Big Alert: ಜಗತ್ತನ್ನು ಕಾಡಲು 4 ಹೊಸ ಕೊರೊನಾವೈರಸ್ ರೂಪಾಂತರಗಳ ಹುಟ್ಟು!
ನವದೆಹಲಿ, ಜೂನ್ 29: ಕೊರೊನಾವೈರಸ್ ರೂಪಾಂತರ ತಳಿ ಹಾಗೂ ಅಲೆಗಳ ಹಾವಳಿ ಭಾರತದ ಮಟ್ಟಿಗೆ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊವಿಡ್-19 ರೂಪಾಂತರಗಳ ಬಗ್ಗೆ ಮತ್ತೊಂದು ಆಘಾತಕಾರಿ ಅಂಶವನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೊರ ಹಾಕಿದ್ದಾರೆ.
ಜಗತ್ತಿನಲ್ಲಿ ಈಗಿರುವ ಕೊರೊನಾವೈರಸ್ ರೂಪಾಂತರಗಳ ಜೊತೆಗೆ ಇನ್ನೂ ನಾಲ್ಕು ಹೊಸ ರೂಪಾಂತರ ತಳಿಗಳು ಸೃಷ್ಟಿಯಾಗುವ ಹಾಗೂ ಹರಡುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಡೆಲ್ಟಾ(B.1.617.2) ಕುಟುಂಬದಿಂದ B.1.617.3 ಎಂಬ ರೂಪಾಂತರ, ಕಪ್ಪಾ(B.1.617.1)ದಿಂದ ಮತ್ತೊಂದು ರೂಪಾಂತರಗಳು ಹರಡಲಿದೆ. ಆದರೆ ಈ ಎರಡು ರೂಪಾಂತರಗಳು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಕ್ಕಿಂತ ಹೆಚ್ಚು ಪರಿಣಾಮಕಾರಿ ಆಗಿರುವುದಿಲ್ಲ ಎಂದಿದ್ದಾರೆ. ಇತರ ಎರಡು ರೂಪಾಂತರಗಳ ಪೈಕಿ ಒಂದು B.1.1.318, ಇದು 14 ರೂಪಾಂತರಗಳನ್ನು ಹೊಂದಿದೆ, ಮತ್ತು ಲ್ಯಾಂಬ್ಡಾ (C.37) ಅನ್ನು ಜೂನ್ 3 ರಂದು 'ತನಿಖೆಯಲ್ಲಿ ರೂಪಾಂತರ' ಎಂದು ಗುರುತಿಸಲಾಗಿದೆ. ಭಾರತದಲ್ಲಿ ಈಗಾಗಲೇ B.1.1318 ಮತ್ತು B.1.617.3 ರೂಪಾಂತರ ಪತ್ತೆಯಾಗಿದ್ದು, ಲ್ಯಾಂಬ್ಡಾ ರೂಪಾಂತರ ಇನ್ನೇನು ದೇಶದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ.
ಈ ನಾಲ್ಕು ಕೊರೊನಾವೈರಸ್ ರೂಪಾಂತರಗಳು ಹೇಗೆ ಹರಡುತ್ತವೆ, ಈ ರೂಪಾಂತರಗಳ ಪರಿಣಾಮ ಹೇಗಿದೆ. ಯಾವ ರಾಷ್ಟ್ರಗಳಲ್ಲಿ ಈ ರೂಪಾಂತರಗಳ ಹಾವಳಿ ಹೆಚ್ಚಾಗುವ ಅಪಾಯವಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ದೇಶದಲ್ಲಿ ಮೊದಲು ಗೋಚರಿಸಿದ ಡೆಲ್ಟಾ ರೂಪಾಂತರ
ಕೊರೊನಾವೈರಸ್ ರೂಪಾಂತರಗಳ ಪೈಕಿ ಭಾರತದಲ್ಲಿ ಮೊದಲು ಡೆಲ್ಟಾ ತಳಿ ರೂಪಾಂತರ ಕಾಣಿಸಿಕೊಂಡಿತ್ತು. ಇದೀಗ ಡೆಲ್ಟಾ ಕುಟುಂಬದಿಂದ ಮತ್ತೆರೆಡು ರೂಪಾಂತರಗಳು ದೇಶಾದ್ಯಂತ ಹರಡುತ್ತಿವೆ. ದೇಶದಲ್ಲಿ ಮೊದಲಿಗೆ ಕಪ್ಪಾ (B.1.617.1) ರೂಪಾಂತರ, ಎರಡನೇಯದಾಗಿ ಡೆಲ್ಟಾ (B.1.617.2) ರೂಪಾಂತರ, ಅದೇ ರೋಗಾಣುಗಳಿಂದ ಜನಿಸಿದ B.1.617.3 ರೂಪಾಂತರ ತಳಿಯು ಗೋಚರಿಸಿದೆ. ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ B.1.617 ರೂಪಾಂತರ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಪತ್ತೆ ಆಗಿರುವ ಅದರ ಮೂರನೇ ರೂಪಾಂತರ B.1.617.3 ಕಪ್ಪಾ ತಳಿಗೆ ಸೇರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡೆಲ್ಟಾ ರೂಪಾಂತರ ವೈರಸ್ ಹರಡುವಿಕೆ ಪ್ರಮಾಣ
ಕಳೆದ ಜೂನ್ 22ರ ಅಂಕಿ-ಅಂಶಗಳ ಪ್ರಕಾರ, ಜಗತ್ತಿನಾದ್ಯಂತ B.1.617.3 ರೂಪಾಂತರ ತಳಿಯ 161 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಭಾರತದಲ್ಲೇ 148 ಪ್ರಕರಣಗಳು ವರದಿಯಾಗಿವೆ. ಇನ್ನೊಂದು ಕಡೆ ವಿಶ್ವದಲ್ಲಿ ಕಪ್ಪಾ ರೂತಾಂರದ 4217 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದರೆ, ಅದರಲ್ಲಿ 3083 ಪ್ರಕರಣಗಳು ಭಾರತದಲ್ಲೇ ಪತ್ತೆಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

B.1.1.318 ರೂಪಾಂತರ ವೈರಸ್ ಮೂಲ ಯಾವುದು?
ಜಗತ್ತಿನಲ್ಲಿ ಇತ್ತೀಚಿಗೆ ಹೊಸದಾಗಿ ಕಾಣಿಸಿಕೊಂಡಿರುವ B.1.1.318 ತಳಿಯು E484K ರೂಪಾಂತರಿ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಗೋಚರಿಸಿದ B.1.351 ತಳಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಬ್ರೆಜಿಲ್ ನಲ್ಲಿ ಮೊದಲ ಕಂಡು ಬಂದ B.1.1.28 ರೂಪಾಂತರದಲ್ಲೂ ಈ ತಳಿ ಪತ್ತೆಯಾಗಿದೆ. ಜಿಐಎಸ್ಎಐಡಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಈ ರೂಪಾಂತರ ವೈರಸ್ ಪ್ರಮಾಣ ಕಡಿಮೆಯಾಗಿದೆ. ವಿಶ್ವದಲ್ಲಿ ಪತ್ತೆಯಾಗಿರುವ 173 ಪ್ರಕರಣಗಳ ಪೈಕಿ ಭಾರತದಲ್ಲಿ ಕೇವಲ ಎರಡು ಪ್ರಕರಣಗಳು ವರದಿಯಾಗಿವೆ.

