ಮಗಳಿಗಾಗಿ ಆಟೋವನ್ನೇ ಮನೆಯನ್ನಾಗಿಸಿಕೊಂಡ ಅಪ್ಪ; ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು
ಅದು ಎಂದಿನಂತೆ ವಾಹನಗಳ ಸದ್ದು, ಕಿರಿಕಿರಿ ಉಂಟುಮಾಡುವ ಹಾರ್ನ್ ಸದ್ದು ಮತ್ತು ಟ್ರಾಫಿಕ್‌ನಿಂದ ಕೂಡಿದ ರಸ್ತೆ. ಜನರ ಅವಸರದ ನಡುವೆ ಆ ಆಟೋ ಕೂಡ ಸಾಗುತ್ತಿತ್ತು. ಆದರೆ ಆ ಆಟೋದ ಹಿಂಬದಿಯ ಸೀಟಿನಲ್ಲಿ ಮಲಗಿದ್ದ ಆ ಪುಟ್ಟ ಮಗು ಮಾತ್ರ ಹೊರಗಿನ ಯಾವುದೇ ಗದ್ದಲಕ್ಕೆ ಕಿವಿಗೊಡದೆ ಗಾಢ ನಿದ್ರೆಯಲ್ಲಿತ್ತು. ಇತ್ತೀಚೆಗೆ ಈ ವಿಡಿಯೋವನ್ನು ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನೂ ನೋಡಿದ ನೆಟ್ಟಿಗರು ಕಣ್ಣೀರಿಟ್ಟಿದ್ದಾರೆ.
ಆಟೋ ಸೀಟೇ ಆಕೆಗೆ ಹಾಸಿಗೆ
ವಿಡಿಯೋದಲ್ಲಿ ಕಂಡುಬರುವಂತೆ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಹಿಂಬದಿಯ ಸೀಟಿನಲ್ಲಿ ಮಲಗಿದ್ದ ಪುಟ್ಟ ಹುಡುಗಿಯನ್ನು ಕಂಡು ಕುತೂಹಲದಿಂದ ಚಾಲಕನನ್ನು ಕೇಳುತ್ತಾರೆ. ಅದಕ್ಕೆ ಆ ಚಾಲಕ ಯಾವುದೇ ಆಡಂಬರವಿಲ್ಲದೆ, ಮೃದುವಾದ ದನಿಯಲ್ಲಿ "ಇವಳು ನನ್ನ ಮಗಳು" ಎಂದು ಉತ್ತರಿಸುತ್ತಾರೆ. ಮಗು ಅಲ್ಲಿ ಯಾಕೆ ಮಲಗಿದೆ ಎಂದು ಕೇಳಿದಾಗ ಆತ ನೀಡಿದ ಉತ್ತರ ಎಲ್ಲರ ಕಣ್ಣಲ್ಲು ನೀರು ತರಿಸುವಂತದ್ದು. "ಈಕೆಯ ತಾಯಿ ತೀರಿಹೋಗಿದ್ದಾರೆ, ಅಂದಿನಿಂದ ಮಗಳನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಬರಲು ಮನಸ್ಸಾಗುತ್ತಿಲ್ಲ. ಅದಕ್ಕೇ ಕೆಲಸಕ್ಕೆ ಬರುವಾಗ ಜೊತೆಯಲ್ಲೇ ಕರೆದುಕೊಂಡು ಬರುತ್ತೇನೆ" ಎಂದು ಹೇಳುತ್ತಾರೆ.

ಅಂದಿನಿಂದ ಆ ಆಟೋ ಕೇವಲ ಜೀವನೋಪಾಯದ ಮಾರ್ಗವಾಗಿ ಉಳಿದಿಲ್ಲ; ಬದಲಿಗೆ ಆ ತಂದೆ-ಮಗಳ ಪಾಲಿನ ಪುಟ್ಟ ಪ್ರಪಂಚವಾಗಿದೆ. ಪ್ರತಿ ಬಾಡಿಗೆಯಲ್ಲೂ, ಸುದೀರ್ಘ ಹಗಲಿನಲ್ಲಿ ಮತ್ತು ದಣಿದ ಸಂಜೆಗಳಲ್ಲಿ ಆ ಮಗು ತಂದೆಯ ಜೊತೆಗೇ ಇರುತ್ತದೆ.
ಸುರಕ್ಷಿತ ಭಾವದ ನಿದ್ರೆ
ಆ ಮಗು ಮಲಗಿದ್ದ ರೀತಿ ಎಂತವರನ್ನೂ ಭಾವುಕರನ್ನಾಗಿಸುತ್ತದೆ. ಆ ಸೀಟು ಮೃದುವಾಗಿಲ್ಲದಿರಬಹುದು, ಸುತ್ತಮುತ್ತಲಿನ ಪರಿಸರ ಆರಾಮದಾಯಕವಾಗಿಲ್ಲದಿರಬಹುದು. ಆದರೆ ತನ್ನ ತಂದೆ ತನ್ನ ಪಕ್ಕದಲ್ಲೇ ಇದ್ದಾನೆ ಎಂಬ ನಂಬಿಕೆ ಆಕೆಗೆ ಜಗತ್ತಿನ ಅತ್ಯಂತ ದೊಡ್ಡ ಸುರಕ್ಷತೆಯ ಭಾವವನ್ನು ನೀಡಿದೆ. ಕಷ್ಟದ ಬದುಕಿನ ನಡುವೆಯೂ ಆ ಪುಟ್ಟ ಮಗು ತಂದೆಯ ರೆಕ್ಕೆಗಳ ಅಡಿಯಲ್ಲಿ ನಿಶ್ಚಿಂತೆಯಾಗಿದೆ.
ನಾವೆಲ್ಲರೂ ಪೋಷಣೆ ಎಂದರೆ ದೊಡ್ಡ ಶಾಲೆಗಳು, ಉತ್ತಮ ಬಟ್ಟೆಗಳು ಅಥವಾ ಸೌಲಭ್ಯಗಳು ಎಂದು ಭಾವಿಸುತ್ತೇವೆ. ಆದರೆ ಅನೇಕ ಪೋಷಕರಿಗೆ ಇದು ಕೇವಲ ಬದುಕುಳಿಯುವ ಹೋರಾಟ. ಬೇರೆ ದಾರಿಯಿಲ್ಲದೆ ಮಗುವನ್ನು ಕೆಲಸದ ಸ್ಥಳಕ್ಕೆ ಕರೆದೊಯ್ಯುವುದು, ನಿದ್ರೆಯಿಲ್ಲದೆ ದುಡಿಯುವುದು ಮತ್ತು ಮಗುವಿನ ಭವಿಷ್ಯಕ್ಕಾಗಿ ತನ್ನ ಎಲ್ಲಾ ಸುಖ-ಸಂತೋಷಗಳನ್ನು ತ್ಯಾಗ ಮಾಡುವುದೇ ನಿಜವಾದ ಪೋಷಣೆ.
ಈ ತಂದೆ ತನ್ನ ತ್ಯಾಗದ ಬಗ್ಗೆ ಎಲ್ಲಿಯೂ ಭಾಷಣ ಮಾಡಲಿಲ್ಲ, ತಾನು ಧೈರ್ಯಶಾಲಿ ಎಂದು ಹೇಳಿಕೊಳ್ಳಲಿಲ್ಲ. ಬದಲಿಗೆ ಒಬ್ಬ ತಂದೆಯಾಗಿ ತನ್ನ ಜವಾಬ್ದಾರಿಯನ್ನು ಮೌನವಾಗಿ ನಿರ್ವಹಿಸುತ್ತಿದ್ದಾರೆ. ಈ ಜಗತ್ತು ಕಠಿಣವಾಗಿದ್ದರೂ ತನ್ನ ಮಗಳಿಗೆ ಒಂದು ಪುಟ್ಟ ಜಾಗವನ್ನು ಆತ ಸೃಷ್ಟಿಸಿಕೊಟ್ಟಿದ್ದಾನೆ.
ರಸ್ತೆಯಲ್ಲಿ ಕಷ್ಟಪಡುವ ಪೋಷಕರನ್ನು ಕಂಡಾಗ ನೆನಪಿರಲಿ, ಆ ಪ್ರತಿಯೊಂದು ದಣಿದ ಮುಖದ ಹಿಂದೆ ಸಾವಿರಾರು ಪ್ರೀತಿಯ ಕಥೆಗಳಿರುತ್ತವೆ. ಪ್ರತಿಯೊಂದು ನೆಮ್ಮದಿಯಿಂದ ಮಲಗಿದ ಮಗುವಿನ ಹಿಂದೆ ಆ ಮಗುವಿನ ಪ್ರಪಂಚವನ್ನು ಕುಸಿಯದಂತೆ ಹಿಡಿದಿಟ್ಟ ಒಬ್ಬ ಶಕ್ತಿಶಾಲಿ ವ್ಯಕ್ತಿ ಇರುತ್ತಾನೆ. ಈ ಆಟೋ ಚಾಲಕ ಇಂದು ಸಾಮಾಜಿಕ ಜಾಲತಾಣದಲ್ಲಿ ಹೀರೊ ಆಗಿ ಹೊರಹೊಮ್ಮಿದ್ದಾರೆ.












Click it and Unblock the Notifications