ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ

|
Google Oneindia Kannada News

ಮನುಷ್ಯನ ವಿಶೇಷ ಆವಿಷ್ಕಾರಗಳಲ್ಲಿ ಕ್ಯಾಮೆರಾ ಕೂಡ ಒಂದು. ಫೋಟೋ ತೆಗೆಯಲು, ವಿಡಿಯೋ ತೆಗೆಯಲು ಕ್ಯಾಮೆರಾ ಬಳಕೆ ಮಾಡಲಾಗುತ್ತದೆ. ಆದರೆ, ಮನುಷ್ಯನ ಕಣ್ಣಿಗೆ ಇರುವ ಮಿತಿ ನಮ್ಮ ಕ್ಯಾಮೆರಾಗೂ ಇರುವುದು ಹೌದು. ಈಗ ವಿಜ್ಞಾನಿಗಳು ಹೊಸ ರೀತಿಯ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾಮೆರಾ ಕ್ಷೇತ್ರವಲ್ಲದೇ ನಮ್ಮ ಅನೇಕ ದೈನಂದಿನ ಚಟುವಟಿಕೆಯಲ್ಲಿ ಕ್ರಾಂತಿ ಮಾಡುವ ಶಕ್ತಿ ಹೊಂದಿದೆ.

ನಮ್ಮ ಕಣ್ಣಿಗೂ ಕ್ಯಾಮೆರಾಗೂ ಬಹಳ ಸಾಮ್ಯತೆ ಇದೆ. ವಾಸ್ತವದಲ್ಲಿ ನಮ್ಮ ಕಣ್ಣಿನ ಆಧಾರದಲ್ಲೇ ಕ್ಯಾಮೆರಾ ತಂತ್ರಜ್ಞಾನವನ್ನು ರೂಪಿಸಲಾಗಿದೆ. ನಮ್ಮ ಕಣ್ಣಿಗೆ ಇರುವ ಮಿತಿ ನಮ್ಮ ಕ್ಯಾಮೆರಾಗೂ ಇರುತ್ತದೆ. ಹೀಗಾಗಿ, ಮನುಷ್ಯನ ಕಣ್ಣಿನ ರಚನೆಯನ್ನು ಮೀರಿದ ಕಣ್ಣಿನ ಅನ್ವೇಷಣೆಯನ್ನು ವಿಜ್ಞಾನಿಗಳು ನಡೆಸಿದ್ದಾರೆ. ಅದರಲ್ಲಿ ಫಿಡ್ಲರ್ ಎಂಬ ಜಾತಿಯ ಏಡಿಯ ಕಣ್ಣು ವಿಜ್ಞಾನಿಗಳ ಗಮನ ಸೆಳೆದಿದೆ.

ಚಂದ್ರನ ನೆಲದಲ್ಲಿ ಮಾನವನ ಸಂಚಾರಕ್ಕಾಗಿ ಹೊಸ ರೋವರ್ ಅಭಿವೃದ್ಧಿಚಂದ್ರನ ನೆಲದಲ್ಲಿ ಮಾನವನ ಸಂಚಾರಕ್ಕಾಗಿ ಹೊಸ ರೋವರ್ ಅಭಿವೃದ್ಧಿ

ಫಿಡ್ಲರ್ ಏಡಿಯ ಕಣ್ಣಿನ ರಚನೆಯನ್ನು ಅಧ್ಯಯನ ಮಾಡಿ ವಿಜ್ಞಾನಿಗಳು ಕೃತಕ ಕಣ್ಣೊಂದನ್ನು ಸೃಷ್ಟಿಸಿದ್ದಾರೆ. ಈ ಕಣ್ಣು ನಮ್ಮ ಮನುಷ್ಯರ ಕಣ್ಣಿಗಿಂತ ಬಹಳ ವಿಭಿನ್ನ. ಮನುಷ್ಯ ಮಾತ್ರವಲ್ಲ, ಬೇರೆ ಹಲವು ಪ್ರಾಣಿಗಳಿಗಿಂತಲೂ ವಿಶೇಷವಾಗಿದೆ.

