ಕಾಲಗರ್ಭದಲ್ಲಿ ಹುದುಗಲಿರುವ 2024ಕ್ಕೊಂದು ವಿದಾಯ!
ಇವತ್ತಿನ ಸೂರ್ಯಾಸ್ತಮಾನದೊಂದಿಗೆ 2024ನೇ ಇಸವಿ ಕಾಲಗರ್ಭದಲ್ಲಿ ಸೇರಿಕೊಳ್ಳುವುದರೊಂದಿಗೆ ಇತಿಹಾಸದ ಪುಟದಲ್ಲಿ ವಿಲೀನಗೊಳ್ಳಲಿದೆ. 12 ತಿಂಗಳು, 365 ದಿನಗಳು ಪ್ರತಿಯೊಬ್ಬರ ಬದುಕಿನಲ್ಲಿ ವಿಶೇಷತೆಯನ್ನು ತಂದಿದೆ. ಅಲ್ಲಿ ಖುಷಿಯಿತ್ತು, ನೋವಿತ್ತು. ಎಲ್ಲವನ್ನೂ ನಾವು ಅನುಭವಿಸಿಕೊಂಡು ವರ್ಷದಂಚಿಗೆ ಬಂದು ನಿಂತಿದ್ದೇವೆ. ಇವತ್ತಿನ ಸೂರ್ಯಾಸ್ತಮಾನಕ್ಕೆ ಒಂದು ವಿದಾಯ ಹೇಳುತ್ತಾ ನಾಳಿನ ಸೂರ್ಯೋದಯವನ್ನು ಸಂಭ್ರಮ ಸಡಗರದಿಂದ ಸ್ವಾಗತಿಸೋಣ.
ವರ್ಷಾಂತ್ಯದಲ್ಲಿ ನಿಂತು ಒಮ್ಮೆ ಕಳೆದು ಹೋದ ದಿನಗಳತ್ತ ತಿರುಗಿ ನೋಡಿದಾಗ ಇಡೀ ಒಂದು ವರ್ಷದ ಅಷ್ಟು ದಿನಗಳು ನಮ್ಮ ಕಣ್ಣಂಚಿನಲ್ಲಿ ಹಾದು ಹೋದ ಅನುಭವವಾಗಿ ಬಿಡುತ್ತದೆ. ಇಲ್ಲಿ ಪಡೆದುಕೊಂಡಿದ್ದು, ಕಳೆದುಕೊಂಡಿದ್ದು ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಾ ಹೋದರೆ ಒಂದೇ ಎರಡೇ ಹತ್ತಾರು ಘಟನೆಗಳು ಮನಸ್ಸು ತುಂಬಿ ಬರುವಂತೆ ಮಾಡಿಬಿಡುತ್ತದೆ. ಒಬ್ಬೊಬ್ಬರಿಗೆ ಒಂದೊಂದು ವರ್ಷಗಳು ವಿಶೇಷವೇ... ಅವು ನಮಗೆ ಒಳಿತು ಕೆಡಕು ಎಲ್ಲವನ್ನು ಮಾಡಿರುತ್ತವೆ. ಆದರೆ ಕೆಟ್ಟ ಕ್ಷಣಗಳನ್ನು ನೆನಪಿಸಿಕೊಂಡು ಅಯ್ಯೋ ಈ ವರ್ಷ ಸರಿದು ಹೋಗಲಿ ಎನ್ನುತ್ತಾ ಹೊಸ ವರ್ಷದತ್ತ ಒಂದೊಳ್ಳೆಯ ನಿರೀಕ್ಷೆ ಮಾಡುತ್ತೇವೆ.

ಬರಲಿರುವ ಹೊಸ ವರ್ಷ ಏನಿದ್ದರೂ ನಿರೀಕ್ಷೆ ಮತ್ತು ಭರವಸೆ ಅಷ್ಟೇ... ಆದರೆ ಕಳೆದು ಹೋದ ವರ್ಷ ಹಾಗಿಲ್ಲ ಅದೇ ವಾಸ್ತವ. ಅದು ನಮಗೆ ಎಲ್ಲವನ್ನೂ ನೀಡಿದೆ. ಹಾಗೆಯೇ ಬಿಟ್ಟು ಹೋಗಿದೆ. ಸರಿದು ಹೋದ ದಿನಗಳಲ್ಲಿ ನಾವು ಒಳಿತಾದಾಗ ಖುಷಿಪಟ್ಟಿದ್ದೇವೆ. ಕೆಡಕು ಆದಾಗ ಅತ್ತಿದ್ದೇವೆ, ಹಿಡಿಶಾಪ ಹಾಕಿದ್ದೇವೆ. ಅದರಾಚೆಗೆ ನಮ್ಮ ಸಾಧನೆಗೆ, ಬದುಕಿಗೆ ವಿಶೇಷವಾದ ಏನಾದರೊಂದು ಕೊಡುಗೆ ಸಿಕ್ಕಾಗ ಸಂಭ್ರಮಿಸಿದ್ದೇವೆ. ಆದ್ದರಿಂದ ಕಳೆದು ಹೋದ ವರ್ಷ ನಮಗೆ ನೀಡಿದ ಸಂತಸವನ್ನು ನೆನಪಿಸಿಕೊಳ್ಳುತ್ತಾ ಖುಷಿಪಡೋಣ.
ಸರಿಯಲಿರುವ ವರ್ಷಕ್ಕೊಂದು ವಿದಾಯ
ಹಾಗೆನೋಡಿದರೆ ಕಾಲಗರ್ಭದಲ್ಲಿ ಸರಿದು ಹೋಗಿರುವ ಅಷ್ಟು ವರ್ಷಗಳು ಏನಾದರೊಂದು ನೆನಪಿನಲ್ಲಿ ಉಳಿಯ ಬಹುದಾದ ಐತಿಹಾಸಿಕ ಘಟನೆಯೊಂದನ್ನು ಬಿಟ್ಟು ಹೋಗಿವೆ. ನಮ್ಮ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿರುವ ಕಾರಣದಿಂದ ಎಲ್ಲ ಬದಲಾವಣೆಗಳು ಆಗುತ್ತಲೇ ಇರಬೇಕು. ಮಳೆಯ ಬಳಿಕ ಬಿಸಿಲು ಬರಲೇ ಬೇಕು. ಹಾಗೆಯೇ ಬದುಕಿನಲ್ಲಿ ಏರಿಳಿತಗಳು, ನೋವು, ನಲಿವು ಎಲ್ಲವೂ ಇರಲೇಬೇಕಲ್ಲವೆ? ಹುಟ್ಟಿದ ಮನುಷ್ಯ ಸಾಯಲೇ ಬೇಕು. ಹುಟ್ಟುವಾಗಿನ ಸಂಭ್ರಮ ಸಾಯುವಾಗಿನ ನೋವು ಎಲ್ಲವೂ ಇದ್ದದ್ದೇ ಆದೆಲ್ಲವನ್ನು ಮೀರಿ ನಾವು ಮುಂದಿನ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
ನಾವು ಕಳೆದು ಹೋದ ದಿನಗಳಲ್ಲಿ ಕಷ್ಟಗಳನ್ನು ನೆನೆದು ಈ ವರ್ಷವೇ ಸರಿಯಿಲ್ಲ ಎನ್ನುವುದು ಮೂರ್ಖತನವಾಗಿ ಬಿಡುತ್ತದೆ. ಸೂರ್ಯೋದಯದೊಂದಿಗೆ ಆಗಮಿಸಲಿರುವ ಹೊಸವರ್ಷವನ್ನು ಸ್ವಾಗತಿಸುವ ಮುನ್ನ ಅಷ್ಟು ಘಟನೆಗಳಿಗೆ ಸಾಕ್ಷಿಯಾಗಿದ್ದ ಒಂದು ವರ್ಷ ಸರಿದು ಹೋಯಿತಲ್ಲ ಎಂಬ ನೋವು ನಮ್ಮೆಲ್ಲರಲ್ಲೂ ಇದೆ. ಆ ವರ್ಷಕ್ಕೊಂದು ಸಂತೋಷದ ವಿದಾಯವನ್ನು ನಾವು ಹೇಳಲೇ ಬೇಕಾಗಿದೆ. ಇವತ್ತಿನ ಸೂರ್ಯಾಸ್ತಮಾನದೊಂದಿಗೆ ಕಾಲಗರ್ಭದಲ್ಲಿ ಹುದುಗಿ ಹೋಗಲಿರುವ 2024ಕ್ಕೆ ಒಂದು ಸಂಭ್ರಮದ ವಿದಾಯವನ್ನು ಹೇಳಿ ಬಿಡೋಣ. ಹಳತು ಹೊಸತರ ನಡುವಿನ ಬದಲಾವಣೆಯಲ್ಲಿ ಎರಡನ್ನು ಅನುಭವಿಸುತ್ತಾ ಮುನ್ನಡೆಯುವುದು ಪ್ರಕೃತಿ ಧರ್ಮವಾಗಿದೆ.

ನಾಳಿನ ಬೆಳಕಿಗಾಗಿ ಕಾಯೋಣ
ಇತ್ತೀಚೆಗಿನ ವರ್ಷಗಳಲ್ಲಿ ಡಿಸೆಂಬರ್ 31ರ ಸೂರ್ಯಾಸ್ತಮಾನವನ್ನು ಕಣ್ತುಂಬಿಕೊಳ್ಳುವುದರೊಂದಿಗೆ ಅದು ಸರಿದು ಹೋಗುವುದನ್ನೇ ವೀಕ್ಷಿಸುತ್ತಾ ಭಾವಪೂರ್ಣವಾಗಿ ವಿದಾಯ ಹೇಳುವ ಸಂಪ್ರದಾಯಗಳು ಹುಟ್ಟಿಕೊಳ್ಳುತ್ತಿವೆ. ಅರಬ್ಬಿ ಸಮುದ್ರತೀರದಲ್ಲಿ, ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಸೂರ್ಯ ರಕ್ತವರ್ಣದಿಂದ ಇಡೀ ಪ್ರಕೃತಿಯನ್ನು ತೊಯ್ದು ಸಮುದ್ರದಾಚೆಗೆ, ಬೆಟ್ಟಗುಡ್ಡಗಳ ನಡುವೆ ನಿಧಾನವಾಗಿ ಲೀನವಾಗುತ್ತಾ ಬೆಳಕನ್ನು ಕಸಿದು ಕತ್ತಲನ್ನು ಹರಡಿ ಹೋಗುವ ಸೂರ್ಯನನ್ನು ನೋಡಲು ಜನಸಾಗರವೇ ಕಾಯುತ್ತಿದೆ.
ನಾಳಿನ ಬೆಳಕಿನ ಭರವಸೆಯೊಂದಿಗೆ ಸೂರ್ಯ ಮರೆಯಾಗುವ ದೃಶ್ಯ ನಮ್ಮೊಳಗೆ ಮೌನವನ್ನು ಹರಡಿ ಬಿಡುತ್ತದೆ. ಇವತ್ತು ಕತ್ತಲೆ ಹರಡಿ ಹೋದ ಸೂರ್ಯ ನಾಳೆ ಹೊಸ ಬೆಳಕಿನೊಂದಿಗೆ ಬರುವುದರೊಂದಿಗೆ ಕತ್ತಲು ಹೊಡೆದೋಡಿಸಿ ಬೆಳಕು ತರುತ್ತಾನೆ ಎಂಬ ಭರವಸೆ ನಮ್ಮಲ್ಲರಲ್ಲೂ ಇದ್ದೇ ಇದೆ. ಹಾಗೆಯೇ ಇವತ್ತಿನ ಕಷ್ಟಗಳು ಕರಗಿ ನಾಳೆ ಸುಖ ಬರಬಹುದು ಎಂಬ ಭರವಸೆಯಲ್ಲಿ ಹೊಸವರ್ಷಕ್ಕೆ ಕಾಲಿಡೋಣ. ಹಳೆಯ ವರ್ಷದ ಕಹಿ, ಸಿಹಿಯನ್ನು ಸಹಿಸಿಕೊಂಡವರು ನಾವು. ಹೀಗಾಗಿ ಅದಕ್ಕೊಂದು ಖುಷಿಯ ವಿದಾಯ ಹೇಳಿ ಬಿಡೋಣ.












Click it and Unblock the Notifications