ಅಸ್ಸಾಂ ಜನರ ನೆಚ್ಚಿನ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ
ನಾಯಿ ಜೊತೆ ವಾಕಿಂಗ್ ಮಾಡಬೇಕು ಎಂದು ಕ್ರೀಡಾಂಗಣದಲ್ಲಿ ಅಥ್ಲಿಟ್‌ಗಳನ್ನೇ ಹೊರಹಾಕಿದ್ದ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿವಾದ ಶುರುವಾಗುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ಹಾಗೂ ರಿಂಕು ದುಗ್ಗಾರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿತ್ತು.
ಏನಪ್ಪಾ ಅಷ್ಟೆಲ್ಲಾ ಓದಿ, ಜನಗಳಿಗಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳೇ ಈ ರೀತಿ ಅಹಂಕಾರದಿಂದ ವರ್ತಿಸಿದರೆ ಹೇಗೆ ಅಂದುಕೊಳ್ಳುತ್ತಿದ್ದೀರಾ?, ಹಾಗಾದ್ರೆ ಇವರ ಬಗ್ಗೆ ನೀವು ಓದಲೇಬೇಕು, ಸಾದಾ ಸೀರೆಯುಟ್ಟು ಕೆಸರಲ್ಲಿ ನಡೆಯುತ್ತಾ, ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ಆಲಿಸುತ್ತಿರುವ ಈ ಮಹಿಳೆ ಜಿಲ್ಲಾಧಿಕಾರಿ ಅಂದ್ರೆ ನೀವು ನಂಬ್ತೀರಾ? ಹೌದು, ನೀವು ನಂಬಲೇಬೇಕು ಇವರು ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ.
ಭ್ರಷ್ಟ IAS ಗಳಿಗೆ ಕನಸಲ್ಲೂ ಕಾಡುವ ಕನ್ನಡಿಗ IPS ಅಧಿಕಾರಿ ದಿನೇಶ್ ಎಂ.ಎನ್!
ತನ್ನ ಸಮಾಜಮುಖಿ ಕೆಲಸಗಳಿಂದ ಅಸ್ಸಾಂನಲ್ಲಿ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿರುವ ಈ ಜಿಲ್ಲಾಧಿಕಾರಿ ಫೋಟೋಗಳು ಈಗ ವೈರಲ್ ಆಗಿದೆ. ಪ್ರವಾಹ ಪೀಡಿತ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಜನರ ಸಮಸ್ಯೆಗಳಿಗೆ ಕೀರ್ತಿ ಜಲ್ಲಿ ಸ್ಪಂದಿಸುತ್ತಿರುವ ರೀತಿ ನಿಜಕ್ಕೂ ಅನುಕರಣೀಯ.

ಕೆಸರಿನ ರಸ್ತೆಯಲ್ಲೇ ನಡೆದ ಕೀರ್ತಿ
ಇತ್ತೀಚೆಗಷ್ಟೇ ದುಬಾರಿ ಶೂ ಧರಿಸಿದ್ದೇನೆ ಎಂದು ನೀರಿನಲ್ಲಿ ಇಳಿಯದೇ ರಕ್ಷಣಾ ಸಿಬ್ಬಂದಿ ಬೆನ್ನೇರಿ ಕುಳಿತು ದೋಣಿ ಹತ್ತಿದ್ದ ಶಾಸಕನ ಸುದ್ದಿಯನ್ನ ನೀವು ಓದಿರುತ್ತೀರಿ. ಆದರೆ ಜನಸೇವೆಗೆ ನಿಯೋಜಿತರಾಗಿರುವ ಅಧಿಕಾರಿ ಹೇಗಿರಬೇಕು ಎಂದು ತನ್ನ ಕೆಲಸದಿಂದಲೇ ತೋರಿಸುತ್ತಿರುವುದು ಕೀರ್ತಿ ಜಲ್ಲಿ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಸರು ರಸ್ತೆಯಲ್ಲಿ ನಡೆಯುವ ಅವರು ಜನರ ಬಳಿ ಹೋಗಿ ಸಮಸ್ಯೆ ಆಲಿಸುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.
