KRS Dam: 2024ರಲ್ಲಿ ಇತಿಹಾಸ ಸೃಷ್ಟಿಸಿದ ಕೆಆರ್‌ಎಸ್ ಜಲಾಶಯ
KRS Dam: ಈ ಬಾರಿ ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದವು. ಇನ್ನೂ ಈಗಾಗಲೇ ಹಲವು ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ, ಡಿಸೆಂಬರ್ ಬಂದರೂ ಸಹ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಅಣೆಕಟ್ಟು ಭರ್ತಿಯಾಗಿದೆ. ಈ ಮೂಲಕ ನಿರ್ಮಾಣವಾಗಿ 90 ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿ ದಾಖಲೆಯೊಂದನ್ನು ಸೃಷ್ಟಿಸಿದೆ.
2024ರ ಜೂನ್ ಆರಂಭದಿಂದ ಸುರಿದ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರು. ಆದರೆ ವರ್ಷಾಂತ್ಯದ ವೇಳೆಗೆ ಅಂದರೆ ಇದೀಗ ಪ್ರಸ್ತುತ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ಆದರೆ, ಕೆಆರ್‌ಎಸ್ ಜಲಾಶಯ ಮಾತ್ರ ಡಿಸೆಂಬರ್‌ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದೆ. ಇದು 30 ವರ್ಷಗಳಲ್ಲೇ ದಾಖಲೆ ಮಟ್ಟದ ನೀರಿನ ಸಂಗ್ರಹವಾಗಿದೆ.

ಕಳೆದ 30 ವರ್ಷಗಳ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ ಕೊನೆಯ ವಾರದಲ್ಲಿ (ಡಿಸೆಂಬರ್ 25) ಪ್ರಸಕ್ತ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಭರ್ತಿಯಾಗಿರುವುದು ಕಂಡುಬರುತ್ತದೆ. 2021ರ ಡಿಸೆಂಬರ್ 15ರ ವೇಳೆಯಲ್ಲಿ ಜಲಾಶಯ ಭರ್ತಿ ಆಗಿದ್ದರೂ, ಡಿಸೆಂಬರ್ 25ರ ವೇಳೆಗೆ 124.22 ಅಡಿಗೆ ಇಳಿಕೆ ಆಗಿತ್ತು.
ಜಲಾಶಯವು 49.452 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಅಷ್ಟೇ ಪ್ರಮಾಣದ ನೀರಿನ ಸಂಗ್ರಹಣಾ ಸಮಾರ್ಥ್ಯವನ್ನು ಹೊಂದಿದೆ. ಇನ್ನು ಭಾರೀ ಮಳೆಯಾದ ಕಾರಣ ತಮಿಳುನಾಡಿಗೆ ಬಿಡಬೇಕಿದ್ದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಈ ಬಾರಿ ಹರಿಸಲಾಗಿದೆ.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ 174 ಕೆರೆಗಳಲ್ಲಿ 142 ಕೆರೆಗಳು ಭರ್ತಿಯಾಗಿವೆ. ಉಳಿದ 20 ಕೆರೆಗಳಲ್ಲಿ ಶೇಕಡ 75ರಷ್ಟು, ಒಂದು ಕೆರೆಯಲ್ಲಿ ಶೇಕಡ 50ರಷ್ಟು ಮತ್ತು 3 ಕೆರೆಗಳಲ್ಲಿ ಶೇಕಡ 25ರಷ್ಟು ನೀರು ಸಂಗ್ರಹವಿದೆ. ಡ್ಯಾಂ ಮತ್ತು ಕೆರೆಗಳು ಭರ್ತಿಯಾಗಿರುವ ಕಾರಣ ಬೇಸಿಗೆ ಬೆಳೆಗೆ ನೀರು ಸಿಗಲಿದೆ.
ಈ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ 692 ಮಿಲೊ ಮೀಟರ್ ವಾಡಿಕೆ ಮಳೆಗೆ, 964 ಮಿಲಿ ಮೀಟರ್‌ನಷ್ಟು ಮಳೆ ಸುರಿದಿದೆ. ಈ ಮೂಲಕ ಶೇಕಡ 24.8ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿದುಬಂದಿದೆ. ಕೇರಳದ ಕೆಲವು ಭಾಗ, ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದಿರುವ ಹಿನ್ನೆಲೆ ಕೆಆರ್‌ಎಸ್ ಜಲಾಶಯಕ್ಕೆ ಉತ್ತಮ ಒಳಹರಿವು ಬಂದಿದೆ.
ಈ ವರ್ಷ ಉತ್ತಮ ಮಳೆ ಸುರಿದ ಹಿನ್ನೆಲೆ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಅಣೆಕಟ್ಟೆಗೆ 136 ಹೊಸ ಗೇಟ್‌ಗಳನ್ನು ಅಳವಡಿಸಿದ ಪರಿಣಾಮ ನಿತ್ಯ ಪೋಲಾಗುತ್ತಿದ್ದ 1,000 ಕ್ಯೈಸೆಕ್ ನೀರನ್ನು ತಡೆಗಟ್ಟಿದ್ದೇವೆ. 31 ಕಿಲೋ ಮೀಟರ್ ಉದ್ದದ ನಾಲೆಗಳ ಆಧುನೀಕರಣ ಕಾಮಗಾರಿ ಹಾಗೂ ನೀರುಗಂಟಿಗಳು ಅತ್ಯುತ್ತಮವಾಗಿ ನೀರು ನಿರ್ವಹಣೆ ಮಾಡಿರುವುದು ಸೇರಿ ಇತರ ಕಾರಣಗಳಿಂದ ಡ್ಯಾಂ ಡಿಸೆಂಬರ್ ಅಂತ್ಯದಲ್ಲೂ ಭರ್ತಿಯಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಎಂಜಿನಿಯರ್ ರಘುರಾಂ ಮಾಹಿತಿ ನೀಡಿದರು ಅಂತಾ ಪ್ರಜಾವಾಣಿ ವರದಿ ಮಾಡಿದೆ.
ಇತಿಹಾಸ ಸೃಷ್ಟಿಸಿದ ಕೆಆರ್‌ಎಸ್: ಕೆಆರ್‌ಎಸ್ ಡ್ಯಾಂ ನಿರ್ಮಾಣದ ಆದ ದಿನದಿಂದ ಇಲ್ಲಿವರೆಗೂ ಅಂದರೆ 90 ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಒಂದು ವಾರ್ಷದಲ್ಲಿ ಬರೋಬ್ಬರಿ 154 ದಿನ ಪೂರ್ಣ ಭರ್ತಿಯಾಗಿದೆ. ಈ ಬಾರಿ ಜುಲೈ 25ಕ್ಕೆ ಮೊದಲ ಬಾರಿ ಡ್ಯಾಂ ಭರ್ತಿಯಾಗಿತ್ತು. ಅಲ್ಲಿಂದ ಡಿಸೆಂಬರ್ 25ರ ವರೆಗೂ ಜಲಾಶಯ ಪೂರ್ಣ ಭರ್ತಿಯಾಗಿದೆ. ನಡುವೆ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟವನ್ನು ಸ್ವಲ್ಪ ಇಳಿಕೆ ಮಾಡಲಾಗಿತ್ತು. 2009ರಲ್ಲಿ 146 ದಿನ, 2022ರಲ್ಲಿ 114 ದಿನ ಡ್ಯಾಂ ಭರ್ತಿಯಾಗಿತ್ತು ಎಂದು ಕೇವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ತಿಳಿಸಿದ್ದಾರೆ ಅಂತಾ ವರದಿ ಮಾಡಿದೆ.












Click it and Unblock the Notifications