ಅಂದಹಾಗೆ, ಕ್ಯಾಮರಾಗೂ ನಮ್ಮ ಕಣ್ಣಿಗೂ ಏನು ಸಂಬಂಧ, ಫಿಡ್ಲರ್ ಕ್ರ್ಯಾಬ್‌ನ ಕಣ್ಣುಗಳಲ್ಲಿ ಅಂಥ ವಿಶೇಷತೆ ಏನಿದೆ? ಏಡಿ ಕಣ್ಣಿನ ಕ್ಯಾಮೆರಾ ತಯಾರಿಸುವುದರಿಂದ ನಮಗೆ ಏನು ಉಪಯೋಗ?

ಐಐಟಿಯಿಂದ PIVOT; ಕ್ಯಾನ್ಸರ್‌ಕಾರಕ ಜೀನ್ ಪತ್ತೆ ಮಾಡುತ್ತೆ ಈ ಟೂಲ್ಐಐಟಿಯಿಂದ PIVOT; ಕ್ಯಾನ್ಸರ್‌ಕಾರಕ ಜೀನ್ ಪತ್ತೆ ಮಾಡುತ್ತೆ ಈ ಟೂಲ್

ಕಣ್ಣು ಮತ್ತು ಕ್ಯಾಮೆರಾ

ಕಣ್ಣು ಮತ್ತು ಕ್ಯಾಮೆರಾ

ನಾವು ಹೇಗೆ ನೋಡುತ್ತೇವೆ? ಮನುಷ್ಯನ ಕಣ್ಣಿನಲ್ಲಿ ಕಾರ್ನಿಯಾ (ಕಣ್ಣಾಲೆ), ಐರಿಸ್ (ಕಣ್ಪೊರೆ), ಪುಪಿಲ್ (ಕಣ್ಣುಪಾಪೆ), ಲೆನ್ಸ್ (ಮಸೂರ) ಇರುತ್ತವೆ. ಈ ಪ್ರಮುಖ ಉಪಾಂಗಗಳ ಕಾರ್ಯಗಳನ್ನು ಬಳಸಿಕೊಂಡು ನಮ್ಮ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ನಿಯಾ ಎಂಬುದು ಕ್ಯಾಮೆರಾದ ಲೆನ್ಸ್ ಕವರ್ ಆಗಿದೆ. ಐರಿಸ್ ಮತ್ತು ಪುಪಿಲ್ ಎಂಬುದು ಕ್ಯಾಮೆರಾ ಅಪರ್ಚರ್ ಆಗುತ್ತದೆ. ನಮ್ಮ ಕಣ್ಣಿನ ಲೆನ್ಸ್‌ನಂತೆಯೇ ಕ್ಯಾಮೆರಾದ ಲೆನ್ಸ್ ಇರುತ್ತದೆ. ಹೀಗಾಗಿ, ನಮ್ಮ ಕಣ್ಣಿನ ದೃಷ್ಟಿಯಂತೆಯೇ ಕ್ಯಾಮೆರಾ ಕೂಡ ಕಾರ್ಯನಿರ್ವಹಿಸುವುದನ್ನು ನಾವು ಗಮನಿಸಬಹುದು.

ಫಿಡ್ಲರ್ ಏಡಿ ಕಣ್ಣು ಹೇಗೆ?

ಫಿಡ್ಲರ್ ಏಡಿ ಕಣ್ಣು ಹೇಗೆ?

ನಾವು ಮನುಷ್ಯರಿಗೆ ಎರಡು ಕಣ್ಣುಗಳಿರುತ್ತವೆ. ಎರಡೂ ಕಣ್ಣು ಸೇರಿ ನಾವು 180 ಡಿಗ್ರಿವರೆಗೆ ದೃಶ್ಯವನ್ನು ನೋಡಬಹುದು. ಅಂದರೆ, ನೀವು ದೇಹ ಅಥವಾ ತಲೆ ತಿರುಗಿಸದೆಯೇ ನಿಶ್ಚಲವಾಗಿದ್ದುಕೊಂಡು ಕೇವಲ ಕಣ್ಣಿನ ದೃಷ್ಟಿಯನ್ನು ಮಾತ್ರ ತಿರುಗಿಸಿದರೆ 180 ಡಿಗ್ರಿ ಕೋನದವರೆಗಿನ ದೃಶ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಒಂದು ಕಣ್ಣು ಮಾತ್ರ ಇದ್ದರೆ ಕೇವಲ 90 ಡಿಗ್ರಿವರೆಗೆ ನೋಡಬಹುದು.

