Government Employee: ಮೊಬೈಲ್ ಮೂಲಕ ಜೀವನ್ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಪಿಂಚಣಿಯನ್ನು ಪಡೆಯುವ ನಿವೃತ್ತ ಸರ್ಕಾರಿ ನೌಕರರು ನವೆಂಬರ್ ತಿಂಗಳಿನಲ್ಲಿ 'ಜೀವನ್ ಪ್ರಮಾಣ ಪತ್ರ' ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ಸಮನ್ವಯದೊಂದಿಗೆ ಎಲ್ಲಾ ಕೇಂದ್ರ, ರಾಜ್ಯ ಮತ್ತು ಉದ್ಯೋಗಿಗಳ ಭವಿಷ್ಯನಿಧಿಯ ಸಂಸ್ಥೆ ಪಿಂಚಣಿದಾರರಿಗೆ 'ಜೀವನ್ ಪ್ರಮಾಣ ಪತ್ರ'ವನ್ನು ನೀಡಲು ಸುಲಭವಾಗುವಂತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆ ಪರಿಚಯಿಸಿದೆ.
ಕೇಂದ್ರ ಸರ್ಕಾರ ತನ್ನ ಸುಮಾರು 70 ಲಕ್ಷ ನಿವೃತ್ತ ಉದ್ಯೋಗಿಗಳಿಗೆ ಸಹಾಯಕವಾಗಲು ಡಿಜಿಟಲ್ ಲೈಫ್ ಸರ್ಟಿಫಿಕೇಟ್ 3.0 ಅಭಿಯಾನವನ್ನು ಆರಂಭಿಸಿದೆ. ಭಾರತೀಯ ರೈಲ್ವೆ ಸಹ ಉದ್ಯೋಗಿಗಳಿಗೆ ಸಹಾಯಕವಾಗಲು ಈ ಅಭಿಯಾನದ ಕುರಿತು ಮಾಹಿತಿಯನ್ನು ನೀಡಿದೆ. ಮೊಬೈಲ್ ಮೂಲಕವೇ ನಿವೃತ್ತ ಉದ್ಯೋಗಿಗಳು ಡಿಜಿಟಲ್ ಲೈಫ್ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಇದಕ್ಕಾಗಿ ಯುಐಡಿಎಐ & ಎಂಇಐಟಿ-ವೈ ಮೂಲಕ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ಪಡೆಯಲು ಅಪ್ಲಿಕೇಶನ್ ಪರಿಚಯಿಸಿದೆ. ಇದರಿಂದಾಗಿ ಆಧಾರ್ ಕಾರ್ಡ್ ಮಾಹಿತಿ ಮೂಲಕ ಡಿಜಿಟಲ್ ಪ್ರಮಾಣ ಪತ್ರ ಪಡೆಯಬಹುದಾಗಿದ್ದು, ಸಮಯ ಉಳಿತಾಯವಾಗಲಿದೆ. ಅಲ್ಲದೇ ಬೆರಳ ತುದಿಯಲ್ಲಿಯೇ ನಿವೃತ್ತ ಉದ್ಯೋಗಿಗಳ ಕೈಗೆ ಪ್ರಮಾಣ ಪತ್ರ ಸಿಗಲಿದೆ.
ಸುಲಭವಾಗಿ ಜೀವನ ಪ್ರಮಾಣ ಪತ್ರ ಪಡೆಯಿರಿ: ಈ ವ್ಯವಸ್ಥೆ ಮೂಲಕ ನಿವೃತ್ತಿ ಪಿಂಚಣಿದಾರರು ಫೇಸ್ ರೆಕಗ್ನಿಷನ್ ಮೂಲಕ ಸುಲಭವಾಗಿ ಜೀವನ ಪ್ರಮಾಣ ಪತ್ರವನ್ನು ಅಪ್‌ಡೇಟ್ ಮಾಡಬಹುದಾಗಿದೆ.