ಕೊವಿಡ್-19 ಲ್ಯಾಂಬ್ಡಾ ವಂಶಾವಳಿಯ ರೂಪಾಂತರ
"ದಕ್ಷಿಣ ಬ್ರೆಜಿಲ್ ರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿನ ಲ್ಯಾಂಬ್ಡಾ(C.37) ವಂಶಾವಳಿಯ B1.1.1 ರೂಪಾಂತರವು ಮೊದಲು ಪತ್ತೆಯಾಗಿತ್ತು," ಎಂದು ನ್ಯೂಸ್ ಮೆಡಿಕಲ್ ಸೈನ್ಸಸ್ ವರದಿ ಮಾಡಿದೆ. ಪೆರುವಿನಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರುವ ಈ ರೂಪಾಂತರ ವೈರಸ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಯುರೋಪ್ ಹಾಗೂ ಓಷಿಯಾನಿಯಲ್ಲೂ ಪತ್ತೆಯಾಗಿದೆ.
"2021ರ ಏಪ್ರಿಲ್ ತಿಂಗಳವರೆಗೂ ಪೆರು ರಾಷ್ಟ್ರದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.81ರಷ್ಟು ಸೋಂಕಿತರಲ್ಲಿ ಲ್ಯಾಂಬ್ಡಾ ರೂಪಾಂತರ ತಳಿ ಪತ್ತೆಯಾಗಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜೊತೆಗೆ "ಕಳೆದ 60 ದಿನಗಳಲ್ಲಿ ಚಿಲಿ ರಾಷ್ಟ್ರದಲ್ಲಿ ಪತ್ತೆಯಾದ ಹೊಸ ಸೋಂಕಿತ ಪ್ರಕರಣಗಳಲ್ಲಿ ಶೇ.32ರಷ್ಟು ಮಂದಿಯಲ್ಲಿ ಲ್ಯಾಂಬ್ಡಾ ರೂಪಾಂತರ ತಳಿ ಪತ್ತೆಯಾಗಿದೆ. ಲ್ಯಾಂಬ್ಡಾ ರೂಪಾಂತರವನ್ನು "ವಿಸ್ತೃತ ಅವಧಿಯ ಎಚ್ಚರಿಕೆಯಂತೆ" ಪರಿಗಣಿಸಲಾಗುತ್ತದೆ," ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ.

ಲ್ಯಾಂಬ್ಡಾ ರೂಪಾಂತರದ ಹರಡುವಿಕೆ ಸಾಮರ್ಥ್ಯ
"ಕೊರೊನಾವೈರಸ್ ಸೋಂಕಿನ ಲ್ಯಾಂಬ್ಡಾ ರೂಪಾಂತರ ತಳಿ ಹೆಚ್ಚು ಹರಡುವಿಕೆ ಸಾಮರ್ಥ್ಯ ಮತ್ತು ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಕೆಲಸ ಮಾಡುತ್ತವೆ. ಜೊತೆಗೆ ಹೆಚ್ಚಿನ ಪ್ರತಿರೋಧದಂತಹ ಶಂಕಿತ ಫಿನೋಟೈಪಿಕ್ ಪರಿಣಾಮಗಳೊಂದಿಗೆ ಹಲವಾರು ರೂಪಾಂತರಗಳನ್ನು ಹೊಂದಿದೆ," ಎಂದು WHO ಹೇಳಿದೆ. "G75V, T76I, del247/253, L452Q, F490S, D614G and T859N ಸೇರಿದಂತೆ ಪ್ರೋಟೀನ್‌ನಲ್ಲಿನ ರೂಪಾಂತಗಳ ಹೆಚ್ಚಳದಿಂದ ಇದು ಖಾತ್ರಿಯಾಗುತ್ತದೆ," ಎಂದು WHO ತಿಳಿಸಿದೆ.
