Karnataka 7th Pay Commission; ನಿವೃತ್ತಿ, ಪಿಂಚಣಿ ಪ್ರಯೋಜನಗಳು
ಬೆಂಗಳೂರು, ಜುಲೈ 20; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದೆ. ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಿಸಲಾಗಿದೆ.
ರಾಜ್ಯ 7ನೇ ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳ ಹಿನ್ನಲೆಯಲ್ಲಿ ಸರ್ಕಾರಿ ನೌಕರರಿಗೆ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿತ್ತು. ಈ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಉತ್ತರಗಳನ್ನು ಸಲ್ಲಿಕೆ ಮಾಡಿದೆ. ವೇತನ, ಭತ್ಯೆ, ಪಿಂಚಣಿ, ರಜೆ ಸೌಲಭ್ಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪ್ರಶ್ನಾವಳಿಗಳಿಗೆ ಉತ್ತರ ನೀಡಲಾಗಿದೆ. ಈ ಉತ್ತರಗಳ ಕುರಿತು 7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರ ಸಂಘದ ಜೊತೆ ಈಗಾಗಲೇ ಹಲವು ಬಾರಿ ಸಭೆಗಳನ್ನು ಸಹ ನಡೆಸಿದೆ.

ಈ ಪ್ರಶ್ನಾವಳಿಗಳಲ್ಲಿ ಪಿಂಚಣಿ ಪ್ರಯೋಜನಗಳು, ಪೂರ್ಣ ನಿವೃತ್ತಿ ವೇತನ, ಕನಿಷ್ಠ ಪಿಂಚಣಿ ಮತ್ತು ಕುಟುಂಬ ವಿಶ್ರಾಂತಿ ವೇತನ ಮುಂತಾದ ವಿಚಾರಗಳ ಕುರಿತು ಇರುವ ಪ್ರಶ್ನಾವಳಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಕೆ ಮಾಡಿರುವ ಉತ್ತರಗಳು ಇಲ್ಲಿವೆ.
* ಪಿಂಚಣಿ ಪ್ರಯೋಜನಗಳಿಗೆ ಸಂಬಂಧಿಸಿದಂತೆ, ಪ್ರಸ್ತುತ, 30 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಮಾತ್ರ ಪೂರ್ಣ ನಿವೃತ್ತಿ ವೇತನ ಸಂದಾಯವಾಗುತ್ತಿದೆ. ನಿವೃತ್ತಿಯ ಉಪದಾನವನ್ನು ಲೆಕ್ಕ ಹಾಕುವಾಗ ಮೂಲ ವೇತನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಮಾರ್ಪಾಡಿಗೆ ಏನಾದರೂ ಸಲಹೆ ನೀಡುವಿರಾ?. ಈ ಮಾರ್ಪಾಡಿಗೆ ಕಾರಣಗಳನ್ನು ನೀಡುವುದು.
ಪೂರ್ಣ ನಿವೃತ್ತಿ ವೇತನವನ್ನು ಪಡೆಯಲು ಪ್ರಸ್ತುತ 30 ವರ್ಷಗಳ ಅರ್ಹತಾ ಅವಧಿಯನ್ನು ನಿಗದಿಮಾಡಿದ್ದು, ಈ ಅವಧಿಯನ್ನು 25 ವರ್ಷಗಳಿಗೆ ನಿಗದಿಪಡಿಸಲು ಹಾಗೂ ಪಿಂಚಣಿ ನೀಡಲು ಹೆಚ್ಚಿನ ಸರಳೀಕೃತ ಸೂತ್ರವನ್ನು ಶಿಫಾರಸು ಮಾಡುವುದು ಅವಶ್ಯಕವೆಂದು ಸಂಘವು ಅಭಿಪ್ರಾಯಪಟ್ಟಿದ್ದು ಅದು ನೌಕರರಿಗೆ ಪ್ರಯೋಜನವಾಗುವುದಲ್ಲದೇ, ಕೇಂದ್ರ ವೇತನ ಆಯೋಗ ಶಿಫಾರಸು ಮಾಡಿರುವ ಸೂತ್ರಕ್ಕೆ ಹೋಲಿಕೆಯಾಗಲಿದೆ ಎಂದು ಸಂಘ ಉತ್ತರದಲ್ಲಿ ತಿಳಿಸಿದೆ.
