ದೆವ್ವದ ಕಣ್ಣಿನ ಕಪ್ಪೆ, ಭಯಾನಕ ಹಾವು! ವಿಜ್ಞಾನಿಗಳು ಕಂಡ ಹೊಸ ಜೀವಿಗಳು
ಭೂಮಿ ಮೇಲೆ ಕೋಟಿ ಕೋಟಿ ಬಗೆಯ ಜೀವಿಗಳು ಉದಯಿಸಿವೆ, ಕೋಟಿ ಕೋಟಿ ಬಗೆಯ ಜೀವಿಗಳು ಭೂಮಿಯಿಂದ ನಾಶವಾಗಿ ಹೋಗಿವೆ. ಈ ಮಧ್ಯೆ ನಮ್ಮ ನಡುವೆಯೇ ಇದ್ದು, ಕಾಣದಂತೆ ಮರೆಯಾಗಿದ್ದ ಸುಮಾರು 20 ಬಗೆಯ ಹೊಸ ಜೀವಿಗಳನ್ನು ಜೀವ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅಮೆಜಾನ್ ನದಿಯ ಜನ್ಮಸ್ಥಾನ ಆಂಡಿಸ್ ಪರ್ವತಗಳ ತಪ್ಪಲಿನಲ್ಲಿ 20 ಬಗೆಯ ಹೊಸ ಜೀವಿಗಳನ್ನು ವಿಜ್ಞಾನಿಗಳು ಹುಡುಕಿದ್ದಾರೆ.
ದಕ್ಷಿಣ ಅಮೆರಿಕದ ದೇಶ ಬೊಲಿವಿಯಾ ಕೂಡ ಅಮೆಜಾನ್ ಅರಣ್ಯದ ತಪ್ಪಲು ಪ್ರದೇಶವನ್ನು ಹೊಂದಿದೆ. ಇದೇ ಜಾಗದಲ್ಲಿ ಜಗತ್ತಿನ ಅತಿದೊಡ್ಡ ನದಿ ಎಂಬ ಕೀರ್ತಿಗೆ ಪಾತ್ರವಾಗಿರುವ ಅಮೆಜಾನ್ ಜನ್ಮತಾಳುತ್ತದೆ. ಇದೇ ಆಂಡಿಸ್ ಪರ್ವತಗಳ ಸುತ್ತಮುತ್ತ ದೆವ್ವದ ಕಣ್ಣಿನ ಕಪ್ಪೆ, ಭಯಾನಕ ವೈಪರ್ ಸ್ನೇಕ್ (ಮಂಡಲ) ಸೇರಿದಂತೆ ಹೊಸ ಪ್ರಬೇಧದ ಚಿಟ್ಟೆ, ಕೀಟಗಳು ಹಾಗೂ ಸಸ್ಯಗಳನ್ನು ಕೂಡ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಬೊಲಿವಿಯಾದ ಆಂಡಿಸ್ ಪರ್ವತಗಳ ತಪ್ಪಲಿನಲ್ಲಿ ಜನ್ಮತಾಳುವ ಅಮೆಜಾನ್, ಮುಂದೆ ಹರಿಯುತ್ತಾ ಸಾಗಿ ಸಮುದ್ರದಂತೆ ಭೋರ್ಗರೆಯುತ್ತದೆ. ಹೀಗೆ ಬೊಲಿವಿಯಾ ಹಲವು ನದಿಗಳ ಉಗಮಸ್ಥಾನ. ಅಷ್ಟೇ ಅಲ್ಲದೆ ಭೂಮಿ ಮೇಲಿನ ಹಲವು ಬಗೆಯ ಜೀವಿಗಳ ಮೂಲಸ್ಥಾನ ಕೂಡ ಆಗಿದೆ. ಇಂತಹ ಪ್ರದೇಶದಲ್ಲೇ ವಿಜ್ಞಾನ ಸಮೂಹ ಅಚ್ಚರಿಪಡುವ ಘಟನೆ ನಡೆದಿದ್ದು, 20 ಬಗೆಯ ಹೊಸ ಜೀವಿಗಳು ಪತ್ತೆಯಾಗಿವೆ.

ಜೀವ ಜಗತ್ತಿಗೆ ಡ್ಯಾಂ ಕಂಟಕ..?
ಬೊಲಿವಿಯಾ ದೇಶದಲ್ಲಿ ನೈಸರ್ಗಿಕ ಸಂಪತ್ತು ತುಂಬಿ ತುಳುಕುತ್ತಿದೆ. ಅಪಾರ ಪ್ರಮಾಣದ ಜೀವಜಗತ್ತು ಇಲ್ಲಿ ನೆಮ್ಮದಿಯಾಗಿ ಆಶ್ರಯ ಪಡೆದಿದೆ. ಆದರೆ ಆಧುನಿಕತೆ ಹೆಸರಲ್ಲಿ ಬೊಲಿವಿಯಾ ಸರ್ಕಾರ ಕೆಲ ದಶಕದ ಹಿಂದೆ ಡ್ಯಾಂ ಕಟ್ಟಲು ಮುಂದಾಗಿತ್ತು. ಅಮೆಜಾನ್ ನದಿ ಜನ್ಮತಾಳುವ ಪ್ರದೇಶದ ಸುತ್ತಮುತ್ತ ಡ್ಯಾಂ ಕಟ್ಟುವ ಪ್ರಕ್ರಿಯೆ ಶುರುವಾಗಿತ್ತು. ಇದರ ಪರಿಣಾಮ ಲಕ್ಷಾಂತರ ಪ್ರಬೇಧದ ಜೀವಿಗಳು ನಾಶವಾಗಿ ಹೋದವು. ಅಲ್ಲದೆ ಇನ್ನೂ ಅನೇಕ ಬಗೆಯ ಜೀವಿಗಳು ಬೇರೆ ಜಾಗಕ್ಕೆ ವಲಸೆ ಹೋಗಿಬಿಟ್ಟವು. ಈ ಕಾರಣಕ್ಕೆ ವಿಜ್ಞಾನಿಗಳು ಡ್ಯಾಂ ಬೇಡ ಎಂದು ವಿರೋಧಿಸಿದ್ದರು. ಆದರೆ ಬೊಲಿವಿಯಾ ಸರ್ಕಾರ ಅವರ ಮಾತನ್ನು ಕೇಳಲೇ ಇಲ್ಲ. ಇದರ ಪರಿಣಾಮ ಜೀವ ಪ್ರಬೇಧದ ಮೇಲಾಗಿದ್ದು, ಆ ಪಾಪ ಬೊಲಿವಿಯಾ ಸರ್ಕಾರಕ್ಕೂ ತಟ್ಟಿದೆ.

ಬೀಫ್ ಮಾಫಿಯಾ ದೌರ್ಜನ್ಯ
ಅಮೆಜಾನ್ ಮೇಲೆ ದೌರ್ಜನ್ಯ ವಿಪರೀತವಾಗಿದೆ. ಸೋಯಾಬೀನ್, ಬೀಫ್ ಎಕ್ಸ್‌ಪೋರ್ಟ್ ಉದ್ಯಮದ ಚಂಡಮಾರುತಕ್ಕೆ ಸಿಲುಕಿರುವ ಅಮೆಜಾನ್ ಕಾಡು ನಾಶವಾಗಿ ಹೋಗುತ್ತಿದೆ. ಅಮೆಜಾನ್ ರೈನ್ ಫಾರೆಸ್ಟ್ ನಾಶಗೊಳಿಸುತ್ತಿರುವ ಎರಡೂ ಉದ್ಯಮಗಳ ಬಗ್ಗೆ ಇತ್ತೀಚೆಗೆ ರಿವೀಲ್ ಆದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಈಗಾಗಲೇ ಅಮೆಜಾನ್ ಕಾಡಿನ ಶೇಕಡ 20ರಷ್ಟು ಭಾಗ ಹಾಳಾಗಿ ಹೋಗಿದೆ. ಕಾಡುಗಳ್ಳರು, ಕೃಷಿ ಕಾರಣ ನೀಡಿ ಕಾಡನ್ನ ಕಡಿಯುತ್ತಿರುವವರು ಹಾಗೂ ಬೀಫ್ ಮಾಫಿಯಾ ನಿತ್ಯಹರಿದ್ವರ್ಣ ಕಾಡನ್ನ ನಾಶ ಮಾಡುತ್ತಿದೆ. ಗ್ಲೋಬಲ್ ವಾರ್ಮಿಂಗ್ ಕೂಪದಲ್ಲಿ ನರಳುತ್ತಿರುವ ಪ್ರಪಂಚಕ್ಕೆ ಇದು ಆಘಾತ ನೀಡಿದೆ. ಅಮೆಜಾನ್ ಕಾಡಿನ ಸುತ್ತಮುತ್ತ ಬೆಳೆಯುವ ಕೃಷಿ ಪದಾರ್ಥ ಹಾಗೂ ಬೀಫ್ ಉದ್ಯಮ ಯುರೋಪ್ ಮೇಲೆ ಅವಲಂಬಿತವಾಗಿದೆ. ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಶೇಕಡ 20ರಷ್ಟು ಸೋಯಾ ಹಾಗೂ ಶೇಕಡ 17ರಷ್ಟು ಬೀಫ್ ಅಕ್ರಮವಾಗಿದೆ. ಇನ್ನು ಸ್ಮಗ್ಲರ್‌ಗಳ ಪಾಲಿಗಂತು ಈ ಅಮೆಜಾನ್ ಕಾಡು ಅಕ್ಷಯಪಾತ್ರೆಯಾಗಿದೆ.