ಅದೇ ಫಿಡ್ಲರ್ ಏಡಿ 360 ಡಿಗ್ರಿ, ಅಂದರೆ ತನ್ನ ಸುತ್ತಲಿನ ದೃಶ್ಯವನ್ನು ನೋಡಬಲ್ಲುದು. ಈ ಏಡಿಯಲ್ಲಿ ಹಲವು ಕಣ್ಣುಗಳ ಸಂಯೋಜನೆ ಇದೆ. ಈ ಕಣ್ಣುಗಳು ಬೇರೆ ಬೇರೆ ದಿಕ್ಕಿನಲ್ಲಿ ದೃಷ್ಟಿ ಇಡುತ್ತವೆ. ಹೀಗಾಗಿ, ಏಕಕಾಲದಲ್ಲಿ ಎಲ್ಲಾ ದಿಕ್ಕಿನ ದೃಶ್ಯಗಳು ಏಡಿಗೆ ಕಾಣಿಸುತ್ತವೆ.

ಈ ರೀತಿ 360 ಡಿಗ್ರಿಯಲ್ಲಿ ನೋಡಬಲ್ಲ ಜೀವಿಗಳು ಅನೇಕ ಇವೆ. ಆದರೆ, ಫಿಡ್ಲರ್ ಏಡಿಯ ವಿಶೇಷತೆ ಎಂದರೆ ಅದರ ಕಣ್ಣುಗಳು ನೆಲ ಹಾಗೂ ಜಲ ಎರಡರಲ್ಲೂ 360 ಡಿಗ್ರಿಯಲ್ಲಿ ದೃಶ್ಯಗಳನ್ನು ಕಾಣಬಲ್ಲುವು. ಈ ಏಡಿಯ ಕಣ್ಣಿನಲ್ಲಿ ಚಪ್ಪಟೆಯಾಕಾರದ ಮೈಕ್ರೋಲೆನ್ಸ್ (ಕಿರು ಮಸೂರಗಳು) ಗಳು ಇರುತ್ತವೆ. ಈ ಮೈಕ್ರೋಲೆನ್ಸ್‌ಗಳೇ ಏಡಿಯ ಕಣ್ಣಿಗೆ ವಿಶೇಷ ಶಕ್ತಿ ಕೊಡುವುದು. ಅಂದರೆ, ನೀರೊಳಗಿದ್ದರೂ ಈ ಕಿರುಮಸೂರಗಳು ಏಡಿಗೆ ದೃಷ್ಟಿ ಅಂತರ (ಫೋಕಲ್ ಲೆಂತ್) ಕಾಪಾಡಿಕೊಳ್ಳಲು ನೆರವಾಗುತ್ತವೆ.

ವಿಶೇಷ ಕ್ಯಾಮರಾ ಸೃಷ್ಟಿ

ವಿಶೇಷ ಕ್ಯಾಮರಾ ಸೃಷ್ಟಿ

ಇದೇ ಕಾರ್ಯರಚನೆಯನ್ನು ಆಧಾರವಾಗಿಟ್ಟುಕೊಂಡು ವಿಜ್ಞಾನಿಗಳು ರೂಪಿಸಿರುವ ಕೃತಕ ಕಣ್ಣು (ಕ್ಯಾಮೆರಾ) ಒಂದು ರೀತಿಯಲ್ಲಿ ಆಕಾರದಲ್ಲಿ ಕಪ್ಪು ಚೆಂಡಿನಂತೆ ಇದೆ. ಫಿಡ್ಲರ್ ಏಡಿಯ ಕಣ್ಣಿನಲ್ಲಿರುವಂತೆ ಫ್ಲ್ಯಾಟ್ ಲೆನ್ಸ್ ಅನ್ನು ಕೃತಕ ಕಣ್ಣಿನಲ್ಲಿ ಬಳಕೆ ಮಾಡಲಾಗಿದೆ. ಏಡಿಯ ಕಣ್ಣಿನ ಫೋಟೋರಿಸಿಪ್ಟರ್‌ಗಳ ರೀತಿಯಲ್ಲಿ ಫೋಟೋಡಯೋಡ್‌ಗಳನ್ನು ಕೃತಕ ಕಣ್ಣಿಗೆ ಅಳವಡಿಸಲಾಗಿದೆ. ಈ ಚಪ್ಪಟೆ ಮಸೂರ ಮತ್ತು ಫೋಟೋಡಯೋಡ್‌ಗಳ ಸಂಯೋಜನೆಯಿಂದಾಗಿ ವಿಜ್ಞಾನಿಗಳು ಸೃಷ್ಟಿಸಿರುವ ಕೃತಕ ಕಣ್ಣು ನೆಲ ಹಾಗೂ ನೀರಿನೊಳಗೆ ಪರಿಪೂರ್ಣವಾಗಿ ಕಾರ್ಯನಿರ್ವಹಿಸಬಲ್ಲುದು.

ಈ ಕೃತಕ ಕಣ್ಣು ಸದ್ಯಕ್ಕೆ ಆರಂಭಿಕ ಹಂತದಲ್ಲಿದೆ. ಒಂದು ಸೆಂಟಿಮೀಟರ್ ಗಾತ್ರ ಮತ್ತು ಕೆಲವೇ ಗ್ರಾಮ್ ತೂಕ ಇರುವ ಈ ಕೃತಕ ಕಣ್ಣಿಗೆ ಹೆಚ್ಚಿನ ಬ್ಯಾಟರಿ ಬೇಕಾಗುವುದಿಲ್ಲ. ಅದರೆ, ಸದ್ಯಕ್ಕೆ ಒಂದು ಫೋಟೋ ತೆಗೆಯಲು 30 ನಿಮಿಷ ತೆಗೆದುಕೊಳ್ಳುತ್ತದೆ. ಅಲ್ಲದೇ ಇದರ ಫೋಟೋ ರೆಸಲ್ಯೂಷನ್ ಕೂಡ ಬಹಳ ಕಡಿಮೆ. ಇದು ತೆಗೆಯುವ ಫೋಟೋ ಕೇವಲ 256 ಪಿಕ್ಸೆಲ್ ರೆಸಲ್ಯೂಷನ್ ಇರುತ್ತದೆ. ಮುಂದಿನ ದಿನಗಳಲ್ಲಿ ಈ ಕೃತಕ ಕಣ್ಣನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಎಲ್ಲೆಲ್ಲಿ ಉಪಯೋಗ?

ಎಲ್ಲೆಲ್ಲಿ ಉಪಯೋಗ?

ಅಮೆರಿಕದ ಎಂಐಟಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬೊರೇಟರಿ, ಚೀನಾದ ಗ್ವಾಂಗ್‌ಜು ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ಕೊರಿಯಾದ ಸೋಲ್ ನ್ಯಾಷನಲ್ ಯೂನಿರ್ಸಿಟಿಯ ಸಂಶೋಧಕರ ಒಂದು ತಂಡ ಈ ಕೃತಕ ಕಣ್ಣನ್ನು ಆವಿಷ್ಕರಿಸಿದೆ. ಸದ್ಯ ಬಹಳ ಕಡಿಮೆ ರೆಸಲ್ಯೂಷನ್‌ನ ಕ್ಯಾಮೆರಾ ತಯಾರಾಗಿದ್ದು, ಇದು ಇನ್ನಷ್ಟು ಅಭಿವೃದ್ಧಿಗೊಂಡಲ್ಲಿ ಸೆಲ್ಫ್ ಡ್ರೈವಿಂಗ್ ಕಾರು, ಡ್ರೋನ್‌ಗಳ ಕಾರ್ಯನಿರ್ವಹಣೆಗೆ ಭರ್ಜರಿ ಪುಷ್ಟಿ ಸಿಗಲಿದೆ.

ಮಳೆ ಬಂದಾಗ ಡ್ರೋನ್ ಮತ್ತು ಸೆಲ್ಫ್ ಡ್ರೈವಿಂಗ್ ಕಾರು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ, ಫಿಡ್ಲರ್ ಏಡಿ ಕಣ್ಣಿನ ತಂತ್ರಜ್ಞಾನದಿಂದ ತಯಾರಾಗಿರುವ ಹೊಸ ಕ್ಯಾಮೆರಾ ಮಳೆ ನೀರಿನಲ್ಲೂ ಸರಾಗವಾಗಿ ಕೆಲಸ ಮಾಡುತ್ತದೆ. ಹೀಗಾಗಿ, ಈ ಹೊಸ ಆವಿಷ್ಕಾರ ಈ ಎರಡು ಉದ್ಯಮಗಳಿಗೆ ಮಹತ್ವದ್ದಾಗಿದೆ.

(ಒನ್ಇಂಡಿಯಾ ಸುದ್ದಿ)

English summary
MIT scientists have developed a new kind of camera based on the eye structure of fiddler crab, which can see 360 degree on both land and water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X