Old Age:ವೃದ್ಧಾಶ್ರಮಕ್ಕೆ ಹೆತ್ತವರನ್ನು ಕಳುಹಿಸಿದರೆ ತಪ್ಪೇನಿಲ್ಲ!; ನಾರ್ವೆಯಲ್ಲಿರುವ ಭಾರತೀಯನ ಪೋಸ್ಟ್ ವೈರಲ್
ನಾರ್ವೆಯಲ್ಲಿ ವಾಸಿಸುತ್ತಿರುವ ಭಾರತೀಯ ವ್ಯಕ್ತಿಯೊಬ್ಬ, ಭಾರತ ಮತ್ತು ನಾರ್ವೆಯಲ್ಲಿ ವಯಸ್ಸಾದ ಪೋಷಕರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎನ್ನುವುದನ್ನು ಹೋಲಿಕೆ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
Old Age:ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ ಪೋಸ್ಟ್
ವಿನೋದ್ ಎನ್ನುವ ವ್ಯಕ್ತಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ನಾರ್ವೆಯಲ್ಲಿ ವಯಸ್ಸಾದ ತಂದೆ ತಾಯಿ ಸಾಮಾನ್ಯವಾಗಿ ತಮ್ಮ ಮಕ್ಕಳೊಂದಿಗೆ ಇರುವುದಿಲ್ಲ. ಅವರು ತಮ್ಮ ಮಕ್ಕಳ ಜೊತೆ ಅವರ ಮನೆಯಲ್ಲಿ ಇರುವುದಕ್ಕೆ ಹೋಗುವುದಿಲ್ಲ. ಬದಲಿಗೆ ತಮ್ಮ ಸ್ವಂತ ಮನೆಗಳಲ್ಲಿಯೇ ತಮ್ಮ ವಾಸವನ್ನು ಮುಂದುವರೆಸುತ್ತಾರೆ. ಅಥವಾ ಕೇರ್ ಹೋಂಗಳಿಗೆ ಹೋಗಿ ಅಲ್ಲಿ ಕಾಲ ಕಳೆಯುತ್ತಾರೆ ಎಂದು ಹೇಳಿದ್ದಾರೆ.

ಕೇರ್ ಹೋಂನಲ್ಲಿರುವ ದಾದಿಯರು ಅವರ ಆರೋಗ್ಯ, ಊಟ, ತಿಂಡಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಇಲ್ಲಿ ಅವರ ಘನತೆ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅಂದ ಹಾಗೆ ಹೆತ್ತವರು ಮತ್ತು ಮಕ್ಕಳು ಒಟ್ಟಿಗೆ ಇಲ್ಲ ಎಂದ ಮಾತ್ರಕ್ಕೆ ಕುಟುಂಬಗಳು ದೂರವಾಗಿವೆ ಅವರಲ್ಲಿ ಮನಸ್ತಾಪ ಇದೆ ಎಂದರ್ಥವಲ್ಲ ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ.
Old Age:ಇಲ್ಲಿ ಮುಖ್ಯವಾಗಿರುವುದು ಪ್ರೀತಿ
ವೀಕ್ ಎಂಡ್‌ಗಳಲ್ಲಿ ಅವರು ತಮ್ಮ ಮೊಮ್ಮಕ್ಕಳನ್ನು ಭೇಟಿಯಾಗುತ್ತಾರೆ. ಫ್ಯಾಮಿಲಿ ಗೆಟ್‌ಟುಗೆದರ್‌ಗಳಲ್ಲಿ ಭಾಗಿಯಾಗುತ್ತಾರೆ. ರಜಾದಿನಗಳಲ್ಲಿ ಒಟ್ಟಿಗೆ ಕಾಲ ಕಳೆಯುತ್ತಾರೆ. ಇಲ್ಲಿ ಪೋಷಕರನ್ನು ತಮ್ಮ ಮಕ್ಕಳ ಮೇಲೆ ಅವಲಂಬಿತರನ್ನಾಗಿ ಮಾಡುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ವಯಸ್ಸಾದ ಪೋಷಕರ ಸೌಕರ್ಯವು ಅವರ ಮಕ್ಕಳ ಆದಾಯ ಅಥವಾ ದೈನಂದಿನ ಆರೈಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಅವಲಂಬಿಸಿಲ್ಲ. ಮಗ ಎಷ್ಟು ಸಂಪಾದಿಸುತ್ತಾನೆ, ಮಗಳು ಎಷ್ಟು ಪ್ರೀತಿಸುತ್ತಾಳೆ, ಸೊಸೆ ಎಷ್ಟು ದಯೆ ತೋರಿಸ್ತಾಳೆ ಇದ್ಯಾವೂದೂ ಇಲ್ಲಿ ಮುಖ್ಯ ಅಲ್ಲವೇ ಅಲ್ಲ ಎಂದಿದ್ದಾರೆ.
