Get Updates
Get notified of breaking news, exclusive insights, and must-see stories!

ಬನ್ನಿ ಚಹಾದ ಸ್ವಾದವನ್ನು ಆಸ್ವಾದಿಸೋಣ; ಮನಸು ಗೆಲ್ಲುವುದರಿಂದ ಹಿಡಿದು ಏನೆಲ್ಲ ಪ್ರಯೋಜನಗಳಿವೆ ತಿಳಿಯಿರಿ

ಭಾರತವೂ ಸೇರಿದಂತೆ ಚಹಾ ಉತ್ಪಾದಿಸುವ ಅನೇಕ ರಾಷ್ಟ್ರಗಳು ಪ್ರತೀ ವರ್ಷ ಡಿಸೆಂಬರ್ 15ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು 2005ರಿಂದ ಆಚರಣೆಗೆ ತಂದಿವೆ. ಈ ದಿನಾಚರಣೆ ಉದ್ದೇಶ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ಹಾಗೂ ಸಾರ್ವಜನಿಕರನ್ನು ಚಹಾ ಬೆಳೆಗಾರರು ಮತ್ತು ಕಾರ್ಮಿಕರತ್ತ ಗಮನ ಸೆಳೆಯುವುದು, ಪ್ರೋತ್ಸಾಹಿಸುವುದು, ಚಹಾ ಉದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯುವುದು.

ಚಹಾದ ಇತಿಹಾಸ

ಚಹಾದ ಇತಿಹಾಸ ನೈರುತ್ಯ ಚೀನಾದಿಂದ ಪ್ರಾರಂಭಗೊಂಡು ವಿಶ್ವದ ವಿವಿದೆಡೆಗೆ ಹಬ್ಬಿಕೊಂಡಿದೆ. ಈ ಪ್ರಾಚೀನ ಪಾನೀಯ ಬಹುತೇಕ ಜಗತ್ತಿನಾದ್ಯಂತ ಬಳಕೆಯಾಗುತ್ತಿದ್ದು, ಇಂದು ಆಧುನಿಕ ಜೀವನದ ಭಾಗವೇ ಆಗಿದೆ. ಒಮ್ಮೆ ಚೀನಾದ ಚಕ್ರವರ್ತಿ ಶೆನ್‌ನಾಂಗ್‌ ಚಹಾ ಗಿಡದ ಕೆಳಗೆ ಕುಳಿತುಕೊಂಡು ಬಿಸಿನೀರನ್ನು ಕುಡಿಯುವಾಗ ಆಕಸ್ಮಿಕವಾಗಿ ಚಹಾದ ಎಲೆಗಳು ಕಫ್‌ ಒಳಗೆ ಬಿದ್ದು ಬಿಸಿನೀರು ಸ್ವಾದಿಷ್ಟವಾದ ರುಚಿಯನ್ನು ನೀಡಿದೆ. ಹಾಗಾಗಿ ಶೆನ್‌ನಾಂಗ್‌ ಚಹಾವನ್ನು ಆವಿಷ್ಕರಿಸಿದ ಎಂದು ಇತಿಹಾಸ ಹೇಳುತ್ತದೆ.

Enjoy the Taste of Tea Health Benefits Mind Refreshing Advantages and Wellness Tips

ಭಾರತಕ್ಕೆ 1836ರಲ್ಲಿ ಚಹಾದ ಸಂಸ್ಕೃತಿಯನ್ನು, ಉದ್ಪಾದನೆ ಮತ್ತು ಬಳಕೆಯನ್ನು ಪರಿಚಯಿಸಿದವರು ಬ್ರಿಟೀಷರು. ಇಂದು ಭಾರತವು ಟೀ ಉತ್ಪಾದಿಸುವಲ್ಲಿ ಪ್ರಪಂಚದ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿದೆ. ಭಾರತದಲ್ಲಿ ಅಸ್ಸಾಂ ಪ್ರಥಮ ಸ್ಥಾನದಲ್ಲಿದೆ. ಅಸ್ಸಾಂ ಮತ್ತು ಡಾರ್ಜಲಿಂಗ್‌ ಟೀ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. 1953ರಲ್ಲಿ ಟೀ ಬೋರ್ಡ್‌ ಆಫ್‌ ಇಂಡಿಯಾ ಆರಂಭಗೊಂಡಿದ್ದು, ಅದರ ಕೇಂದ್ರ ಕಛೇರಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ. ಒಟ್ಟಾರೆ ಇಂದು ಟೀ ಸಣ್ಣ ಗೂಡಂಗಡಿ ವ್ಯಾಪಾರದಿಂದ ಹಿಡಿದು ಬೃಹತ್‌ ಮಾರುಕಟ್ಟೆಯನ್ನು ಹೊಂದಿದೆ.

