9 ದಿನ ರಜಾ ಕೊಟ್ಟು ಮಜಾ ಮಾಡಿ ಎಂದ ಕಂಪನಿ! ಭಗವಂತನ ನೆನೆದ ಬೇರೆ ಉದ್ಯೋಗಿಗಳು
ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ವೀಕೆಂಡ್ ರಜೆ, ಹಬ್ಬದ ರಜೆ ಹೆಚ್ಚಾಗಿ ಕೇಳಿರುತ್ತೇವೆ. ಲಾಂಗ್ ವೀಕೆಂಡ್ ಅಂದ್ರೂ ಎರಡೋ ಮೂರೋ ರಜೆ ಸಿಗೋದನ್ನು ವರ್ಷದಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿರುತ್ತೀವಿ. ಇನ್ನೂ ಕೆಲವು ಕಂಪನಿಗಳಲ್ಲಿ ವಾರಕ್ಕೆ ಒಂದು ರಜೆ ಸಿಗೋದೇ ಹೆಚ್ಚು. ಅದೂ ನಾವು ಕೇಳಿ ಪಡೆದರೆ ಮಾತ್ರ.
ಆದರೆ, ಕಂಪನಿಯೇ ಲಾಂಗ್ ವೀಕೆಂಡ್ ಘೋಷಿಸಿದರೆ ಉದ್ಯೋಗಿಗಳ ಪಾಲಿಗೆ ಅದಕ್ಕಿಂತ ದೊಡ್ಡ ಹಬ್ಬ ಇನ್ನೊಂದಿರುತ್ತಾ ಹೇಳಿ? ಒಂದಲ್ಲ, ಎರಡಲ್ಲ, ಬರೋಬ್ಬರಿ 9 ದಿನಗಳವರೆಗೆ ಕಂಪನಿಯೇ ರಜೆ ನೀಡಿ ಉದ್ಯೋಗಿಗಳಿಗೆ ಚಿಲ್ ಮಾಡುವಂತೆ ಹೇಳಿದೆ.

ಹೌದು, ಪ್ರಸಿದ್ಧ ಇ-ಕಾಮರ್ಸ್ ವಲಯದ ದೈತ್ಯ ಕಂಪನಿ ಮೀಶೋ ತನ್ನ ಉದ್ಯೋಗಿಗಳಿಗೆ ಬರೋಬ್ಬರಿ ಒಂಬತ್ತು ದಿನಗಳ ರಜೆ ಘೋಷಿಸಿದೆ. ಈ ವಿಚಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಶೋ ಪ್ರಕಟಣೆ ಹಂಚಿಕೊಂಡಿದ್ದು, ಯಾವುದೇ ಲ್ಯಾಪ್‌ಟಾಪ್‌ಗಳಿಲ್ಲ, ಯಾವುದೇ ಮೆಸೇಜ್, ಇಮೇಲ್ಸ್, ಮೀಟಿಂಗ್‌ಗಳು ಅಥವಾ ಸ್ಟಾಂಡಪ್ ಕಾಲ್ಸ್ ಕೂಡ ಇರಲ್ಲ, ಒಂಬತ್ತು ದಿನಗಳ ಕಾಲ ಕೆಲಸ ವಿಚಾರಗಳು ಏನೂ ಇಲ್ಲ ಎಂದು ಮೀಶೋ ತನ್ನ ಉದ್ಯೋಗಿಗಳಿಗೆ ಘೋಷಿಸಿದೆ.
ಅಕ್ಟೋಬರ್ 26ರಿಂದ ನವೆಂಬರ್ 3ರವರೆಗೆ ಎಲ್ಲರಿಗೂ ರೀಸೆಟ್ ಹಾಗೂ ರೀಚಾರ್ಜ್ ಬ್ರೇಕ್. ಈ ವರ್ಷ ನಾವು ವ್ಯಾಪಾರದಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದೇವೆ. ಇದೀಗ ಸಂಪೂರ್ಣವಾಗಿ ನಮ್ಮ ಬಗ್ಗೆ ಯೋಚಿಸುವ ಸಮಯ. ಈ ವಿರಾಮವು ನಮ್ಮ ಮನಸ್ಸು, ದೇಹಕ್ಕೆ ಆರಾಮ ನೀಡುವ ಜೊತೆಗೆ ಫ್ರೆಶ್ ಹಾಗೂ ಹೊಸ ಚೈತನ್ಯದಿಂದ ಮುಂದಿನ ವರ್ಷಕ್ಕೆ ಸಜ್ಜಾಗುವ ಸಮಯ ಎಂದು ಸಂತಸವನ್ನು ಹಂಚಿಕೊಂಡಿದೆ.

ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹುತೇಕರು ನಮ್ ಹೊಟ್ಟೆ ಎಷ್ಟು ಉರಿಸುತ್ತಾವ್ರೋ ಎಂದು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಈ ಪೋಸ್ಟ್ ನೋಡಿದ ಹಲವರು ತಮ್ಮ ಬಾಸ್‌ಗಳನ್ನು ಮನಬಂದಂತೆ ಬೈದುಕೊಳ್ಳುತ್ತಿದ್ದಾರೆ.
'ಒಂದು ದಿನ ರಜೆ ಕೇಳಿದ್ರೇನೆ ಮೈಮೇಲೆ ಬೆಂಕಿ ಬಿದ್ದಂಗೆ ಆಡ್ತಾರೆ. ಅದರಲ್ಲಿ ಒಂಬತ್ತು ದಿನ ರಜೆ ಅವರೇ ಕೊಡ್ತಾರೆ ಅಂದ್ರೆ ಆ ಕಂಪನಿ ಬಾಸ್ ನಿಜಕ್ಕೂ ದೇವರಿದ್ದಂಗೆ. ಭಗವಂತ...ನಮಗೂ ಈ ಕಂಪನೀಲಿ ಕೆಲಸ ಸಿಗೋ ಹಾಗೆ ಮಾಡಪ್ಪ!' ಎಂದೆಲ್ಲ ಹರಕೆ ಕೂಡ ಕಟ್ಟಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು 'ಅಕ್ಟೋಬರ್ 26ರಿಂದ ನವೆಂಬರ್ 3ರವರೆಗಿನ ಮೀಶೋ ಅವರ 'ರೀಸೆಟ್ ಮತ್ತು ರೀಚಾರ್ಜ್' ವಿರಾಮವು 4 ದಿನಗಳು ವಾರಾಂತ್ಯ ರಜೆ ಹಾಗೂ ದೀಪಾವಳಿಯೂ ಇದೆ. ಹಾಗಾಗಿ ಇದನ್ನು ಬಿಟ್ಟರೆ ಹೆಚ್ಚುವರಿಯಾಗಿ ರಜೆ ಸಿಗುವುದು ಕೇವಲ 4 ದಿನ ಮಾತ್ರ. ಇದು ಹಬ್ಬಕ್ಕೆ ಮನೆ ಕ್ಲೀನ್ ಮಾಡೋದ್ರಲ್ಲೇ ಮುಗಿದಿರುತ್ತೆ. ನಿಮ್ಮ ಪ್ಲ್ಯಾನ್ ಸಖತ್ತಾಗಿದೆ ಮೀಶೋ!' ಎಂದು ಹಲವರು ಲೆಕ್ಕಾಚಾರ ತೆರೆದಿಟ್ಟಿದ್ದಾರೆ.

'ಇಂತಹ ಕಂಪನಿಗಳಿದ್ರೆ, ಕೆಲಸ ಮಾಡೋದಕ್ಕೂ ನೆಮ್ಮದಿ ಇರುತ್ತೆ, ಕೆಲವರು ಎಂತಹ ಎಮರ್ಜೆನ್ಸಿ ಇದ್ರೂ ರಜೆ ಕೊಡೋಕೆ ಹಿಟ್ಲರ್‌ಗಳಂತೆ ಆಡ್ತಾರೆ. ಇಷ್ಟು ಲಾಂಗ್ ಲೀವ್ ಕೊಡುವಂತೆ ಬಾಸ್‌ಗಳೇ ನಮ್ ಕಂಪನಿಗೂ ಬರಲಿ' ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಪೋಸ್ಟ್ ಉಳಿದ ಕಂಪನಿ ಉದ್ಯೋಗಿಗಳ ಹೊಟ್ಟೆ ಉರಿಸುತ್ತಿದೆ.












Click it and Unblock the Notifications