ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಲಾಮಾಸದಲ್ಲಿ ತಲಕಾಡಿನ ಗೋಕರ್ಣಕ್ಕೆ ಗಂಗೆ ಪ್ರವೇಶ

|
Google Oneindia Kannada News

ತುಲಾಮಾಸ ಪವಿತ್ರ ಮಾಸವಾಗಿದೆ. ಅತ್ತ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತುಲಾ ಸಂಕ್ರಮಣದಂದು ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಭಕ್ತರಿಗೆ ದರ್ಶನ ನೀಡಿದರೆ, ಇತ್ತ ಮೈಸೂರು ಜಿಲ್ಲೆಯ ತಲಕಾಡಿನಲ್ಲಿರುವ ಗೋಕರ್ಣಕ್ಕೆ ಗಂಗೆಯು ತೀರ್ಥರೂಪದಲ್ಲಿ ಪ್ರವೇಶಿಸಿ ಒಂದು ತಿಂಗಳ ಕಾಲ ನೆಲೆನಿಂತು ಹರಸುತ್ತಾಳೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ಹಾಗೆನೋಡಿದರೆ ಪೌರಾಣಿಕ ಮತ್ತು ಐತಿಹಾಸಿಕವಾಗಿ ಈ ಸ್ಥಳ ಪ್ರಸಿದ್ದಿಯಾಗಿರುವ ತಲಕಾಡು ನಿಸರ್ಗದ ಸಿರಿಯನ್ನು ತನ್ನೊಡಲಲ್ಲಿ ಹುದುಗಿ ನಿಂತ ಸುಂದರ ತಾಣವಾಗಿದ್ದು, ಪ್ರವಾಸಿಗರು ಇಲ್ಲಿಗೆ ಸದಾ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಇದು ಆಸ್ತಿಕ ನಾಸ್ತಿಕ ಎನ್ನದೆ ಎಲ್ಲರನ್ನೂ ತನ್ನತ್ತ ಸೆಳೆಯುವ ಚೆಲುವಿನ ತಾಣವಾಗಿ ಗಮನ ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ನೀಡುವ ಯಾರೇ ಆದರೂ ಪ್ರಕೃತಿಯ ಚೆಲುವಿಗೆ ಮನಸೋಲದಿರಲಾರರು. ಜತೆಗೆ ಇಲ್ಲಿ ನಿಂತು ಕಣ್ಣು ಹಾಯಿಸಿದರೆ ಸಿಗುವ ನೋಟ ಮನಮೋಹಕವಾಗಿರುತ್ತದೆ.

ಪಟಾನ್ ಪಟೋಲಾ ಸೀರೆ: 900 ವರ್ಷಗಳಷ್ಟು ಹಳೆಯ ಪರಂಪರೆ, ಈ ಸೀರೆಗಳ ಬಗ್ಗೆ ಗೊತ್ತಾ?ಪಟಾನ್ ಪಟೋಲಾ ಸೀರೆ: 900 ವರ್ಷಗಳಷ್ಟು ಹಳೆಯ ಪರಂಪರೆ, ಈ ಸೀರೆಗಳ ಬಗ್ಗೆ ಗೊತ್ತಾ?

ಸುತ್ತಲೂ ಹಸಿರಿನಿಂದ ಕಂಗೊಳಿಸುವ ನಿಸರ್ಗಸಿರಿ, ಮರಳ ರಾಶಿ ನಡುವಿನ ದೇವಾಲಯಗಳು, ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯ ಚೆಲುವು ಮನಮೋಹಕವಾಗಿರುತ್ತದೆ. ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ಗಮನಾರ್ಹವಾಗಿದೆ. ಪೌರಾಣಿಕ ಮತ್ತು ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ತಲಕಾಡು ಹಲವು ಹೆಸರುಗಳಿಂದ ಕರೆಯಲ್ಪಡುತ್ತಿತ್ತೆಂದು ಹೇಳಲಾಗಿದೆ.

 ತಲಕಾಡಿಗಿದೆ ಹಲವು ಹೆಸರು

ತಲಕಾಡಿಗಿದೆ ಹಲವು ಹೆಸರು

ಸೋಮದತ್ತ ಋಷಿ ಮತ್ತು ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಗಜಾರಣ್ಯ ಕ್ಷೇತ್ರ, ಸಿದ್ಧಾರಣ್ಯ ಕ್ಷೇತ್ರವೆಂದೂ, ಗಂಗರ ರಾಜಧಾನಿಯಾಗಿ ಬಳಿಕ ಚೋಳರ ಅಧೀನಕ್ಕೆ ಬಂದಾಗ ರಾಜರಾಜಪುರವೆಂದೂ, ಇದಾದ ನಂತರ ತಲ ಮತ್ತು ಕಾಡ ಎಂಬ ಬೇಡರು ಇಲ್ಲಿರುವ ವೈದ್ಯನಾಥೇಶ್ವರನನ್ನು ಆರಾಧಿಸಿ ಮೋಕ್ಷ ಪಡೆದಿದ್ದರಿಂದ ತಲಕಾಡು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ.

 ತಲಕಾಡಿನಲ್ಲಿ ಆಳ್ವಿಕೆ ನಡೆಸಿದ ರಾಜರು

ತಲಕಾಡಿನಲ್ಲಿ ಆಳ್ವಿಕೆ ನಡೆಸಿದ ರಾಜರು

ಇನ್ನು ಇತಿಹಾಸದ ಪುಟಗಳನ್ನು ತಿರುವಿದರೆ ಪಶ್ಚಿಮ ಗಂಗರು ಕ್ರಿ.ಶ. ಸುಮಾರು ಆರನೇ ಶತಮಾನದಿಂದ ಹತ್ತನೇ ಶತಮಾನದ ಕೊನೆವರೆಗೂ ತಲಕಾಡನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ನಡೆಸಿ, ತಲಕಾಡು ಗಂಗರೆಂದೇ ಹೆಸರುವಾಸಿಯಾದರೆ, ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಲಕಾಡು ಹಾಗೂ ಸುತ್ತಮುತ್ತಲ ಪ್ರಾಂತ್ಯಗಳನ್ನು ಚೋಳ ಚಕ್ರವರ್ತಿ ರಾಜರಾಜ ಚೋಳನು ತನ್ನ ವಶಕ್ಕೆ ತೆಗೆದುಕೊಂಡನು. ಆ ನಂತರ ಸುಮಾರು 130 ವರ್ಷಗಳ ಕಾಲಚೋಳರು ಆಳ್ವಿಕೆ ನಡೆಸಿದರೆಂದೂ, 1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಯುದ್ಧದಲ್ಲಿ ಸೋಲಿಸಿ ಅಧಿಪತ್ಯ ಸ್ಥಾಪಿಸಿದ್ದರಿಂದ ತಲಕಾಡುಗೊಂಡ ಎಂಬ ಬಿರುದು ಪಡೆದನೆಂದು ಇತಿಹಾಸದಲ್ಲಿದೆ. ಆ ನಂತರ ಮೈಸೂರು ಒಡೆಯರ್ ಆಳ್ವಿಕೆ ನಡೆಸಿದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

 ಮರಳು ರಾಶಿ ಈ ಕ್ಷೇತ್ರದ ಆಕರ್ಷಣೆ

ಮರಳು ರಾಶಿ ಈ ಕ್ಷೇತ್ರದ ಆಕರ್ಷಣೆ

ತಲಕಾಡಿಗೆ ಭೇಟಿ ನೀಡುವವರಿಗೆ ಇಲ್ಲಿನ ಮರಳು ರಾಶಿಗಳು ವಿಸ್ಮಯ ಮೂಡಿಸುತ್ತವೆ. ಇದು ಈ ಕ್ಷೇತ್ರದ ಆಕರ್ಷಣೆಯೂ ಹೌದು. ಇಲ್ಲಿ ಹರಿದು ಹೋಗುವ ಕಾವೇರಿ ನದಿ ದಂಡೆಯಿಂದ ಸುಮಾರು ಮೂರು ಕಿ.ಮೀ. ಒಳಭಾಗದವರೆಗೆ ನಿರ್ಮಾಣವಾಗಿರುವ ನಲವತ್ತು ಅಡಿಗಿಂತಲೂ ಎತ್ತರವಾಗಿರುವ ಮರಳಿನ ದಿಬ್ಬಗಳು ಈ ಕ್ಷೇತ್ರದ ವಿಶೇಷತೆಯನ್ನು ಸಾರುತ್ತಾ ದೂರದಿಂದ ಬರುವ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಮೇಲ್ನೋಟಕ್ಕೆ ಮರಳ ರಾಶಿಗಳು ಪ್ರಕೃತಿಯ ಸೋಜಿಗವಾಗಿ ಕಂಡು ಬಂದರೂ ಇದು ತಲಕಾಡಿಗೆ ತಟ್ಟಿದ ಶಾಪ ಎಂಬುದು ಜನವಲಯದಲ್ಲಿರುವ ಕಥೆಯಾಗಿದೆ.

