ಜೆಡಿಎಸ್ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರ ಪರಿಚಯ
2024ರ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಕುತೂಹಲ ಕೆರೆಳಿಸಿರುವ ಕ್ಷೇತ್ರ ಹಾಸನ. ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಹಾಸನದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಹಾಸನ ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಕುಟುಂಬ ಪ್ರಭಾವ ಇರುವ ಕ್ಷೇತ್ರ. ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರ. ಆದ್ದರಿಂದ ಪ್ರತಿ ಬಾರಿಯ ಹಾಸನ ಚುನಾವಣೆ ಒಂದಲ್ಲ ಒಂದು ಕಾರಣಕ್ಕೆ ಕುತೂಹಲ ಮೂಡಿಸುತ್ತದೆ.

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಎಂ. ಶ್ರೇಯಸ್ ಪಟೇಲ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹಾಸನ ಜೆಡಿಎಸ್‌ಗೆ ಸಿಗಲಿದ್ದು, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗುವುದು ಬಹುತೇಕ ಖಚಿವಾಗಿದೆ. ಆದರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ಅಪಸ್ವರ ಎತ್ತಿದೆ.
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣ ಕ್ಷೇತ್ರದಲ್ಲಿ ಮೈತ್ರಿಕೂಟದ ಬಲವೇ ಹೆಚ್ಚಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕ್ಷೇತ್ರದ ಒಟ್ಟು ಮತದಾರರು 17,01,650. ಇವರಲ್ಲಿ ಪುರುಷರು 8,51,100 ಮತ್ತು ಮಹಿಳೆಯರು 8,50,500.
5 ಬಾರಿ ದೇವೇಗೌಡರು ಆಯ್ಕೆ: ಹಾಸನ ಲೋಕಸಭಾ ಕ್ಷೇತ್ರದಿಂದ 5 ಬಾರಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಆಯ್ಕೆಯಾದರು. 2019ರ ಚುನಾವಣೆಯಲ್ಲಿ ಅವರು ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟರು. ಮೊದಲ ಚುನಾವಣೆ ಎದುರಿಸಿದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲವನ್ನು ಪಡೆದರು. ಮೊದಲ ಚುನಾವಣೆಯಲ್ಲಿಯೇ ಜಯಗಳಿಸಿ, ಸಂಸತ್ ಪ್ರವೇಶ ಮಾಡಿದರು.
ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 676,606 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿಯಾಗಿದ್ದ ಬಿಜೆಪಿಯ ಎ. ಮಂಜು 535,282 ಮತಗಳನ್ನು ಪಡೆದು ಸೋಲು ಕಂಡರು. ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಹಾಸನ ಕ್ಷೇತ್ರದಲ್ಲಿ ಮಾಜಿ ಸಚಿವೆ ಎಚ್. ಡಿ. ರೇವಣ್ಣ ಪ್ರಭಾವ ಭಾರೀ ಇದೆ. ಅವರ ಪುತ್ರ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗಬಹುದು. ದೇವೇಗೌಡರು, ರೇವಣ್ಣ ಪ್ರಭಾವ ಮತ್ತು ಬಿಜೆಪಿ ಜೊತೆಗಿನ ಮೈತ್ರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಕಾಂಗ್ರೆಸ್ ಹಾಸನ ಗೆಲ್ಲಬೇಕು ಎಂದು ತಂತ್ರ ರೂಪಿಸಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್. ಡಿ. ರೇವಣ್ಣ ವಿರುದ್ಧ ಸೋತಿದ್ದ ಎಂ. ಶ್ರೇಯಸ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿ. 1999ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿ ಗೌಡ ಗೆಲುವು ಕಂಡಿದ್ದರು. ಮಾಜಿ ಸಚಿವರೂ ಆದ ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಈ ಬಾರಿ ಅಭ್ಯರ್ಥಿ.
ಹಾಸನದಲ್ಲಿ ದೇವೇಗೌಡರು ರಾಜಕೀಯ ಏಳುಬೀಳು ಕಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಪುಟ್ಟಸ್ವಾಮಿ ಗೌಡ 1985ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು, ಸೋತರು. ಆದರೆ 1989, 1999ರ ಚುನಾವಣೆಯಲ್ಲಿ ದೇವೇಗೌಡರನ್ನು ಪುಟ್ಟಸ್ವಾಮಿ ಗೌಡ ಸೋಲಿಸಿದರು. ಈಗ ಅವರ ಮೊಮ್ಮಗ, ಎಚ್. ಡಿ. ದೇವೇಗೌಡರ ಮೊಮ್ಮಗ ಎದುರಾಳಿಗಳಾಗುವ ಸಾಧ್ಯತೆ ಇದೆ. ಈ ಮೂಲಕ ತಲೆಮಾರುಗಳ ರಾಜಕಾರಣ ಮುಂದುವರೆಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ಹಾಸನದಲ್ಲಿ ಅಷ್ಟು ಪ್ರಭಾವವಿಲ್ಲ. ಇಬ್ಬರು ಶಾಸಕರು ಮಾತ್ರ ಇದ್ದಾರೆ. ಹಿಂದಿನ ಚುನಾವಣೆಗಳನ್ನು ನೋಡುವುದಾದರೆ 2014ರಲ್ಲಿ ಕಾಂಗ್ರೆಸ್‌ನ ಎ. ಮಂಜು 409,379 ಮತಗಳನ್ನು ಪಡೆದು, ಜೆಡಿಎಸ್‌ನ ಎಚ್. ಡಿ. ದೇವೇಗೌಡ ವಿರುದ್ದ (509,841 ಮತ) ಸೋಲು ಕಂಡಿದ್ದರು. 2009ರಲ್ಲಿ ಕಾಂಗ್ರೆಸ್‌ನ ಬಿ. ಶಿವರಾಮು 201,147 ಮತಗಳನ್ನು ಪಡೆದು ದೇವೇಗೌಡರ ವಿರುದ್ಧ ಸೋಲು ಕಂಡಿದ್ದರು.
ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಒಂದು ವೇಳೆ ಪ್ರಜ್ವಲ್ ಕಣಕ್ಕಿಳಿಯದಿದ್ದರೆ ಜೆಪಿಯಿಂದ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ, ಕಿರಣ್, ಸಿದ್ದೇಶ್ ನಾಗೇಂದ್ರ ಟಿಕೆಟ್ ಆಕಾಂಕ್ಷಿಗಳು. ಆದರೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ತೀರಾ ಕಡಿಮೆ ಎಂಬ ಮಾತಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಸನದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಮಾರ್ಚ್ 25ರಂದು ಜೆಡಿಎಸ್ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆ.
ಹಿಂದಿನ ಮೂರು ಚುನಾವಣೆಗಳ ಫಲಿತಾಂಶ
* 2009ರಲ್ಲಿ ಜೆಡಿಎಸ್‌ನ ಎಚ್. ಡಿ. ದೇವೇಗೌಡ 496,429 ಮತಗಳನ್ನು ಪಡೆದು ಗೆಲುವು. ಬಿಜೆಪಿಯ ಕೆ. ಎಚ್. ಹನುಮೇಗೌಡ 205,316 ಮತಗಳನ್ನು ಪಡೆದು ಸೋಲು, ಕಾಂಗ್ರೆಸ್‌ನ ಬಿ. ಶಿವರಾಮು 201,147 ಮತಗಳನ್ನು ಪಡೆದು 3ನೇ ಸ್ಥಾನ.
* 2014ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್. ಡಿ. ದೇವೇಗೌಡ 509,841 ಮತಗಳನ್ನು ಪಡೆದು ಗೆಲುವು. ಕಾಂಗ್ರೆಸ್‌ನ ಎ. ಮಂಜು 409,379 ಮತಗಳನ್ನು ಪಡೆದು ಸೋಲು. ಬಿಜೆಪಿಯ ಸಿ. ಎಚ್. ವಿಜಯಶಂಕರ್ 165,688 ಮತಗಳನ್ನು ಪಡೆದು ಸೋಲು.
* 2019ರ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ 676,606 ಮತಗಳನ್ನು ಪಡೆದು ಗೆಲುವು. ಬಿಜೆಪಿಯ ಎ. ಮಂಜು 535,282 ಮತಗಳನ್ನು ಪಡೆದು ಸೋಲು. ಬಿಎಸ್‌ಪಿಯ ವಿನೋದ್ ರಾಜ್ ಹೆಚ್. 38,761 ಮತಗಳನ್ನು ಪಡೆದು 3ನೇ ಸ್ಥಾನ.












Click it and Unblock the Notifications