ಮೈಕಲ್ ಜಾಕ್ಸನ್ ‘ಭೂತ ಬಂಗಲೆ’ ಸೇಲ್, $160 ಕೋಟಿಗೆ ಮಾರಾಟ..!
ಅಮೆರಿಕದ ಡಾನ್ಸರ್ ಹಾಗೂ ದಂತಕಥೆ ಮೈಕಲ್ ಜಾಕ್ಸನ್‌ಗೆ ಸೇರಿದ ಲಾಸ್ ಏಂಜಲೀಸ್‌ನಲ್ಲಿದ್ದ ಜಾಗವನ್ನ, ಶ್ರೀಮಂತ ಉದ್ಯಮಿಯೊಬ್ಬರು $160 ಕೋಟಿಗೆ ಕೊಂಡುಕೊಂಡಿದ್ದಾರೆ. 1987ರಲ್ಲಿ ಮೈಕಲ್ ಜಾಕ್ಸನ್ ಜಾಗ ಖರೀದಿ ಮಾಡಿದ್ದರು. 1987ರಲ್ಲಿ 19.5 ಮಿಲಿಯನ್ ಡಾಲರ್ ನೀಡಿ ಜಾಕ್ಸನ್ ಈ ಜಾಗ ಖರೀದಿಸಿದ್ದರು. ಆ ಹೊತ್ತಿಗೆ ಮೈಕಲ್ ಜಾಕ್ಸನ್ ಜಾಗತಿಕವಾಗಿ ಫೇಮಸ್ ಆಗಿದ್ದರೂ ಜಾಗ ಕೊಳ್ಳಲು ದುಡ್ಡಿಲ್ಲದೆ ಪರದಾಡಿದ್ದರು.
ಸುಮಾರು 2700 ಎಕರೆ ವಿಶಾಲ ಜಾಗವನ್ನ ಹೊಂದಿರುವ ಈ ಪ್ರದೇಶದವನ್ನು ಮಕ್ಕಳ ಮನರಂಜನಾ ಕ್ಷೇತ್ರ ಮಾಡಲು ಮೈಕಲ್ ಜಾಕ್ಸನ್ ಸಾಕಷ್ಟು ಕನಸು ಹೊಂದಿದ್ದರು. ಅದೇ ರೀತಿ ತಮ್ಮ ಕನಸನ್ನು ಜಾಕ್ಸನ್ ನನಸು ಮಾಡಿದ್ದರು ಕೂಡ. 1990ರಿಂದ 2000ದವರೆಗೂ 'ನೆವರ್ಲ್ಯಾಂಡ್' ಮಕ್ಕಳ ಪಾಲಿಗೆ ಸ್ವರ್ಗವಾಗಿತ್ತು. ಆದರೆ ಇದೇ ಜಾಗದಿಂದ ಮೈಕಲ್ ಜಾಕ್ಸನ್ ಹೆಸರು ಕೆಟ್ಟಿತು.
ಮಕ್ಕಳಿಗೆ ಬೇಕಾದ ಪ್ರತಿಯೊಂದು ವ್ಯವಸ್ಥೆ ಸೃಷ್ಟಿಸಿದ್ದ ಮೈಕಲ್ ಜಾಕ್ಸನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ನಂತರ ಈ ಜಾಗ ಬಂದ್ ಮಾಡಿ ತನಿಖೆ ಕೂಡ ನಡೆಸಲಾಗಿತ್ತು. ಆ ಘಟನೆಯ ಬಳಿಕ ಮೈಕಲ್ ಜಾಕ್ಸನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಕನಸಿನ ಜಾಗಕ್ಕೆ ಪರದಾಡಿದ್ದ ದಂತಕಥೆ
ನಿಮಗೆ ಈ ವಿಚಾರ ಕೇಳಿದರೆ ಶಾಕ್ ಆಗಬಹುದು, ಏಕೆಂದರೆ ವಿಶ್ವದ ಶ್ರೀಮಂತ ಡ್ಯಾನ್ಸರ್ ಒಬ್ಬರ ಬಳಿ 20 ಮಿಲಿಯನ್ ಡಾಲರ್‌ಗೂ ಕೊರತೆ ಇತ್ತು. 1987ರ ಹೊತ್ತಿಗೆ ಮೈಕಲ್ ಜಾಕ್ಸನ್ ಎಂದರೆ ಜನರು ಹುಚ್ಚೆದ್ದು ಕುಣಿಯುತ್ತಿದ್ದರು. ಜಾಕ್ಸನ್ ಕಾರ್ಯಕ್ರಮಕ್ಕೆ ಟಿಕೆಟ್ ಸಿಗುತ್ತೆ ಅಂದ್ರೆ ಅದೇ ಅದೃಷ್ಟ ಎಂಬಂತಾಗಿತ್ತು. ಆದರೂ ಮೈಕಲ್ ಜಾಕ್ಸನ್‌ಗೆ 'ನೆವರ್ಲ್ಯಾಂಡ್' ಖರೀದಿ ಅಷ್ಟು ಸುಲಭ ಇರಲಿಲ್ಲ. ಅಂದಿನ ಕಾಲಕ್ಕೆ 20 ಮಿಲಿಯನ್ ಡಾಲರ್ ಹೊಂದಿಸಲು ಮೈಕಲ್ ಜಾಕ್ಸನ್ ಪರದಾಡಿಬಿಟ್ಟಿದ್ದರು. ಎಲ್ಲೆಲ್ಲೋ ಬಡ್ಡಿಗೆ ಸಾಲ ಮಾಡಿಬಿಟ್ಟರು.

