ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಸಂಗ್ರಾಮ: ಅರುಣಾ ಅಸಫ್ ಅಲಿ ಕೊಡುಗೆ ಸ್ಮರಣಾರ್ಹ

|
Google Oneindia Kannada News

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹಲವರ ಕೊಡುಗೆ ಇದೆ. ಅವರ ಪೈಕಿ ಹತ್ತಾರು ಮಂದಿಯ ಹೆಸರು ಜಗಜ್ಜನಿತವಾಗಿದೆ. ಆದರೆ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹಾಗೂ ಬಹಳ ಗಾಢ ಪರಿಣಾಮಗಳನ್ನು ಬೀರಿದ ಇನ್ನೂ ಹಲವು ಸ್ವಾತಂತ್ರ್ಯ ಸೇನಾನಿಗಳ ಹೆಸರು ಎಲೆಮರೆಕಾಯಿಯಂತೆ ಮರೆಯಾಗಿಯೇ ಉಳಿದುಹೋಗಿವೆ.

ಹಿಂದಿನ ಒಂದು ಲೇಖನದಲ್ಲಿ ಗುಲಾಬ್ ಕೌರ್ ಎಂಬ ವೀರವನಿತೆಯ ಬಗ್ಗೆ ಬರೆದಿದ್ದೆವು. ಈಗ ಅರುಣಾ ಅಸಫ್ ಅಲಿ ಎಂಬ ಇನ್ನೊಬ್ಬ ಮಹಿಳೆಯ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಬಹುದು.

ಗುಲಾಬ್ ಕೌರ್: ಫಿಲಿಪ್ಪೈನ್ಸ್‌ನಿಂದ ಭಾರತಕ್ಕೆ ಬಂದು ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವಂತೆಗುಲಾಬ್ ಕೌರ್: ಫಿಲಿಪ್ಪೈನ್ಸ್‌ನಿಂದ ಭಾರತಕ್ಕೆ ಬಂದು ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವಂತೆ

ಭಾರತೀಯ ಸ್ವಾತಂತ್ರ್ಯ ಹೋರಾಟದ ವೀರನಾರಿ ಎಂದೇ ಕರೆಯಲಾಗುತ್ತಿದ್ದ ಅರುಣಾ ಅಸಫ್ ಅಲಿ ಹೆಸರು ಈಗ ಬಹುತೇಕ ಜನರ ಸ್ಮರಣೆಯಿಂದ ಮರೆಯಾಗಿ ಹೋಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ್ದ ಪಾತ್ರ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ತೋರಿದ ಧೈರ್ಯ ಇವ್ಯಾವುದೂ ಮರೆಯಲು ಸಾಧ್ಯವಿಲ್ಲದ ಸಾಹಸಗಳು.

ಅರುಣಾ ಅಸಫ್ ಅಲಿ ಅವರು ಯಾರು? ಅವರ ಹೋರಾಟಗಳೇನು? ಇತ್ಯಾದಿ ವಿವರ ಇಲ್ಲಿದೆ:

ಅರುಣಾ ಅಸಫ್ ಅಲಿ ಯಾರು?

ಅರುಣಾ ಅಸಫ್ ಅಲಿ ಯಾರು?

ಅರುಣಾ ಅಸಫ್ ಅಲಿ ಹುಟ್ಟಿದ್ದು 1909 ಜುಲೈ 16ರಂದು. ಬೆಂಗಾಳಿ ಬ್ರಾಹ್ಮಣ ಕುಟುಂಬದವರಾದರೂ ಜನಿಸಿದ್ದು ಪಂಜಾಬ್ ಪ್ರಾಂತ್ಯದಲ್ಲಿ. ಅವರ ತಂದೆ ಉಪೇಂದ್ರನಾಥ್ ಗಂಗೂಲಿ ಈಗಿನ ಬಾಂಗ್ಲಾದೇಶದಲ್ಲಿರುವ ಬಾರಿಸಾಲ್ ಜಿಲ್ಲೆಯ ಮೂಲದವರು.

ಓದಿನ ಬಳಿಕ ಅವರು ಕಲ್ಕತ್ತಾದಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ತನಗಿಂತ 20 ವರ್ಷ ದೊಡ್ಡವರಾದ ಕಾಂಗ್ರೆಸ್ ಪಕ್ಷದ ನಾಯಕ ಅಸಫ್ ಅಲಿ ಪರಿಚಯವಾಗುತ್ತದೆ. ಇಬ್ಬರೂ ಪ್ರೀತಿಸಿ 1928ರಲ್ಲಿ ವಿವಾಹವಾಗುತ್ತಾರೆ. ಅಂತರ್ಧರ್ಮೀಯ ಹಾಗೂ ವಯಸ್ಸಿನ ಅಂತರದ ಕಾರಣಕ್ಕೆ ಅರುಣಾ ಕುಟುಂಬದವರು ಮದುವೆಗೆ ವಿರೋಧ ಮಾಡುತ್ತಾರೆ. ಅದರೂ ಅದನ್ನು ಲೆಕ್ಕಿಸದೇ ಇಬ್ಬರೂ ಮದುವೆಯಾಗುತ್ತಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ

ಸ್ವಾತಂತ್ರ್ಯ ಹೋರಾಟದಲ್ಲಿ

ಅಸಫ್ ಅಲಿ ಅವರನ್ನು ಮದುವೆಯಾದ ಬಳಿಕ ಅರುಣಾ ಕಾಂಗ್ರೆಸ್ ಪಕ್ಷದ ಸದಸ್ಯೆಯಾಗುತ್ತಾರೆ. ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅವರ ಬಂಧನವಾಗುತ್ತದೆ. ಆದರೆ, ನಂತರ ಬೇರೆಲ್ಲಾ ರಾಜಕೀಯ ಕೈದಿಗಳನ್ನು ಬ್ರಿಟಿಷರು ಬಿಡುಗಡೆ ಮಾಡಲು ಮುಂದಾದರೂ ಅರುಣಾ ಅಸಫ್ ಅಲಿಗೆ ಬಿಡುಗಡೆ ಸಿಗುವುದಿಲ್ಲ. ಅರುಣಾ ಬಿಡುಗಡೆ ಆಗದಿದ್ದರೆ ನಾವೂ ಜೈಲಿಂದ ಹೊರಗೆ ಹೋಗುವುದಿಲ್ಲ ಎಂದು ಮಹಿಳಾ ಸಹ-ಕೈದಿಗಳು ಪಟ್ಟು ಹಿಡಿಯುತ್ತಾರೆ. ಕೊನೆಗೆ ಮಹಾತ್ಮ ಗಾಂಧಿ ಮಧ್ಯಪ್ರವೇಶಿಸಿ ಮಹಿಳಾ ಕೈದಿಗಳಿಗೆ ಮನವೊಲಿಸುತ್ತಾರೆ. ಅದಾದ ನಂತರ ಸಾರ್ವಜನಿಕ ಪ್ರತಿಭಟನೆ ಹೆಚ್ಚಿದ ಕಾರಣ ಬ್ರಿಟಿಷರು ಅರುಣಾ ಅಸಫ್ ಅಲಿಯನ್ನು ಜೈಲಿನಿಂದ ಬಿಡುಗಡೆ ಮಾಡಬೇಕಾಗುತ್ತದೆ.

1932ರಲ್ಲಿ ಅರುಣಾ ಅಸಫ್ ಅಲಿಯನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇಡಲಾಗುತ್ತದೆ. ಅಲ್ಲಿ ರಾಜಕೀಯ ಕೈದಿಗಳನ್ನು ಹೀನವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಪಾದಿಸಿ ಅರುಣಾ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಇವರ ಹೋರಾಟದ ಫಲವಾಗಿ ತಿಹಾರ್ ಜೈಲಿನಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ.

ಕ್ವಿಟ್ ಇಂಡಿಯಾ ಚಳವಳಿ ನಾಯಕಿ

ಕ್ವಿಟ್ ಇಂಡಿಯಾ ಚಳವಳಿ ನಾಯಕಿ

ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಿರುವುದು ಕ್ವಿಟ್ ಇಂಡಿಯಾ ಚಳವಳಿ. 1942 ಆಗಸ್ಟ್ 8ರಂದು (ಇದೇ ದಿನ) ಅಖಿಲ ಭಾರತ ಕಾಂಗ್ರೆಸ್ ಸಮಿತಿ ಬಾಂಬೆ ನಗರದಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಎಂಬ ಹೋರಾಟದ ನಿರ್ಣಯ ಹೊರಡಿಸಲಾಗುತ್ತದೆ. ಬ್ರಿಟಿಸ್ ಸರಕಾರ ಈ ಹೋರಾಟವನ್ನು ಅರಂಭದಲ್ಲೇ ಮೊಟಕುಹಾಕಲು ಕಾಂಗ್ರೆಸ್‌ನ ಎಲ್ಲಾ ಪ್ರಮುಖ ಮುಖಂಡರನ್ನು ಬಂಧಿಸುತ್ತದೆ.

ಆಗ ಯುವತಿ ಅರುಣಾ ಅಸಫ್ ಅಲಿ ಆಗಸ್ಟ್ 9ರಂದು ಕಾಂಗ್ರೆಸ್ ಸಭೆಯನ್ನು ಮುನ್ನಡೆಸುತ್ತಾರೆ. ಆಗ ಅಧಿಕೃತವಾಗಿ ಕ್ವಿಟ್ ಇಂಡಿಯಾ ಚಳವಳಿ ಆರಂಭಗೊಳ್ಳುತ್ತದೆ. ಅಂದಿನ ಸಭೆಯಲ್ಲಿ ಪಾಲ್ಗೊಂಡವರ ಮೇಲೆ ಬ್ರಿಟಿಷರು ಗುಂಡಿನ ದಾಳಿ ನಡೆಸುತ್ತಾರೆ. ಆದರೂ ಅರುಣಾ ಮತ್ತಿತರರು ಎದೆಗುಂದುವುದಿಲ್ಲ. ಅರುಣಾ ತೋರಿದ ಧೈರ್ಯ ಅಂದಿನ ಕಾಂಗ್ರೆಸ್ ನಾಯಕರನ್ನು ಅಚ್ಚರಿಗೊಳಿಸಿತ್ತು. 1942ರ ಚಳವಳಿಯ ನಾಯಕಿ ಎಂದೇ ಅರುಣಾರನ್ನು ಕರೆಯಲಾಗುತ್ತದೆ.

ಅರುಣಾ ಅಸಫ್ ಅಲಿಯನ್ನು ಬಂಧಿಸಲು ಬ್ರಿಟಿಷ್ ಸರಕಾರ ವಾರಂಟ್ ಹೊರಡಿಸಿದರೂ ಇವರು ಭೂಗತರಾಗಿದ್ದುಕೊಂಡು ತಪ್ಪಿಸಿಕೊಂಡಿದ್ದರು. ಆ ನಡುವೆಯೂ ರಾಮಮನೋಹರ್ ಲೋಹಿಯಾ ಜೊತೆ ಸೇರಿ ಇಂಕಿಲಾಬ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗಟ್ಟಿನಿಂದ ಬರುವಂತೆ ಪ್ರೇರೇಪಿಸುತ್ತಿದ್ದರು.

ಇದರ ಜೊತೆಗೆ ಅವರು ಹರಿಜನ ಮೊದಲಾದ ಸಾಮಾಜಿಕ ವಿಚಾರಗಳಲ್ಲೂ ಪರಿವರ್ತನೆಗೆ ಹೋರಾಟ ಮಾಡುತ್ತಿದ್ದರು.

ಸ್ವಾತಂತ್ರ್ಯದ ಬಳಿಕ

ಸ್ವಾತಂತ್ರ್ಯದ ಬಳಿಕ

ಅರುಣಾ ಅಸಫ್ ಅಲಿ ಕಾಂಗ್ರೆಸ್ ಸದಸ್ಯೆಯಾದರೂ ಕಾರ್ಲ್ ಮಾರ್ಕ್ಸ್ ವಿಚಾರಗಳಿಂದ ಪ್ರಭಾವಿತರಾದವರು. ಹೀಗಾಗಿ, ಕಾಂಗ್ರೆಸ್ ಪಕ್ಷದೊಳಗೆ ಅವರು ಸಮಾಜವಾದಿ ಎನಿಸಿದ್ದರು. ೧೯೪೮ರಲ್ಲಿ ಸೋಷಿಯಲಿಸ್ಟ್ ಪಕ್ಷ ಸೇರಿಕೊಡರು. ಕೆಲ ವರ್ಷಗಳ ಬಳಿಕ ಭಾರತೀಯ ಕಮ್ಯೂನಿಸ್ಟ್ ಪಕ್ಷ ಸೇರಿದರು. 1996 ಜುಲೈ 29ರಂದು ಅವರು 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಅರುಣಾ ಅಸಫ್ ಅಲಿ ಅವರಿಗೆ 1964ರಲ್ಲಿ ಇಂಟರ್ನ್ಯಾಷನಲ್ ಲೆನಿನ್ ಶಾಂತಿ ಪ್ರಶಸ್ತಿ, 1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪ್ರಾಪ್ತವಾಗಿತ್ತು.

1997ರಲ್ಲಿ ಮರಣೋತ್ತರ ಗೌರವವಾಗಿ ಭಾರತ್ ರತ್ನ ಪ್ರಶಸ್ತಿ ನೀಡಲಾಗಿದೆ. 1998ರಲ್ಲಿ ಅವರ ಸ್ಮರಣಾರ್ಥ ಅಂಚೆ ಸ್ಟ್ಯಾಂಪ್ ಹೊರಡಿಸಲಾಗಿತ್ತು. ನವದೆಹಲಿಯಲ್ಲಿ ಒಂದು ರಸ್ತೆಗೆ ಅರುಣಾ ಅಸಫ್ ಅಲಿ ಮಾರ್ಗ್ ಎಂದು ಇಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Aruna Asaf Ali is mostly remembered for her leading role in 1942 Quit India Movement. She also participated in various activities for freedom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X