pre-wedding shoot: ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗೋ ಮುನ್ನ ಹುಷಾರ್, ನಿಮಗೂ ಹೀಗೆ ಆಗಬಹುದು
ಇತ್ತೀಚೆಗಂತೂ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸದೆ ಮದುವೆಗಳು ನಡೆಯುತ್ತಿಲ್ಲ. ಮೊದಲೆಲ್ಲ ಯಾರೋ ಕೆಲವರಷ್ಟೇ ಈ ಪ್ರೀವೆಡ್ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ತುಂಬಾ ಶ್ರೀಮಂತರಷ್ಟೇ ಪ್ರೀವೆಡ್ ಶೂಟ್ ಮಾಡಿಸಿಕೊಂಡು ಮದುವೆಯ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದರು. ಆದರೆ, ಈಗಂತೂ ಮದುವೆ ಸಿಂಪಲ್ ಆಗಿ ಮಾಡಿಕೊಂಡ್ರೂ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲೇಬೇಕು ಎಂದು ಜೋಡಿಗಳು ಮೊದಲೇ ಫಿಕ್ಸ್ ಆಗ್ತಾರೆ.
ಹಾಗಾಗಿ ಈಗ ಫೋಟೋಗ್ರಫಿ ಜೊತೆಗೆ ಪ್ರೀ ವೆಡ್ಡಿಂಗ್ ಕೂಡ ಟ್ರೆಂಡಾಗಿಬಿಟ್ಟಿದೆ. ಇದರಿಂದ ಸ್ಟುಡಿಯೋದವರು ಕೂಡ ಮದುವೆಗೆ ಪ್ರೀವೆಡ್ ಶೂಟ್, ಪೋಸ್ಟ್ ವೆಡ್ ಶೂಟ್ ಪ್ಯಾಕೇಜ್‌ಗಳ ಆಫರ್ ಕೊಡುತ್ತಾರೆ. ಇದೊಂದು ದೊಡ್ಡ ಕ್ಷೇತ್ರವಾಗಿಯೂ ಬೆಳೆದಿದೆ. ಮಾರುಕಟ್ಟೆಯಲ್ಲಿ ಈಗ ಫೋಟೋಶೂಟ್ ಮಾಡುವವರಿಗೂ ಸಖತ್ ಡಿಮ್ಯಾಂಡ್ ಕೂಡ ಇದೆ.

ಆದರೆ, ಪ್ರೀವೆಡ್ ಶೂಟ್ ಮಾಡುವವರಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಘಟನೆಯೊಂದು ಮೈಸೂರಿನಲ್ಲಿ ವರದಿಯಾಗಿದ್ದು, ಜನ ಹೀಗೂ ಇರ್ತಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ನಮ್ಮದು ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವುದಿದೆ ಎಂದು ಛಾಯಾಗ್ರಾಹಕರನ್ನು ಕರೆಸಿಕೊಂಡಿರುವ ಆಸಾಮಿ ಬಳಿಕ ಅವರಿಗೆ ಅನ್ನ ಹಾಕುತ್ತಿದ್ದ ಕ್ಯಾಮರಾಗೆ ಕನ್ನ ಹಾಕಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಹೌದು, ಮೈಸೂರಿನ ಈ ಘಟನೆ ನಡೆದಿದೆ. ಪ್ರೀವೆಡ್ ಶೂಟಿಂಗ್ ಆರ್ಡರ್ ಸಿಕ್ತಲ್ಲಾ ಎಂದು ಖುಷಿಯಿಂದ ಬಂದಿದ್ದ ಫೋಟೋಗ್ರಾಫರ್ ಕೊನೆಗೆ ತನ್ನ ಕ್ಯಾಮೆರಾವನ್ನೇ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ವ್ಯಕ್ತಿಯೊಬ್ಬ ಮೈಸೂರಿನ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋಗ್ರಾಫರ್‌ಗೆ ಕರೆ ಮಾಡಿದ್ದು, ನಿಮ್ಮ ಇನ್‌ಸ್ಟಾಗ್ರಾಂ ನೋಡಿದ್ದು, ಪ್ರೀ ವೆಡ್ಡಿಂಗ್ ಶೂಟ್ ಮಾಡಿಸೋಣ ಎಂದಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದ.

ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಅಲ್ಲಿಗೆ ಕರೆಸಿಕೊಂಡಿದ್ದ. ಕೊನೆಗೆ 75,000 ರೂಪಾಯಿಗೆ ಆರ್ಡರ್ ಬುಕ್ ಮಾಡಿಕೊಂಡಿದ್ದ. ಅಡ್ವಾನ್ಸ್ ಎಂದು 2,000 ರೂಪಾಯಯನ್ನೂ ಕೊಟ್ಟಿದ್ದ. ಇದನ್ನು ನಂಬಿದ್ದ ಫೋಟೋಗ್ರಾಫರ್ ಆರ್ಡರ್ ಸಿಕ್ಕ ಖುಷಿಯಲ್ಲಿ ಅವರು ತಿಳಿಸಿದ್ದ ವಿಳಾಸಕ್ಕೆ ಕ್ಯಾಮರಾದೊಂದಿಗೆ ಬಂದಿದ್ದ.
ಮೈಸೂರಿಗೆ ಬಂದಿದ್ದ ಫೋಟೋಗ್ರಾಫರ್‌ಗೆ ತಾನೇ ಒಂದು ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿ ಅಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದ. ನಂತರ ನಮ್ಮವರು ಇಲ್ಲೇ ಹೊರಗಿದ್ದಾರೆ, ಅವರೊಂದಿಗೆ ಊಟ ಮುಗಿಸಿ ಬನ್ನಿ, ಬಳಿಕ ಫೋಟೋಶೂಟ್‌ಗೆ ಲೊಕೇಷನ್‌ಗಳನ್ನು ತೋರಿಸಿ ಎಂದು ಫೋಟೋಗ್ರಾಫರ್‌ನನ್ನ ಹೊರಗಡೆ ಕಳಿಸಿದ್ದ. ಈ ವೇಳೆ ಕ್ಯಾಮೆರಾ ಲಾಡ್ಜ್‌ನಲ್ಲೇ ಉಳಿದಿತ್ತು.
ಸ್ವಲ್ಪ ಸಮಯದ ನಂತರ ಫೋಟೋಗ್ರಾಫರ್ ಮತ್ತೆ ಬಂದು ರೂಂನಲ್ಲಿ ನೋಡಿದಾಗ ತನ್ನ ಕ್ಯಾಮರಾ ಇರಲಿಲ್ಲ. ಬಳಿಕ ಕರೆ ಮಾಡಿದರೆ, ಆತನ ಫೋನ್ ಕೂಡ ಸ್ವಿಚ್ ಆಫ್ ಬಂದಿತ್ತು. ಇದರಿಂದ ಗಾಬರಿಗೊಂಡ ಫೋಟೋಗ್ರಾಫರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು, ಅದರಂತೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಕ್ಯಾಮರಾದ ಬೆಲೆ ಸುಮಾರು 8 ಲಕ್ಷ ರೂಪಾಯಿ ಎನ್ನಲಾಗಿದೆ. ಫೋಟೋಶೂಟ್‌ಗೆ ಕರೆಸಿ ಕ್ಯಾಮರಾದೊಂದಿಗೆ ಜೂಟ್ ಆಗಿರೋ ಆಸಾಮಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications