ಬೈಡನ್‌ಗೆ ಅಮೆರಿಕ ಆಳುವುದಕ್ಕೆ ಬರೋದಿಲ್ವಾ..? ಡೊನಾಲ್ಡ್ ಟ್ರಂಪ್ ಹೇಳಿದ್ದೇನು..?
ಅದೆಂತಹ ನಾಯಕನಾದರೂ ಸಣ್ಣದೊಂದು ತಪ್ಪು ಆತನ ನಾಯಕತ್ವಕ್ಕೆ ದೊಡ್ಡ ಪೆಟ್ಟು ಕೊಟ್ಟುಬಿಡುತ್ತೆ. ಇದಕ್ಕೆ ತಾಜಾ ಉದಾಹರಣೆ ಜೋ ಬೈಡನ್. ಹೌದು, ಟ್ರಂಪ್‌ಗೆ ಮಣ್ಣು ಮುಕ್ಕಿಸಿ ಮತ್ತು ಟ್ರಂಪ್ ಬೆಂಬಲಿಗರ ಭಾರಿ ವಿರೋಧ ಎದುರಿಸಿ ಅಧಿಕಾರ ಗಿಟ್ಟಿಸಿಕೊಂಡ ಬೈಡನ್ ಈಗ ಸೋತಿದ್ದಾರೆ. ಅದು ತಮ್ಮ ದೇಶದ ವಿಚಾರದಲ್ಲಿ ಅಲ್ಲ, ಅಫ್ಘಾನಿಸ್ತಾನ ಹಾಗೂ ತಾಲಿಬಾನ್ ವಿಚಾರದಲ್ಲಿ. ಹೀಗೆ ಅಫ್ಘಾನ್‌ನಿಂದ ಬೈಡನ್ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.
ಸ್ವತಃ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಬೈಡನ್‌ಗೆ ಅಮೆರಿಕ ಆಳಲು ಬರುವುದಿಲ್ಲ, ವಿದೇಶಿ ಸಂಬಂಧಗಳ ಬಗ್ಗೆ ಆ ಮನುಷ್ಯನಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಟ್ರಂಪ್ ಕೆಂಡ ಕಾರಿದ್ದಾರೆ. ನಮ್ಮ ಆಡಳಿತದಲ್ಲೇ ಅಫ್ಘಾನ್‌ನಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಪ್ಲ್ಯಾನ್ ಸಿದ್ಧವಾಗಿತ್ತು, ಆದರೆ ನಾವು ಹಾಕಿದ್ದ ಪ್ಲ್ಯಾನ್‌ನ ಸರಿಯಾಗಿ ಪಾಲಿಸದೆ ಬೈಡನ್ ತಪ್ಪು ಮಾಡಿದ್ದಾರೆ. ಬೈಡನ್ ಎಡವಟ್ಟಿನಿಂದ ಅಫ್ಘಾನ್ ಈಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಅಮೆರಿಕದ ಪಾಲಿನ ಆಸ್ತಿ ಕೂಡ ತಾಲಿಬಾನ್ ಉಗ್ರರ ವಶವಾಗಲಿದೆ ಎಂದು ಟ್ರಂಪ್ ಭವಿಷ್ಯ ನುಡಿದಿದ್ದಾರೆ.

ಟ್ರಂಪ್ ಇದ್ದಿದ್ದರೆ ಸರಿ ಮಾಡ್ತಿದ್ರಾ..?
ಹೌದು, ಇಂತಹ ಪ್ರಶ್ನೆ ಮೂಡುವುದು ಸಹಜ. ಟ್ರಂಪ್ ಈಗ ನೀಡಿರುವ ಹೇಳಿಕೆ ಅಂತಹ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆದ್ರೆ ಈ ಪ್ರಶ್ನೆಗೆ ಒಂದೇ ಪದದ ಉತ್ತರ ‘ಇಲ್ಲ' ಎನ್ನಬಹುದು. ಏಕೆಂದರೆ ಸ್ವತಃ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ಗೂ ತಾಲಿಬಾನ್ ಉಗ್ರರನ್ನು ಸದೆಬಡಿಯುವುದಕ್ಕೆ ಆಗಿರಲಿಲ್ಲ. ತಾಲಿಬಾನ್ ಜೊತೆ ಮಾತುಕತೆ ಆರಂಭಿಸಿ ಸಂಧಾನ ಸೂತ್ರ ಮುಂದಿಟ್ಟಿದ್ದ ಟ್ರಂಪ್‌ಗೆ ತಾಲಿಬಾನ್ ರಕ್ತದ ಮೂಲಕ ಉತ್ತರ ಕೊಟ್ಟಿತ್ತು. ಹತ್ತಾರು ಎಡವಟ್ಟು ನಿರ್ಧಾರಗಳು ಟ್ರಂಪ್ ಆಡಳಿತಕ್ಕೆ ಪೆಟ್ಟುಕೊಟ್ಟಿತ್ತು.

ಉಗ್ರರನ್ನೇ ಹೊಗಳಿದ್ದ ಟ್ರಂಪ್..!
ಟ್ರಂಪ್ ಮಾಡಿಕೊಂಡಿದ್ದ ಎಡವಟ್ಟು ಒಂದೆರಡಲ್ಲ. ಇದೇ ರೀತಿ 2020ರಲ್ಲಿ ತಾಲಿಬಾನ್ ಉಗ್ರರನ್ನ ಹೊಗಳಿದ್ದ ಟ್ರಂಪ್‌ಗೆ ಇದೇ ಉಗ್ರರು ಶಾಕ್ ನೀಡಿದ್ದರು. ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ದಾಳಿ ಬಳಿಕ ಅಮೆರಿಕ, ತಾಲಿಬಾನ್ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಟ್ರಂಪ್ ಒಪ್ಪಿಗೆ ಸೂಚಿಸಿದ್ದರು.

ಅಫ್ಘಾನ್ ಜನರಿಗೆ ನೆಮ್ಮದಿಯೇ ಇಲ್ಲ
ಬ್ರಿಟಿಷರಿಂದ ಅಫ್ಘಾನ್ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

ಅಲ್ಲಿ ಜೀವಕ್ಕೆ ಬೆಲೆಯೇ ಇಲ್ಲ
ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನ ಒಂದಷ್ಟು ಬದಲಾಗಿತ್ತು. ಜೀವನವೇ ಮುಗಿದು ಹೋಯಿತು ಎನ್ನುತ್ತಿದ್ದ ಆ ದೇಶದ ಜನರಿಗೆ ಮತ್ತೆ ಬದುಕುವ ಆಸೆ ಚಿಗುರೊಡೆದಿತ್ತು. ಆದ್ರೆ ಅಮೆರಿಕ ಕೈಗೊಂಡ ಒಂದೇ ಒಂದು ತಪ್ಪು ನಿರ್ಧಾರ, ಮತ್ತೆ ಅಫ್ಘಾನಿಸ್ತಾನದ ಜನರನ್ನ ಬೀದಿಗೆ ತಳ್ಳಿದೆ. ‘ಜೀವ ಉಳಿಸಿಕೊಂಡರೆ ಸಾಕಪ್ಪ' ಎಂಬ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ತಾಲಿಬಾನ್ ಗ್ಯಾಂಗ್ ಸಿಕ್ಕ ಸಿಕ್ಕವರನ್ನ ಗುಂಡಿಕ್ಕಿ ಹತ್ಯೆ ಮಾಡುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಜನರ ರಕ್ತ ಹರಿಸಿದ್ದಾರೆ ಉಗ್ರರು. ಇದನ್ನೆಲ್ಲಾ ಕಣ್ಣಾರೆ ಕಂಡು ಭಯಗೊಂಡ ಜನ ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ.

ಬಿಲದಲ್ಲಿ ಅಡಗಿದ್ದವರು ಮೇಲೆದ್ದರು..!
ಅಮೆರಿಕ ಮಾಡಿಕೊಂಡಿರುವ ಮಹಾ ಎಡವಟ್ಟು ಅಫ್ಘಾನ್‌ನ ಮತ್ತೆ ರಕ್ತದ ಮಡುವಿಗೆ ತಳ್ಳಿದಂತೆ ಕಾಣುತ್ತಿದೆ. ಏಕೆಂದರೆ ಇಷ್ಟು ದಿನ ಅಮೆರಿಕ ಸೇನೆ ಇದೆ ಅಂತಾ ತಾಲಿಬಾನ್ ಉಗ್ರರು ಒಂದಷ್ಟು ಬಾಲ ಮುದುರಿಕೊಂಡು ಬೆಟ್ಟ, ಗುಡ್ಡದಲ್ಲಿ ಅಡಗಿದ್ದರು. ಆದರೆ ಯಾವಾಗ ಅಮೆರಿಕ ಸೇನೆ ಸಮೇತ ಅಲ್ಲಿಂದ ಜಾಗ ಖಾಲಿ ಮಾಡೋಕೆ ಮುಂದಾಯ್ತೋ, ಅಂದಿನಿಂದ ಪಾಪಿ ಉಗ್ರರು ಬಾಲ ಬಿಚ್ಚುತ್ತಿದ್ದಾರೆ. ಒಂದೊಂದೇ ಊರುಗಳು ತಾಲಿಬಾನಿಗಳ ವಶವಾಗುತ್ತಿವೆ. ಉಗ್ರರ ಅಟ್ಟಹಾಸ ಎಷ್ಟಿದೆ ಎಂದರೆ, ಕೆಲವು ವಾರಗಳಿಂದ ಹಿಂಸಾಚಾರ 3-4 ಪಟ್ಟು ಹೆಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕ ಒಂದಷ್ಟು ಬೆಟಾಲಿಯನ್‌ನ ವಾಪಸ್ ಕಳುಹಿಸಿದ್ದರೂ ಪ್ರಯೋಜನವೇ ಆಗುತ್ತಿಲ್ಲ. ಭವಿಷ್ಯದಲ್ಲಿ ಈ ನಿರ್ಧಾರ ಅಫ್ಘಾನ್ ಜೊತೆಗೆ ಅಮೆರಿಕಗೂ ಮುಳುವಾಗುವ ಸಾಧ್ಯತೆ ಇದೆ.












Click it and Unblock the Notifications