ಅಮ್ಮನ ಮರುಮದುವೆ ಮಾಡಿಸಿ, ಭಾವುಕ ಪತ್ರ ಬರೆದ ಪುತ್ರನ ಕತೆ ಕೇಳಿ...
ತನ್ನ ತಾಯಿಗೆ ಮರುಮದುವೆ ಮಾಡಿಸಿ, ಆಕೆಗೆ "ಹ್ಯಾಪಿ ಮ್ಯಾರಿಡ್ ಲೈಫ್" ಎಂದು ಪುತ್ರನೇ ಭಾವುಕವಾಗಿ ಬರೆದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಾಯಿಯ ಬಗೆಗಿನ ಮಗನ ಪ್ರೀತಿ, ತನಗೋಸ್ಕರ ಆಕೆ ಮಾಡಿದ ತ್ಯಾಗಗಳನ್ನು ನೆನಪಿಸಿಕೊಂಡು ಋಣಸಂದಾಯಕ್ಕೆ ಪ್ರಯತ್ನಿಸಿದ ಮಗನ ಮಾನವೀಯ ನಡೆಗೆ ಸಾವಿರಾರು ಜನರು ಸಲಾಂ ಎದ್ದಿದ್ದಾರೆ.
ಕೇರಳದ ಕೊಲ್ಲಂನ ಇಂಜಿನಿಯರ್ ಗೋಕುಲ್ ಶ್ರೀಧರ್ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಸಾವಿರು ಜನರ ಗಮನ ಸೆಳೆಯುವುದಕ್ಕೆ ಕಾರಣ, ಅದರಲ್ಲಿದ್ದ ಆ ಸಾಲು.
"ನನ್ನ ತಾಯಿಯ ಮದುವೆ..." ಎಂಬ ಆ ಸಾಲನ್ನು ನೋಡಿ ಅಚ್ಚರಿ ಪಟ್ಟವರೇ ಹೆಚ್ಚು. ಹೆಗಲೆತ್ತರಕ್ಕೆ ಬೆಳೆದ ಮಗನೇ ನಿಂತು ತಾಯಿಯ ಮದುವೆ ಮಾಡಿಸೋದು ಅಂದ್ರೆ ಅಚ್ಚರಿಯಾಗದೆ ಇದ್ದೀತೆ?

"ಇಂದಿಗೂ ಕೆಲವು ಕಡೆ ಮರುಮದುವೆಗೆ ನಿಷೇಧವಿದೆ. ಆದರೆ ನನ್ನ ತಾಯಿಯ ಮನಸ್ಸಲ್ಲಿ ವೈವಾಹಿಕ ಬದುಕಿನ ಬಗ್ಗೆ ಇರುವ ಕಹಿಯನ್ನು ಕಳೆಯಬೇಕಿದೆ. ಆಕೆ ಅನುಭವಿಸಿದ ನೋವಿಗೆ ಇನ್ನಾದರೂ ನಗುವಿನ ಪ್ರತಿಫಲ ಸಿಗಬೇಕಿದೆ. ಆದ್ದರಿಂದ ಈ ನಿರ್ಧಾರ" ಎಂದು ಶ್ರೀಧರ್ ಬರೆದಿದ್ದಾರೆ.
"ನನಗೆ ಈಗಲೂ ನೆನಪಿದೆ. ನನ್ನ ತಂದೆ ತಾಯಿಗೆ ಕೊಡದ ಕಷ್ಟವಿಲ್ಲ. ಪ್ರತಿದಿನವೂ ಆತನಿಂದ ಹಿಂಸೆ ಅನುಭವಿಸುತ್ತಿದ್ದ ತಾಯಿಯನ್ನು ನೋಡಿ ನಾನೂ ಅಳುತ್ತಿದ್ದೆ. ಒಮ್ಮೆ ತಂದೆ ನೀಡಿದ ಹಿಂಸೆಯಿಂದ ಅಮ್ಮನ ಹಣೆಯಲ್ಲಿ ರಕ್ತ ಒಸರುತ್ತಿದ್ದು. ಆ ನೋವನ್ನು ಸಹಿಸಿಕೊಂಡಿದ್ದ ಅಮ್ಮನ ಬಳಿ ಕೇಳಿದ್ದೆ, 'ನೀನ್ಯಾಕೆ ಈ ನೋವನ್ನೆಲ್ಲ ಸಹಿಸಿಕೊಂಡಿದ್ದೀಯಾ?' ಅಂತ. ಅದಕ್ಕೆ ಅಮ್ಮ ಹೇಳಿದ್ದರು, 'ನಿನಗೋಸ್ಕರ ಮಗನೇ. ನಾನು ಬದುಕಿರೋದೆ ನಿನಗೋಸ್ಕರ. ನಿನಗೋಸ್ಕರ ನಾನು ಎಷ್ಟು ನೋವನ್ನಾದರೂ ಸಹಿಸಿಕೊಳ್ಳಬಲ್ಲೆ' ಎಂದು. ಆ ಮಾತು ಕೇಳಿ ನನ್ನ ಕಣ್ಣಲ್ಲಿ ಬೇಡವೆಂದರೂ ನೀರು ಉಕ್ಕುತ್ತಿತ್ತು" ಎಂದು ಪತ್ರದಲ್ಲಿ ಶ್ರೀಧರ್ ಬರೆದಿದ್ದಾರೆ.
"ಅಪ್ಪನಿಂದ ಅಮ್ಮ ದಿನವೂ ಹಿಂಸೆ ಅನುಭವಿಸುವುದು ನೋಡಲಾಗದೆ, ನಾವು ಒಮ್ಮೆ ಆ ಮನೆಯಿಂದ ಆಚೆ ಬಂದೆವು. ನಾನು ಅಮ್ಮನ ಕೈ ಹಿಡಿದು ಆ ಮನೆಯಿಂದ ಹೊರಗೆ ಬರುವಾಗಲೇ ನಿರ್ಧರಿಸಿದ್ದೆ, ಅಮ್ಮನಿಗೆ ಮರುಮದುವೆ ಮಾಡಬೇಕು ಎಂದು. ನನ್ನ ಅಮ್ಮ ತನ್ನ ತಾರುಣ್ಯವನ್ನು ನನಗೋಸ್ಕರ ತ್ಯಾಗ ಮಾಡಿದಳು, ಆಕೆಗೆ ಎಷಹ್ಟೋ ಕನಸುಗಳಿದ್ದವು, ಅವನ್ನೂ ನನಗೋಸ್ಕರ ಮರೆತಳು. ನಾನು ಇನ್ನು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಈ ವಿಷಯವನ್ನು ಗುಟ್ಟಾಗಿ ಇಡುವುದು ನನಗೆ ಇಷ್ಟವಿಲ್ಲ. ಹ್ಯಾಪಿ ಮ್ಯಾರಿಡ್ ಲೈಫ್ ಅಮ್ಮಾ..."
ಈಗಾಗಲೇ ಈ ಪೋಸ್ಟ್ ಗೆ 31 ಸಾವಿರ ಲೈಕ್ಸ್ ಬಂದಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ಇದನ್ನು ಶೇರ್ ಮಾಡಿದ್ದಾರೆ. ಗೋಕುಲ್ ಶ್ರೀಧರ್ ಅವರಿಗೆ ತಾಯಿಯ ಮೇಲಿರುವ ಪ್ರೀತಿಗೆ ನೂರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications