Travel Tips: ಪ್ರಯಾಣದ ಖುಷಿ ಹೆಚ್ಚಿಸಲು ಹೀಗಿರಲಿ ಸಿದ್ಧತೆ
ಪೋಷಕರು ಹಾಗೂ ವಿದ್ಯಾರ್ಥಿಗಳು ಮಾರ್ಚ್, ಏಪ್ರಿಲ್ ತಿಂಗಳ ಪರೀಕ್ಷೆಯ ಒತ್ತಡ ಮುಗಿಯುತ್ತಿದ್ದಂತೆ ರಿಲ್ಯಾಕ್ಸ್ ಮೂಡ್‌ಗೆ ಹೋಗುತ್ತಾರೆ. ಈ ವೇಳೆ ಅವರ ಮನಸಿನಲ್ಲಿ ಚೆಂದ ಚೆಂದವಾದ ಐಡಿಯಾಗಳು ಹೊಳೆಯುತ್ತದೆ. ರುಚಿ, ರುಚಿಯಾಗಿ ಅಡುಗೆ ಮಾಡಿ ಸ್ನೇಹಿತರನ್ನು ಕರೆದು ಒಟ್ಟಿಗೆ ಊಟ ಮಾಡುವುದು, ಇಲ್ಲವೇ ಪ್ರವಾಸ ಹೋಗುವ ಮೂಲಕ ಸಂತಸದ ಕ್ಷಣಗಳನ್ನು ಕಳೆಯಲು ಇಷ್ಟ ಪಡುತ್ತಾರೆ.
ಒಂದು ವೇಳೆ ಪ್ರವಾಸ ಹೊರಡುವ ಸಮಯದಲ್ಲಿ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ಯಾವುದೇ ಕಿರಿಕಿರಿ ಇಲ್ಲದೆ ಸಖತ್ ಎಂಜಾಯ್ ಮಾಡಬಹುದು. ಅದು ಹೇಗೆ ಅಂತೀರ. ಇಲ್ಲಿವೆ ಹಲವು ಉಪಾಯಗಳು.

ಸಮಾನ ಮನಸ್ಕರ ಗುಂಪಿರಲಿ
ಮನೆಯ, ಕೆಲಸದ, ವ್ಯವಹಾರದ ತಾಪತ್ರಯಗಳು, ಜಂಜಾಟಗಳನ್ನು ಬದಿಗೊತ್ತಿ ಒಂದೆರಡು ದಿನವಾದರೂ ಒತ್ತಡ ರಹಿತವಾಗಿ, ಮನಸಿಗೆ ಕಿರಿಕಿರಿ ಮಾಡಿಕೊಳ್ಳದೆ ಎಂಜಾಯ್ ಮಾಡುವ ಸಲುವಾಗಿಯೇ ಪ್ರವಾಸದ ಪ್ಲ್ಯಾನ್ ಮಾಡುತ್ತೇವೆ. ಬಹುತೇಕವಾಗಿ ನಾವು ಕುಟುಂಬಸ್ಥರೊಂದಿಗೆ ಇಲ್ಲವೇ ಸ್ನೇಹಿತೊಟ್ಟಿಗೆ ಹೋಗಲು ಇಚ್ಚಿಸುತ್ತೇವೆ. ಆದರೆ, ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನಪ್ಪ ಅಂದ್ರೆ, ತಾವು ಯಾರೊಂದಿಗೆ ಪ್ರವಾಸ ಹೊರಟ್ಟಿದ್ದೇವೆ ಎಂಬುದರ ಮೇಲೆ ಪ್ರವಾಸದ ಖುಷಿಯನ್ನು ಕಾಣಬಹುದು ಎಂಬುದನ್ನು ಮಾತ್ರ ಮರೆಯಬಾರದು.
ಪ್ರವಾಸಕ್ಕೆ ಹೊರಟ ಸ್ನೇಹಿತರ, ಕುಟುಂಬ ಸದಸ್ಯರ ಮನಃ ಸ್ಥಿತಿ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಅಂತಿದ್ರೆ ಪ್ರವಾಸದುದ್ದಕ್ಕೂ ಕಿರಿಕಿರಿಯನ್ನೆ ಅನುಭವಿಸಬೇಕಾಗುತ್ತದೆ. ಈ ಚರ್ಚೆಯಲ್ಲಿಯೇ ಸಾಕಷ್ಟು ಸಮಯ, ಕಿರಿಕಿರಿ ಉಂಟಾಗಬಹುದು. ಹಾಗೂ ಊಟದ ವಿಚಾರವಾಗಿ ಇಂತಹದ್ದೆ ಹೋಟೆಲ್‌ಗೆ ಹೋಗಬೇಕೆಂಬುದರ ಕುರಿತು, ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಹೀಗೆ ಸಣ್ಣ ಪುಟ್ಟ ವಿಷಯಕ್ಕೂ ಗುಂಪಿನಲ್ಲಿ ವಾದಗಳು ಶುರುವಾದರೆ, ಪ್ರವಾಸದ ಉಲ್ಲಾಸವೆ ಹಾಳಾಗುತ್ತವೆ. ಹೀಗಾಗಿ ಪ್ರವಾಸವನ್ನು ಯಾರೊಟ್ಟಿಗೆ ಹೋಗುತ್ತೇವೆ ಎಂಬುದು ಮುಖ್ಯ ವಿಷಯವಾಗುತ್ತದೆ.
ವಾಹನಕ್ಕೆ ತಕ್ಕಷ್ಟೆ ಪ್ರವಾಸಿಗರಿರಲಿ
ಬಹುತೇಕ 15-20 ದಿನಗಳ ಹಿಂದೆಯೇ ಪ್ರವಾಸದ ಪ್ಲ್ಯಾನ್ ಆಗಿರುತ್ತದೆ. ಯಾರ್ಯಾರು, ಎಲ್ಲೆಲ್ಲಿಗೆ ಹೋಗಬೇಕೆಂಬ ಸಿದ್ದತೆ ಮಾಡಿಕೊಂಡೆ ಅದಕ್ಕೆ ತಕ್ಕಂತೆಯೇ ವಾಹವವನ್ನು ಗೊತ್ತು ಮಾಡಿಕೊಂಡಿರುತ್ತಾರೆ. ಆದರೆ, ಕೊನೆಯ ವೇಳೆಗೆ ಹತ್ತಿರದ ನೆಂಟರೋ, ಇಲ್ಲವೇ ಆತ್ಮೀಯ ಸ್ನೇಹಿತನೋ ತಾನು ಪ್ರವಾಸಕ್ಕೆ ಬರುವುದಾಗಿ ಪಟ್ಟು ಹಿಡಿಯುತ್ತಾನೆ. ಆತ ಕೂರಲು ಜಾಗ ಇರುವುದಿಲ್ಲ. ಆದರೂ ಅಡ್ಜೆಸ್ಟ್ ಮಾಡಿಕೊಂಡು ಹೋಗೋಣ ಅಂತ ಕರೆದುಕೊಂಡು ಹೋದರೆ ಇಡೀ ಪ್ರವಾಸವೇ ಕಿರಿಕಿರಿಯಿಂದ ಕೂಡಿರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಆರಾಮವಾದ ಸೀಟಿನ ಮೇಲೆ ಕೂತು ಅಕ್ಕಪಕ್ಕದ ಪ್ರವಾಸ ತಾಣಗಳನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳುತ್ತಾ ಸಾಗುವುದು ಮರೆಯದ ಅನುಭವ ನೀಡುತ್ತದೆ. ಆದರೆ, ಒಂದು ಸೀಟಿನಲ್ಲಿ ಇಬ್ಬರು ಕೂರು ಪ್ರವಾಸ ಮಾಡಿದರೆ ಅಕ್ಕ ಪಕಕ್ಕೆ, ಹಿಂದಕ್ಕೆ ತಿರುಗಲಾರದೆ ಯಾವಾಗ ನಾವು ಕಾರಿನಿಂದ ಇಳಿಯುತ್ತೇವೆ ಎಂಬ ಮನಃಸ್ಥಿತಿಗೆ ಬಂದು ಬಿಡುತ್ತೇವೆ. ಹೀಗಾಗಿ ಸೀಟಿಗೆ ಅಗತ್ಯವಿರುವಷ್ಟೆ ಮಂದಿ ಪ್ರವಾಸಕ್ಕೆ ಹೊರಡುವುದು ಉತ್ತಮ.
ಮನೆ, ವ್ಯವಹಾರದ ವಿಚಾರ ಪಕ್ಕಕ್ಕಿಡಿ
ಪ್ರವಾಸ ಅಂದ್ರೆ ಹೊಸ ಜಾಗದ ಪ್ರತಿಯೊಂದನ್ನು ಕಣ್ತುಂಬಿಕೊಳ್ಳುವುದು, ಅನುಭವಿಸುವುದೇ ಆಗಿದೆ. ಇದನ್ನು ಮಾಡಬೇಕಾದರೆ ಮನಸನ್ನು ಖಾಲಿಯಾಗಿಟ್ಟುಕೊಳ್ಳಬೇಕು. ಹೊಸ ವಿಚಾರಗಳು ನೇರವಾಗಿ ಮನಸಿಗೆ ತಾಕುವಂತಿರಬೇಕು. ಒಂದು ವೇಳೆ ಮನೆಯೊಳಗಿನ ವಿಚಾರಗಳನ್ನು ಪ್ರವಾಸದಲ್ಲೂ ಮುಂದುವರೆಸಿದರೆ ಕೇವಲ ದೇಹ ಮಾತ್ರ ಪ್ರವಾಸದಲ್ಲಿರುತ್ತದೆಯಷ್ಟೆ. ಹೀಗಾಗಿ ಪ್ರಜ್ಞಾಪೂರ್ವಕವಾಗಿಯೇ ತಮ್ಮೆಲ್ಲ ವ್ಯವಹಾರಗಳನ್ನು ಗಂಟುಮೂಟೆ ಕಟ್ಟಿ ಮನೆಯಲ್ಲಿಟ್ಟು ಪ್ರವಾಸ ಹೊರಟರೆ ಹೊಸ ಅನುಭವಕ್ಕೆ ತೆರೆದುಕೊಳ್ಳಲು ಸಾಧ್ಯ ಆಗುತ್ತದೆ. ಪ್ರವಾಸದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಬಹುದು.












Click it and Unblock the Notifications