• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರದಾನ ಮಾಡಿ, ಸಾವಿನ ನಂತರವೂ ಜಗವ ನೋಡಿ

By ವಿನೋದ್ ಚಂದ್ರ
|
Google Oneindia Kannada News

ಕಣ್ಣು ದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಹಲವಾರು ಅಭಿಯಾನ ನಡೆಯುತ್ತಿದೆ. ಸತ್ತ ಬಳಿಕ ವ್ಯಕ್ತಿ ಕಣ್ಣನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು ಎಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.

ಹಲವಾರು ಜನರಿಗೆ ಕಣ್ಣನ್ನು ದಾನ ಮಾಡುವುದುದ ಹೇಗೆ?, ಅದರ ಪ್ರಕ್ರಿಯೆಗಳು ಏನು? ಎಂಬುದು ತಿಳಿದಿಲ್ಲ. ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಕಣ್ಣನ್ನು ದಾನ ಮಾಡುವ ಕುರಿತ ವಿಶೇಷ ಲೇಖನ ಇಲ್ಲಿದೆ.

ಎಲ್‌ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯಎಲ್‌ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯ

ಹಾಸನ ಜಿಲ್ಲಾ ವಾರ್ತಾಧಿಕಾರಿಯಾದ ವಿನೋದ್ ಚಂದ್ರ ಅವರು ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ವಿಶೇಷ ಲೇಖನವನ್ನು ಬರೆದಿದ್ದಾರೆ. ನೇತ್ರದಾನದ ಬಗ್ಗೆ ಮಾಹಿತಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದಾರೆ.

 ಏನಿದು ಅಂಗಾಂಗ ದಾನ? ಯಾರು ದಾನ ಮಾಡಬಹುದು? ಏನಿದು ಅಂಗಾಂಗ ದಾನ? ಯಾರು ದಾನ ಮಾಡಬಹುದು?

ಸಕಲ ಜೀವ ಜಂತುಗಳಿಗೂ ದೃಷ್ಟಿ ಅತಿ ಮುಖ್ಯ, ಅದರಲ್ಲಿಯೂ ಜಗತ್ತನ್ನೇ ಆಳುತ್ತಿರುವ ಮಾನವನಿಗೆ ಶೇ 70ರಷ್ಟು ಗ್ರಹಿಕೆ ಆರೋಗ್ಯ ಪೂರ್ಣ ಬದುಕಿಗೆ ಕಣ್ಣಿನ ಮೂಲಕವೇ ಆಗುತ್ತದೆ ಜೊತೆಗೆ ಆ ಮೂಲಕವೇ ಬುದ್ಧಿಶಕ್ತಿಯ ವಿಕಾಸವೂ ಆಗುತ್ತದೆ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ದೃಷ್ಟಿ ಹೀನರು ಏನನ್ನೂ ನೋಡಲಾಗದೆ ಅಸಹಾಯಕತೆಯಿಂದ ದಿನ ಕಳೆಯುತ್ತಿದ್ದಾರೆ. ಅಂತಹವರ ಪಾಲಿಗೆ ನೇತ್ರದಾನ ಹೊಸ ಬದುಕನ್ನು ನೀಡಬಲ್ಲದು.

ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿಗೂ ಹೆಚ್ಚು ಜನರು ಕಾರ್ನಿಯ ಅಂಧತ್ವದಿಂದ ಬಳಲುತ್ತಿದ್ದಾರೆ. ನವೀನ ನೇತ್ರ ಶಸ್ತ್ರ ಚಿಕಿತ್ಸಾ ವಿಜ್ಞಾನದ ಅದ್ಭುತಗಳಲ್ಲೊಂದಾದ ಹಾಗೂ ಏಕೈಕ ಮತ್ತು ಪರಿಣಾಮಕಾರಿಯಾದ ವಿಧಾನವಾಗಿರುವ ಕಾರ್ನಿಯಾ ಗ್ರಾಫ್ಟಿಂಗ್ ಮೂಲಕ ಇಂತಹವರಿಗೆ ಮರುದೃಷ್ಟಿ ಪಡೆಯುವ ಸುವರ್ಣವಕಾಶವಿದೆ ಆದರೆ ಇದಕ್ಕೆ ನೇತ್ರದಾನಿಗಳು ಸಿಗುವುದು ಮುಖ್ಯ.

 ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವೂ ಹಾಕಿ: ಸಿಎಂ ಬೊಮ್ಮಾಯಿ ಮನವಿ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವೂ ಹಾಕಿ: ಸಿಎಂ ಬೊಮ್ಮಾಯಿ ಮನವಿ

18 ವರ್ಷ ಮೀರಿದ ಯಾವುದೇ ವ್ಯಕ್ತಿ (ಅಂಧರು ಸಹ ಕಾರ್ನಿಯ ಅಂದತ್ವ ಹೊರತುಪಡಿಸಿ) ನೇತ್ರದಾನ ನೋಂದಣಿ ಮಾಡಿ ತಮ್ಮ ಮರಣದ ಬಳಿಕ ನೇತ್ರಗಳನ್ನು ದೃಷ್ಟಿ ಲಾಭ ಕಾರ್ಯಕ್ಕೆ ಕಾಣಿಕೆಯಾಗಿ ನೀಡಬಹುದು, ಯಾವುದೇ ಮರಣ ನಿಮ್ಮ ಗಮನಕ್ಕೆ ಬಂದಾಗ ಅವರ ಬಂಧುಗಳ ಮನಸ್ಸನ್ನು ಒಲಿಸಿ ಮೃತರ ನೇತ್ರದಾನಕ್ಕೆ ಸಮ್ಮತಿ ಸಿಕ್ಕಿದೊಡನೆ ವಿಳಂಬ ಮಾಡದೆ ಹತ್ತಿರದ ನೇತ್ರ ಭಂಡಾರಕ್ಕೆ ದೂರವಾಣಿ ಅಥವಾ ಖುದ್ದಾಗಿ ತಿಳಿಸಬಹುದಾಗಿದೆ.

ಕಣ್ಣಿನ ಮುಂಭಾಗದಲ್ಲಿರುವ ಕಾರ್ನಿಯ ಭಾಗವು ಪಾರದರ್ಶಕವಾಗಿದ್ದು, ಆರೋಗ್ಯಕರವಾಗಿದ್ದರೆ ಸಾಕು ನೇತ್ರದಾನಕ್ಕೆ ಮೃತರ ಲಿಂಗ, ಶೈವಾವಸ್ಥೆ ವೃದ್ಧಾಪ್ಯ, ಕನ್ನಡಕ ಧಾರಣೆ, ಸಕ್ಕರೆ ರೋಗ, ದೇಹದ ಅಥವಾ ಕಣ್ಣಿನ ತೊಂದರೆ ಇತರೆ ಖಂಡಿತ ಅಡ್ಡಿ ಬರುವುದಿಲ್ಲ, ಮರಣ ಸಂಭವಿಸಿದ ಆರು ಗಂಟೆಗಳ ಒಳಗೆ ನೇತ್ರಗಳನ್ನು ಸಂಗ್ರಹಿಸಬೇಕು.

ನೇತ್ರ ಸಂಗ್ರಹಣೆಯಿಂದ ಮೃತರ ಮುಖ ಅಂದಗೆಡುವುದಿಲ್ಲ ಕಣ್ಣು ರೆಪ್ಪೆಗಳನ್ನು ಕುಶಲತೆಯಿಂದ ತೆಗೆದು ನಂತರ ಕಣ್ಣನ್ನು ವೈದ್ಯರು ಮುಚ್ಚುತ್ತಾರೆ. ನೇತ್ರ ಸಂಗ್ರಹಣೆಯನ್ನು ಕೇವಲ 20 ಅಥವಾ 25 ನಿಮಿಷಗಳಲ್ಲಿ ಮಾಡಲಾಗುವುದು. ನೇತ್ರ ಭಂಡಾರದ ತಂಡವು ದೇಹವಿರುವ ಸ್ಥಳಕ್ಕೆ (ಮನೆ, ಆಸ್ಪತ್ರೆ, ಚಿತಾಗಾರ, ಇತರೆ) ಯಾವ ವೇಳೆಯಲ್ಲೂ (ರಾತ್ರಿ ಅಥವಾ ಹಗಲು ಧಾವಿಸಿ ನೇತ್ರ ಸಂಗ್ರಹಣೆ ಮಾಡುತ್ತದೆ, ಕಣ್ಣು ಸಂಗ್ರಹಣಾ ಸೇವೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಕಣ್ಣು ಕಸಿ ಶಸ್ತ್ರಚಿಕಿತ್ಸೆಯಿಂದ ಕಾರ್ನಿಯಾ ಅಂಧರಿಗೆ ಮಾತ್ರ ಮರುದೃಷ್ಟಿ ನೀಡಬಹುದು ಬೇರೆ ಅಂಧರಿಗಲ್ಲ.

