ಪಾನಿಪುರಿ ಮಾರುವವನ ವರ್ಷದ ಆದಾಯ ₹40 ಲಕ್ಷ, ತೆರಿಗೆ ನೋಟಿಸ್ ವೈರಲ್
ಮೊದಲೆಲ್ಲ ಚೆನ್ನಾಗಿ ಓದಿ ಒಳ್ಳೆ ನೌಕರಿ ಪಡೆದರಷ್ಟೇ ಕೈತುಂಬಾ ಸಂಬಳ ಎನ್ನುವ ಮಾತಿತ್ತು. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಿಕ್ಷಣ ಪಡೆದರೂ ಒಂದೊಳ್ಳೆ ಕೆಲಸ ಕನಸಿನ ಮಾತು. ಒಂದು ವೇಳೆ ಕೆಲಸ ಸಿಕ್ಕರೂ ಅದಕ್ಕೆ ಕೊಡೋ ಸಂಬಳ ಬಿಡಿಗಾಸು. ಇನ್ನು ಈ LPA (Lakh Per Annum) ಲೆಕ್ಕಾಚಾರದ ಲೋಕದಲ್ಲಿ ಒಳ್ಳೆ ಸಂಬಳದ ಕನಸು ಈಡೇರುವುದು ಕೆಲವರಿಗೆ ಮಾತ್ರ.
ಮೊದಲೆಲ್ಲ ನಿನ್ ಸಂಬಳ ಎಷ್ಟು ಎಂದು ಕೇಳುತ್ತಿದ್ದವರು ಈಗೆಲ್ಲ ನಿನ್ನ ಎಲ್‌ಪಿಎ ಎಷ್ಟು ಎನ್ನುವ ಟ್ರೆಂಡ್‌ಗೆ ಬದಲಾಗಿದ್ದಾರೆ. ಸದ್ಯ ಐಟಿಬಿಟಿ, ಸಾಫ್ಟ್‌ವೇರ್ ಕಂಪನಿಗಳಲ್ಲಿ ದುಡಿದರೂ ಕೆಲವರಿಗೆ ನೆಮ್ಮದಿಯ ಸಂಬಳ ಸಿಗುತ್ತಿಲ್ಲ ಎನ್ನುವ ಅಳಲಿದೆ. ಇದರಿಂದ ಬೇಸತ್ತವರು ತಮಾಷೆಗೆ, ಮೊದಲು ಕೆಲಸ ಬಿಟ್ಟು ನೆಮ್ಮದಿಯಾಗಿ ಯಾವುದಾದ್ರೂ ಪಾನಿಪುರಿ ಅಂಗಡಿ ಇಟ್ಕೋತೀನಿ ಅಂತಿರ್ತಾರೆ.

ಆದರೆ ಈ ಕೆಲಸ ಕೀಳು ಎನ್ನುವ ಭಾವನೆ ಕೆಲವರಲ್ಲಿ ಈಗಲೂ ಇದೆ. ಇಂತವರಿಗೆ ಸೆಡ್ಡು ಹೊಡೆಯುವ ಕೆಲಸವನ್ನು ಪಾನಿಪುರಿ ಅಂಗಡಿಯವನೇ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಪಾನಿಪುರಿ ಮಾರುವವನೊಬ್ಬ ವಾರ್ಷಿಕವಾಗಿ ಬರೋಬ್ಬರಿ ₹40 ಲಕ್ಷ ವಹಿವಾಟು ನಡೆಸಿದ್ದಾನೆ ಎನ್ನುವ ಶಾಕಿಂಗ್ ವಿಚಾರದ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಚಾಲ್ತಿಯಲ್ಲಿವೆ.
ಪಾನಿಪುರಿ ಅಂಗಡಿಯವನ ವಾರ್ಷಿಕ ಆದಾಯ ಕಂಡು ತೆರಿಗೆ ಅಧಿಕಾರಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಇಷ್ಟೆಲ್ಲ ವ್ಯವಹಾರ ನಡೆಸಿ ಯಾಕಪ್ಪಾ ಜಿಎಸ್‌ಟಿ ಕಟ್ಟುತ್ತಿಲ್ಲ? ಎಂದು ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಈ ನೋಟಿಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಟಿಸ್‌ನಲ್ಲಿ ಪಾನಿಪುರಿ ಅಂಗಡಿಯವನ 2023-2024ನೇ ಸಾಲಿನ ವಹಿವಾಟು ಬರೋಬ್ಬರಿ 40,11,019 ರೂಪಾಯಿ ಎಂದು ಉಲ್ಲೇಖಿಸಿದೆ.

