• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೆನಾಡನ್ನು ಆಪೋಶನ ತೆಗೆದುಕೊಳ್ಳಲು ಹೊರಟ ರಾಜ್ಯ ಸರ್ಕಾರ!

|

ಬೆಂಗಳೂರು, ಜನವರಿ 4: ಮಲೆನಾಡಿನ ನಿಸರ್ಗದತ್ತ ಸಹಜ ಅರಣ್ಯವನ್ನು ಈಗಾಗಲೇ ಭಾಗಶಃ ನುಂಗಿ ನೀರು ಕುಡಿದ ಅಕೇಶಿಯಾ ಎಂಬ ಶಾಪದ ಗಿಡಗಳಿಂದ ಮತ್ತೆ ಮಲೆನಾಡನ್ನು 'ಅಲಂಕೃತ'ಗೊಳಿಸುವ ಮೂಲಕ ಅಲ್ಲಿನ ಸಮೃದ್ಧ ಭೂಮಿಯನ್ನು ಬರಡಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಅಕೇಶಿಯಾದಿಂದಾಗಿ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಮಲೆನಾಡಿಗರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬರೆ ಎಳೆದಿದೆ.

ಭದ್ರಾವತಿಯಲ್ಲಿನ ಮೈಸೂರು ಕಾಗದ ಕಾರ್ಖಾನೆಗೆ (ಎಂಪಿಎಂ) ನೀಡಿದ್ದ 20 ಸಾವಿರ ಹೆಕ್ಟೇರ್ ನೆಡುತೋಪುಗಳ ಗುತ್ತಿಗೆ ಅವಧಿಯನ್ನು ಮತ್ತೆ 40 ವರ್ಷಗಳ ಅವಧಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅಕೇಶಿಯಾ ಎಂಬ ನಿರುಪಯುಕ್ತ ಹಾಗೂ ಪರಿಸರಕ್ಕೆ ಮಾರಕವಾದ ಮರದಿಂದ ತತ್ತರಿಸಿದ ಮಲೆನಾಡಿಗೆ ಆಘಾತ ನೀಡಿದೆ.

ಅಭಯಾರಣ್ಯಗಳಿಗೆ ಕಂಟಕವಾಗಿ ಬೆಳೆಯುತ್ತಿರುವ ಲಂಟನಾ!

1976ರಲ್ಲಿ ಎಂಪಿಎಂಗೆ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಗದ ತಯಾರಿಕೆಗಾಗಿ ಅಕೇಶಿಯಾ ನೆಡುತೋಪುಗಳನ್ನು ಬೆಳೆಸಲು ಅವಕಾಶ ನೀಡಿತ್ತು. ಇದರಲ್ಲಿ 3,250 ಹೆಕ್ಟೇರ್ ಪ್ರದೇಶದಲ್ಲಿನ 109 ನೆಡುತೋಪುಗಳನ್ನು 1980ರಲ್ಲಿ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯ್ದೆ, ಜೀವ ವೈವಿಧ್ಯ ತಾಣ, ಪರಿಸರ ಸೂಕ್ಷ್ಮ ವಲಯ ಮತ್ತಿತರ ಯೋಜನೆಗಳಿಗಾಗಿ ವನ್ಯಜೀವಿ ವಿಭಾಗದ ವಶಕ್ಕೆ ಪಡೆಯಲಾಗಿತ್ತು. ಮುಂದೆ ಓದಿ.