ನೇತ್ರದಾನದಲ್ಲಿ ಇನ್ನೊಂದು ಕುತೂಹಲಕಾರಿ ವಿಷಯ ಎಂದರೆ 80 ವರ್ಷದ ವ್ಯಕ್ತಿಯ ನೇತ್ರದಾನ ಚಿಕ್ಕ ಮಕ್ಕಳಿಗೂ ದೃಷ್ಟಿ ನೀಡಬಲ್ಲದು ಅದೇ ರೀತಿ ಚಿಕ್ಕ ಮಕ್ಕಳ ನೇತ್ರದಾನ 80 ವರ್ಷದ ವಯೋವೃದ್ದರಿಗೆ ಹೊಸ ಬೆಳಕು ನೀಡಬಹುದು.

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು, ವಿಷ ಸೇವಿಸಿದವರ, ವಿಷದ ಹಾವು ಕಚ್ಚಿ ಮೃತಪಟ್ಟವರು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರ ಕಣ್ಣುಗಳನ್ನು ನೇತ್ರದಾನಕ್ಕೆ ಬಳಸುವುದಿಲ್ಲ.

ನೇತ್ರ ಭಂಡಾರದಲ್ಲಿ ನೋಂದಾಯಿಸಿದ ವ್ಯಕ್ತಿಗಳು ಪರಸ್ಥಳ ಅಥವಾ ಪರದೇಶದಲ್ಲಿ ಮರಣಿಸಿದ ಅವರ ನೇತ್ರಗಳನ್ನು ಸ್ಥಳೀಯ ನೇತ್ರ ಭಂಡಾರಗಳಿಗೆ ನೀಡಬಹುದು ನಿಮ್ಮ ನೋಂದಣಿಗೆ ದಯವಿಟ್ಟು ಒಂದು ನಿರ್ದಿಷ್ಟ ಅರ್ಜಿ ಪತ್ರ ಸಲ್ಲಿಸಿ ನೇತ್ರ ಭಂಡಾರದಲ್ಲಿ ದಾಖಲಿಸಬಹುದು. ಇದರಿಂದ ಸತ್ತ ನಂತರವೂ ಜಗತ್ತು ನೋಡುವ ಅಪರೂಪದ ಅವಕಾಶ ದೊರೆಯುತ್ತದೆ. ಹತ್ತಾರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಈ ಬಗ್ಗೆ ಅರಿವು ಮೂಡಿಸಿ ಮೃತರಿಂದ ನೇತ್ರವನ್ನು ಪಡೆದು ಅಂಧರ ಬಾಳಿಗೆ ಆನಂದವನ್ನು ನೀಡುತ್ತಿವೆ.