"ಕೊರೊನಾವೈರಸ್ ಸೋಂಕಿನ ಲ್ಯಾಂಬ್ಡಾ ರೂಪಾಂತರ ತಳಿಯು ಸಮುದಾಯದ ಮಟ್ಟದಲ್ಲಿ ಹೇಗೆ ಪ್ರಸರಣ ಆಗಲಿದೆ. ಕೊವಿಡ್-19 ಸಂಬಂಧಿಸಿದ ಬೆಳವಣಿಗೆಗಳ ಆಧಾರದ ಮೇಲೆ ಈ ತಳಿಯ ಹರಡುವಿಕೆ ವೇಗ ಎಷ್ಟಿರುತ್ತದೆ ಎಂಬುದು ನಿರ್ಧಾರವಾಗುತ್ತದೆ," ಎಂದು WHO ತಿಳಿಸಿದೆ. 2020ರ ಆಗಸ್ಟ್ ನಲ್ಲಿ ಪೆರು ರಾಷ್ಟ್ರದಲ್ಲಿ ಆರಂಭಿಕವಾಗಿ ಸೋಂಕಿನ ಮಾದರಿ ಪತ್ತೆಯಾಗಿತ್ತು. 2021ರ ಜೂನ್ 15ರ ವೇಳೆಗೆ 29 ರಾಷ್ಟ್ರಗಳಿಂದ 1730 ಪ್ರಕರಣಗಳು ವರದಿಯಾಗಿವೆ.

ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹೆಸರುಗಳನ್ನು ನೀಡಿದೆ. ಈ ಕೊವಿಡ್-19 ರೂಪಾಂತರ ತಳಿಗಳ ಮೂಲ ವಂಶಾವಳಿ, ರಾಷ್ಟ್ರ, ರೂಪಾಂತರ ತಳಿ ಕಾಣಿಸಿಕೊಂಡ ವರ್ಷ ಹಾಗೂ ತಿಂಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
| ಕೊರೊನಾವೈರಸ್ ತಳಿ ಹೆಸರು | ದೇಶ ಮತ್ತು ದಿನಾಂಕ | ರೋಗಾಣುವಿನ ವಂಶಾವಳಿ |
| ಆಲ್ಫಾ | ಯುನೈಟೆಡ್ ಕಿಂಗ್ ಡಮ್, ಸಪ್ಟೆಂಬರ್ 2020 | B.1.1.7 |
| ಬೇಟಾ | ದಕ್ಷಿಣ ಆಫ್ರಿಕಾ, ಮೇ 2020 | B.1.351 |
| ಗಮ್ಮಾ | ಬ್ರೆಜಿಲ್, ನವೆಂಬರ್ 2020 | P.1 |
| ಡೆಲ್ಟಾ | ಭಾರತ, ಅಕ್ಟೋಬರ್, 2020 | B.1.617.2 |
| ಎಪ್ಸಿಲೋನ್ | ಯುಎಸ್ಎ, ಮಾರ್ಚ್, 2020 | B.1.427/B.1.429 |
| ಜೇಟಾ | ಬ್ರೆಜಿಲ್, ಏಪ್ರಿಲ್ 2020 | P.2 |
| ಎಟಾ | ಹಲವು ರಾಷ್ಟ್ರಗಳಲ್ಲಿ, ಡಿಸೆಂಬರ್,2020 | B.1.525 |
| ಥೇಟಾ | ಫಿಲಿಫೈನ್ಸ್, ಜನವರಿ, 2021 | P.3 |
| ಲೋಟಾ | ಯುಎಸ್ಎ, ನವೆಂಬರ್,2020 | B.1.526 |
| ಕಪ್ಪಾ | ಭಾರತ, ಅಕ್ಟೋಬರ್, 2020 | B.1.617.1 |

ಕೊವಿಡ್-19 ಮೇಲೆ ನಿಯಂತ್ರಣ ಹೊಂದಿದ ಭಾರತ
ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ನಂತರ ಪರಿಸ್ಥಿತಿ ಸುಧಾರಿಸಿದೆ. ದೇಶದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.96.87ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 37,566 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 907 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 56,994 ಸೋಂಕಿತರು ಗುಣಮುಖರಾಗಿದ್ದಾರೆ.
ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 3,03,16,897 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,93,66,601 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಈವರೆಗೂ 3,97,637 ಮಂದಿ ಬಲಿಯಾಗಿದ್ದಾರೆ. ಇದರ ಹೊರತಾಗಿ 5,52,659 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications