Lalbagh: ಲಾಲ್‌ಬಾಗ್ ಫ್ಲವರ್ ಶೋಗೆ ಕೌಂಟ್‌ಡೌನ್: ಟಿಕೆಟ್ ದರ, ಪ್ರದರ್ಶನದ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯು ಇಂದು ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ. ವಿಶ್ವವಿಖ್ಯಾತ ಲಾಲ್‌ಬಾಗ್‌ನಲ್ಲಿ ಜರುಗುವ ಗಣರಾಜ್ಯೋತ್ಸವ 217ನೇ ಫಲಪುಷ್ಪ ಪ್ರದರ್ಶನವನ್ನು ಆದಿಕವಿ ಮಹರ್ಷಿ ವಾಲ್ಮೀಕಿ ಅವರ ವಿಷಯಧಾರಿತವಾಗಿ ಆಯೋಜಿಸಲಾಗುತ್ತಿದೆ. ಈ ಬಾರಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಜನವರಿ 16ರಿಂದ 27ರವರೆಗೆ ಫಲಪುಷ್ಪ ಪ್ರದರ್ಶನ ನೆರವೇರಲಿದೆ.
ಜನವರಿ 16ರಂದು ಬೆಳಿಗ್ಗೆ 10 ಗಂಟೆಗೆ ಈ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಉಪಸ್ಥಿತಿ ಇರಲಿದ್ದಾರೆ. ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋಗೆ ಬರುವ ನಿರೀಕ್ಷೆ ಇದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗಾಜಿನ ಮನೆಯ ಪ್ರದೇಶದಲ್ಲಿ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂವಿನ ಜೋಡಣೆ ಹಾಗೂ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯು ಗಾಜಿನಮನೆಯ ಆವರಣದಲ್ಲಿರಲಿದೆ. ಒಟ್ಟಾರೆ, ಇದಕ್ಕೆ 1.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂವುಗಳು ಹಾಗೂ ಎಲೆ ಜಾತಿಯ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಗಾತ್ರದ ವಾಲ್ಮೀಕಿ ಅವರ ಮಾದರಿ ಇರಲಿದೆ.
ಗಾಜಿನಮನೆಯ ಕೇಂದ್ರಭಾಗದ ಹಿಂಬದಿಗೆ ರಾಮಾಯಣದ ಪಂಚವಟಿ ಬಿಂಬಿಸುವ 3ಡಿ ಕಲಾಕೃತಿ ಹಾಗೂ ಚಿತ್ರಕಲಾ ಕೃತಿಗಳನ್ನು ಅನಾವರಣಗೊಳಿಸಲಾಗುವುದು. ಜೊತೆಗೆ ವಾಲ್ಮೀಕಿ ಆಶ್ರಮದ ಪುಷ್ಪ ಮಾದರಿ ಹಾಗೂ ರಾಮಾಯಣ ಮೂಲ ಕಾರಣವಾದ ಸನ್ನಿವೇಶಗಳನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ವಿಶೇಷ ಕುಠೀರ ವಿನ್ಯಾಸದ ವರ್ಟಿಕಲ್ ಗಾರ್ಡನ್ ಮಾದರಿ ಹಾಗೂ ವಾಲ್ಮೀಕಿ ರಾಮಾಯಣದ ಕಲಾಕೃತಿಗಳು, ಹತ್ತಕ್ಕೂ ಹೆಚ್ಚು ಪುಷ್ಪ ಪಿರಮಿಡ್‌ಗಳು, ಮಹರ್ಷಿ ವಾಲ್ಮೀಕಿ ಶ್ರೀರಾಮಾಯಣದ ಆದಿ ಕಾವ್ಯದ ಚಿತ್ರಗಳು, ಪ್ಯಾಲುಡೇರಿಯಂ ಪರಿಕಲ್ಪನೆಯ ಅನಾವರಣ ಸೇರಿದಂತೆ ಹಲವು ವೈಶಿಷ್ಟ್ಯಗಳಿರಲಿವೆ.

ಗಾಜಿನ ಮನೆಯ ಹೊರಭಾಗದಲ್ಲಿ ಪುಷ್ಪಗಳಿಂದ ಅಲಂಕರಿಸಿದ ರಾಷ್ಟ್ರಪಕ್ಷಿ ನವಿಲು, ಹೂವಿನ ಕಮಾನುಗಳು, ತೂಗುವ ಹೂಗಳು, ಸಸ್ಯ ಸಂತೆ, ಲಾಲ್‌ಬಾಗ್ ಜಲಪಾತ, ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಾಲ್ಮೀಕಿ ರಾಮಾಯಣದ ಸಂದೇಶಗಳು, ವನ್ಯಜೀವಿಗಳ ಪ್ರತಿರೂಪಗಳನ್ನು ಕೂಡ ಕಾಣಬಹುದು.
ಪ್ರವೇಶ ಶುಲ್ಕ ಎಷ್ಟು?
* ವಯಸ್ಕರಿಗೆ
ವಾರದ ದಿನಗಳಲ್ಲಿ -80 ರೂಪಾಯಿ
ವಾರಾಂತ್ಯದಲ್ಲಿ -100 ರೂಪಾಯಿ

* ಮಕ್ಕಳಿಗೆ (12 ವರ್ಷದೊಳಗಿನವರು)
ಪ್ರದರ್ಶನದ ಎಲ್ಲ ದಿನವೂ ಮಕ್ಕಳಿಗೆ ಪ್ರವೇಶ ದರ-30 ರೂಪಾಯಿ
1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬಂದರೆ ಉಚಿತ ಪ್ರವೇಶದ ವ್ಯವಸ್ಥೆ ಕೂಡ ಇದೆ. ಲಾಲ್‌ಬಾಗ್ ಒಳಗೆ ಯಾವುದೇ ತಿಂಡಿ ತಿನಿಸುಗಳನ್ನು ತರುವಂತಿಲ್ಲ. ಪ್ಲಾಸ್ಟಿಕ್ ಕೈಚೀಲಗಳು ಕೂಡ ನಿಷೇಧ. ಲಾಲ್‌ಬಾಗ್‌ನ ಎಲ್ಲ ನಾಲ್ಕು ಪ್ರವೇಶ ದ್ವಾರಗಳ ಬಳಿಯೂ ಪಾರ್ಕಿಂಗ್ ನಿಷೇಧಿಸಲಾಗಿದೆ. ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ಕೂಡ ಇರಲಿದೆ.












Click it and Unblock the Notifications