Chitranna: ಸಿಂಪಲ್ಲಾಗಿ ಒಂದೊಳ್ಳೆ ಗೊಜ್ಜಿನ ಚಿತ್ರಾನ್ನ ಮಾಡುವುದು ಹೇಗೆ..? ಇಲ್ಲಿದೆ ವಿವರಣೆ
ಚಿತ್ರಾನ್ನ..ಚಿತ್ರಾನ್ನ..ಚಿತ್ರಾನ್ನ.. ಹೆಸರು ಕೇಳಿದರೆ ಬಾಯಲ್ಲಿ ನೀರುವ ಬರುವ ಖಾದ್ಯವೇ ಚಿತ್ರಾನ್ನ. ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಚಿತ್ರಾನ್ನ ಕೂಡ ಒಂದು. ವಾರದ ಒಂದು ದಿನವಾದರೂ ಉಪಹಾರದ ಪಟ್ಟಿಯಲ್ಲಿ ಚಿತ್ರಾನ್ನ ಇದ್ದೇ ಇರುತ್ತದೆ. ಇನ್ನು ಕೆಲವರು ಊಟಕ್ಕೂ ಚಿತ್ರಾನ್ನ ಸೇವಿಯುತ್ತಾರೆ.
ಅತಿ ಸುಲಭವಾಗಿ ಮಾಡಬಹುದಾದ ಈ ಚಿತ್ರಾನ್ನವನ್ನು ವಿವಿಧ ರೀತಿಯಲ್ಲಿ ಮಾಡಬಹುದಾಗಿದೆ. ನಿಂಬೆಹಣ್ಣು ಚಿತ್ರಾನ್ನ, ಟೊಮೆಟೊ ಚಿತ್ರಾನ್ನ, ಮಸಾಲ ಚಿತ್ರಾನ್ನ, ಅವಲಕ್ಕಿ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ. ಹೀಗೆ ರುಚಿ ರುಚಿಯಾಗಿ ನಾನಾ ರೀತಿಯ ಚಿತ್ರಾನ್ನ ತಯಾರಿಸಬಹುದು. ಈ ಎಲ್ಲಾ ಬಗೆಯ ಚಿತ್ರಾನ್ನಗಳನ್ನು ಸಾಮಾನ್ಯವಾಗಿ ತಿಂದಿರುತ್ತೀರಾ, ಆದರೆ ಎಂದಾದರೂ ಜೀರಿಗೆ ಚಿತ್ರಾನ್ನ ಸವಿದಿದ್ದೀರಾ..? ಹಾಗಿದ್ದರೆ ಇಂದೇ ಟ್ರೈ ಮಾಡಿ. ಅತಿ ರುಚಿ ಆರೋಗ್ಯಕ್ಕೂ ಒಳ್ಳೆಯದಾದ ಜೀರಿಗೆ ಚಿತ್ರಾನ್ನ ಅಥವಾ ಗೊಜ್ಜಿನ ತಯಾರಿಸುವ ವಿಧಾನ ಇಲ್ಲಿದೆ.

ಚಿತ್ರಾನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ -1 ಕಪ್
ತುರಿದ ತೆಂಗಿನಕಾಯಿ-1/2 ಕಪ್
ಕೆಂಪು ಮೆಣಸಿನಕಾಯಿಗಳು-3-5
ಜೀರಿಗೆ ಬೀಜಗಳು-2 ಚಮಚ
ಬೆಲ್ಲ
ಹುಣಸೆಹಣ್ಣು
ಕೊತ್ತಂಬರಿ ಸೊಪ್ಪು
ಉಪ್ಪು-ನಿಮ್ಮ ರುಚಿಗೆ ತಕ್ಕಂತೆ
ಚಿತ್ರಾನ್ನ ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
ಕಡಲೆ ಕಾಯಿ-2 ಚಮಚ
ಸಾಸಿವೆ-1 ಚಮಚ
ಉದ್ದಿನ ಬೇಳೆ-1 ಚಮಚ
ಕರಿಬೇವಿನ ಎಲೆಗಳು
ಅರಿಶಿನ ಪುಡಿ-1/4 ಚಮಚ
ಅಡುಗೆ ಎಣ್ಣೆ-2 ಚಮಚ
ಚಿತ್ರಾನ್ನ ತಯಾರಿಸುವ ವಿಧಾನವೇನು..?
ಮೊದಲು ಮೃದುವಾಗಿ ಅನ್ನ ತಯಾರಿಸಿ ಬಿಸಿ ಆರಲು ಬಿಟ್ಟು ಬಿಡಿ. ಬಳಿಕ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆ, ನಿಮ್ಮ ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಸೆಹಣ್ಣು ಸೇರಿಸಿ. ಅಗತ್ಯವರುಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲಿಯನ್ನು ತೆಗೆದುಕೊಂಡು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಮೊದಲು ಕಡಲೆಕಾಯಿಯನ್ನು ಹಾಕಿ ಹುರಿಯಿರಿ. ನಂತರ ಸಾಸಿವೆ ಹಾಗೂ ಉದ್ದಿ ಬೇಳೆಯನ್ನು ಸೇರಿಸಿ ಹುರಿಯಿರಿ. ನಂತರ ಕರಿಬೇವಿನ ಸೊಪ್ಪು ಹಾಗೂ ಅರಶಿನ ಹಾಕಿ ಕಡಿಮೆ ಬೆಂಕಿಯಲ್ಲಿ ಹುರಿದುಕೊಳ್ಳಿ.

ಈ ಮಿಶ್ರಣಕ್ಕೆ ರುಬ್ಬಿಟ್ಟುಕೊಂಡಿರುವ ಮಸಾಲೆ ಸೇರಿಸಿ. ಮಸಾಲೆ ವಾಸನೆ ಹಾಗೂ ನೀರಿನಾಂಶ ಹೋಗುವವರೆಗೂ ಮಿಶ್ರಣ ಮಾಡಿ. ಕೊನೆಯಲ್ಲಿ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ಟೌವ್ ಆರಿಸಿ. ಬಳಿಕ ಕೊತ್ತಬಂರಿ ಸೊಪ್ಪನ್ನು ಅನ್ನದ ಮೇಲೆ ಉದುರಿಸಿ. ರುಚಿರುಚಿಯಾದ ಜೀರಿಗೆ ಚಿತ್ರಾನ್ನ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications