ರಾಜ್ಯ ಬೆಳಗುವ ನಂದಾದೀಪ ಆರ್‌ಟಿಪಿಎಸ್ ಬಗ್ಗೆ ನಿಮಗೆಷ್ಟು ಗೊತ್ತು?, ಇಲ್ಲಿದೆ ಮಾಹಿತಿ
ರಾಯಚೂರು, ಅಕ್ಟೋಬರ್, 16: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ವಿದ್ಯುತ್ ಸ್ಥಾವರ ಆರ್‌ಟಿಪಿಎಸ್, ಇದು ಬರೀ ರಾಯಚೂರು ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಕ್ಕೆ ಬೆಳಕು ನೀಡುತ್ತಿದೆ. ಹಾಗಾದರೆ ಈ ವಿದ್ಯುತ್ ಸ್ಥಾವರದ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯಕ್ಕೆ ಬೆಳಕು ನೀಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಶಕ್ತಿನಗರದಲ್ಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಶಕ್ತಿ ಕೇಂದ್ರವಾಗಿದೆ. ಇದನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ ಸ್ಥಾಪಿಸಲಾದ ಮೊದಲ ಉಷ್ಣ ವಿದ್ಯುತ್ ಸ್ಥಾವರ ಇದಾಗಿದೆ.

ಕರ್ನಾಟಕ ವಿದ್ಯುತ್ ನಿಗಮವು , ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ನಡುವೆ (ಎಂಓಯು) ಸಹಿ ಹಾಕಿದ ನಂತರ 1978ರಲ್ಲಿ ಉಷ್ಣ ವಿದ್ಯುತ್ ಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಲಾಯಿತು. ಶಕ್ತಿನಗರದಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ 1986ರಲ್ಲಿ 403 ಕೋಟಿ ವೆಚ್ಚದಲ್ಲಿ 210 ಮೆಗಾವ್ಯಾಟ್ 1ನೇ ಮತ್ತು 2ನೇ ವಿದ್ಯುತ್ ಘಟಕ ಪೂರ್ಣ ಪೂರ್ಣಗೊಳಿಸಲಾಯಿತು.
1994 ರಲ್ಲಿ 983 ಕೋಟಿ ರೂಪಾಯಿ ವೆಚ್ಚದಲ್ಲಿ 3ನೇ ಮತ್ತು 4ನೇ ವಿದ್ಯುತ್ ಘಟಕ, 1999ರಲ್ಲಿ 1545 ಕೋಟಿ ವೆಚ್ಚದಲ್ಲಿ 5ನೇ ಮತ್ತು 6ನೇ ವಿದ್ಯುತ್ ಘಟಕ, 2002ರಲ್ಲಿ 613 ಕೋಟಿ ವೆಚ್ಚದಲ್ಲಿ 7ನೇ ವಿದ್ಯುತ್ ಘಟಕ ಮತ್ತು 2010ರಲ್ಲಿ 945 ಕೋಟಿ ವೆಚ್ಚದಲ್ಲಿ 250 ಮೆಗಾವ್ಯಾಟ್ ಸಾಮರ್ಥ್ಯದ 8ನೇ ವಿದ್ಯುತ್ ಘಟಕ ಪೂರ್ಣಗೊಳಿಸಲಾಯಿತು.

ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ಉತ್ಪಾದನೆಗೆ ಕಲ್ಲಿದ್ದಿಲನ್ನು ಬಳಸಲಾಗುತ್ತಿದೆ. ಪ್ರತಿದಿನಕ್ಕೆ ಒಟ್ಟು 8ವಿದ್ಯುತ್ ಘಟಕಗಳಿಂದ ಪೂರ್ಣ ಸಾಮರ್ಥ್ಯದ ಉತ್ಪಾದನೆಗೆ 25ರಿಂದ 30 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಿಲು ಬೇಕಾಗುತ್ತದೆ. ಕಲ್ಲಿದ್ದಿಲು ಗಣಿಗಳಾದ ವೆಸ್ಟನ್ ಕೋಲ್ ಫೀಲ್ಡ್, ಮಹಾನದಿ ಕೋಲ್ ಫೀಲ್ಡ್ ಮತ್ತು ಸಿಂಗರೇಣಿ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಿಲನ್ನು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಸರಬರಾಜಾದ ಕಲ್ಲಿದ್ದಲನ್ನು ಕಂಪ್ಯೂಟರೀಕೃತ ವ್ಯವಸ್ಥೆಯನ್ನು ಬಳಸಿದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಇದು ಕಲ್ಲಿದ್ದಲ್ಲಿನ ಸರಿಯಾದ ದರ್ಜೆಯ ಬಳಕೆಯನ್ನು ಖಚಿತಪಡಿಸುತ್ತದೆ.
ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಿಲನ್ನು ಪುಡಿ ಮಾಡಲಾಗುತ್ತದೆ ಮತ್ತು ನೀರನ್ನು ಉಗಿಯಾಗಿ ಪರಿವರ್ತಿಸುವ ಕುಲುಮೆಗಳಿಗೆ ನೀಡಲಾಗುತ್ತದೆ. ಈ ಉಗಿ ವಿದ್ಯುತ್ ಉತ್ಪಾದಿಸಲು ಟರ್ಬೈನ್‌ಗಳನ್ನು ಓಡಿಸುತ್ತದೆ. 1ರಿಂದ 7ವರೆಗೆ ವಿದ್ಯುತ್ ಘಟಕಗಳು ಪ್ರತಿಯೊಂದು ದಿನಕ್ಕೆ 5.04 ಮೆಗಾವ್ಯಾಟ್ ಯೂನಿಟ್ ಉತ್ಪಾದಿಸಬಹುದು ಮತ್ತು 8ನೇ ವಿದ್ಯುತ್ ಘಟಕ 6 ಮೆಗಾವ್ಯಾಟ್ ಯೂನಿಟ್ ಉತ್ಪಾದಿಸಬಹುದು. ಆದ್ದರಿಂದ ಒಟ್ಟು 8ವಿದ್ಯುತ್ ಘಟಕಗಳಿಂದ ಪೂರ್ಣ ಸಾಮರ್ಥ್ಯದ ಉತ್ಪಾದನೆಯಾದಲ್ಲಿ ರಾಜ್ಯಕ್ಕೆ ಶೇಕಡಾ 41.28ರಷ್ಟು ಮೆಗಾವ್ಯಾಟ್ ಯೂನಿಟ್ ಉತ್ಪಾದಿಸುತ್ತದೆ.
ಆರ್‌ಟಿಪಿಎಸ್‌ನಲ್ಲಿ ವಾರ್ಷಿಕವಾಗಿ ಸುಮಾರು 1.5 ಮಿಲಿಯನ್ ಟನ್ ಹಾರುಬೂದಿಯನ್ನು ಉತ್ಪಾದಿಸುತ್ತದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯಕ್ಕೆ ವಿದ್ಯುತ್ ನೀಡುವ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಘಟಕಗಳಿವೆ. ರಾಜ್ಯಕ್ಕೆ ಸರಬರಾಜಾಗುವ ವಿದ್ಯುತ್‌ನಲ್ಲಿ ಶೇಕಡಾ 42ರಷ್ಟು ಪಾಲು ಉತ್ಪಾದನೆಯಾಗುತ್ತಿದೆ. ನಿರಂತರ ವಿದ್ಯುತ್ ಸರಬರಾಜು ಆದರೆ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ಕೊಡುವ ಜಿಲ್ಲೆಯ ಜನತೆ ಸ್ವಲ್ಪ ನೆಮ್ಮದಿಯಿಂದ ಇರಬಹುದು.












Click it and Unblock the Notifications