ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣಗಳು ಏನು?, ಯಡವಟ್ಟಾಗಿದ್ದು ಎಲ್ಲಿ?
ಶ್ರೀಲಂಕಾ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಲಂಕಾ ಬಹುತೇಕ ಕುಸಿದುಹೋಗಿದೆ. ಕಳೆದ ನಾಲ್ಕೈದು ತಿಂಗಳಿಂದ ಸಿಂಹಳೀಯರ ನಾಡಿನಲ್ಲಿ ಜನರು ಪ್ರತಿಭಟನೆ, ದಂಗೆ, ಹಿಂಸಾಚಾರ ನಡೆಸುತ್ತಿದ್ದಾರೆ.
ಒಂದೆಡೆ ಆರ್ಥಿಕ ಬಿಕ್ಕಟ್ಟು, ಅಗತ್ಯ ವಸ್ತುಗಳ ಅಭಾವ, ಇನ್ನೊಂದೆಡೆ ರಾಜಕೀಯ ಬಿಕ್ಕಟ್ಟು, ಜನರು ದಂಗೆ ಏಳುತ್ತಿರುವುದು, ಇವೆಲ್ಲವೂ ದ್ವೀಪ ರಾಷ್ಟ್ರವನ್ನು ಹೈರಾಣಾಗಿಸಿದೆ.
ಭಾರತ, ರಷ್ಯಾ ಹಾಗೂ ಕೆಲ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನೀಡಿದ ಅಲ್ಪಸ್ವಲ್ಪ ಸಹಾಯದಿಂದ ಶ್ರೀಲಂಕಾ ಹೇಗೋ ಕುಂಟುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಲಂಕಾಗೆ ಆ ರಾವಣೇಶ್ವರ ಬಂದರೂ ಕಾಪಾಡಲು ಸಾಧ್ಯ ಇಲ್ಲ ಎನ್ನಬಹುದು.
ಮೇ ತಿಂಗಳಲ್ಲಿ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ರಾನಿಲ್ ವಿಕ್ರಮಸಿಂಘೆ ಕೂಡ ಪ್ರಧಾನಿ ಪಟ್ಟದಿಂದ ಇಳಿಯುತ್ತಿದ್ದಾರೆ. ಗೋಟಾಬಯ ರಾಜಪಕ್ಸೆ ಕೂಡ ಜುಲೈ 13ರಂದು ರಾಜೀನಾಮೆ ನೀಡುತ್ತಿದ್ದಾರೆ. ಇಡೀ ಸಂಪುಟವೇ ವಿಸರ್ಜನೆಯಾಗಲಿದೆ. ಗೋಟಾಬಯ ರಾಜೀನಾಮೆ ನೀಡುತ್ತಾರೆಂದ ಬಳಿಕ ಪ್ರತಿಭಟನಾಕಾರರ ಆಕ್ರೋಶ ತುಸು ತಗ್ಗಿದೆ.
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಉದ್ರಿಕ್ತ ಜನರು ಅನೇಕ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಿದೆ. ರಾಜಪಕ್ಸೆ ಕುಟುಂಬಕ್ಕೆ ಸೇರಿದ ಹಳೆಯ ಮನೆಗೆ ಬೆಂಕಿ ಹಚ್ಚಿದ್ದರು. ಆಡಳಿತ ಪಕ್ಷಗಳ ಸಂಸದರ ಮನೆಗಳ ಮೇಲೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಜುಲೈ 9ರಂದು ಪ್ರಧಾನಿ ವಿಕ್ರಮಸಿಂಘೆ ಮನೆಗೂ ಬೆಂಕಿ ಬಿದ್ದಿತು. ಹಾಗೆಯೇ, ಅಧ್ಯಕ್ಷರ ಅಧಿಕೃತ ನಿವಾಸಕ್ಕೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಅದೃಷ್ಟಕ್ಕೆ ಜನರು ಹಿಂಸಾಚಾರ ನಡೆಸಲಿಲ್ಲ, ಆ ಭವನಕ್ಕೆ ಯಾವ ಹಾನಿಯನ್ನೂ ಮಾಡಿಲ್ಲ. ಜನರು ಮುತ್ತಿಗೆ ಹಾಕುತ್ತಿರುವಂತೆಯೇ ರಾಜಪಕ್ಸೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟಕ್ಕೂ ಶ್ರೀಲಂಕಾದಲ್ಲಿ ಸರಕಾರದ ದೊಡ್ಡ ತಲೆಗಳೇ ಉರುಳಿಹೋಗುವಷ್ಟು, ಮತ್ತು ಜನರ ಆಕ್ರೋಶ ಇಷ್ಟು ತೀವ್ರ ಮಟ್ಟದಲ್ಲಿ ವ್ಯಕ್ತವಾಗುಷ್ಟು ದೊಡ್ಡ ಆರ್ಥಿಕ ಬಿಕ್ಕಟ್ಟು ಏನಿದೆ? ಆರ್ಥಿಕತೆ ಕುಸಿಯಲು ಏನು ಕಾರಣ? ಸರಕಾರದ ನೀತಿಯಲ್ಲಿ ಆದ ಯಡವಟ್ಟುಗಳೇನು ಎಂಬಿತ್ಯಾದಿ ಕೆಲ ವಿವರಣೆ ಇಲ್ಲಿದೆ.

