ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ವಿಶ್ವದಾದ್ಯಂತ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ತೀವ್ರವಾಗಿ ಹರಡುತ್ತಿದೆ. ಭಾರತದಲ್ಲಿಯೂ ಓಮಿಕ್ರಾನ್ ಪ್ರಕರಣ ಹೆಚ್ಚಳವಾಗಿದೆ. ಅದರಲ್ಲೂ ಪ್ರಮುಖವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣಗಳು ಸಂಖ್ಯೆಯು ಹೆಚ್ಚುತ್ತಿದೆ. ಈ ಹಿನ್ನೆಲೆಯಿಂದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಅಂತರಾಷ್ಟ್ರೀಯ, ದೇಶಿಯ ಪ್ರಯಾಣಿಕರಿಗೆ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಹೊರಡಿಸಿದೆ.
ಹಾಗೆಯೇ ಮೊದಲು ಎಲ್ಲಾ ರಾಜ್ಯಗಳಲ್ಲಿ ಕ್ವಾರಂಟೈನ್ ನಿಯಮವನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದೆ. "ಎಲ್ಲಾ ಅಗತ್ಯ ಕ್ರಮವನ್ನು ಕೈಗೊಳ್ಳಿ, ನೀವು ಕೋವಿಡ್ ಮುಂದೆ ಹಿರೋ ಆಗಿರಿ," ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಾರ್ಗಸೂಚಿಯಲ್ಲಿ ಒತ್ತಾಯ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, "ಪ್ರಯಾಣಿಕರ ಗಮನಕ್ಕೆ. ನೀವು ದೆಹಲಿಗೆ ಪ್ರಯಾಣ ಮಾಡುತ್ತಿದ್ದಿರಿಯೇ?. ರಾಜ್ಯವಾರು ಹೊಸ ಮಾರ್ಗಸೂಚಿಯನ್ನು ನೋಡಿಕೊಳ್ಳಿ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಕೋವಿಡ್ ಹಿರೋ ಆಗಿ. ಸುರಕ್ಚಿತವಾಗಿ ಪ್ರಯಾಣ ಮಾಡಿ," ಎಂದು ತಿಳಿಸಿದೆ.

ಕೇಂದ್ರವು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿಮಾನ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು ಮತ್ತು ಮಾದರಿ ಸಂಗ್ರಹ ಮಾಡುವುದು ಕಡ್ಡಾಯವಾಗಿದೆ. "ಪ್ರಯಾಣಿಕರು ಆಗಮಿಸಿದ ಬಳಿಕ ಅವರ ಮಾದರಿ ಸಂಗ್ರಹವನ್ನು ಮಾಡಲಾಗುತ್ತದೆ. ಕೊರೊನಾ ವೈರಸ್ ಸೋಂಕು ಅಧಿಕವಾಗುತ್ತಿರುವ ರಾಜ್ಯದಿಂದ ಆಗಮಿಸುವರಿಗೆ ಸಾಮೂಹಿಕವಾಗಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ," ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇಲ್ಲಿದೆ ಮಾರ್ಗಸೂಚಿಗಳ ಸಂಪೂರ್ಣ ವಿವರ
* ಹೊಸ ಮಾರ್ಗಸೂಚಿ ಪ್ರಕಾರ, ಮಾದರಿ ಸಂಗ್ರಹಣೆಯ ನಂತರವೇ ವಿಮಾನ ಪ್ರಯಾಣಿಕರನ್ನು ನಿರ್ಗಮಿಸಲು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
* ಪ್ರಯಾಣಿಕರು ಒಂದು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಮತ್ತೆ ಬೇರೆ ವಿಮಾನದಲ್ಲಿ ಪ್ರಯಾಣ ಮಾಡುವುದಾದರೆ ನೀವು ಯಾವ ರಾಜ್ಯಕ್ಕೆ ಹೋಗುತ್ತೀರೋ ಆ ರಾಜ್ಯದ ಪ್ರಯಾಣ ಮಾರ್ಗಸೂಚಿಯನ್ನು ತಿಳಿದು ಪಾಲಿಸಬೇಕು.
* ಇನ್ನು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಆ ಪ್ರಯಾಣಿಕರನ್ನು 10 ದಿನಗಳವರೆಗೆ ಮನೆ/ಕೋವಿಡ್ ಕೇರ್ ಸೆಂಟರ್‌ಗಳು/ಸಮುದಾಯ ಆರೋಗ್ಯ ಕೇಂದ್ರಗಳು/ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
* ಇನ್ನು ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸಚಿವಾಲಯವು ದೇಶೀಯ ಪ್ರಯಾಣಿಕರಿಗೆ ಹೇಳಿದೆ.
ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿಷೇಧ
ಈ ತಿಂಗಳ ಆರಂಭದಲ್ಲಿ ಡಿಜಿಸಿಎ ಮುಂದಿನ ವರ್ಷ ಜನವರಿ 31 ರವರೆಗೆ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸಿದೆ. ಅದಾಗ್ಯೂ ಈ ನಿರ್ಬಂಧವು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದನೆ ಮಾಡಿದ ಅಂತಾರಾಷ್ಟ್ರೀಯ ಸರಕು ವಿಮಾನ ಹಾಗೂ ಇತರೆ ವಿಮಾನಗಳಿಗೆ ಅನ್ವಯ ಆಗುವುದಿಲ್ಲ ಎಂದು ಕೂಡಾ ಮಾರ್ಗಸೂಚಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ. 2020 ರ ಮಾರ್ಚ್ 23 ರಿಂದಲೇ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇತ್ತೀಚೆಗೆ ನಿರ್ಬಂಧವನ್ನು ಸಡಿಲಿಕೆ ಮಾಡಲು ಕೇಂದ್ರ ಸರ್ಕಾರವು ಮುಂದಾಗಿತ್ತು. ಆದರೆ ಓಮಿಕ್ರಾನ್ ಭೀತಿ ಹಿನ್ನೆಲೆಯಿಂದಾಗಿ ಮತ್ತೆ ವಿಮಾನ ಸಂಚಾರ ಮಾರ್ಗಸೂಚಿಯನ್ನು ಸಡಿಲಿಕೆ ಮಾಡಿಲ್ಲ.
ದೇಶದಲ್ಲಿ ಓಮಿಕ್ರಾನ್ ಪ್ರಕರಣ
ದೇಶದಲ್ಲಿ ಓಮಿಕ್ರಾನ್ ಪ್ರಕರಣವು ಶೀಘ್ರವಾಗಿ ಏರಿಕೆ ಕಾಣುತ್ತಿದೆ. ಪ್ರಸ್ತುತ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 300 ರ ಗಡಿಯನ್ನು ದಾಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 84 ಓಮಿಕ್ರಾನ್ ಪ್ರಕರಣಗಳು ದಾಖಲು ಆಗಿದೆ. ನಿನ್ನೆ 44 ಓಮಿಕ್ರಾನ್ ಪ್ರರಕಣಗಳು ದಾಖಲು ಆಗಿದ್ದು, ಇಂದು ದಿಢೀರ್ ಏರಿಕೆ ಕಂಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications