ಭಾರತ: ಜನವರಿ, ಫೆಬ್ರವರಿ ತಿಂಗಳಲ್ಲಿ 26 ಹುಲಿಗಳ ಸಾವು, ಪ್ರದೇಶವಾರು ಹುಲಿಗಳ ಸಾವಿನ ವಿವರ ಇಲ್ಲಿದೆ
2023ರ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ ಒಟ್ಟು 26 ಹುಲಿಗಳು ಸಾವನ್ನಪ್ಪಿವೆ. ಹಾಗಾದರೆ ಹುಲಿಗಳು ಯಾವ ಕಾರಣಕ್ಕೆ, ಎಲ್ಲಿ ಸಾವನ್ನಪ್ಪಿವೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನವದೆಹಲಿ, ಫೆಬ್ರವರಿ, 22: ಭಾರತದಲ್ಲಿ ಹುಲಿಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾದರೆ 2023ರ ಮೊದಲ ಎರಡು ತಿಂಗಳಲ್ಲಿ ಎಷ್ಟು ಹುಲಿಗಳು ಸಾವನ್ನಪ್ಪಿವೆ. ಅವುಗಳು ಸಾವಪ್ಪಿರುವ ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಹಾಗೆಯೇ ಎಲ್ಲೆಲ್ಲಿ ಎಷ್ಟು ಹುಲಿಗಳು ಸಾವನ್ನಪ್ಪಿವೆ ಎನ್ನುವ ಸಂಪೂರ್ಣ ವಿವರವನ್ನು ಸಹ ನೀಡಲಾಗಿದೆ.
2023ನೇ ಸಾಲಿನ ಮೊದಲ ಎರಡು ತಿಂಗಳ ಅವಧಿಯಲ್ಲೇ ಭಾರತವು 26 ಹುಲಿಗಳನ್ನು ಕಳೆದುಕೊಂಡಿದೆ. ಹೀಗೆ ಭಾರತವು ಕ್ರಮೇಣವಾಗಿ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಹುಲಿಗಳನ್ನು ಕಳೆದುಕೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಜನವರಿ 1 ಮತ್ತು ಫೆಬ್ರವರಿ 8ರ ನಡುವೆ ಭಾರತದಲ್ಲಿ 24 ಹುಲಿಗಳು ಸಾವನ್ನಪ್ಪಿವೆ ಎಂದು ಹೇಳಿದೆ ಅಂತಾ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಫೆಬ್ರವರಿ 8ರ ಬಳಿಕ ಎರಡು ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿವೆ. ಮಹಾರಾಷ್ಟ್ರ ಮತ್ತು ಉತ್ತರಾಖಂಡದಿಂದ ತಲಾ ಒಂದು ಸೇರಿದಂತೆ ಇದುವರೆಗೂ ಒಟ್ಟು ಹುಲಿಗಳ ಸಾವಿನ ಸಂಖ್ಯೆ 26ಕ್ಕೆ ಏರಿದೆ. ಫೆಬ್ರವರಿ 11ರಂದು, ಮಹಾರಾಷ್ಟ್ರದ ಚಂದ್ರಾಪುರ ಮತ್ತು ವಾರ್ಧಾ ಜಿಲ್ಲೆಗಳ ಗಡಿಯಲ್ಲಿರುವ ಪೋತ್ರಾ ನದಿಯಲ್ಲಿ ಹುಲಿ ಸಾವನ್ನಪ್ಪಿರುವುದು ಬೆಳಕಿದೆ ತಿಳಿದುಬಂದಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದೇನು?
ಇನ್ನು ಫೆಬ್ರವರಿ 12ರಂದು ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್‌ನಲ್ಲಿ ಹುಲಿಯೊಂದು ಶವವಾಗಿ ಪತ್ತೆಯಾಗಿತ್ತು. ಹಾಗೆಯೇ ಅಲ್ಮೋರಾ ಅರಣ್ಯ ವಿಭಾಗದ ಬದನ್‌ಗಢ ಕಾಲುವೆಯ ಸಮೀಪದಲ್ಲಿ ಮಹಿಳೆಯ ಮೃತದೇಹವೂ ಪತ್ತೆಯಾಗಿದೆ. ಹುಲಿಯು ಮಹಿಳೆಯನ್ನು ಕೊಂದಿದ್ದು, ಆಕೆಯ ಶವ ಕಾಲುವೆಯ ಸಮೀಪದಲ್ಲಿ ಪತ್ತೆಯಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್ ಪಾತ್ರ ತಿಳಿಸಿದ್ದಾರೆ.

2022ರಲ್ಲಿ ಎಷ್ಟು ಹುಲಿಗಳು ಸಾವನ್ನಪ್ಪಿವೆ?
2022ರ ಮೊದಲ ತಿಂಗಳಲ್ಲಿ 16 ಹುಲಿಗಳು ಸಾವನ್ನಪ್ಪಿದ್ದರೆ, 2021ರಲ್ಲಿ ಅದೇ ಅವಧಿಯಲ್ಲಿ 20 ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿವೆ. ಈ ಪೈಕಿ ಮಧ್ಯಪ್ರದೇಶವು ಅತಿ ಹೆಚ್ಚು ಹುಲಿಗಳನ್ನು ಕಳೆದುಕೊಂಡಿದೆ.