ಮೊದಲು ಪಿಂಚಣಿದಾರರು/ ಕೌಟುಂಬಿಕ ಪಿಂಚಣಿ ಪಡೆಯುವವರು ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಬೇಕು. ಬಳಿಕ Aadhaar Face RD (Early Access) ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದು ಯುಐಡಿಎಐನ ಹೊಸ ವರ್ಷನ್ ಅಪ್ಲಿಕೇಶನ್ ಆಗಿದೆ.
ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿದ ಬಳಿಕ ಸೆಟ್ಟಿಂಗ್‌ನಲ್ಲಿ ಅಪ್ಲಿಕೇಶನ್ ಮ್ಯಾನೇಜರ್‌ನಲ್ಲಿ Jeevan Pramaan ಅಪ್ಲಿಕೇಶನ್ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದು ಸಹ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ಅಪ್ಲಿಕೇಶನ್‌ನಲ್ಲಿ ಪಿಂಚಣಿದಾರರು ಆಧಾರ್ ಕಾರ್ಡ್‌ನಲ್ಲಿರುವಂತೆ ತಮ್ಮ ಹೆಸರು, ಪಿಂಚಣಿ ಮಾದರಿ, ಅನುಮತಿ ನೀಡುವ ಸಂಸ್ಥೆ, ಹಂಚಿಕೆ ಮಾಡುವ ಏಜೆನ್ಸಿ ಮಾಹಿತಿಯನ್ನು ನಮೂದು ಮಾಡಬೇಕು.
ಪಿಪಿಒ ನಂಬರ್, ಪಿಂಚಣಿ ಖಾತೆ ಸಂಖ್ಯೆ ಭರ್ತಿ ಮಾಡಿ, ಡಿಕ್ಲರೇಷನ್ ಕ್ಲಿಕ್ ಮಾಡಿ. ಬಳಿಕ ಸಬ್ ಮಿಟ್ ಕ್ಲಿಕ್ ಮಾಡಿ. ಎಲ್ಲಾ ವಿವರ ಭರ್ತಿ ಮಾಡಿದ ಬಳಿಕ ಪಿಂಚಣಿದಾರರ ನೋಂದಾಯಿತ ಸಂಖ್ಯೆಗೆ ಎಲ್ಲಾ ಮಾಹಿತಿ ಎಸ್‌ಎಂಎಸ್ ಮೂಲಕ ಬರುತ್ತದೆ. ಅಲ್ಲಿ ಬರುವ ಮಾಹಿತಿ ಸರಿ ಇದ್ದರೆ Pramaan-id ಮತ್ತು ಲಿಂಕ್ ಮೂಲಕ ಸುಲಭವಾಗಿ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಅಲ್ಲದೇ ಅಂಚೆ ಇಲಾಖೆಯು ಅಂಚೆಪೇದೆ ಮತ್ತು ಗ್ರಾಮೀಣ ಅಂಚೆ ಸೇವಕರಿಂದ ಪಿಂಚಣಿದಾರರಿಗೆ ಅನುಕೂಲಕ್ಕಾಗಿ ಮನೆಬಾಗಿಲಲ್ಲಿಯೇ ಆಧಾರ್ ಮತ್ತು ಪಿಂಚಣಿ ವಿವರಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ವಿತರಿಸುವ ವಿಶೇಷ ಅಭಿಯಾನವನ್ನು ನವೆಂಬರ್ 1ರಿಂದ ನವೆಂಬರ್ 30ರ ತನಕ ಹಮ್ಮಿಕೊಂಡಿದೆ. ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ತಮ್ಮ ಭಾಗದ ಅಂಚೆ ಬಟವಾಡೆಗೆ ಬರುವ ಅಂಚೆ ಸಿಬ್ಬಂದಿಯನ್ನು ಸಂಪರ್ಕಿಸಿ ಮನೆಯಲ್ಲಿಯೇ ಕುಳಿತು ಬೆರಳಚ್ಚು ಅಥವಾ ಮುಖಚಹರೆಯನ್ನು ನೀಡಿ ತಮ್ಮ ಜೀವನ ಪ್ರಮಾಣ ಪತ್ರ ಪಡೆಯಬಹುದು. ಇದಕ್ಕೆ 70 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.












Click it and Unblock the Notifications