Ferrari Bengaluru: ಬೆಂಗಳೂರಿನಲ್ಲಿರೋ ಫೆರಾರಿ ಶೋರೂಂನ ತಿಂಗಳ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ!
ಬೆಂಗಳೂರು ಟ್ರಾಫಿಕ್‌ಗೆ ಹೆಸರುವಾಸಿಯಾಗಿದ್ದರೂ ಇಲ್ಲಿ ಸೂಪರ್ ಕಾರ್‌ಗಳ ಕ್ರೇಜ್ ಕಡಿಮೆಯೇನಿಲ್ಲ. ಐಷಾರಾಮಿ ಕಾರುಗಳು ಲಿಸ್ಟ್‌ನಲ್ಲಿ ಮುಂಚೂಯಲ್ಲಿರುವ ಈ ಫೆರಾರಿ ಕೊನೆಗೆ ಸಿಲಿಕಾನ್ ಸಿಟಿಯಲ್ಲಿ ತನ್ನ ನೂತನ ಶೋರೂಂ ಹಾಗೂ ಸರ್ವೀಸ್ ಸೆಂಟರ್ ತೆರೆಯುವ ಮೂಲಕ ಕಾರುಪ್ರಿಯರ ಚಿತ್ತ ಸೆಳೆದಿದೆ. ಈ ಐಷಾರಾಮಿ ಕಾರು ತಯಾರಕ ಫೆರಾರಿ ಸೆಂಟರ್ ದಕ್ಷಿಣ ಭಾರತದಲ್ಲೇ ಮೊದಲು ಕಾಲಿಟ್ಟಿರೋದು ಕೂಡ ಬೆಂಗಳೂರಿನ ಹೆಮ್ಮೆ. ಕೋಟಿ ಕೋಟಿ ಬೆಲೆಬಾಳುವ ಈ ಕಾರುಗಳ ಶೋರೂಂ ಅಂದ್ರೆ ತಮಾಷೆ ಮಾತಲ್ಲ, ಅದರ ಗತ್ತು ಕೂಡ ಹಾಗೇ ಇರುತ್ತೆ. ಇದೀಗ ಬೆಂಗಳೂರು ಫೆರಾರಿ ಶೋರೂಂನ ಬಾಡಿಗೆ ವಿಚಾರದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
ಬೆಂಗಳೂರು ಇದೀಗ ಸೂಪರ್ ಕಾರ್‌ಗಳ ಸಿಟಿ ಎಂದೇ ಗಮನ ಸೆಳೆದಿದೆ. ಬೆಂಗಳೂರಿನ ರಸ್ತೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಈ ಕಾರುಗಳ ಪೈಕಿ ಫೆರಾರಿ ಕೂಡ ಒಂದು. ಇಲ್ಲಿ ಶೋರೂಂ ಇಲ್ಲದ ಕಾರಣ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಮಾತ್ರವೇ ಕಾರನ್ನು ತರಿಸಿಕೊಳ್ಳಬೇಕಿತ್ತು. ಕಾರು ತಂದರೂ ಅದರ ಸರ್ವೀಸ್‌ಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ಫೆರಾರಿ ನಾವೇ ಬರ್ತೀವಿ ತಡೀರಿ ಅಂತಾ ಬೆಂಗಳೂರಿಗೆ ಬಂದು ಮನೆ ಮಾಡಿಕೊಂಡಿದೆ.

ಫೆರಾರಿ ತನ್ನ ಭಾರತದ ಡೀಲರ್, ಸೆಲೆಕ್ಟ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಬೆಂಗಳೂರು ಉತ್ತರ ಭಾಗದಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ 10,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಹೊಸ ಶೋರೂಂ ಅನ್ನು ನಿರ್ಮಿಸಿದೆ. ಇತ್ತೀಚೆಗಷ್ಟೇ ಈ ಶೋರೂಂ ಅಧಿಕೃತವಾಗಿ ಲಾಂಚ್ ಕೂಡ ಆಗಿದೆ. ಏರ್‌ಪೋರ್ಟ್ ರಸ್ತೆಯಲ್ಲಿ ಸಾಗುವವರು ಈ ಶೋರೂಂ ಎದುರು ನಿಂತು ಕಾರನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.
ಇದು ಬೆಂಗಳೂರಿನಲ್ಲಿ ಫೆರಾರಿಯ ಮೊದಲ ಅಧಿಕೃತ ಸರ್ವೀಸ್ ಸೆಂಟರ್ ಕೂಡ ಹೌದು. ಈಗಾಗಲೇ ನವದೆಹಲಿಯಲ್ಲಿರುವ ಅಧಿಕೃತ ಫೆರಾರಿ ಆಮದುದಾರರಾದ ಸೆಲೆಕ್ಟ್ ಕಾರ್ಸ್, ದಕ್ಷಿಣ ಭಾರತಕ್ಕೂ ತನ್ನ ಸೇವೆಯನ್ನ ವಿಸ್ತರಿಸಿದೆ. ದಕ್ಷಿಣ ಭಾರತದ ಫೆರಾರಿ ಕಾರುಗಳ ಮಾಲೀಕರಿಗೆ ಮಾರಾಟದ ನಂತರದ ಇನ್ನಿತರ ಸೌಲಭ್ಯ ಕಲ್ಪಿಸುವುದು ಇದರ ಗುರಿ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ಬೆಂಗಳೂರಿನಲ್ಲೇ ಸುಮಾರು 30 ಫೆರಾರಿ ಕಾರು ಮಾಲೀಕರಿದ್ದಾರಂತೆ.

ಏರ್‌ಪೋರ್ಟ್ ರಸ್ತೆಯ ಮೀನಕುಂಟೆ ಹೊಸೂರು ಗ್ರಾಮದ ಐಟಿಸಿ ಫ್ಯಾಕ್ಟರಿ ಬಳಿ ಇರುವ ಈ ಶೋರೂಂ ಮಾರ್ಚ್‌ನಲ್ಲಿ ಶುರುವಾಗಿದೆ. ಫೆರಾರಿ ತನ್ನ ಭಾರತೀಯ ಡೀಲರ್ ಮೂಲಕ ಎರಡು ಮಹಡಿಗಳಲ್ಲಿ ಈ ಸ್ಥಳವನ್ನು ಗುತ್ತಿಗೆಗೆ ಪಡೆದಿದೆ. ನೆಲ ಮಹಡಿ 7,500 ಚದರ ಅಡಿ ಮತ್ತು ಮೊದಲ ಮಹಡಿ 2,500 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಜಾಗದ ತಿಂಗಳ ಬಾಡಿಗೆಯೇ ಬರೋಬ್ಬರಿ ₹8 ಲಕ್ಷ ಎಂದು ವರದಿಯಾಗಿದೆ. ಇದು ಬೆಂಗಳೂರಿನ ಮೊದಲ ಫೆರಾರಿ ರಿಟೇಲ್ ಶೋರೂಂ ಎನ್ನಲಾಗಿದೆ. ಕಾರು ಖರೀದಿದಾರರು ಬೆಂಗಳೂರಿನ ಈ ಶೋರೂಂ ಮೂಲಕ ದೆಹಲಿ ಶೋ ರೂಂನಿಂದ ತಮ್ಮ ಫೆರಾರಿ ಖರೀದಿಸಲು ಅನುಕೂಲ ಮಾಡಿಕೊಡಲಿದೆ.












Click it and Unblock the Notifications