ನೂರಾರು ಕೋಟಿ ಎಕರೆ ಅರಣ್ಯ..!
ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಜಗತ್ತಿನ ಯಾವ ಭಾಗದಲ್ಲೂ ಸಿಗೋದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಹಕಾರಿಯಾಗಿರೋದು ಅಲ್ಲಿನ ವಾತಾವರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನ ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ ಹೇಳುವದಾದರೆ ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಪ್ರದೇಶ. ಇಷ್ಟು ಪ್ರಮಾಣದ ಕಾಡಿನಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿಯ ಸುತ್ತಮುತ್ತಲೂ ದಟ್ಟವಾದ ಮರ-ಗಿಡಗಳು ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿಯ ಮರಗಳು ಹಾಗೂ 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. ಕೇವಲ 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟು ಅರಣ್ಯ ಸಂಪತ್ತು ಅಡಗಿದೆ ಎಂದರೆ 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್ ಜಾಗದಲ್ಲಿ ಇನ್ನೆಂತಹ ಸಂಪತ್ತು ಇರಬೇಡ ಊಹಿಸಿ.

ಕಾಡುಗಳ್ಳರಿಗೆ ಸ್ವರ್ಗ..!
ಅಮೆಜಾನ್‌ನಲ್ಲಿ ಅದರಲ್ಲೂ ಬ್ರೆಜಿಲ್‌ನಲ್ಲಿ ಹರಡಿರುವ ಅಮೆಜಾನ್ ಅರಣ್ಯದಲ್ಲಿ ಅಡಗಿರುವ ಸಂಪತ್ತಿನ ಮೇಲೆ ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರು ಕಣ್ಣಿಟ್ಟಿದ್ದಾರೆ. ಒಂದ್ಕಡೆ ಕೃಷಿಕರು ಕಾಡು ಕಡಿದು ವ್ಯವಸಾಯ ಮಾಡಿದರೆ, ಸ್ಮಗ್ಲರ್ಸ್ ಇದೇ ಕಾಡಲ್ಲಿ ಕೊಕೇನ್ ರೀತಿಯ ಮಾದಕ ವಸ್ತುಗಳನ್ನ ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಅಪಾರ ಪ್ರಮಾಣದ ಸಂಪತ್ತು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಅಮೆಜಾನ್‌ನ ಎಷ್ಟೋ ಗಣಿಗಾರಿಕೆಗಳು ಸ್ಮಗ್ಲರ್ಸ್ ಹಿಡಿತದಲ್ಲೇ ಇವೆ. ಕಳ್ಳದಾರಿ ಮೂಲಕ ಇಲ್ಲಿ ದೋಚಿದ ಅರಣ್ಯ ಸಂಪತ್ತನ್ನು ಕಾಡುಗಳ್ಳರು ನೆರೆಯ ಅಮೆರಿಕ ಸೇರಿದಂತೆ ದೂರದ ಯೂರೋಪ್ ರಾಷ್ಟ್ರಗಳಿಗೂ ಕದ್ದು ಸಾಗಿಸುತ್ತಿದ್ದಾರೆ. ಹೀಗಾಗಿ ಅಮೆಜಾನ್ ಪಾತ್ರದಲ್ಲಿ ಕತ್ತಲಾದರೆ ಸಾಕು ಜೆಸಿಬಿ, ಗರಗಸ, ಟ್ರಕ್ ಆರ್ಭಟ ಜೋರಾಗೇ ಇರುತ್ತೆ. ಬ್ರೆಜಿಲ್‌ನ ಸ್ಥಳೀಯ ಆಡಳಿತಗಳು ಸ್ಮಗ್ಲರ್ಸ್ ಬೆನ್ನಿಗೇ ನಿಂತಿವೆ. ಅಧಿಕಾರಿಗಳ ಕಥೆ ಕೇಳೋದೆ ಬೇಡ, ಅಷ್ಟರಮಟ್ಟಿಗೆ ಕಾಡುಗಳ್ಳರ ಹಾವಳಿ ಇದೆ. ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!
ಅರಣ್ಯ ಸಂಪತ್ತು ಇರುವ ಕಡೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣಕ್ಕೆ ಅಮೆಜಾನ್ ನಾಡು ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಇದೇ ಕಾಡನ್ನು ನಂಬಿ ಹರಿದುಬಂದಿದೆ. ಬ್ರೆಜಿಲ್ ಸದ್ಯದ ಮಟ್ಟಿಗೆ ಬಂಡವಾಳಿಗರ ಸ್ವರ್ಗ ಕೂಡ. ಇನ್ನು ಇಲ್ಲಿ ಅಡಗಿರುವ ಅಪಾರ ಗಣಿ ಸಂಪತ್ತು ದೋಚುವ ಹುನ್ನಾರ ಶ್ರೀಮಂತ ರಾಷ್ಟ್ರಗಳದ್ದು. ಹೀಗಾಗಿಯೇ ಅಮೆಜಾನ್‌ನಲ್ಲಿ ಗಣಿಗಾರಿಕೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಅತ್ಯುತ್ಸಾಹ ತೋರುತ್ತಿವೆ. ಇದರ ಪರಿಣಾಮವೇ ದಟ್ಟ ಅರಣ್ಯ ನಾಶವಾಗಿ, ಬೆಂಗಾಡು ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಮುಖವಾಗಿ ಟಿಂಬರ್ ಉದ್ಯಮ, ಫಾರ್ಮಸಿ, ಗಣಿಗಾರಿಕೆಗಳ ಮೇಲೆ ಉದ್ಯಮಿಗಳು ಕಣ್ಣು ನೆಟ್ಟಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಕೂಡ ದೋಚುತ್ತಿದ್ದಾರೆ.

ಮೂಲ ನಿವಾಸಿಗಳ ಜೀವಕ್ಕೆ ಕುತ್ತು
ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೂ ಇಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಇನ್ನೂ ಆಧುನಿಕ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಹೊಂದದ ಕೆಲವು ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

1 ವರ್ಷ, 22 ಲಕ್ಷ ಎಕರೆ ಕಾಡು ಭಸ್ಮ
ಇಲ್ಲಿ ಕೃಷಿ ಮಾಡುವ ನೆಪದಲ್ಲಿ ಕಾಡಿನ ಮೇಲೆ ಎಂತಹ ದೌರ್ಜನ್ಯ ನಡೆಯುತ್ತಿದೆ ಎಂದರೆ, 2019ರಲ್ಲಿ ಅಮೆಜಾನ್ ಕಾಡಿನಲ್ಲಿ ಬೆಂಕಿ ಹೊತ್ತಿತ್ತು. ಒಂದೆರಡು ಭಾಗದಲ್ಲಿ ಹಬ್ಬಿದ್ದ ಬೆಂಕಿಯನ್ನು ನಂದಿಸಲು ಬ್ರೆಜಿಲ್, ಬೊಲಿವಿಯಾ, ಪೆರು, ಕೊಲಂಬಿಯಾ ಸರ್ಕಾರಗಳು ಸರ್ಕಸ್ ಮಾಡುತ್ತಿದ್ದವು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾಫಿಯಾ ಡಾನ್‌ಗಳು, ಒಣಗಿ ನಿಂತಿದ್ದ ಅಮೆಜಾನ್‌ನ ಹಲವು ಭಾಗಗಳಿಗೆ ಬೆಂಕಿ ಇಟ್ಟಿದ್ದರು. ಪರಿಣಾಮ ಅಮೆಜಾನ್ ಅರಣ್ಯದಲ್ಲಿ ಸುಮಾರು 40 ಸಾವಿರ ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಈ ಕೃತ್ಯಕ್ಕೆ ಬಲಿಯಾಗಿದ್ದು 22 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ. ಇಷ್ಟು ಕಾಡು ಭಸ್ಮವಾಗುವುದರ ಜೊತೆಗೆ ಲಕ್ಷಾಂತರ ಪ್ರಾಣಿಗಳು ಹಾಗೂ ಕಾಡು ಜನರು ಕೂಡ ಅಗ್ನಿಗೆ ಆಹುತಿಯಾಗಿದ್ದರು. ಈಗಲಾದರೂ ಬ್ರೆಜಿಲ್ ಸರ್ಕಾರ ಎಚ್ಚೆತ್ತು ಅಮೆಜಾನ್ ರಕ್ಷಣೆಗೆ ಮುಂದಾಗಬೇಕಿದೆ. ಇಲ್ಲವಾದರೆ ಗ್ಲೋಬಲ್ ವಾರ್ಮಿಂಗ್ ಎಫೆಕ್ಟ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.












Click it and Unblock the Notifications