ಲಂಕಾ ಆರ್ಥಿಕ ಪರಿಸ್ಥಿತಿ ಹೇಗಿದೆ?
ಶ್ರೀಲಂಕಾದಲ್ಲಿ ರಫ್ತಿಗೆ ಹೋಲಿಸಿದರೆ ಆಮದು ಪ್ರಮಾಣ ತೀರಾ ಹೆಚ್ಚು. ಯಾವುದೇ ಆರ್ಥಿಕತೆಯಾದರೂ ಈ ಅಸಮತೋಲನ ಇದ್ದರೆ ಕಷ್ಟವೇ. ಆದರೆ, ಶ್ರೀಲಂಕಾ ಇತ್ತೀಚಿನ ಕೆಲ ವರ್ಷಗಳಲ್ಲಿ ವಿಪರೀತ ಸಾಲ ಮಾಡಿಕೊಂಡಿದೆ.
ಶ್ರೀಲಂಕಾ 50 ಬಿಲಿಯನ್ ಯುಎಸ್ ಡಾಲರ್‌ಗೂ ಅಧಿಕ ವಿದೇಶೀ ಸಾಲ ಹೊಂದಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಇದು 4 ಲಕ್ಷ ಕೋಟಿ ರೂ. ಭಾರತದ ಆರ್ಥಿಕತೆ ಮಟ್ಟಿಗೆ ಈ ಹಣ ಸಣ್ಣದೆನಿಸಬಹುದು. ಆದರೆ, ಶ್ರೀಲಂಕಾದ ಆರ್ಥಿಕತೆಗೆ ಇದು ಬಹುದೊಡ್ಡ ಮೊತ್ತ. ಅದರ ಜಿಡಿಪಿ ಇರುವುದೇ 84 ಬಿಲಿಯನ್ ಡಾಲರ್. ಅಂದರೆ ಅದರ ಜಿಡಿಪಿಯ ಮುಕ್ಕಾಲು ಭಾಗ ಸಾಲವೇ ಇದೆ.