Old Age:ಶುರುವಾಗುತ್ತದೆ ಸಾಮಾಜಿಕ ಟೀಕೆ
ಆದರೆ ಭಾರತದಲ್ಲಿ ಹಾಗಲ್ಲ, ಇಲ್ಲಿ ಈ ಪದ್ದತಿ ಸಂಪೂರ್ಣ ವಿರುದ್ದವಾಗಿವೆ ಎಂದು ವಿವರಿಸಿದ್ದಾರೆ. ನಮ್ಮ ದೇಶದಲ್ಲಿ ವಯಸ್ಸಾದ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಟ್ಟರೆ ಸಾಮಾಜಿಕ ಟೀಕೆಗೆ ಗುರಿಯಾಗಬೇಕಾಗಬಹುದು. ಹೋದವರು ಬಂದವರು ಎಲ್ಲರೂ ಇದೇ ವಿಷಯದ ಚರ್ಚೆಗೆ ಇಳಿದು ಬಿಡುತ್ತಾರೆ ಎಂದು ಹೇಳಿದ್ದಾರೆ.
ಒಟ್ಟಿಗೆ ಹತ್ತು ಹಲವು ಜವಾಬ್ದಾರಿ
ಭಾರತೀಯ ಕುಟುಂಬಗಳು ಉದ್ಯೋಗಗಳು, ಮನೆ ಸಾಲದ ಇಎಂಐಗಳು, ಮಕ್ಕಳ ಶಾಲಾ ಶುಲ್ಕಗಳು ಮತ್ತು ವಯಸ್ಸಾದ ಪೋಷಕರ ವೈದ್ಯಕೀಯ ವೆಚ್ಚಗಳು ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸಬಹುದು. ಕೆಲವು ವಯಸ್ಸಾದ ಪೋಷಕರು ತಮ್ಮ ಮಕ್ಕಳ ಮೇಲೆ ಹೊರೆಯಾಗುವುದು ಬೇಡ ಎನ್ನುವ ಕಾರಣಕ್ಕೆ ತಮ್ಮ ಅಗತ್ಯಗಳ ಬಗ್ಗೆ ಯಾರಲ್ಲೂ ಏನೂ ಹೇಳದೆ ಮೌನವಾಗಿರಲೂ ಬಹುದು ಎಂದು ಹೇಳಿದ್ಧಾರೆ.