ಈ ವೈರಲ್ ಆಗಿರುವ ನೋಟಿಸ್ ತಮಿಳುನಾಡಿನದ್ದು ಎಂದು ಹೇಳಲಾಗುತ್ತಿದೆ. ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ...ಯಾವುದೇ ಜಿಎಸ್‌ಟಿ ಪಾವತಿಸಿಲ್ಲ, ಜಿಎಸ್‌ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಿರುವ ತೆರಿಗೆ ಅಧಿಕಾರಿಗಳು, ನಿಮ್ಮ ರೋಜರ್‌ಪೇ ಹಾಗೂ ಫೋನ್‌ಪೇ ಮಾಹಿತಿ ಆಧರಿಸಿ ಈ ನೋಟಿಸ್ ನೀಡುತ್ತಿದ್ದೇವೆ. ನೀವು ಸರಕು ಮತ್ತು ಸೇವೆ ಹೊರತುಪಡಿಸಿ ಯುಪಿಐ ವಹಿವಾಟು ನಡೆಸಿದ್ದೀರಿ. ನಿಮ್ಮ ಖಾತೆಗೆ ಬರೋಬ್ಬರಿ 40,11,019 ರೂಪಾಯಿ ಹಣ ಪಾವತಿಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ನೀವು ತಮಿಳುನಾಡಿನ ಜಿಎಸ್‌ಟಿ ನಿಯಮಗಳಿಗೆ ನೋಂದಣಿ ಮಾಡಿಸಿಲ್ಲ. ನಿಯಮದ ಪ್ರಕಾರ ಜಿಎಸ್‌ಟಿ ಇಲ್ಲದೆ ಇಷ್ಟು ಪ್ರಮಾಣದ ಪಾವತಿ ಮಾಡಿರುವುದು ಕಾನೂನಿನ ಪ್ರಕಾರ ಅಪರಾಧ. ಈ ನಿಯಮ ಉಲ್ಲಂಘನೆಗೆ 10,000 ರೂಪಾಯಿ ದಂಡ ಅಥವಾ ತೆರಿಗೆ ಪ್ರಮಾಣದ ಶೇ 10ರಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿದೆ.
ಈ ನೋಟಿಸ್ ಅನ್ನು ಜಗದೀಶ್ ಚತುರ್ವೇದಿ ಎಂಬುವವರು ಎಕ್ಸ್ ಹಾಗೂ ಲಿಂಕ್‌ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ. ಪಾನಿಪುರಿ ಅಂಗಡಿಯವನ ವಾರ್ಷಿಕ ಆದಾಯ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಗಳು ಕೂಡ ಈತನ ಮುಂದೆ ನಾವೆಲ್ಲ ಬಚ್ಚಾ ಎಂದು ಬೇಸರಪಟ್ಟುಕೊಂಡಿದ್ದಾರೆ. ಕೆಲವರು ಈ ನೋಟಿಸ್ ನಕಲಿ ಇದ್ದಂತಿದೆ ಎಂದು ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪಾನಿಪುರಿ ಮಾರುವವರ ಸಂಪೂರ್ಣ ಮಾಹಿತಿ ಎಲ್ಲಿಯೂ ನಮೂದಾಗಿಲ್ಲ. ಹಾಗಾಗಿ ಇದು ಅಸಲಿಯೋ, ನಕಲಿಯೋ ಎನ್ನುವುದು ಇನ್ನೂ ದೃಢವಾಗಿಲ್ಲ. ಆದರೂ ಎಲ್ಲರ ಚಿತ್ತ ಆತನ 40 ಲಕ್ಷ ರೂಪಾಯಿ ಆದಾಯತ್ತ ಹರಿದಿದೆ.












Click it and Unblock the Notifications