ಶ್ರೀಲಂಕಾದ ಆದಾಯ ಕುಸಿತವಾಗಿದೆ. ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಶ್ರೀಲಂಕಾದ ರೂಪಾಯಿ ಮೌಲ್ಯ ಪ್ರಪಾತಕ್ಕೆ ಕುಸಿದಿದೆ. ಹಣದುಬ್ಬರ ಶೇ. 50ಕ್ಕಿಂತ ಹೆಚ್ಚಾಗಿದೆ. ಪೆಟ್ರೋಲ್ ಸಂಗ್ರಹ ಬರಿದಾಗಿದೆ. ಇಂಧನ ಆಮದು ಮಾಡಿಕೊಳ್ಳಲು ಹಣವೇ ಇಲ್ಲವಾಗಿದೆ. ಪರಿಣಾಮವಾಗಿ ಮೊದಲೇ ಅಭಾವದಲ್ಲಿರುವ ಆಹಾರ ವಸ್ತುಗಳ ಬೆಲೆ ಜನಸಾಮಾನ್ಯರಿಗೆ ಅಕ್ಷರಶಃ ಕೈಗೆಟುಕದಂತೆ ಆಗಿದೆ. ಜನರು ಆಹಾರ ದಾಸ್ತಾನು ಉಳಿಸಿಕೊಳ್ಳಲು ಉಪವಾಸ ಇರಬೇಕಾದ ಪ್ರಮೇಯ ಬಂದಿದೆ. ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ ಸಂಸ್ಥೆಯ ವರದಿಯೊಂದರ ಪ್ರಕಾರ ಶ್ರೀಲಂಕಾದಲ್ಲಿರುವ 10 ಕುಟುಂಬಗಳ ಪೈಕಿ 9 ಕುಟುಂಬಗಳು ದಿನಕ್ಕೆ ಒಂದು ಅಥವಾ ಎರಡು ಹೊತ್ತು ಊಟ ಮಾಡುವುದನ್ನೇ ಬಿಟ್ಟಿವೆಯಂತೆ. ಅಚ್ಚರಿ ಎಂದರೂ ಇದು ಲಂಕಾದಲ್ಲಿರುವ ಕಟು ವಾಸ್ತವ.

ಸರಕಾರ ಕ್ರಮ ಕೈಗೊಳ್ಳಲಿಲ್ಲವೇ?
ಮಹಿಂದಾ ರಾಜಪಕ್ಸೆ ಪ್ರಧಾನಿ ಮತ್ತು ಗೋಟಾಬಯ ರಾಜಪಕ್ಸೆ ಅಧ್ಯಕ್ಷರಾದ ಮೇಲೆ ಶ್ರೀಲಂಕಾದಲ್ಲಿ ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿತು. 2019ರಲ್ಲಿ ಈಸ್ಟರ್ ಹಬ್ಬದ ದಿನದಂದು ಚರ್ಚ್ ಮತ್ತು ಹೋಟೆಲ್‌ಗಳಲ್ಲಿ ಬಾಂಬ್ ದಾಳಿಗಳಾಗಿ 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇಸ್ಲಾಮಿಕ್ ಮೂಲಭೂತವಾದವನ್ನು ಬುಡಸಮೇತ ತೊಡೆದುಹಾಕುವುದಕ್ಕೆ ಸರಕಾರ ಗಮನ ಕೊಟ್ಟಿತು. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಗಂಭೀರ ಕ್ರಮ ಕೈಗೊಳ್ಳಲಿಲ್ಲ.
ಆರ್ಥಿಕ ಬಿಕ್ಕಟ್ಟಿನ ಗಾಯದ ಮೇಲೆ ಬರೆ ಎಳೆದಂತೆ ರಾಜಪಕ್ಸೆ ಸರಕಾರ ಜನಪ್ರಿಯತೆಯನ್ನು ಅರಸತೊಡಗಿತು. ಅಂದರೆ ಜನರನ್ನು ಸಂತುಷ್ಟಿಗೊಳಿಸಲು ಭಾರೀ ತೆರಿಗೆ ಕಡಿತ ಮಾಡಿತು. ಜನರು ಖುಷಿಯಾದರೂ ಅದು ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಿತು. ವಿದೇಶಿ ಸಾಲಗಳನ್ನು ತೀರಿಸಲು ಆದಾಯ ಹೆಚ್ಚಿಸಬೇಕಾದ ಹೊತ್ತಿನಲ್ಲಿ ಸರಕಾರ ವೆಚ್ಚ ಹೆಚ್ಚಿಸಿಕೊಂಡು ಯಡವಟ್ಟು ಮಾಡಿತು.
ಅಷ್ಟೇ ಅಲ್ಲ, ಲಂಕಾದ ಅನಗತ್ಯ ಸಾಲವೂ ಹೆಚ್ಚಾಯಿತು. ಚೀನಾ ಸಾಲ ಕೊಡುತ್ತಲೇ ಹೋಯಿತು. ಇದು ಸದುಪಯೋಗವಾಗಿದ್ದರೆ ಲಂಕಾ ಇಷ್ಟು ಬರ್ಬಾದ್ ಸ್ಥಿತಿಗೆ ಬರುತ್ತಿರಲಿಲ್ಲ. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಯೋಜನೆಗೆ ಬಹುತೇಕ ವಿನಿಯೋಗವಾಯಿತು. ಇದು ಚೀನಾವನ್ನು ಬೆಳೆಸುವ ಬಿಳಿ ಆನೆ ಯೋಜನೆ ಅಷ್ಟೇ. ಲಂಕಾಗೆ ಅರೆಕಾಸು ಉಪಯೋಗವಿಲ್ಲದ ಈ ಯೋಜನೆಗಳಿಗೆ ಇಷ್ಟು ದೊಡ್ಡ ಹಣವನ್ನು ವಿನಿಯೋಗಿಸಿದ್ದು ಯಡವಟ್ಟು. ಚೀನಾದ ಸಾಲ ತೀರಿಸಲು ಹಂಬನ್‌ತೋಟ ಬಂದರನ್ನು ಲಂಕಾ ಅಡಮಾನ ಇಟ್ಟಿದೆ.

ಮುಂಚೆಯೇ ಸುಳಿವು ಇರಲಿಲ್ಲವಾ?
ಶ್ರೀಲಂಕಾದ ಆರ್ಥಿಕತೆ ರಾಜಪಕ್ಸೆ ಆಡಳಿತಕ್ಕೆ ಬಂದ ನಂತರವೇ ಉದ್ಭವಿಸಿತು ಎನ್ನುವುದು ಅರ್ಧಸತ್ಯ ಮಾತ್ರ. ಹಲವು ವರ್ಷಗಳ ಮುಂಚಿನಿಂದಲೇ ಲಂಕಾ ಆರ್ಥಿಕತೆ ದುರ್ಬಲಗೊಳ್ಳುತ್ತಾ ಹೋಗಿತ್ತು. 2015ರಲ್ಲಿ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಈ ಬಗ್ಗೆ ಎಚ್ಚರಿಸಿದ್ದರು. ಆಗ ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಸೂಕ್ತ ಆರ್ಥಿಕ ನೀತಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಸಂಸತ್‌ನಲ್ಲಿ ಸರಕಾರದ ಈ ನೀತಿಗೆ ಅನುಮೋದನೆ ಸಿಗಲಿಲ್ಲ. ನಂತರದ ವಿದ್ಯಮಾನದಲ್ಲಿ ಸರಕಾರದ ಆರ್ಥಿಕ ಕ್ರಮಗಳು ಹಳಿತಪ್ಪಿದವು. ಗೊತ್ತುಗುರಿ ಇಲ್ಲದಂತೆ ಆದವು.

ಸಾವಯವ ಕೃಷಿ
ರಾಜಪಕ್ಸ ಆಡಳಿತ ಕೈಗೊಂಡು ಅತಿದೊಡ್ಡ ನೀತಿ ವೈಫಲ್ಯ ಎಂದರೆ ಅದು ಸಾವಯವ ಕೃಷಿ ಪದ್ಧತಿ. ಆರ್ಗ್ಯಾನಿಕ್ ಫಾರ್ಮ್ ಎನ್ನುವುದು ಇವತ್ತಿಗೂ ಆಕರ್ಷಣೆಯ ವಿಚಾರವೇ. ಭಾರತದಲ್ಲಿ ನಾವು ಆರ್ಗ್ಯಾನಿಕ್ ಫಾರ್ಮಿಂಗ್ ಅಥವಾ ಸಾವಯವ ಬೇಸಾಯದ ಬಗ್ಗೆ ಕೇಳುತ್ತಿರುತ್ತೇವೆ. ರಾಸಾಯನಿಕ ಕೃಷಿಪದ್ಧತಿಯಿಂದ ಮಣ್ಣು ಹಾಳಾಗುತ್ತದೆ ಎಂಬ ಕಾಳಜಿ ಇರುವವರು ಸಾವಯವ ಕೃಷಿಗೆ ಬೆಂಬಲ ಕೊಡುತ್ತಾರೆ. ಇದೇ ಧೋರಣೆಯಲ್ಲಿ ರಾಜಪಕ್ಸೆ ಸರಕಾರ 2021 ಏಪ್ರಿಲ್ ತಿಂಗಳಲ್ಲಿ ಸಾವಯವ ಕೃಷಿಪದ್ಧತಿಗೆ ಉತ್ತೇಜನ ನೀಡುವ ಸಲುವಾಗಿ ರಾಸಾಯನಿಕ ಗೊಬ್ಬರವನ್ನೇ ಸಂಪೂರ್ಣವಾಗಿ ನಿಷೇಧಿಸಿತು.
ಇದರ ಪರಿಣಾಮ ಶ್ರೀಲಂಕಾ ಕೃಷಿ ಕ್ಷೇತ್ರ ನಲುಗಿ ಹೋಯಿತು. ಇಳುವರಿ ತೀರಾ ಕಡಿಮೆಯಾಯಿತು. ಲಂಕಾದ ಆರ್ಥಿಕತೆಯಲ್ಲಿ ಕೃಷಿ ದೊಡ್ಡ ಪಾಲು ಹೊಂದಿದೆ. ಲಂಕಾ ಬಹುತೇಕ ಕೃಷಿ ಮತ್ತು ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ದೇಶ. ಈಗ ಸಾವಯವ ಕೃಷಿಯಿಂದ ನಿರೀಕ್ಷಿತ ಇಳುವರಿ ಬರದ ಪರಿಣಾಮ ಲಂಕಾದ ಆದಾಯ ಕುಸಿಯಿತು.
ಕೋವಿಡ್ ಮತ್ತು ಭಯೋತ್ಪಾದನೆಯಿಂದಾಗಿ ಪ್ರವಾಸೋದ್ಯಮದಲ್ಲಿ ಹಿನ್ನಡೆ ಹೊಂದಿದ್ದ ಶ್ರೀಲಂಕಾಗೆ ಈಗ ಕೃಷಿ ಕ್ಷೇತ್ರದ ಹಿನ್ನಡೆಯು ಡಬಲ್ ಪೆಟ್ಟು ಕೊಟ್ಟಿತು. ದಿಢೀರನೇ ಕೃಷಿ ಪದ್ಧತಿ ಬದಲಿಸುವುದು ಘೋರ ತಪ್ಪಾಗುತ್ತದೆ ಎಂದು ವಿಜ್ಞಾನಿಗಳು ಮತ್ತು ಕೃಷಿ ಸಂಘಟನೆಗಳು ಎಚ್ಚರಿಸಿದರೂ ಗೋಟಾಬಯ ರಾಜಪಕ್ಸೆ ತಮ್ಮ ನಿರ್ಧಾರವನ್ನು ಸಡಿಸಲಿಲ್ಲ. ಅದರ ಪರಿಣಾಮ ಇಂದು ಲಂಕಾ ಜನರ ಆಕ್ರೋಶದಲ್ಲಿ ಕಾಣಬಹುದು.

ಲಂಕಾಗೆ ನೆರವಾಗಿರುವ ಭಾರತ ಮತ್ತಿತರರು
ಭಾರತದ ಶತ್ರು ಚೀನಾವನ್ನು ಶ್ರೀಲಂಕಾ ತನ್ನ ಮಗ್ಗುಲಿಗೆ ಎಳೆದುಕೊಂಡು ಕೂರಿಸಿದೆ. ಸಾಲ ಕೊಟ್ಟು ಲಂಕಾವನ್ನು ಶೂಲಕ್ಕೆ ಸಿಲುಕಿಸಿ ಚೀನಾ ಭಾರತದ ಕೆಳಗೆ ನೆಲೆ ಮಾಡಿಕೊಳ್ಳುವತ್ತ ಗಮನ ಕೊಟ್ಟಿದೆ. ಇಷ್ಟಾದರೂ ನೆರೆಯ ದೇಶವಾಗಿ ಭಾರತ ಶ್ರೀಲಂಕಾದ ಕಷ್ಟಕಾಲಕ್ಕೆ ಸ್ಪಂದಿಸಿದೆ. ಇದು ಮಾನವೀಯತೆಯ ದೃಷ್ಟಿಯಿಂದಲೂ ಸರಿ, ಅಥವಾ ಲಂಕಾವನ್ನು ತನ್ನ ಪ್ರಭಾವದಲ್ಲಿ ಇರಿಸಿಕೊಳ್ಳುವ ದೃಷ್ಟಿಯಿಂದಲೂ ಸರಿ.
54 ಬಿಲಿಯನ್ ಡಾಲರ್ ಸಾಲ ಹೊಂದಿರುವ ಶ್ರೀಲಂಕಾಗೆ ಭಾರತ 4 ಬಿಲಿಯನ್ ಡಾಲರ್ ಹಣಕಾಸು ಸಹಾಯ ಒದಗಿಸಿದೆ. ಇದರ ಜೊತೆಗೆ ಔಷಧ, ಅಹಾರ ಸಾಮಗ್ರಿ ಮತ್ತಿತರ ಸಹಾಯವನ್ನೂ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧನಸಹಾಯ ಅಥವಾ ಸಾಲ ಕೊಡುವ ಇರಾದೆಯಲ್ಲೂ ಭಾರತ ಇದೆ. ಸದ್ಯಕ್ಕೆ ಶ್ರೀಲಂಕಾ ತೆವಳಿಕೊಂಡು ಹೋಗಲು ಇದು ಸಾಕು.
ಈ ವೇಳೆ ಚೀನಾದಿಂದ ಇನ್ನಷ್ಟು ಸಾಲವನ್ನು ಲಂಕಾ ಅಪೇಕ್ಷಿಸುತ್ತಿದೆ. ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಕೆಲವಷ್ಟು ಹಣಕಾಸು ಸಹಾಯ ಮಾಡಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್‌ನಿಂದ ದೊಡ್ಡ ಸಾಲದ ನಿರೀಕ್ಷೆಯಲ್ಲಿ ಲಂಕಾ ಇದೆ. ಅದಕ್ಕಾಗಿ ತೆರಿಗೆ ವಿನಾಯಿತಿ ಕ್ರಮವನ್ನು ಹಿಂಪಡೆದುಕೊಳ್ಳಲಾಗಿದೆ.
ಇನ್ನು, ಮುಖ್ಯವಾಗಿ ಶ್ರೀಲಂಕಾದಲ್ಲಿ ಇಂಧನದ ಕೊರತೆ ದೊಡ್ಡ ತಲೆನೋವಾಗಿದೆ. ಆದರೆ, ಉಕ್ರೇನ್ ಯುದ್ಧ ಶ್ರೀಲಂಕಾಗೆ ಒಂದಿಷ್ಟು ಅನುಕೂಲ ಮಾಡಿಕೊಟ್ಟಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿರುವ ತೈಲವನ್ನು ಲಂಕಾ ಖರೀದಿ ಮಾಡುತ್ತಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೂ ಲಂಕಾ ಸರಕಾರ ಮಾತನಾಡಿದೆ. ಮೇ ತಿಂಗಳಲ್ಲಿ ರಷ್ಯಾದಿಂದ ಒಂದಷ್ಟು ತೈಲ ಲಂಕಾಗೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.
ಶ್ರೀಲಂಕಾ ಆರು ತಿಂಗಳವರೆಗಾದರೂ ಕುಂಟುತ್ತಾ ಸಾಗಬೇಕೆಂದರೆ ಈಗ ಏನಿಲ್ಲವೆಂದರೂ 6 ಬಿಲಿಯನ್ ಡಾಲರ್ (50 ಸಾವಿರ ಕೋಟಿ ರೂಪಾಯಿ) ಅಗತ್ಯ ಇದೆ. ಲಂಕಾಗೆ ನೆರವಾಗುವಂತೆ ವಿವಿಧ ದೇಶಗಳಿಗೆ ವಿಶ್ವಸಂಸ್ಥೆ ಮನವಿ ಮಾಡುತ್ತಿದೆ. ಭಾರತದಿಂದ ಕನಿಷ್ಠ 1 ಬಿಲಿಯನ್ ಡಾಲರ್ ಹಣವಾದರೂ ಸಿಗುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications