ಕರ್ನಾಟಕ ಚುನಾವಣೆ; ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ?
ಬೆಂಗಳೂರು, ಏಪ್ರಿಲ್ 04; ಚುನಾವಣಾ ಆಯೋಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರುಗಳನ್ನು ಸೇರಿಸಲು ಏಪ್ರಿಲ್ 11ರ ತನಕ ಅವಕಾಶವಿದೆ. ಆನ್‌ಲೈನ್ ಮೂಲಕವೂ ಹೆಸರು ಸೇರಿಸಲು ಅವಕಾಶವನ್ನು ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭಾರತೀಯ ಪ್ರಜೆ 18 ವರ್ಷ ದಾಟಿದರೆ ಮತದಾನ ಮಾಡಲು ಅರ್ಹರು. 2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1ಕ್ಕೆ 18 ವರ್ಷ ಪೂರ್ಣಗೊಳಿಸಿದವರೂ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಚುನವಣಾ ದಿನಾಂಕ ಘೋಷಣೆಯಾಗಿದ್ದರೂ ಸಹ ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದೆ. ಆದ್ದರಿಂದ ಏಪ್ರಿಲ್ 11ರ ತನಕ ಹೆಸರು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ.

18 ವರ್ಷ ಪೂರ್ಣಗೊಳಿಸಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, https://ceo.karnataka.gov.in/en ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಏಪ್ರಿಲ್ 11ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರು ಈ ಬಾರಿಯ ಚುನಾವಣೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?; ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕವೂ ಹೆಸರು ಸೇರಿಸಲು ಅವಕಾಶವಿದೆ. ಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ ಆಫ್‌ಲೈನ್ ಮೂಲಕವೂ ಹೆಸರು ಸೇರಿಸಬಹುದಾಗಿದೆ. ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ 1950 ಉಚಿತ ಸಹಾಯವಾಣಿಗೆ ಕರೆ ಮಾಡಿ, ಅಗತ್ಯ ವಿವರಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬಹುದು.

ಹೊಸದಾಗಿ ಮತದಾರರ ಪಟ್ಟಿಯನ್ನು ಸೇರಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲೆ-ಕಾಲೇಜಿನಲ್ಲಿ ನೀಡಿರುವ ಗುರುತಿನ ಪತ್ರ, ಜನನ ಪ್ರಮಾಣ ಪತ್ರ, ವಿಳಾಸದ ಪುರಾವೆ ಇರುವ ಜೆರಾಕ್ಸ್ (ಬ್ಯಾಂಕ್ ಅಥವ ಅಂಚೆ ಪಾಸ್ ಬುಕ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್, ಗ್ಯಾಸ್‌ಬಿಲ್) ಅನ್ನು ತಮ್ಮ ಭಾವಚಿತ್ರದ ಜೊತೆ ಅರ್ಜಿದಾರರು ನೀಡಬೇಕು. ಏಪ್ರಿಲ್ 11ರ ತನಕ ಸಲ್ಲಿಕೆ ಆಗುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಈ ಬಾರಿಯೇ ಮತದಾನ ಮಾಡಲು ಅವಕಾಶ ನೀಡಲು ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹೆಸರು ಚೆಕ್ ಮಾಡುವುದು ಹೇಗೆ?; ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಮಾತ್ರವಲ್ಲ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ? ಎಂದು ಕೂಡಾ ಜನರು ಚೆಕ್ ಮಾಡಿಕೊಳ್ಳಬಹುದಾಗಿದೆ. ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ವೋಟರ್ ಐಡಿ ನಂಬರ್ ನಮೂದು ಮಾಡಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ?, ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ಲಭ್ಯವಾಗುತ್ತದೆ.
'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು' ಎಂಬ ಮಾತಿದೆ. ಪ್ರಜಾಪ್ರಭುತ್ವದ ಭದ್ರಬುನಾದಿಗೆ ಮತದಾನ ಮಾಡುವುದು ಅತ್ಯಾವಶ್ಯಕವಾಗಿರುತ್ತದೆ. ಮತದಾನದ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು, ಜನಪ್ರಧಿನಿಧಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ಸೂಚಿಸಲು ಪ್ರಜೆಗಳಿಗೆ ಮತದಾನವೇ ಬ್ರಹ್ಮಾಸ್ತ್ರವೇ ಆಗಿರುತ್ತದೆ. ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಚುನಾವಣಾ ಆಯೋಗ ಕರೆ ನೀಡಿದೆ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಯುವಜನರ ಪಾತ್ರವೂ ದೊಡ್ಡದಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಚುನಾವಣಾ ಗುರುತಿನ ಚೀಟಿ ಪಡೆದು ಮತದಾನ ಮಾಡುವಂತೆ ಕರೆ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವಾಗ ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ18-19 ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 9,17,241 (3/3/2023ರ ಮಾಹಿತಿಯಂತೆ). ಈ ವರ್ಷದ ಜನವರಿ 2 ರಿಂದ ಮೊದಲ ಏಪ್ರಿಲ್ ತನಕ 41,432 ಯವ ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.












Click it and Unblock the Notifications