ಈಗ ಅದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂತ ಜಿಲ್ಲಾಧಿಕಾರಿ ಬೇಕು ಎಂದು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ತಾನು ಜಿಲ್ಲಾಧಿಕಾರಿ ಎನ್ನುವ ಸ್ವಲ್ಪ ಅಹಂ ಕೂಡ ಇಲ್ಲದೆ ಜನರೊಂದಿಗೆ ಕೀರ್ತಿ ಸಾಮಾನ್ಯರೊಂದಿಗೆ ಬೆರೆಯುತ್ತಾರೆ.

ಯಾರು ಈ ಕೀರ್ತಿ ಜಲ್ಲಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕೀರ್ತಿ ಜಲ್ಲಿ ಯಾರು? ಎಲ್ಲಿಯವರು ಎನ್ನುವ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ. ಹಲವರು ಕೀರ್ತಿ ಜಲ್ಲಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದಾರೆ.
ಕೀರ್ತಿ ಜಲ್ಲಿ ತೆಲಂಗಾಣದ ವಾರಂಗಲ್ ಜಿಲ್ಲೆಯವರು, ಆಕೆಯ ತಂದೆ ಜಲ್ಲಿ ಕನಕಯ್ಯ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ತಾಯಿ ವಸಂತ ಗೃಹಿಣಿ. 2011ರಲ್ಲಿ ಬಿ.ಟೆಕ್. ಮುಗಿಸಿದ ಕೀರ್ತಿ, ಬಹುದಿನಗಳ ಐಎಎಸ್ ಕನಸನ್ನು ನನಸಾಗಿಸಿಕೊಳ್ಳಲು ದೆಹಲಿಗೆ ತೆರಳಿದ್ದರು. ಎರಡು ವರ್ಷಗಳ ಕಠಿಣ ಪರಿಶ್ರಮದ ನಂತರ 2013ರ ಸಿವಿಲ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 89ನೇ ಹಾಗೂ ರಾಜ್ಯಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದು ಆಯ್ಕಯಾಗಿದ್ದರು.
ಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆ

ರಾಷ್ಟ್ರಪತಿಯಿಂದ ಸಿಕ್ಕಿತ್ತು ಪ್ರಶಸ್ತಿ
ಐಎಎಸ್ ತರಬೇತಿ ಮುಗಿಸಿದ ಕೀರ್ತಿಗೆ ಅಸ್ಸಾಂನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುವ ಅವಕಾಶ ಸಿಕ್ಕಿತು. ಜೋರ್ಹತ್ ಜಿಲ್ಲೆಯ ತಿತಾಬರ್ ಪ್ರದೇಶಕ್ಕೆ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗ 2013ರ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ಅಸ್ಸಾಂನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕೀರ್ತಿ ಜಲ್ಲಿ ತಂಡಕ್ಕೆ ಜವಾಬ್ದಾರಿ ವಹಿಸಲಾಗಿತ್ತು.
ಅಸ್ಸಾಂ ಜನರಿಗೆ ಭೋನಿ (ಕಿರಿಯ ಸಹೋದರಿ) ಎಂದರೆ ತುಂಬಾ ಮಮತೆ, ಅಲ್ಲಿನ ಸಂಸ್ಕೃತಿಯಲ್ಲಿ ಅವರಿಗೆ ತುಂಬಾ ಪ್ರೀತಿ ಸಿಗುತ್ತದೆ. ಇದನ್ನು ಗಮನಿಸಿದ ಕೀರ್ತಿ ಜಲ್ಲಿ ಅದನ್ನೇ ಮತದಾನ ಜಾಗೃತಿಗಾಗಿ ಬಳಸಿಕೊಂಡರು. ಎಲ್ಲಾ ಕಡೆ 'ಭೋನಿ' ಚಿತ್ರ ಬಳಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಹೋರ್ಡಿಂಗ್, ಕರಪತ್ರ, ಬ್ಯಾನರ್‍ಗಳನ್ನು ಹಾಕಿಸಲಾಯಿತು ಪರಿಣಾಮ ಮತದಾನದ ಪ್ರಮಾಣ ಹೆಚ್ಚಾಗಿತ್ತು, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕೀರ್ತಿ ಮಾಡಿದ ಪ್ರಯತ್ನಗಳಿಗಾಗಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 'ಬೆಸ್ಟ್ ಎಲೆಕ್ಟೋರಲ್ ಪ್ರಾಕ್ಟೀಸಸ್ ಅವಾರ್ಡ್' ನೀಡಿ ಗೌರವಿಸಿದ್ದರು.

ಅಪೌಷ್ಠಿಕತೆ ನಿವಾರಣೆಗಾಗಿ ಕೆಲಸ
ಅವರು 2019 ರಲ್ಲಿ 'ಹಲಕಂಡಿ' ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ, ಅಲ್ಲಿನ ಜನರು, ವಿಶೇಷವಾಗಿ ಟೀ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು. ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಅಲ್ಲಿ ಮಹಿಳೆಯರಿಗೆ ರಕ್ತಹೀನತೆ ನಿವಾರಣೆಗೆ ವ್ಯಾಪಕವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿ ಬಳಸಿ ತಯಾರಿಸಿದ 'ಉಸಿರಿ ಮುರಬ್ಬ' ತಯಾರಿಸಿ ವಿತರಿಸಿದರು.
'ಡಿಬ್ಬಿ ಅದನ್ ಪ್ರಧಾನ' ಕಾರ್ಯಕ್ರಮ ರೂಪಿಸಿದ್ದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರದ ಜೊತೆಗೆ ವಾರದಲ್ಲಿ ಒಂದು ದಿನ ತಾಯಂದಿರು ತಮ್ಮ ಮನೆಯ ಆಹಾರವನ್ನು ಡಬ್ಬಿಯಲ್ಲಿ ಹಾಕಿ ಮಕ್ಕಳೊಂದಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಎಲ್ಲಾ ಮಕ್ಕಳು ಡಬ್ಬಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ತಿನ್ನಲು ವ್ಯವಸ್ಥೆ ಮಾಡಿದ್ದರು. ಎಲ್ಲಾ ರೀತಿಯ ಆಹಾರ ತಿನ್ನಲು ಮತ್ತು ಅಪೌಷ್ಠಿಕತೆ ನಿವಾರಿಸಲು ಇದು ಸಹಾಯ ಮಾಡಿತ್ತು. ಈ ಕಾರ್ಯಕ್ರಮ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.
ಅಸ್ಸಾಂನ ಪ್ರವಾಹ ಸಂದರ್ಭದಲ್ಲಿ ಕೀರ್ತಿ ಕಾರ್ಯ ವೈಖರಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ. ಐಎಫ್‌ಎಸ್ ಅಧಿಕಾರಿ ಅನುಪಮ್ ಶರ್ಮಾ ಟ್ವೀಟ್ ಮಾಡಿದ್ದು, "ಎರಡೂ ಫೋಟೊಗಳಲ್ಲಿ ಕಾಣಿಸುವ ಅಧಿಕಾರಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆದರೆ ಸಂದೇಶ ಬಹಳ ಸರಳವಾಗಿದೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಲ್ಲ. ಕೆಲಸ ಸಿಕ್ಕ ನಂತರ ಏನು ಮಾಡುತ್ತೀರಿ ಎನ್ನುವುದು ಮುಖ್ಯ. ನಿಜವಾದ ಘನತೆ ಸಿಗುವುದು ಮಾನವೀಯತೆಯಿಂದ, ಓದಿನಿಂದಲ್ಲ" ಎಂದು ಬರೆದುಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)