ಹಾಸನದಲ್ಲಿ ಜಿಲ್ಲೆಯ ಮೊದಲ ನೇತ್ರ ತಜ್ಞರೆಂದೇ ಖ್ಯಾತರಾದ ಡಾ. ಶಂಕರ್ ಅವರು ತಮ್ಮ ಸ್ನೇಹಿತರೊಡಗೂಡಿ 1990ರಲ್ಲೇ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಾಸವಿ ಐ ಬ್ಯಾಂಕ್ ಎಂಬ ನೇತ್ರ ಭಂಡಾರ ಪ್ರಾರಂಭಿಸಿ ನೂರಾರು ದೃಷ್ಟಿ ಹೀನರ ಪಾಲಿಗೆ ಬೆಳಕಾಗಿದ್ದು, ಸ್ಮರಣೀಯ. ಈ ಸಂಸ್ಥೆ ಮೂಲಕ ಈವರೆಗೆ ಸುಮಾರು 180 ಜೊತೆ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರು ಲಯನ್ಸ್ ಆಸ್ಪತ್ರೆಗೆ ಕಳುಹಿಸಿ ಸಕಾಲದಲ್ಲಿ ಶಸ್ತ್ರ ಚಿಕಿತ್ಸೆಯಾಗುವಂತೆ ನೋಡಿಕೊಂಡಿದ್ದಾರೆ. ಡಾ. ಶಂಕರ್ ಅವರು ಮೃತ ದಾನಿಗಳಿಂದ ಸ್ವತಃ ತಾವೇ 126 ಜೊತೆ ಕಣ್ಣುಗಳನ್ನು ತೆಗೆದು ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಿಗೆ ಕಳುಹಿಸಿ ಕಾರ್ನಿಯ ಗ್ರಾಫ್ಟಿಂಗ್‍ಗೆ ನೆರವಾಗಿದ್ದಾರೆ.

ಇದೇ ರೀತಿ ಇತ್ತೀಚೆಗೆ ಹಾಸನದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾದ ನಂತರ ಹಿಮ್ಸ್ ನಲ್ಲಿಯೇ ನೇತ್ರದಾನಿಗಳಿಂದ ಕಣ್ಣು ಪಡೆದು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಹಿಮ್ಸ್ ಆಸ್ಪತ್ರೆ 2015 ರಿಂದ ಇದುವರೆಗೆ 242 ಕಣ್ಣುಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 203 ಹಿಮ್ಸ್ ಬಳಕೆ ಮಾಡಿಕೊಂಡಿದ್ದು, ಇನ್ನುಳಿದ 39 ಕಣ್ಣುಗಳನ್ನು ಮಿಂಟೋಗೆ ಕಳುಹಿಸಿಕೊಡಲಾಗಿದೆ.

ನೇತ್ರದಾನ ಉಯಿಲು ಮಾಡಲು ಇಚ್ಛೆಪಟ್ಟವರು ಸರ್ಕಾರಿ ನೇತ್ರ ಬ್ಯಾಂಕ್‍ನಲ್ಲಿ ನೋಂದಾಯಿಸಬಹುದು ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಹಿಮ್ಸ್ ಬೋಧಕ ಆಸ್ಪತ್ರೆಯ ನೇತ್ರ ವಿಭಾಗದ ನೇತ್ರ ಭಂಡಾರದಲ್ಲಿ ನೋಂದಾಯಿಸಬಹುದು.

ಸತ್ತ ನಂತರ ವ್ಯರ್ಥವಾಗಿ ಪ್ರಕೃತಿಯಲ್ಲಿ ಲೀನವಾಗುವ ಕಣ್ಣುಗಳನ್ನು ದಾನ ಮಾಡಿದಲ್ಲಿ ಅದು ಇಬ್ಬರಿಗೆ ದೃಷ್ಟಿ ನೀಡಲಿದೆ ಹಾಗಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಸತ್ತ ನಂತರವೂ ಜಗತ್ತನ್ನು ನೋಡುವ ಅವಕಾಶ ಗಳಿಸೋಣ. ನೇತ್ರದಾನಕ್ಕೆ ನಿಮ್ಮ ಹೆಸರನ್ನು ಇಂದೇ ನೋಂದಾಯಿಸಿ ಹಾಗೂ ಮೃತ ಬಂಧುಗಳ ಕಣ್ಣು ದಾನ ಮಾಡಿ ಅನಿವರ್ಚನೀಯ ಆತ್ಮಾನಂದವನ್ನು ಅನುಭವಿಸಿರಿ.

English summary
Eyes can be donated only after death. Eyes must be removed within 4 to 6 hours after death. Who can donate eyes?, here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X