ಚಹಾದ ವ್ಯಾಖ್ಯಾನ ಮತ್ತು ವಿಧಗಳು

ಟೀ ಸಸ್ಯವನ್ನು ಕ್ಯಾಮೆಲಿಯಾ ಸೈನೆನ್ಸಿಸ್ (Camellia sinensis)ಎಂಬ ಸಸ್ಯಶಾಸ್ತ್ರೀಯ ಹೆಸರಿನಿಂದ ಕರೆಯುವರು. ಇದು ಥಿಯೇಸಿ ಕುಟುಂಬಕ್ಕೆ ಸೇರಿದೆ. ಒಣಗಿಸಿ ಪುಡಿ ಮಾಡಿದ ಟೀ ಗಿಡದ ಎಲೆಗಳನ್ನು ಅಥವಾ ಮೊಗ್ಗುಗಳನ್ನು ಬಿಸಿನೀರಿಗೆ ಸೇರಿಸಿ ತಯಾರಿಸಿದ ಬಿಸಿ ಪಾನೀಯವನ್ನು ಟೀ ಎನ್ನಬಹುದು. ಇದು ನೀರನ್ನು ಹೊರತುಪಡಿಸಿ ಜನರು ಹೆಚ್ಚು ಸೇವಿಸುವ ಪಾನೀಯ.

ಇಂಗ್ಲೀಷ್ ಪದದ ಈ ಟೀಯನ್ನು ಹಿಂದಿಯಲ್ಲಿ ಚಾಯ್‌ ಎಂತಲೂ, ಕನ್ನಡದಲ್ಲಿ ಚಹಾ ಅಂತ ಕರೆಯುತ್ತಾರೆ. ಚಹಾದ ಪ್ರಮುಖ ವಿಧಗಳೆಂದರೆ ಬ್ಲಾಕ್‌ ಟೀ, ಗ್ರೀನ್‌ ಟೀ, ಡಾರ್ಕ್‌ ಟೀ, ಊಲಾಂಗ್‌ ಟೀ, ಯೆಲ್ಲೋ ಟೀ, ವೈಟ್‌ ಟೀ ಇತ್ಯಾದಿಗಳು.

ಹೀಗೊಂದು ಚಹಾದ ಜಾಹೀರಾತು

ರೇಡಿಯೋ, ಟಿವಿ ಮಾಧ್ಯಮಗಳಲ್ಲಿ ವೈವಿದ್ಯಮಯವಾಗಿ ಟೀ ಕುರಿತಾದ ಜಾಹೀರಾತುಗಳನ್ನು ತೋರಿಸುತ್ತಾರೆ. ಅದೊಂದು ಜಾಹೀರಾತಲ್ಲಿ ಚಹಾ ಹೀರುತ್ತಾ ನಟ ಮೋಹನ್‌ ಲಾಲ್‌ ಚಹಾ ಕುರಿತು ಹೀಗೆ ಹೇಳುತ್ತಿದ್ದರು. ಉಯರಂ "ಕೂಡುಂದೋರುಂ ಚಾಯಯುಡೆ ಸ್ವಾದ್‌ ಕೂಡುಂ" ಅಂದರೆ ಎತ್ತರ ಹೆಚ್ಚಾದಂತೆ ಚಹಾದ ರುಚಿಯೂ ಹೆಚ್ಚಾಗುತ್ತದೆ.

ಚಹಾ ಕುರಿತಾದ ಅನಿಸಿಕೆ

ಎಲೆನಾರ್ ರೋಸ್‌ವೆಲ್ಟ್‌ರವರು ಮಹಿಳೆಯ ಗಟ್ಟಿತನವನ್ನು ಹೀಗೆ ಅರ್ಥೈಸುತ್ತಾರೆ. A Woman is like a tea bag, you can't tell how strong she is untill you put her in hot water. ಅರ್ಥರ್ ವಿಂಗ್‌ಪಿನೆರೋ when there is tea there is hope ಎಂದಿದ್ದಾರೆ. ಇನ್ನು ಫಿಯೋಡರ್‌ ಡಾಸ್ಟೋವಸ್ಕಿ-I say let the world go to hell, but i should always have my tea ಎಂದು ತನಗಿರುವ ಚಹಾದ ಅವಶ್ಯಕತೆಯನ್ನು ಹೇಳಿಕೊಂಡಿದ್ದಾರೆ. ನಿನಗೆ ಏನು ಮಾಡಬೇಕು ಅಂತ ಗೊತ್ತಾಗದಾಗ ಚಹಾವನ್ನು ತಯಾರಿಸು ಅದರಿಂದ ನಿನ್ನ ಮಾನಸಿಕ ವೇದನೆ ದೂರಗಬಹುದೆಂದು ಮನಃಶಾಸ್ತ್ರಜ್ಞರೊಬ್ಬರು ಸಲಹೆ ನೀಡುತ್ತಾರೆ.

ಔಷಧವಾಗಿ ಚಹಾ

* ಚಹಾ ಸೇವನೆ ಆರೋಗ್ಯವನ್ನು ವೃದ್ಧಿಪಡಿಸುತ್ತದೆ.
* ಚಹಾದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಗಳಿಂದ ರಕ್ಷಿಸುತ್ತದೆ
* ಚಹಾ ಹೃದಯಾಘಾತ, ಪಾರ್ಶವಾಯುವಿನಂತಹ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿ
* ನಿಯಮಿತ ಚಹಾ ಸೇವನೆ ದೇಹದ ತೂಕವನ್ನು ಹತೋಟಿಯಲ್ಲಿರಿಸುತ್ತದೆ
* ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಚಹಾದ ಪಾಲೂ ಇದೆ.
* ಒಂದಿಷ್ಟು ಚಹಾ ಸೇವನೆಯಿಂದ ಮುಖದಲ್ಲಿ ಮಂದಹಾಸ ಮೂಡುತ್ತದೆ.
* ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.
* ಚಹಾದಲ್ಲಿರುವ ಟ್ಯಾನಿಕ್‌ ಆಂಟಿ ಕಾರ್ಸಿನೋಜೆನಿಕ್‌ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
* ಚಹಾ ಸೇವನೆಯಿಂದ ದೇಹದಲ್ಲಿ ರಕ್ಷಣಾವ್ಯವಸ್ಥೆ ವರ್ಧಿಸುತ್ತದೆ.
* ವಿಧ ವಿಧದ ರೀತಿಯ ರುಚಿ ಮತ್ತು ಪ್ರಯೋಜನಗಳನ್ನು ನೀಡುತ್ತದೆ.
* ಅವರವರ ಅಭಿರುಚಿಗೆ ತಕ್ಕಂತೆ ಲವಂಗ, ಕರಿಮೆಣಸು, ಏಲಕ್ಕಿ, ಶುಂಠಿ, ನಿಂಬೆರಸ, ತುಳಸಿ ಎಲೆ, ವೆನಿಲ್ಲಾ ಇತ್ಯಾದಿಗಳನ್ನು ಸೇರಿಸಿ ತಯಾರಿಸಿದ ಚಹಾ ಸವಿದರೆ ಕ್ಷಣಾರ್ಧದಲ್ಲೇ ತಲೆನೋವು, ಶೀತ ಮಾಯವಾಗಿಬಿಡುತ್ತದೆ.
* ದಿನಕ್ಕೆ ಒಂದೆರಡು ಭಾರಿ ಚಹಾ ಸೇವನೆ ಆರೋಗ್ಯಕ್ಕೆ ಇಂಬು ನೀಡಬಲ್ಲದು. ಆದರೆ, ಅತೀಯಾದ ಸೇವೆನೆಯಿಂದ ಆರೋಗ್ಯ ಹದಗೆಡುತ್ತದೆ ಎಂಬುದನ್ನು ಮರೆಯದಿರೋಣ.

ಸಂಪ್ರದಾಯ ಹಾಗೂ ಭಾವನಾತ್ಮಕವಾಗಿ ಚಹಾ

ಮನೆಗೆ ಬಂದ ಅತಿಥಿಗಳನ್ನು ಒಳಗೆ ಕರೆದು ಚಹಾ ನೀಡುವುದರೊಂದಿಗೆ ಅತಿಥ್ಯವನ್ನು ಆರಂಭಿಸುವ ಸಂಪ್ರದಾಯಯವಿದೆ. ಚಹಾ, ನೀಡಿದವರಿಗೆ ಸೇವಾಮನೋಭಾವವನ್ನೂ ಹಾಗೇ ಸೇವಿಸಿದವರಲ್ಲಿ ಧನ್ಯಾತಾಭಾವವನ್ನು ಮೂಡಿಸುತ್ತದೆ. ಹಲವರ ದಿನಚರಿ ಪ್ರಾರಂಭ ಒಂದು ಕಪ್‌ ಚಹಾದೊಂದಿಗೇ ಪ್ರಾರಂಭವಾಗುತ್ತದೆ. ಕೆಲವರಿಗಂತೂ ದಿನಪತ್ರಿಕೆ ಓದಲು, ಮುಂಜಾನೆಯ ನಿತ್ಯಕರ್ಮಗಳನ್ನು ಸುಗಮವಾಗಿಸಲು ಚಹಾದ ಅವಶ್ಯಕತೆ ಇದ್ದೇ ಇರುತ್ತದೆ. ಕಛೇರಿ, ಕಂಪನಿ ಅಥವಾ ಹೊರಗಡೆ ಮುಂಜಾನೆಯಿಂದ ದುಡಿದು ದಣಿದು ಬಂದು ಇಳಿ ಸಂಜೆ ಹೊತ್ತಲ್ಲಿ ಚಹಾ ಸವಿಯುವುದೇ ಒಂದು ಆನಂದ.

ಬೇಜಾರಾದ ಮನಸ್ಸಿನಲ್ಲಿ ಒಂದಿಷ್ಟು ಚಹಾ ಲವಲವಿಕೆಯನ್ನು ಉಂಟುಮಾಡಬಹುದು. ಚಳಿಗಾಲದಲ್ಲಿ ಚಹಾದ ನಂಟು ಇನ್ನೂ ಹೆಚ್ಚಾಗುತ್ತದೆ. ಚುಮು ಚುಮು ಚಳಿಯಲ್ಲಿ ಟೀ ಕಾರ್ನರ್‌ನಲ್ಲಿ ಪ್ರೇಮಿಗಳಿಬ್ಬರು ಎದುರುಬದುರು ಕುಳಿತುಕೊಂಡು ಕಣ್ಸನ್ನೆಯಲ್ಲೇ ಮಾತಾಡಿಕೊಂಡು ಬಿಸಿಯಾದ ಚಹಾವನ್ನು ಗಂಟಲಲ್ಲಿ ಇಳಿಸಿಕೊಳ್ಳುತ್ತಿದ್ದರೆ, ಹೃದಯಲ್ಲಿ ಬೆಚ್ಚಗಿನ ಭಾವನೆಗಳು ಅಂಕುರಿಸುತ್ತವೆ. ಹಾಗೇನೇ ಚಹಾಕೂಟದಲ್ಲಿ ಗೆಳೆಯರೆಲ್ಲ ಕೂಡಿಕೊಂಡು ಹರಟೆ ಹೊಡೆಯುತ್ತಾ ಚಹಾವನ್ನು ಚಪ್ಪರಿಸುತ್ತಿದ್ದರೆ ಅದರ ಮಜಾನೇ ಬೇರೆ.

ಇನ್ನು ಕೆಲವರು ಕುಟುಂಬದ ಸದಸ್ಯರೆಲ್ಲರಿಗೂ, ಸ್ನೇಹಿತರಿಗೆ ಅಥವಾ ಒಲವಿನ ಸಂಗಾತಿಗೋ ಸ್ವತಃ ಚಹಾವನ್ನು ತಯಾರಿಸಿ ನೀಡಿ ಸಂಭ್ರಮಿಸುತ್ತಾರೆ. ಕುಟುಂಬದಲ್ಲಿ ಎಲ್ಲಾ ಸದಸ್ಯರು ಸೇರಿ ಚಹಾ ಸೇವಿಸಿದರೆ, ಅಲ್ಲಿ ಸೌಹಾರ್ದತೆ ನೆಲೆಸುತ್ತದೆ. ರೈಲ್ವೆ ಸ್ಪೇಷನ್‌, ರೈಲುಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಚಹಾ ಮಾರುವವರ ಚಾಯ್‌ ಚಾಯ್‌..ಶಬ್ಧ ಚಹಾ ಪ್ರಿಯರ ಕಿವಿ ನೆಟ್ಟಗಾಗಿಸುತ್ತದೆ. ಆತ್ಮೀಯರು ಎದುರುಗೊಂಡಾಗ ಮಾತು ಆರಂಭಿಸುತ್ತಲೇ ಬನ್ನೀ ಚಹಾ ಕುಡಿಯುತ್ತಾ ಮಾತಾಡೋಣ ಎನ್ನುವ ಪರಿಪಾಠವಿದೆ. ಅದೆಷ್ಟೋ ವ್ಯವಹಾರಗಳು, ಚರ್ಚೆಗಳು ಚಹಾ ಕುಡಿಯುತ್ತಲೇ ಕುದುರಿಕೊಳ್ಳುತ್ತವೆ. ಬನ್ನೀ ಚಹಾದ ಸ್ವಾದವನ್ನು ಆಸ್ವಾದಿಸೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+