Maha Kumbh Mela 2025: ಮಹಾ ಕುಂಭಮೇಳ ಯಾವಾಗ ಆರಂಭ? ಸಂಪೂರ್ಣ ವಿವರ ಇಲ್ಲಿದೆ
ನಮ್ಮ ದೇಶ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎಂದರೆ ಅದು ಕುಂಭ ಮೇಳ. ಈ ಕುಂಭ ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು, ನಾಗಸಾಧುಗಳು, ಪಂಡಿತರು ಸೇರಿದಂತೆ ಲಕ್ಷ ಲಕ್ಷ ಜನರು ಭಾಗಿಯಾಗುತ್ತಾರೆ. ಈ ಬಾರಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಅತಿದೊಡ್ಡ ಮಹಾ ಕುಂಭಮೇಳ ನಡೆಯುತ್ತಿದ್ದು, ಸಂಭ್ರಮ ಈಗಾಗಲೇ ಮನೆ ಮಾಡಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ನಡೆಯಲಿದೆ. ಈ ಹಿಂದೆ 2013ರಲ್ಲಿ ಈ ಮಹಾ ಕುಂಭ ಮೇಳ ನಡೆದಿದ್ದು, ಇದೀಗ 12ಗಳ ನಂತರ 2025ರಲ್ಲಿ ಮತ್ತೆ ಈ ಬಹು ದೊಡ್ಡ ಉತ್ಸವ ಮಹಾ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿದೆ.

ಕುಂಭ ಮೇಳದಲ್ಲಿ ಅನೇಕ ವಿಧಗಳಿದ್ದು, ನಮ್ಮ ಕರ್ನಾಟಕದ ತಿವ್ರೇಣಿ ಸಂಗಮದಲ್ಲಿಯೂ ಕುಂಭ ಮೇಳ ನಡೆಸಲಾಗುತ್ತದೆ. ಆದರೆ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕುಂಭ ಮೇಳಕ್ಕೆ ತನ್ನದೇ ಆದ ಇತಿಹಾಸವಿದ್ದು, ಬಹಳ ವಿಜೃಂಭಣೆಯಿಂದ ನಡೆಯುವ ದೇಶದ ಅತಿದೊಡ್ಡ ಉತ್ಸವವಾಗಿ ಇದು ಮಾರ್ಪಟ್ಟಿದೆ. ಈ ಬಾರಿ ನಡೆಯುತ್ತಿರುವುದು ಬರೀ ಕುಂಭ ಮೇಳವಲ್ಲ, ಮಹಾ ಕುಂಭ ಮೇಳ ಹೀಗಾಗಿ ಇನ್ನಷ್ಟು ಅದ್ಧೂರಿಯಾಗಿ ಸಿದ್ಧತೆ ನಡೆಸಲಾಗುತ್ತಿದೆ.
700 ವರ್ಷಗಳ ಇತಿಹಾಸ ಇರುವ ಈ ಕುಂಭ ಮೇಳವನ್ನು ವರ್ಷಗಳಿಗೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಸರಸ್ವತಿ, ಗಂಗಾ ಹಾಗೂ ಯಮುನಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕುಂಭಮೇಳವನ್ನು ನಡೆಸಲಾಗುತ್ತದೆ. ಇನ್ನು ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳ ನಡೆಸಲಾಗುತ್ತದೆ. ಹಾಗೂ ಸಂಪೂರ್ಣ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಮಹಾ ಕುಂಭ ಮೇಳ ಎಂದು ಕರೆಯಲಾಗುತ್ತದೆ.

ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಐತಿಹಾಸಿಕ ಕಾರ್ಯಕ್ರಮ ಮಹಾ ಕುಂಭ ಮೇಳ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯಲಿದ್ದು, ಎಲ್ಲೆಡೆ ಭರ್ಜರಿ ತಯಾರಿ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಸ್ಥಾಪನೆಗೆ ಪ್ರಯಾಜ್‌ರಾಜ್‌ನ ಕುಂಭಮೇಳ ಕಾರ್ಯಕ್ರಮ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಹೀಗಾಗಿ ಕುಂಭ ಮೇಳಕ್ಕೆ ಬಂದ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಮರ್ಯಾದೆ ಪುರುಷೋತ್ತಮ ಶ್ರೀರಾಮನ ದರ್ಶನ ಪಡೆಯುವ ಸಾಧ್ಯತೆಯಿದ್ದು, ಕುಂಭಮೇಳಕ್ಕೆ ಅಯೋಧ್ಯೆಯಲ್ಲಿಯೂ ಅಷ್ಟೇ ಉತ್ಸಾಹದಿಂದ ತಯಾರಿ ನಡೆಯುತ್ತಿದೆ.












Click it and Unblock the Notifications