 ಪಂಚಲಿಂಗದರ್ಶನ ಭಕ್ತರಿಗೆ ದೇಗುಲಗಳ ದರ್ಶನ

ಪಂಚಲಿಂಗದರ್ಶನ ಭಕ್ತರಿಗೆ ದೇಗುಲಗಳ ದರ್ಶನ

ಇನ್ನು ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳನ್ನು ಸುತ್ತಲಿನಿಂದಲೂ ಮರಳು ಆವರಿಸಿಕೊಳ್ಳುತ್ತದೆ. ಹೀಗಾಗಿ ಈ ದೇವಾಲಯಗಳು ಮರಳಿನಲ್ಲಿ ಹುದುಗಿ ಹೋಗುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

 ಪಂಚಲಿಂಗದ ಸೃಷ್ಟಿಯ ಬಗ್ಗೆ ಮಾಹಿತಿ

ಪಂಚಲಿಂಗದ ಸೃಷ್ಟಿಯ ಬಗ್ಗೆ ಮಾಹಿತಿ

ಇನ್ನು ಪಂಚಲಿಂಗದ ಸೃಷ್ಟಿಯ ಬಗ್ಗೆ ಹೇಳುವುದಾದರೆ ಕಾಶಿ ವಿಶ್ವನಾಥನು ಸೋಮದತ್ತ ಮತ್ತು ಶಿಷ್ಯರಿಗೆ ಹಾಗೂ ತಲ- ಕಾಡ ಎಂಬ ಬೇಡರಿಗೆ ಸಾಮೂಹಿಕ ಮೋಕ್ಷ ನೀಡಲೆಂದು ಶ್ರೀ ವೈದ್ಯೇಶ್ವರನ ರೂಪದಲ್ಲಿ ಬಂದು ಕಾವೇರಿ ನದಿ ತಟದ ಬೂರುಗ ಮರದ ಕೆಳಗೆ ನೆಲೆಸಿ ಮೋಕ್ಷ ನೀಡಿದಲ್ಲದೆ, ಭಕ್ತರಿಗೆ ಮೋಕ್ಷ ನೀಡಲೆಂದೇ ಪ್ರಧಾನ ಮುಖವಾದ ಈಶಾನ ಮುಖದಿಂದ ಶ್ರೀ ವೈದ್ಯನಾಥೇಶ್ವರ, ಪೂರ್ವ ಮುಖವಾದ ತತ್ಪುರುಷ ಮುಖದಿಂದ ಶ್ರೀ ಅರ್ಕೇಶ್ವರ, ಅಘೋರ ಮುಖದಿಂದ ಪಾತಾಳೇಶ್ವರ ಸದ್ಯೋಜಾತ ಮುಖದಿಂದ ಮರಳೇಶ್ವರ ಸ್ತ್ರೀ ವಾಸುದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ನೆಲೆಗೊಂಡಿದ್ದಾಗಿ ನಂಬಿಕೆಯಿದೆ.

 ಭಕ್ತರಿಗೆ ಪವಿತ್ರ ತಾಣವಾಗಿ ಪ್ರವಾಸಿಗರಿಗೆ ಚೆಲುವಿನ ತಾಣ

ಭಕ್ತರಿಗೆ ಪವಿತ್ರ ತಾಣವಾಗಿ ಪ್ರವಾಸಿಗರಿಗೆ ಚೆಲುವಿನ ತಾಣ

ತುಲಾ ಮಾಸದಲ್ಲಿ ಗಂಗೆ ತೀರ್ಥರೂಪದಲ್ಲಿ ಇಲ್ಲಿರುವ ಗೋಕರ್ಣಕ್ಕೆ ಪ್ರವೇಶ ಮಾಡಿ ಒಂದು ತಿಂಗಳಕಾಲ ಇಲ್ಲಿಯೇ ಇರುತ್ತಾಳೆ ಎಂಬ ನಂಬಿಕೆ ಇರುವುದರಿಂದ ಭಕ್ತರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುವುದು ಕಂಡು ಬರುತ್ತದೆ. ಮೈಸೂರಿನಿಂದ ಸುಮಾರು ಅರುವತ್ತು ಕಿ.ಮೀ. ದೂರದಲ್ಲಿರುವ ತಲಕಾಡು ತಿ.ನರಸೀಪುರ ತಾಲೂಕಿಗೆ ಸೇರಿದೆ. ಭಕ್ತರಿಗೆ ಪವಿತ್ರ ತಾಣವಾಗಿ ಪ್ರವಾಸಿಗರಿಗೆ ಚೆಲುವಿನ ತಾಣವಾಗಿ ಗಮನಸೆಳೆಯುತ್ತದೆ. ಬೆಂಗಳೂರಿನಿಂದ ಹೋಗುವವರು ಮಳವಳ್ಳಿ ಮಾರ್ಗವಾಗಿಯೂ ತೆರಳಬಹುದು.

ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಉಗಮವಾಗಿದ್ದು ಹೇಗೆ?ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಉಗಮವಾಗಿದ್ದು ಹೇಗೆ?

English summary
Talakadu one of the famous historical place in karnataka, history, information about temples, Panchalinga darshana, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X