ಪೂರ್ಣ ಪ್ರಮಾಣದ ಪಿಂಚಣಿಗಾಗಿ ನೌಕರನು ಸಲ್ಲಿಸಿರುವ 25 ವರ್ಷಗಳ ಅರ್ಹತಾದಾಯಕ ಸೇವಾಧಿಯನ್ನು ಪರಿಗಣಿಸುವುದು ಹಾಗೂ ನಿವೃತ್ತಿ ಸಮಯದ ಕಳೆದ 10 ತಿಂಗಳಲ್ಲಿ ಪಡೆಯುತ್ತಿದ್ದ ಸರಾಸರಿ ಸಂಬಳ ಅಥವಾ ಅಂತಿಮವಾಗಿ ಪಡೆದ ವೇತನದ ಶೇ 50 ಇದರಲ್ಲಿ ಯಾವುದು ಪ್ರಯೋಜನಕಾರಿಯೋ ಅದನ್ನು ಪಿಂಚಿಣಿ ಎಂದು ಪರಿಗಣಿಸುವುದು ಎಂದು ಹೇಳಿದೆ.
* ಪ್ರಸ್ತುತ ಕನಿಷ್ಠ ಪಿಂಚಣಿ ಮತ್ತು ಕುಟುಂಬ ವಿಶ್ರಾಂತಿ ವೇತನವು ಮಾಹೆಯಾನ ರೂ. 8,500 ಆಗಿದ್ದು, ತುಟ್ಟಿ ಭತ್ಯೆಯನ್ನು ಸಹ ಸೇರಿಸಲಾಗುತ್ತದೆ. ನಿವೃತ್ತಿ ವೇತನದ ಗರಿಷ್ಠ ಮೊತ್ತವು ರೂ. 75,300 ಆಗಿರುತ್ತದೆ. ಈ ಮೊತ್ತವು ತಕ್ಕುದಾಗಿದೆಯೆಂದು ತಾವು ಭಾವಿಸುವಿರಾ?. ಇಲ್ಲವಾದಲ್ಲಿ ಕನಿಷ್ಠ ಮತ್ತು ಗರಿಷ್ಠ ಕುಟುಂಬ ಪಿಂಚಣಿಯು ಎಷ್ಟಿರಬೇಕು? ಎಂದು ಪ್ರಶ್ನಿಸಲಾಗಿತ್ತು.
ವಿವಿಧ ಅಂಶಗಳನ್ನು ಹಾಗೂ ಚಾಲ್ತಿ ಅಂಕಿ-ಅಂಶಗಳ ಪ್ರಕಾರ ಕನಿಷ್ಠ ಹಾಗೂ ಗರಿಷ್ಠ ಮೂಲ ವೇತನಕ್ಕೆ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಉದ್ದೇಶಕ್ಕೆ ಹಾಲಿ ಇರುವ ಶೇ 31 ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣವಾಗಿ ವಿಲೀನಗೊಳಿಸಿ, ನಂತರ ಶೇ 40 ರಷ್ಟು ಫಿಟ್‌ಮೆಂಟ್ ಬೆನಿಫಿಟ್ ಕಲ್ಪಿಸಿ ಪರಿಷ್ಕೃತ ಮೂಲ ವೇತನದ ಶೇ 50 ಕನಿಷ್ಠ ಪಿಂಚಣಿ/ ಕುಟುಂಬ ಪಿಂಚಣಿ ಮೊತ್ತವನ್ನು ರೂ. 16,500 + ತುಟ್ಟಿ ಭತ್ಯೆ ಹಾಗೂ ಪರಿಷ್ಕೃತ ಗರಿಷ್ಠ ವೇತನದ ಶೇ 50% ರಷ್ಟು ಗರಿಷ್ಠ ಮೊತ್ತಕ್ಕೆ ರೂ. 1,50,000 + ತುಟ್ಟಿ ಭತ್ಯೆ ನಿರ್ಧರಿಸುವುದು.
ಕನಿಷ್ಠ ಕುಟುಂಬ ಪಿಂಚಣಿಯನ್ನು ಕನಿಷ್ಠ ರೂ. 16,500 + ತುಟ್ಟಿಭತ್ಯೆ ಮತ್ತು ಗರಿಷ್ಠ ಕುಟುಂಬ ಪಿಂಚಣಿಯನ್ನು ರೂ. 1,50,000 + ತುಟ್ಟಿಭತ್ಯೆ ಎಂಬುದಾಗಿ ಶಿಫಾರಸ್ಸು ಮಾಡುವುದು ಮುಂದುವರೆದು, ಅವಲಂಬಿತ ಪೋಷಕರೂ ಸಹ ಕುಟುಂಬ ಪಿಂಚಣಿಗೆ ಅರ್ಹರೆಂದು ಶಿಫಾರಸ್ಸು ಮಾಡುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರದಲ್ಲಿ ಹೇಳಿದೆ.












Click it and Unblock the Notifications