ಹಾಗೆಯೇ ಮಧ್ಯಪ್ರದೇಶದಲ್ಲಿ 9 , ಮಹಾರಾಷ್ಟ್ರ 7, ರಾಜಸ್ಥಾನ 3, ಕರ್ನಾಟಕ 2, ಉತ್ತರಾಖಂಡ 3, ಅಸ್ಸಾಂ ಮತ್ತು ಕೇರಳದಿಂದ ತಲಾ ಒಂದು ದೊಡ್ಡ ಗಾತ್ರದ ಬೆಕ್ಕುಗಳು ಕೂಡ ಸಾವನ್ನಪ್ಪಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಯಾವ ಪ್ರದೇಶದಲ್ಲಿ ಹುಲಿಗಳು ಸಾವನ್ನಪ್ಪಿವೆ?
ನೈಸರ್ಗಿಕ ಕಾರಣಗಳು, ಪ್ರಾದೇಶಿಕ ಕಾದಾಟಗಳು ಮತ್ತು ಮಾನವ-ಪ್ರಾಣಿ ಸಂಘರ್ಷಗಳಿಂದಲೂ ಕೂಡ ಹುಲಿಗಳು ಸಾವನ್ನಪ್ಪಿವೆ. ಇನ್ನು ಮಹಾರಾಷ್ಟ್ರದಲ್ಲಿ ಜನವರಿ 3ರಂದು ಬ್ರಹ್ಮಪುರಿ ವ್ಯಾಪ್ತಿಯ ಕೃಷಿ ಬಾವಿಯಲ್ಲಿ ಹುಲಿ ಸತ್ತಿರುವುದು ಕಂಡುಬಂದಿದೆ. ಜನವರಿ 4 ರಂದು ಸಾವೋಲಿ ಶ್ರೇಣಿಯಿಂದ ರಕ್ಷಿಸಲ್ಪಟ್ಟ ಹುಲಿ ಜನವರಿ 14 ರಂದು ನಾಗಪುರದ ಗೊರೆವಾಡ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿತ್ತು.
ಜನವರಿ 14ರಂದು ಭದ್ರಾವತಿ ವ್ಯಾಪ್ತಿಯ ಮಜ್ರಿ ಎಂಬಲ್ಲಿನ ಹೊಲದಲ್ಲಿ ವಿದ್ಯುತ್ ಸ್ಪರ್ಶವಾಗಿ ಹುಲಿಯೊಂದು ಮೃತಪಟ್ಟಿತ್ತು. ಫೆಬ್ರವರಿ 5ರಂದು ಪೊಂಬೂರ್ಣ ವ್ಯಾಪ್ತಿಯ ಘೋಸ್ರಿ ಬೀಟ್‌ನ ಜಮೀನಿನಲ್ಲಿ ಹುಲಿ ವಿದ್ಯುತ್ ಸ್ಪರ್ಶಿಸಿತ್ತು. ಫೆಬ್ರವರಿ 12 ರಂದು ಮೃತಪಟ್ಟ ಹುಲಿ ಹಿಟ್ ಅಂಡ್ ರನ್‌ನಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಪ್ರದೇಶವಾರು ಹುಲಿಗಳ ಸಾವಿನ ವಿವರ
022 ರಲ್ಲಿ ಭಾರತವು ಒಟ್ಟು 116 ಹುಲಿಗಳನ್ನು ಕಳೆದುಕೊಂಡಿದ್ದರೆ, 2021ರಲ್ಲಿ 127 ಹುಲಿಗಳು ಸಾವನ್ನಪ್ಪಿವೆ. 2022 ರಲ್ಲಿ ಮಧ್ಯಪ್ರದೇಶವು ಗರಿಷ್ಠ ಸಂಖ್ಯೆಯ ಹುಲಿಗಳನ್ನು ಕಳೆದುಕೊಂಡಿದೆ. ಮಧ್ಯಪ್ರದೇಶ 33, ಮಹಾರಾಷ್ಟ್ರ 29, ಕರ್ನಾಟಕ 15, ಅಸ್ಸಾಂ 8, ಕೇರಳ 7, ಉತ್ತರಾಖಂಡ 5, ಛತ್ತೀಸ್‌ಗಢ 5, ತಮಿಳುನಾಡು 3, ರಾಜಸ್ಥಾನ 3, ಉತ್ತರ ಪ್ರದೇಶ 2, ಬಿಹಾರ 2, ಒಡಿಶಾ 2, ಆಂಧ್ರಪ್ರದೇಶ 1 ಮತ್ತು ತೆಲಂಗಾಣದಲ್ಲಿ ಒಂದು ಹುಲಿ ಸಾವನ್ನಪ್ಪಿತ್ತು.












Click it and Unblock the Notifications