Year Ender 2024: ಕರ್ನಾಟಕ ಸೇರಿದಂತೆ ಈ ಐದು ರಾಜ್ಯಗಳಲ್ಲೇ ಅತಿ ಹೆಚ್ಚು ಡಿವೋರ್ಸ್ ಕೇಸ್
ಇತ್ತೀಚೆಗಂತೂ ವಿಚ್ಛೇದನ ಎನ್ನುವುದು ಸಮಾನ್ಯ ಎನ್ನುವಂತಾಗಿದೆ. ಮೊದಲೆಲ್ಲ ಡಿವೋರ್ಸ್ ಪದ ಕೇಳುವುದೇ ಅಪರೂಪ. ಆದರೆ ಈಗ ಎಲ್ಲೆಲ್ಲೂ ಡಿವೋರ್ಸ್ ಸದ್ದು ಮಾಡುವ ಕಾಲಘಟ್ಟಕ್ಕೆ ಬಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿವೋರ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ವರದಿಗಳು ಕೂಡ ಪ್ರಕಟಗೊಂಡಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಡಿವೋರ್ಸ್ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಹೇಳಲಾಗಿದೆ.
ಇನ್ನು ಈ ಅತಿ ಹೆಚ್ಚು ಡಿವೋರ್ಸ್ ಕೇಸ್ ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕವೂ ಸ್ಥಾನ ಪಡೆದಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಭಾರತದ ಈ ಐದು ರಾಜ್ಯಗಳಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದು, ಇವುಗಳು ಈ ಮುಂದಿನಂತಿವೆ..

* ಕೇರಳ: ಮೊದಲ ಸ್ಥಾನದಲ್ಲಿ ದೇವರ ನಾಡು ಕೇರಳ ಇದೆ. ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಈ ರಾಜ್ಯದಲ್ಲೇ ಇತ್ತೀಚೆಗೆ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಕೇರಳದಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗಿದ್ದು, ವಿದ್ಯಾವಂತರೇ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ.
* ಗೋವಾ: ಪಕ್ಕದ ಗೋವಾ ಕೂಡ ಎರಡನೇ ಸ್ಥಾನದಲ್ಲಿದೆ. ಡಿವೋರ್ಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ರಾಜ್ಯಗಳಲ್ಲಿ ಗೋವಾ ಕೂಡ ಇದೆ. ಇಲ್ಲಿನ ಜನರ ಜೀವನ ಶೈಲಿ ಭಿನ್ನವಾದರೂ ಡಿವೋರ್ಸ್ ವಿಚಾರದಲ್ಲಿ ದಾಪುಗಾಲಿಟ್ಟಿದೆ. ಬೀಚ್‌ಗಳಿಗೆ, ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದ ಗೋವಾ ಡಿವೋರ್ಸ್‌ನಲ್ಲೂ ಖ್ಯಾತಿ ಪಡೆದಿದೆ.

* ಮಹಾರಾಷ್ಟ್ರ: ವಾಣಿಜ್ಯ ನಗರಿ ಮುಂಬೈನಲ್ಲೂ ಡಿವೋರ್ಸ್ ಪಡೆಯುವವರ ಸಂಖ್ಯೆ ಏರಿಕೆ ಕಂಡಿದೆ. ಇಲ್ಲಿನ ಜನರು ನಾನಾ ಕಾರಣಗಳಿಂದ ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲೇ ಹೆಚ್ಚಿನ ಡಿವೋರ್ಸ್ ಪ್ರಕರಣಗಳು ವರದಿಯಾಗಿವೆ.
* ಕರ್ನಾಟಕ: ಡಿವೋರ್ಸ್ ವಿಚಾರದಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದಿದ್ದು, ಅತಿ ಹೆಚ್ಚು ಡಿವೋರ್ಸ್ ಕೇಸ್ ವರದಿಯಾಗಿರುವ ನಾಲ್ಕನೇ ರಾಜ್ಯವಾಗಿ ಹೊರಹೊಮ್ಮಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಡಿವೋರ್ಸ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿದೆ. ಸದ್ಯ ಬೆಂಗಳೂರಿನ ಜೀವನಶೈಲಿ ಸೇರಿದಂತೆ ಇಲ್ಲಿ ವಲಸಿಗರ ಸಂಖ್ಯೆ ಕೂಡ ಜಾಸ್ತಿಯಾಗಿದ್ದು, ಹೆಚ್ಚಿನ ಡಿವೋರ್ಸ್ ಪಡೆಯುತ್ತಿರುವವರಲ್ಲಿ ಕರ್ನಾಟಕದಲ್ಲಿ ನೆಲೆಸಿರುವ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
* ದೆಹಲಿ: ಕರ್ನಾಟಕದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಂಪತಿ ನಡುವೆ ಬಿರುಕು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗಂತೂ ಡಿವೋರ್ಸ್‌ಗಾಗಿ ಕೋರ್ಟ್‌ಗಳ ಸುತ್ತ ಅಲೆಯುವವರ ಸಂಖ್ಯೆ ಹೆಚ್ಚಾಗಿದ್ದು, ಡಿವೋರ್ಸ್ ರಾಜಧಾನಿ ಎಂದೂ ಕರೆಸಿಕೊಳ್ಳುತ್ತಿದೆ. ಇಲ್ಲಿನ ದಂಪತಿ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲೂ ಡಿವೋರ್ಸ್ ಪಡೆಯುವವರು ಹೆಚ್ಚಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು ಕೂಡ ಡಿವೋರ್ಸ್ ಪಡೆದು ಅಚ್ಚರಿ ಮೂಡಿಸುತ್ತಿದ್ದಾರೆ. ಪರಸ್ಪರ ಒಪ್ಪಿಗೆ ಪಡೆದು ಡಿವೋರ್ಸ್ ಪಡೆದಿದ್ದಾಗಿ ಸ್ಪಷ್ಟನೆಯೂ ನೀಡುತ್ತಿದ್ದಾರೆ.












Click it and Unblock the Notifications