ವಿವಾದದ ಕೇಂದ್ರಬಿಂದು ಈ ಪ್ರದೇಶ
1990ರಿಂದ 2000ದವರೆಗೂ ಎಲ್ಲಾ ಸರಿಯಾಗೇ ಇತ್ತು. ಆದರೆ ಬರುಬರುತ್ತಾ ಏನಾಯ್ತೋ ಮೈಕೆಲ್ ಜಾಕ್ಸನ್ ವಿರುದ್ಧ ನಾನಾ ಆರೋಪಗಳು ಕೇಳಿಬರಲು ಆರಂಭಿಸಿದವು. ಅದರಲ್ಲೂ ಈ ಪ್ರದೇಶದ ವಿಚಾರವಾಗಿ ಹಲವು ಗಂಭೀರ ಆರೋಪಗಳು ಮೈಕಲ್ ಜಾಕ್ಸನ್ ವಿರುದ್ಧ ಕೇಳಿಬಂದವು. 13 ವರ್ಷದ ಬಾಲಕನ ಮೇಲೆ ಮೈಕಲ್ ಜಾಕ್ಸನ್‌ರಿಂದ ನಡೆದಿತ್ತು ಎನ್ನಲಾದ ಲೈಂಗಿಕ ದೌರ್ಜನ್ಯ ಆರೋಪ ಗಂಭೀರ ಸ್ವರೂಪ ಪಡೆದಿತ್ತು. ಆರೋಪದ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದ ಸ್ಥಳೀಯ ಸರ್ಕಾರ ಮೈಕಲ್ ಜಾಕ್ಸನ್ ವಿರುದ್ಧ ತನಿಖೆಗೆ ಆದೇಶಿಸಿತ್ತು.

ನೋಡ ನೋಡುತ್ತಿದ್ದಂತೆ ‘ಭೂತ ಬಂಗಲೆ’
ಜಾಕ್ಸನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ನಂತರದಲ್ಲಿ ತನಿಖೆ ಆರಂಭವಾದಾಗ ಹಲವು ಅನಿವಾರ್ಯ ಕಾರಣಗಳಿಗೆ ಈ ಜಾಗಕ್ಕೆ ಬೀಗ ಜಡಿಯಲಾಯಿತು. ನೋಡ ನೋಡುತ್ತಿದ್ದಂತೆ ಮಕ್ಕಳ ಸ್ವರ್ಗ 'ನೆವರ್ಲ್ಯಾಂಡ್' ಭೂತ ಬಂಗಲೆಯಾಯಿತು. 'ನೆವರ್ಲ್ಯಾಂಡ್' ಬಳಿ ಸುಳಿಯಲು ಕೂಡ ಜನ ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 2700 ಎಕರೆ ಪ್ರದೇಶ ಬಿಕೋ ಎನ್ನುತ್ತಿತ್ತು. ಜಾಕ್ಸನ್ ಸಾಯುವವರೆಗೂ ಈ ವಿಚಾರದ ಬಗ್ಗೆ ಕೊರಗುತ್ತಿದ್ದರು.

ತನಿಖೆ ಹಾಗೂ ಜಾಕ್ಸನ್ ಸಾವು..!
ಮೈಕಲ್ ಜಾಕ್ಸನ್ ವಿರುದ್ಧ ತನಿಖೆ ಆರಂಭವಾಗಿ 4 ವರ್ಷಗಳ ನಂತರ ಅಂದರೆ 2009ರಲ್ಲಿ ಮೈಕಲ್ ಜಾಕ್ಸನ್ ಡ್ರಗ್ ಓವರ್ ಡೋಸ್‌ನ ಪರಿಣಾಮ 'ಹೃದಯಸ್ತಂಭನ' (Cardiac Arrest)ದಿಂದ ಮೃತಪಟ್ಟರು. ಆಸ್ತಿಗಿಂತ ಹೆಚ್ಚು ಸಾಲ ಮಾಡಿಕೊಂಡಿದ್ದ ಮೈಕಲ್ ಜಾಕ್ಸನ್ ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದರು. ಹೀಗಾಗಿ ತಮ್ಮ ನೋವುಗಳನ್ನು ಮರೆಯಲು ಜಾಕ್ಸನ್ ಮಾತ್ರೆಗಳ ಮೊರೆ ಹೋಗಿದ್ದರು. ಕೊನೆಗೆ ಜಾಕ್ಸನ್ ತೆಗೆದುಕೊಂಡಿದ್ದ ಮಾತ್ರೆಗಳೇ ಅವರ ಜೀವಕ್ಕೆ ಉರುಳಾಗಿತ್ತು. ಮೈಕಲ್ ಜಾಕ್ಸನ್ 'ಹೃದಯಸ್ತಂಭನ' (Cardiac Arrest)ದಿಂದ 2009ರ ಜೂನ್ 25ರಂದು 50ನೇ ವಯಸ್ಸಿನಲ್ಲಿ ಮೃತಪಟ್ಟರು. ಆ ದಿನ ಇಡೀ ಜಗತ್ತು ಕಂಬನಿ ಮಿಡಿದಿತ್ತು.












Click it and Unblock the Notifications