ಅಪ್ಪನ ಕೊನೆಯಾಸೆ ತೀರಿಸಲು ಈದ್ಗಾಗೆ ಜಮೀನು ಕೊಟ್ಟ ಹಿಂದೂ ಹುಡುಗಿಯರು
ಕಾಶಿಪುರ್, ಉ.ಖಂಡ್, ಮೇ 5: ಕೋಮುಸೌಹಾರ್ದತೆ ದುರ್ಬಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಅಲ್ಲಲ್ಲಿ ಕೋಮು ಸಾಮರಸ್ಯದ ಘಟನೆಗಳು ನಡೆಯುತ್ತಿರುವುದು ವರದಿಯಾಗುತ್ತಲೇ ಇರುತ್ತವೆ. ಉತ್ತರಾಖಂಡ್‌ನಲ್ಲಿ ಅಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ತಮ್ಮ ತಂದೆಯ ಕಡೆಯಾಸೆ ಈಡೇರಿಸಲು ಇಬ್ಬರು ಹಿಂದೂ ಸೋದರಿಯರು ಈದ್ಗಾ ಪ್ರಾರ್ಥನಾ ಸ್ಥಳಕ್ಕಾಗಿ ಸಾಕಷ್ಟು ಬೆಲೆ ಬಾಳುವ ಜಮೀನು ಬಿಟ್ಟುಕೊಟ್ಟಿದ್ದಾರೆ.
ಉತ್ತರಾಖಂಡ್‌ನ ಉಧಂ ಸಿಂಗ್ ನಗರ್ ಜಿಲ್ಲೆಯ ಕಾಶಿಪುರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈ ಸಹೋದರಿಯರು ಈದ್ಗಾಗಾಗಿ ಬಿಟ್ಟುಕೊಟ್ಟಿದ್ದು ಸಮಾರು 32 ಗುಂಟೆ ಜಾಗ. ಇದು ಒಂದೂವರೆ ಕೋಟಿ ರೂ ಮೌಲ್ಯ ಇರುವ ಅಂದಾಜಿದೆ. ಹಿಂದೂ ಸಮುದಾಯದ ಹೆಣ್ಮಕ್ಕಳು ಇಷ್ಟು ದುಬಾರಿ ಬೆಲೆಯ ಜಮೀನನ್ನು ಈದ್ಗಾಗೆ ಕೊಟ್ಟಿದ್ದು ಕಂಡು ಮುಸ್ಲಿಮ್ ಸಮುದಾಯದವರ ಮನ ಕರಗಿಸಿದೆ. ಇದರ ಕೃತಾರ್ಥವಾಗಿ ಈ ಹಿಂದೂ ಸಹೋದರಿಯರ ಮೃತ ತಂದೆಗಾಗಿ ಮುಸ್ಲಿಮರು ಈದ್ಗಾದಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಬ್ರಜನಂದನ್ ಪ್ರಸಾದ್ ರಸ್ತೋಗಿ 20 ವರ್ಷ ಕೆಳಗೆ ತೀರಿಹೋಗಿದ್ದರು. ಆದರೆ, ಈದ್ಗಾ ಮೈದಾನದ ವಿಸ್ತರಣೆಗಾಗಿ ತಮ್ಮ ಕೃಷಿ ಜಮೀನಿನ ನಾಲ್ಕು ಬಿಘಾ ಭಾಗ (32 ಗುಂಟೆ) ಈದ್ಗಾಗೆ ಬಿಟ್ಟುಕೊಡುವ ಇಚ್ಛೆ ಇದೆ ಎಂದು ತಮ್ಮ ಸಮೀಪ ಬಂಧುಗಳ ಬಳಿ ಹೇಳಿಕೊಂಡಿದ್ದರಂತೆ. 2003ರ ಜನವರಿಯಲ್ಲಿ ಅವರು ಸಾವನ್ನಪ್ಪುವ ಮುನ್ನ ಈ ವಿಚಾರವನ್ನು ತಮ್ಮ ಯಾವ ಮಕ್ಕಳ ಬಳಿಯೂ ಹೇಳಿರಲಿಲ್ಲವೆನ್ನಲಾಗಿದೆ.

ದೆಹಲಿಯಲ್ಲಿರುವ ಸರೋಜ್ ಮತ್ತು ಮೀರತ್‌ನಲ್ಲಿರುವ ಅನಿತಾ ಅವರಿಗೆ ಇತ್ತೀಚೆಗಷ್ಟೇ ತಮ್ಮ ಬಂಧುಗಳ ಮೂಲಕ ಅಪ್ಪನ ಈ ಕೊನೆಯಾಸೆ ವಿಚಾರ ತಿಳಿದಿದೆ. ಅವರಿಬ್ಬರು ಕೂಡಲೇ ತಮ್ಮ ಸಹೋದರ ರಾಕೇಶ್ ರಸ್ತೋಗಿ ಅವರೊಂದಿಗೆ ಮಾತನಾಡಿದ್ದಾರೆ. ಕಾಶಿಪುರ್‌ನಲ್ಲಿ ಕೃಷಿ ಜಮೀನು ನೋಡಿಕೊಳ್ಳುವ ಮಗ ರಾಕೇಶ್ ರಸ್ತೋಗಿ ತನ್ನ ಅಪ್ಪನ ಕೊನೆಯಾಸೆ ಪೂರ್ಣಗೊಳಿಸಲು ಒಪ್ಪಿಕೊಂಡಿದ್ದಾರೆ.
"ಅಪ್ಪನ ಕೊನೆಯಾಸೆ ಈಡೇರಿಸುವುದು ನಮ್ಮ ಕರ್ತವ್ಯ. ನನ್ನ ಸಹೋದರಿಯರು ಅಪ್ಪನ ಆತ್ಮಕ್ಕೆ ಶಾಂತಿ ದೊರಕಿಸಿದ್ದಾರೆ" ಎಂದು ರಾಕೇಶ್ ರಸ್ತೋಗಿ ಹೇಳಿದ್ದಾರೆ.

"ಈ ಇಬ್ಬರು ಸಹೋದರಿಯರು ಕೋಮು ಸಾಮರಸ್ಯಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಅವರ ಈ ಒಳ್ಳೆಯತನಕ್ಕೆ ಈದ್ಗಾ ಸಮಿತಿ ಕೃತಜ್ಞತೆ ವ್ಯಕ್ತಪಡಿಸುತ್ತದೆ. ಅವರು ಮಾಡಿರುವ ಕಾರ್ಯಕ್ಕೆ ನಾವು ಸನ್ಮಾನ ಮಾಡಬೇಕೆಂದಿದ್ದೇವೆ" ಎಂದು ಈದ್ಗಾ ಸಮಿತಿ ಸದಸ್ಯ ಹಸೀನ್ ಖಾನ್ ಹೇಳುತ್ತಾರೆ.
ಇನ್ನೊಂದು ಸಮುದಾಯವನ್ನು ಪ್ರತ್ಯೇಕಿಸಿ ಇಡುವ ಪ್ರವೃತ್ತಿ ಹೆಚ್ಚುತ್ತಿರುವ ಇಂಥ ವಿಷಮ ಸಂದರ್ಭದಲ್ಲಿ ಹೀಗೆ ವಿವಿಧ ಸಮುದಾಯಗಳನ್ನ ಬೆಸೆಯುವ ಈ ಘಟನೆಗಳು ಸಮಾಜಕ್ಕೆ ಮಾದರಿ ಎಂಬುದರಲ್ಲಿ ಸಂಶಯ ಇಲ್ಲ.
ಕೆಲ ಗಮನಾರ್ಹ ಕೋಮುಸಾಮರಸ್ಯ ಘಟನೆಗಳು:
ಭಾರತದ ಹಲವೆಡೆ ಕೋಮುಸೌಹಾರ್ದತೆಯ ನಿದರ್ಶನ ನೀಡುವ ಹಲವು ಘಟನೆಗಳು ನಡೆದಿವೆ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಜಾಮಾ ಮಸೀದಿಯು ಶಿವ ಭಂಡಾರ ಕಾರ್ಯಕ್ರಮಕ್ಕಾಗಿ ಜಾಗ ಬಿಟ್ಟುಕೊಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಅಸ್ಸಾಮ್‌ನ ಗುವಾಹಟಿಯ ಮುಸ್ಲಿಮ್ ಕುಟುಂಬವೊಂದು 500 ವರ್ಷಗಳಿಂದ ಶಿವ ಮಂದಿರವನ್ನು ಪಾಲನೆ ಮಾಡಿಕೊಂಡು ಬರುತ್ತಿದೆ.
ಹಾಗೆಯೇ, ಅಯೋಧ್ಯೆಯ ಸೀತಾರಾಮ ಮಂದಿರದವರು ಇಫ್ತಾರ್ ಕೂಟ ಆಯೋಜನೆ ಮಾಡಿದ್ದಿದೆ. ಕೇರಳದ ದೇವಸ್ಥಾನವೊಂದು ರಂಜಾನ್ ಹಬ್ಬದ ವೇಳೆ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಸ್ಥಳ ಕೊಟ್ಟಿದ್ದರು.
ಮುಸ್ಲಿಮರ ಪ್ರಾಬಲ್ಯ ಇರುವ ಕಾಶ್ಮೀರದ ಪುಲ್ವಾಮದಲ್ಲಿ ಹಾಳಾಗುವ ಸ್ಥಿತಿಯಲ್ಲಿದ್ದ 80 ವರ್ಷ ಹಳೆಯ ಶಿವ ಮಂದಿರವನ್ನು ಅಲ್ಲಿನ ಮುಸ್ಲಿಮರು ಒಟ್ಟುಗೂಡಿ ಪುನರುಜ್ಜೀವನಗೊಳಿಸಿದ್ದರು. ಇನ್ನು, ಪಂಜಾಬ್ ರಾಜ್ಯದಲ್ಲಿ ಮೂರು ದಿನ ಸಿಖ್ ಲಂಗರ್‌ಗೆ ಮಸೀದಿ ಸ್ಥಳ ಕೊಟ್ಟಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications