಹೃದಯ ಆರೋಗ್ಯವಾಗಿರಬೇಕಾದರೆ ಆಗಾಗ್ಗೆ ಚಾಕೋಲೆಟ್ ಸೇವಿಸುತ್ತಿರಬೇಕು. ಇಷ್ಟಕ್ಕೂ ಪ್ರೇಮ, ಹೃದಯ, ಚಾಕೋಲೆಟ್ ಮೂರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?
ಪ್ರೇಮ ಹೃದಯಕ್ಕೆ ಸಂಬಂಧಿಸಿದ್ದು, ನಮ್ಮ ಹೃದಯ ಆರೋಗ್ಯವಾಗಿದ್ದರೆ ಪ್ರೇಮ ಗಟ್ಟಿಯಾಗಿ ಉಳಿಯಲು ಸಾಧ್ಯ. ಎಲ್ಲರೂ ತಮ್ಮ ಪ್ರೇಮ ಚಿರವಾಗಿರಬೇಕೆಂದು ಕೊಂಡೇ ಪ್ರೀತಿ ಮಾಡ್ತಾರೆ. ಆದರೆ ಎಲ್ಲರ ಪ್ರೀತಿ ಸಕ್ಸಸ್ ಆಗುತ್ತೆ ಎನ್ನಲಾಗುವುದಿಲ್ಲ. ಕೆಲವರದು ಸುಖಾಂತ್ಯ ಕಂಡರೆ, ಮತ್ತೆ ಕೆಲವರದು ದುರಂತದ ಅಂತ್ಯ ಕಾಣಬಹುದು. ಇನ್ನು ಕೆಲವರದು ಚಿಗುರುವ ಹಂತದಲ್ಲಿಯೇ ಮುರುಟಿ ಹೋಗಬಹುದು.

ಪ್ರೇಮ ಹೃದಯದಿಂದ ಹುಟ್ಟಬೇಕು. ಅದು ಆಕರ್ಷಣೆಯಾಗದೆ ಪವಿತ್ರ ಬಂಧವಾಗಬೇಕು. ನಿಜವಾದ ಪ್ರೇಮ ಹೃದಯದಲ್ಲಿ ಹುಟ್ಟುತ್ತದೆ ಮತ್ತು ಪ್ರತಿಯೊಂದಕ್ಕೂ ಸದಾ ಸ್ಪಂದಿಸುತ್ತಾ ಚಿರವಾಗಿ ಉಳಿಯುತ್ತದೆ. ಪ್ರೀತಿಯನ್ನು ನಾವು ಯಾರ ಮೇಲೂ ತೋರಿಸಬಹುದು ಆದರೆ ಪ್ರೇಮ ಹಾಗಲ್ಲ. ಆದು ಕಾಮದ ಸಂಗಮ ಹೀಗಾಗಿ ಪ್ರೇಮ ಮಧುರವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೆ ಹೋದರೆ ಪ್ರೇಮದ ಉನ್ಮಾದದಲ್ಲಿ ಮೈಮರೆತರೆ ಸಿಹಿಗಿಂತ ಕಹಿಯೇ ಜಾಸ್ತಿ.
ಚಾಕೋಲೆಟ್ ಏಕೆ ನೀಡಬೇಕು?
ಪ್ರೇಮ, ಪ್ರೀತಿ, ನೋವು, ನಲಿವು ಎಲ್ಲದಕ್ಕೂ ಮೊದಲು ಸ್ಪಂದಿಸುವುದೇ ಹೃದಯ. ಈ ಹೃದಯವನ್ನು ಆರೋಗ್ಯವಾಗಿಟ್ಟುಕೊಂಡಷ್ಟು ಪ್ರೇಮಿಗಳು ಮಾತ್ರವಲ್ಲ ಅವರ ಸುತ್ತಲ ಬಳಗ ಸುಖವಾಗಿರಲು ಸಾಧ್ಯಹವಾಗುತ್ತದೆ. ಪ್ರೇಮದ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬ ಪ್ರೇಮಿಯೂ ಬದುಕು ಪ್ರೇಮವಯವಾಗಿರಬೇಕೆಂದು ಕನಸು ಕಾಣುತ್ತಾನೆ. ಪ್ರತಿ ಸ್ಪರ್ಶವೂ ಸುಖದ ಅಲೆಯಲ್ಲಿ ತೇಲುತ್ತಿರಬೇಕೆಂದುಕೊಳ್ಳುತ್ತಾರೆ.

ಇದೆಲ್ಲವೂ ಸಾಧ್ಯವಾಗಬೇಕಾದರೆ ನಮ್ಮೊಳಗಿನ ಹೃದಯ ಗಟ್ಟಿಯಾಗಬೇಕು. ಅದು ಗಟ್ಟಿಯಾಗಬೇಕಾದರೆ ಪ್ರತಿಯೊಬ್ಬರೂ ಅವರ ಪ್ರೇಮಪಾತ್ರರಿಗೆ ಒಳಿತಾಗುವಂತೆ ನಡೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಸಾಧ್ಯವಾದಷ್ಟು ಪ್ರೀತಿಯಿಂದ ಮನದುಂಬಿ ಒಬ್ಬರಿಗೊಬ್ಬರು ಚಾಕೋಲೆಟ್ ನೀಡುತ್ತಿರಬೇಕು. ಅದರ ಮಧುರತೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಇನ್ನು ಪ್ರೇಮಿಗಳು ಒಬ್ಬರಿಗೊಬ್ಬರು ಚಾಕೋಲೆಟ್ ಏಕೆ ನೀಡಬೇಕೆಂದರೆ ಅದರಲ್ಲಿ ಹೃದಯ ಆರೋಗ್ಯ ಕಾಪಾಡುವ ಶಕ್ತಿಯಿದೆ.
ಚಾಕೋಲೆಟ್ ಹೃದಯ ಕಾಪಾಡುತ್ತದೆ
ಪ್ರೇಮ ಗಟ್ಟಿಯಾಗಬೇಕಾದರೆ ನಿಷ್ಕಲ್ಮಶ ಹೃದಯವಿದ್ದರೆ ಅದು ಆರೋಗ್ಯವಾಗಿಯೂ ಇರಬೇಕು. ಇದು ಸಾಧ್ಯವಾಗಬೇಕಾದರೆ ನಾವು ಕೊಡುವ ಚಾಕೋಲೆಟ್ ಜತೆ ನಮ್ಮ ಪ್ರೀತಿಯೂ ನಿಸ್ವಾರ್ಥವಾಗಿರಬೇಕು. ಚಾಕೋಲೆಟ್ ನೀಡಿದ ಬಳಿಕ ನಾವು ಒಳ್ಳೆಯ ಮಾತನಾಡಬೇಕು. ಅರಿತು ಬದುಕುವುದಕ್ಕೆ ಒತ್ತು ನೀಡಬೇಕು. ನಾನು ನನ್ನದು ಎಂಬುದನ್ನು ಬದಿಗೊತ್ತಿ ನಮ್ಮದು ಎಂಬುದನ್ನು ರೂಢಿಸಿಕೊಳ್ಳಬೇಕು
ಪ್ರೇಮಿಗಳು ಹರಟೆ ಹೊಡೆಯುತ್ತಾ ನಿಯಮಿತವಾಗಿ, ಖುಷಿ, ಖುಷಿಯಾಗಿ ಚಾಕೋಲೆಟ್ ಸೇವಿಸಿದರೆ ಆರೋಗ್ಯಕ್ಕೆ ಅದರಲ್ಲೂ ಹೃದಯಕ್ಕೆ ಒಂದಷ್ಟು ಲಾಭವೂ ಇದೆ.

ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ವಾರ್ವಿಕ್ ಮೆಡಿಕಲ್ ಸ್ಕೂಲ್ ನಡೆಸಿದ ಸಮೀಕ್ಷೆ ಪ್ರಕಾರ ಚಾಕೋಲೆಟ್ ಸೇವಿಸುವುದರಿಂದ ಹೃದಯ ಸಂಬಂಧಿ ರೋಗವನ್ನು ದೂರಮಾಡಬಹುದೆಂದು ಹೇಳಿದೆ. ಸಂಶೋಧನೆ ಪ್ರಕಾರ ಚಾಕೋಲಟ್ ನಲ್ಲಿ ಹೃದಯದ ರೋಗಗಳನ್ನು ತಡೆಗಟ್ಟುವಂತಹ ಗುಣಗಳನ್ನು ವೃದ್ಧಿ ಮಾಡುವ ಶಕ್ತಿಯೂ ಇದೆಯಂತೆ.
ಐ ಲವ್ ಯು ಎನ್ನಲು ಮರೆಯದಿರಿ
ಇನ್ನೊಂದು ಸಂಶೋಧನೆಯಲ್ಲಿ 18 ರಿಂದ 69 ವರ್ಷಗಳ ನಡುವಿನ 1153 ಜನರನ್ನು ಬಳಸಿಕೊಳ್ಳಲಾಗಿತ್ತು. ಇದರಲ್ಲಿ ಪ್ರತಿದಿನ 100ಗ್ರಾಂ ನಷ್ಟು ಚಾಕೋಲೆಟ್ ಸೇವಿಸುವವರಿಗೆ ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಕಂಡುಬಂತಂತೆ. ಈ ಕುರಿತು ಬ್ರಿಟನ್ನ ಜರ್ನಲ್ ಆಫ್ ನ್ಯೂಟ್ರಿಶನ್ ಕೆಲ ವರ್ಷಗಳ ಹಿಂದೆಯೇ ಪ್ರಕಟಣೆ ಹೊರಡಿಸಿದ್ದು, ಕೋಕೋ ದಿಂದ ತಯಾರಾದ ಯಾವುದೇ ಪದಾರ್ಥಗಳಿರಲಿ ಅವು ಅತಿ ಹೆಚ್ಚು ಪ್ರೊಟೀನ್ ಯುಕ್ತವಾಗಿರುತ್ತದೆ ಎಂದು ಹೇಳಿತ್ತು.
ಪ್ರೇಮಿಗಳ ದಿನದಂದು ತಮ್ಮ ಪ್ರೇಮ ಪಾತ್ರರಿಗೆ ಏನು ಉಡುಗೊರೆ ಕೊಡುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ಆದರೆ ಪ್ರೀತಿಯಿಂದ ಚಾಕೋಲೆಟ್ ಕೊಡಲು ಮರೆಯದಿರಿ. ಹಾಗೆಯೇ ಕಾಡಿ ಬೇಡಿ ಮದುವೆಯಾದವರು ಮದುವೆಯಾಯಿತು, ಮಕ್ಕಳಾಯಿತು ಇನ್ನೇನು ಅಂಥ ತೆಪ್ಪಗೆ ಕುಳಿತು ಬಿಡಬೇಡಿ. ಚಾಕೋಲೆಟ್ ನೀಡಿ ಐ ಲವ್ ಯೂ ಎಂದು ಬಿಡಿ.. ಆ ದಿನಗಳನ್ನು ಮೆಲುಕು ಹಾಕಿ ಖುಷಿ ಪಡಿ... ಲೈಫ್ ಇಷ್ಟೇನೇ.











Click it and Unblock the Notifications