ಪ್ರೀತಿ ಕಡಿಮೆಯಾಗುವುದಿಲ್ಲ
ನಾವು ನಮ್ಮ ಹೆತ್ತವರನ್ನು ಜೊತೆಯಲ್ಲಿಯೇ ಇರಿಸಿಕೊಂಡ ಮಾತ್ರಕ್ಕೆ ತುಂಬಾ ಪ್ರೀತಿಸುತ್ತೇವೆ ಎಂದಲ್ಲ. ನಾರ್ವೇಯನ್ನರು ಕೇರ್ ಹೋಮ್‌ಗಳಿಗೆ ಹೆತ್ತವರನ್ನು ಬಿಟ್ಟ ಮಾತ್ರಕ್ಕೆ ಅವರ ಪ್ರೀತಿ ಕಡಿಮೆ ಎಂದೂ ಅಲ್ಲ. ನಾವು ಪ್ರೀತಿಯನ್ನು ಕರ್ತವ್ಯ, ಹಣ, ಅವಲಂಬನೆ ಮತ್ತು ಅಪರಾಧಿ ಭಾವನೆಯೊಂದಿಗೆ ಬೆರೆಸಿ ಅದನ್ನು ಸಂಸ್ಕಾರ ಎಂದು ಕರೆದಿದ್ದೇವೆ ಎಂದು ವಿನೋದ್ ಹೇಳಿದ್ದಾರೆ.
ವಯಸ್ಸಾದ ಪೋಷಕರು ಯಾರ ಮೇಲೂ ಅವಲಂಬಿತರಾಗದೆ ಇರಬೇಕು. , ನಾವು ಇನ್ನೊಬ್ಬರಿಗೆ ಹೊರೆ ಎನ್ನುವ ಭಾವನೆ ಅವರಿಗೆ ಬರಬಾರದು. ತಮ್ಮ ಬದುಕಿನ ಸ್ವಾತಂತ್ರ್ಯವನ್ನು ಹೊಂದಿರಬೇಕು ಎನ್ನುವುದು ವಿನೋದ್ ವಾದ. ವಯಸ್ಸಾದ ನಾಗರಿಕರನ್ನು ಬೆಂಬಲಿಸಲು ಭಾರತಕ್ಕೆ ಬಲವಾದ ವ್ಯವಸ್ಥೆ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ಪರಿಹರಿಸಲು ಭಾರತದಲ್ಲಿ ನಮಗೆ ಒಂದು ವ್ಯವಸ್ಥೆ ಬೇಕೇ? ಇದು ನಮ್ಮ ಮಕ್ಕಳಿಗೆ ಶಿಕ್ಷಣದಷ್ಟೇ ಮುಖ್ಯವಲ್ಲವೇ? ಎಂದು ಅವರು ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೃದ್ಧಾಪ್ಯದಲ್ಲಿ ಎಲ್ಲರಿಗೂ ತಾವಿದ್ದ ವಾತಾವರಣ, ನೆರೆಹೊರೆಯವರು ಮತ್ತು ಸ್ನೇಹಿತರು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಈ ವಯಸ್ಸಿನಲ್ಲಿ ಹೊಸ ಜಾಗಕ್ಕೆ ಹೋಗಲು ಯಾರೂ ಇಷ್ಟಪಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾರ್ವೆಯಲ್ಲಿರುವಂತೆ ಭಾರತದಲ್ಲಿ ಮೂಲಸೌಕರ್ಯ, ಉತ್ತಮ ಗಾಳಿ, ಅಥವಾ ವೈದ್ಯಕೀಯ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲ ಉತ್ತಮ ವೃದ್ಧಾಶ್ರಮಗಳು ಕೂಡಾ ಇಲ್ಲಿ ತುಂಬಾ ದುಬಾರಿ. ಇದು ಮಿಡಲ್ ಕ್ಲಾಸ್‌ನವರ ಕೈಗೆ ಎಟುಕುವುದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಮಕ್ಕಳು ಪೋಷಕರ ಋಣವನ್ನು ತೀರಿಸುವುದು ಸಾಧ್ಯವೇ ಇಲ್ಲ. ಆದರೆ ಅವರು ಅಸಹಾಯಕರಾಗಿದ್ದಾಗ ಅವರನ್ನು ಸರಿಯಾಗಿ, ಚೆನ್ನಾಗಿ ನೋಡಿಕೊಳ್ಳಬೇಕಾಗಿರುವುದು ಮಕ್ಕಳ ಕನಿಷ್ಠ ಕರ್ತವ್ಯ ಎಂದು ಮೂರನೇಯವರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications
