ಬೊಜ್ಜು ತಡೆಯೋದು ಹೇಗೆ? ವೈದ್ಯರು ನೀಡುವ ಸಲಹೆಗಳೇನು?
ಪ್ರತಿಯೊಬ್ಬರು ಸುಂದರ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದು ಸಹಜ ಆದರೆ ಬೊಜ್ಜು ನಮ್ಮ ಆ ಬಯಕೆಗೆ ತಣ್ಣೀರು ಎರಚಿ ಬಿಡುತ್ತದೆ. ಏಕೆ ಹೀಗೆ? ನಮ್ಮ ದೇಹದಲ್ಲಿ ಬೊಜ್ಜು ಏಕೆ ಬೆಳೆಯುತ್ತದೆ? ಅದನ್ನು ನಿಯಂತ್ರಣ ಮಾಡೋಕೆ ಸಾಧ್ಯನೇ ಇಲ್ವ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹಾಗಾದರೆ ಬೊಜ್ಜು ಬರದಂತೆ ತಡೆಯಲು ನಾವೇನು ಮಾಡಬೇಕು? ವೈದ್ಯರು ನೀಡುವ ಸಲಹೆ ಏನು?
ನಮ್ಮ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಬೇರೆಯವರ ಮುಂದೆ ನಾವು ಸುಂದರ ಮತ್ತು ಆಕರ್ಷಕವಾಗಿ ಕಾಣಲು ಸಾಧ್ಯವಾಗುತ್ತದೆ.

ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಶರೀರದ ಗಾತ್ರಹಿಗ್ಗುತ್ತದೆ. ಇದೇ ಬೊಜ್ಜು. ಮನುಷ್ಯನಿಗೆ ಬೊಜ್ಜು ಹೆಚ್ಚಾಗುತ್ತಿದ್ದಂತೆಯೇ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಸಿಕ್ಕಿದನ್ನೆಲ್ಲ ಸೇವಿಸೋದನ್ನು ಬಿಟ್ಟು ಬಿಡಿ
ಜಂಕ್ ಫುಡ್ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳದೆ, ಸಿಕ್ಕಿದನ್ನೆಲ್ಲ ಸೇವಿಸೋದು, ಕುಳಿತಲ್ಲೇ ಹೆಚ್ಚು ಹೊತ್ತು ಇರುವುದು, ವಾಕಿಂಗ್, ವ್ಯಾಯಾಮ, ದೈಹಿಕ ಶ್ರಮದ ಕೆಲಸ ಮಾಡದಿರುವುದು ಬೊಜ್ಜು ಬರಲು ಕಾರಣವಾಗುತ್ತದೆ. ನಾವು ನಮ್ಮ ದೇಹವನ್ನು ಎಷ್ಟು ದಂಡಿಸುತ್ತೇವೆಯೋ ಅಷ್ಟೇ ಅನುಕೂಲವಾಗುತ್ತದೆ. ಶ್ರಮ ವಹಿಸುವ ಕೆಲಸಗಾರರು, ರೈತರು, ಕಾರ್ಮಿಕರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಅಪರೂಪವಾಗಿರುತ್ತದೆ. ಆದರೆ ದೈಹಿಕ ಶ್ರಮ ಕಡಿಮೆ ಇರುವ ಕೆಲಸಗಳನ್ನು ಮಾಡುವವರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ಇನ್ನು ಬೊಜ್ಜು ಹೇಗೆ ಬರುತ್ತದೆ ಎಂಬುದಕ್ಕೆ ವೈದ್ಯರು ಕೆಲವೊಂದು ಕಾರಣಗಳನ್ನು ನೀಡುತ್ತಾರೆ. ಅದೇನೆಂದರೆ ಅನುವಂಶೀಯವಾಗಿಯೂ ಬರಬಹುದು. ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು. ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ಕೂಡ ಬೊಜ್ಜು ಬರಲು ದಾರಿ ಮಾಡಿಕೊಡುತ್ತದೆ.
ಕೆಲವೊಂದು ನಿಯಮಗಳನ್ನು ಅಳವಡಿಸಿಕೊಳ್ಳಿ
ನಮ್ಮ ದೇಹದಲ್ಲಿ ಬೊಜ್ಜು ಬೆಳೆಯುವುದನ್ನು ತಡೆಯಬೇಕಾದರೆ ಸೇವಿಸುವ ಆಹಾರವು ಖರ್ಚು ಮಾಡುವ ಶಕ್ತಿಗೆ ಸಮವಾಗಿರಬೇಕು. ದೇಹದ ತೂಕವನ್ನು ಪರೀಕ್ಷಿಸಿಕೊಂಡು ಕೆಲವೊಂದು ನಿಯಮಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕೆಲವೊಂದು ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಅದೇನೆಂದರೆ ನಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು. ಆಹಾರದ ಬಗ್ಗೆ ಗಮನಹರಿಸಿ ದೇಹದ ತೂಕವನ್ನು ಸಮತೋಲನೆಯಲ್ಲಿಟ್ಟುಕೊಳ್ಳುವುದು.
ದೈಹಿಕ ಶ್ರಮಕ್ಕಿಂತ ಹೆಚ್ಚು ಆಹಾರ ಸೇವನೆಯಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ದೇಹದ ನಡುವನ್ನು ತೆಳ್ಳಗೆ(ತೆಳುವಾಗಿ) ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರವಾಗಿ ಬೊಜ್ಜು ಬರಲಾರಂಭಿಸಿ ಬಿಡುತ್ತದೆ. ಇನ್ನು ತೂಕ ಹೆಚ್ಚಾಯಿತೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬಾರದು. ದೇಹದ ತೂಕವನ್ನು ಕಠಿಣ ವ್ಯಾಯಾಮ, ಯೋಗಗಳ ಮೂಲಕ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿಯಷ್ಟು ಇಳಿಸಿದರೆ ಸಾಕು. ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವುದು ಒಳ್ಳೆಯದಲ್ಲ.
ವ್ಯಾಯಾಮಕ್ಕೆ ಒತ್ತು ನೀಡಲು ಮರೆಯದಿರಿ
ತೂಕ ಇಳಿಕೆಗಾಗಿ ಔಷಧಿ, ಮಾತ್ರೆ ಇನ್ನಿತರ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕಾರಿ. ಏನೇ ಮಾಡುವುದಿದ್ದರೂ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಸ್ವಯಂ ಚಿಕಿತ್ಸೆ ಆರೋಗ್ಯಕ್ಕೆ ಮಾರಕ ಎಂಬುದನ್ನು ಮರೆಯಬಾರದು. ನಮ್ಮ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗಿ ದಿನವೊಂದಕ್ಕೆ 100 ಕ್ಯಾಲೋರಿ ಆಹಾರ ಹೆಚ್ಚಾದರೂ ಒಬ್ಬರ ತೂಕ ವರ್ಷಕ್ಕೆ ನಾಲ್ಕು ಕೆಜಿಯಷ್ಟು ಹೆಚ್ಚಾಗುತ್ತದೆಯಂತೆ. ಆದ್ದರಿಂದ ಆಹಾರ ಪಥ್ಯದ ಜತೆಗೆ ವ್ಯಾಯಾಮ ಮಾಡುವುದು ಅಗತ್ಯವಾಗಿರುತ್ತದೆ. ಅಲ್ಲದೆ ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ತಡೆಯಲು ಸಾಧ್ಯವಾಗುತ್ತದೆ.












Click it and Unblock the Notifications