40 ವರ್ಷದವರೆಗೆ ಒಪ್ಪಂದ ವಿಸ್ತರಣೆ

40 ವರ್ಷದವರೆಗೆ ಒಪ್ಪಂದ ವಿಸ್ತರಣೆ

ಪ್ರಸ್ತುತ ಎಂಪಿಎಂ ಅಧೀನದಲ್ಲಿರುವ 20 ಸಾವಿರ ಹೆಕ್ಟೇರ್‌ನಲ್ಲಿನ ನೆಡುತೋಪುಗಳ ಗುತ್ತಿಗೆ ಒಪ್ಪಂದವು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗಿತ್ತು. ಇತ್ತೀಚೆಗೆ ಆದೇಶ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಶ್ರೀನಿವಾಸ್, ಈ ಒಪ್ಪಂದವನ್ನು 40 ವರ್ಷಗಳವರೆಗೆ ಅಂದರೆ 2060ರ ಆಗಸ್ಟ್ ವರೆಗೆ ವಿಸ್ತರಿಸಿದ್ದಾರೆ. ಇದರಿಂದ ಈಗಾಗಲೇ ಎಂಪಿಎಂ ಮತ್ತು ಅರಣ್ಯ ಇಲಾಖೆಗಳ ಅಕೇಶಿಯಾ ಆಕ್ರಮಣದಿಂದ ಬಸವಳಿದ ಮಲೆನಾಡಿಗರ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಆಗ ಇವರೇ ಪ್ರತಿಭಟಿಸಿದ್ದರು

ಆಗ ಇವರೇ ಪ್ರತಿಭಟಿಸಿದ್ದರು

ಈ ಹಿಂದೆ ಇದ್ದ ರಾಜ್ಯ ಸರ್ಕಾರವು ಅಕೇಶಿಯಾ ನೆಡುತೋಪುಗಳಿಗಾಗಿ ಎಂಪಿಎಂಗೆ ಭೂಮಿ ನೀಡಿದಾಗ ಈಗಿನ ಆಡಳಿತ ಪಕ್ಷದಲ್ಲಿರುವವರೇ ಪ್ರತಿಭಟನೆಗಳನ್ನು ನಡೆಸಿದ್ದರು. ಸ್ವತಃ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಜೂನ್ ತಿಂಗಳಲ್ಲಿ ಅಕೇಶಿಯಾ ನೆಡುತೋಪು ನಿರ್ಮಾಣ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಸಾಗರ, ತೀರ್ಥಹಳ್ಳಿ, ಹೊಸನಗರ ಮುಂತಾದ ದಟ್ಟ ಹಸಿರಿನ ಅರಣ್ಯಗಳನ್ನು ಬಲಿ ತೆಗೆದು ಅಕೇಶಿಯಾ ನೆಡುತೋಪು ನಿರ್ಮಿಸಿರುವುದರ ವಿರುದ್ಧ ಹಲವು ದಶಕಗಳ ಪ್ರತಿಭಟನೆಗಳು ನಡೆದಿವೆ.

ಭೂಮಿಗೆ ಹೃದಯಾಘಾತ..! ಮಳೆ ಕಾಡನ್ನು ಕಿತ್ತು ತಿನ್ನುತ್ತಿರುವ ಕಿರಾತಕರು..!

ಸೊಪ್ಪಿನ ಬೆಟ್ಟ, ಗೋಮಾಳಗಳು ನಾಶ

ಸೊಪ್ಪಿನ ಬೆಟ್ಟ, ಗೋಮಾಳಗಳು ನಾಶ

ಮಲೆನಾಡಿನಲ್ಲಿ ಜಾನುವಾರುಗಳ ಮೇವಿಗೆಂದು ಮೀಸಲಾದ ಸೊಪ್ಪಿನಬೆಟ್ಟ, ಗೋಮಾಳಗಳು ಇಂದು ಅಕೇಶೊಯಾ ನೆಡುತೋಪುಗಳಾಗಿ ಬದಲಾಗಿವೆ. ಇದರ ಜತೆಗೆ ಸಹಜ ಅರಣ್ಯಗಳ ನಡುವೆ ಹಿಟಾಚಿ ಕೊಂಡೊಯ್ಯುವ ಅರಣ್ಯ ಇಲಾಖೆ, ಅವುಗಳ ನಡುವೆ ಗುಂಡಿ ತೋಡಿ ಅಕೇಶಿಯಾ ನೆಡುತ್ತಿದೆ. ಅಕೇಶಿಯಾದಿಂದ ಪರಿಸರದ ಮೇಲಾಗುತ್ತಿರುವ ಅಪಾಯದ ಬಗ್ಗೆ ಪರಿಸರ ತಜ್ಞರು ಪದೇ ಪದೇ ಎಚ್ಚರಿಕೆ ನೀಡಿದರೂ ಸರ್ಕಾರ ಅದಕ್ಕೆ ಕಿವಿಗೊಡುತ್ತಿಲ್ಲ.

ಅಕೇಶಿಯಾ ಅಪಾಯಗಳು ಒಂದೆರಡಲ್ಲ

ಅಕೇಶಿಯಾ ಅಪಾಯಗಳು ಒಂದೆರಡಲ್ಲ

ಅಕೇಶಿಯಾ ವೇಗವಾಗಿ ಬೆಳೆಯುವ ಮರ. ಮಲೆನಾಡಿನ ಫಲವತ್ತಾದ ಮಣ್ಣು ಮತ್ತು ಭೂಮಿಯೊಳಗಿನ ನೀರನ್ನು ಬಕಾಸುರನಂತೆ ಸೇವಿಸುವ ಅಕೇಶಿಯಾ, ತನ್ನ ಬೇರಿನ ಸುತ್ತಮುತ್ತ ಗರಿಕೆ ಹುಲ್ಲು ಬೆಳೆಯಲು ಕೂಡ ಬಿಡುವುದಿಲ್ಲ. ಮಲೆನಾಡಿನಲ್ಲಿ ಅಂತರ್ಜಲ ಬತ್ತಲು, ಮಳೆ ತಗ್ಗಲು ಕಾರಣ ಅಕೇಶಿಯಾ ಎಂಬುದರ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಿಲ್ಲ. ಇದ್ದರೂ ಅದು ಅವರಿಗೆ ಬೇಕಿಲ್ಲ. ಹಕ್ಕಿಗಳೂ ಇದರಲ್ಲಿ ಗೂಡು ಕಟ್ಟುವುದಿಲ್ಲ. ಅದಕ್ಕೆ ಪೂರಕವಾದ ರಚನೆಯೇ ಇದರಲ್ಲಿಲ್ಲ. ಇನ್ನು ಎಲೆಗಳು ಮಣ್ಣಿನೊಳಗೆ ಕರಗುವುದಿಲ್ಲ. ಮಿಗಿಲಾಗಿ ಅಕೇಶಿಯಾ ನೆಡುತೋಪು ವಾತಾವರಣದ ಉಷ್ಣತೆ ಹೆಚ್ಚಲು ಕಾರಣವಾಗುತ್ತದೆ. ಇಷ್ಟೆಲ್ಲ ಅಪಾಯಕಾರಿಯಾಗಿರುವ ಅಕೇಶಿಯಾದ ಉಪಯೋಗವೆಂದರೆ ಕಾಗದ. ಅದಕ್ಕಾಗಿ ರಾಜ್ಯ ಸರ್ಕಾರ ಮಲೆನಾಡನ್ನು ಬಲಿಕೊಡುತ್ತಿದೆ. ಜತೆಗೆ ಅರಣ್ಯಗಳ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆರೋಪ ಕೇಳಿಬಂದಿದೆ.

ಶಿರಸಿ-ಕುಮಟಾ ರಸ್ತೆ ಅಗಲೀಕರಣ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

ಅಣಕಿಸುತ್ತಿವೆ ಅರಣ್ಯ ಇಲಾಖೆ ಘೋಷಣೆಗಳು

ಅಣಕಿಸುತ್ತಿವೆ ಅರಣ್ಯ ಇಲಾಖೆ ಘೋಷಣೆಗಳು

ಅಕೇಶಿಯಾ, ನೀಲಗಿರಿಯಂತಹ ವಿದೇಶಿ ಮರಗಳು ಮಲೆನಾಡಿನ ಪರಿಸರವನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಈ ಕಳವಳಕಾರಿ ಪ್ರಕ್ರಿಯೆಗೆ ಸ್ವತಃ ಸರ್ಕಾರವೇ ಬೆಂಬಲ ನೀಡುತ್ತಿದೆ. ಮಲೆನಾಡಿನ ರಸ್ತೆಗಳಲ್ಲಿ ಸಂಚರಿಸುವಾಗ ದಟ್ಟವಾಗಿ ಬೆಳೆದು ನಿಂತ ಅಕೇಶಿಯಾ ಮರಗಳು ಮಲೆನಾಡಿನ ದುಸ್ಥಿತಿಯನ್ನು ಸಾರಿ ಹೇಳುತ್ತಿವೆ. ಅವುಗಳ ಮುಂದೆ ಅರಣ್ಯ ಇಲಾಖೆಯ 'ಕಾಡು ಬೆಳೆಸಿ ನಾಡು ಉಳಿಸಿ', 'ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ' ಎಂಬ ಫಲಕಗಳು ಅರಣ್ಯ ಇಲಾಖೆಯ ಮತ್ತು ಸರ್ಕಾರದ ಜನಪ್ರತಿನಿಧಿಗಳ ಅಣಕದಂತೆ ಕಾಣಿಸುತ್ತವೆ.

ಅಕೇಶಿಯಾ ಎಂಬ ಮಲೆನಾಡಿನ ಕಂಟಕ

ಅಕೇಶಿಯಾ ಎಂಬ ಮಲೆನಾಡಿನ ಕಂಟಕ

ಮಲೆನಾಡು ಎಂಬ ಸುಂದರ ಜಾಗವನ್ನು ಸರ್ಕಾರ ಈಗಾಗಲೇ ಅಕೇಶಿಯಾ ಮೂಲಕ ಬರಡನ್ನಾಗಿಸಿದೆ. ದಟ್ಟ ಅರಣ್ಯಗಳ ನಡುವೆಯೂ ಅಕೇಶಿಯಾಗಳನ್ನು ನೆಡುವ ಅರಣ್ಯ ಇಲಾಖೆ, ಸಹಜ ಕಾಡಿನ ಮೇಲೆಯೂ ದಾಳಿ ನಡೆಸುತ್ತಿದೆ. ಇದರಿಂದ ಅರಣ್ಯ ಪ್ರದೇಶಗಳಲ್ಲಿ ನಿಸರ್ಗದತ್ತವಾಗಿ ಬೆಳೆಯುತ್ತಿದ್ದ ಮರಗಳು ಕಡಿಮೆಯಾಗುತ್ತಿರುವುದು ಕೃಷಿಕರ ತೋಟಕ್ಕೆ ವನ್ಯಜೀವಿಗಳ ದಾಳಿ ಹೆಚ್ಚಲು ಕಾರಣವಾಗುತ್ತಿದೆ. ಸಹಜವಾದ ಕಾಡಿಗೆ ಲಂಟಾನಾ ಪೊದೆಗಳು ಕಂಟಕವಾಗುತ್ತಿರುವಂತೆ ಮಲೆನಾಡಿನ ಕಾಡಿಗೆ ಅರಣ್ಯ ಇಲಾಖೆ, ಎಂಪಿಎಂ ಲಾಭಕ್ಕಾಗಿ ಅತ್ಯುತ್ಸಾಹದಿಂದ ಬೆಳೆಸುತ್ತಿರುವ ಅಕೇಶಿಯಾ ಕಂಟಕವಾಗುತ್ತಿದೆ.

ಬೃಹತ್ ಹೋರಾಟಕ್ಕೆ ಸಜ್ಜು

ಬೃಹತ್ ಹೋರಾಟಕ್ಕೆ ಸಜ್ಜು

ಅಕೇಶಿಯಾ ನೆಡುತೋಪು ನಿರ್ಮಾಣ ಮತ್ತು ನಿರ್ವಹಣೆಗಾಗಿ ಎಂಪಿಎಂಗೆ 60 ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಕ್ರಮವನ್ನು ವಿರೋಧಿಸಿ ಮಲೆನಾಡಿನ ಪರಿಸರವಾದಿಗಳು, ಜನಸಾಮಾನ್ಯರು ಪ್ರತಿಭಟನೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. 'ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ ಒಕ್ಕೂಟ'ವು ಜನವರಿ 7ರಂದು ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

English summary
State government's recent order to extend the contract with MPM to maintain acacia plantation for 40 more years has caused outrage in Malnad people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X