ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್
ಜಗತ್ತಿನ ಆಹಾರ ಕ್ರಮ ಬದಲಾಗುತ್ತಿದೆ. ಜನರು ವಿದೇಶಿ ಹಾಗೂ ಜಂಕ್‌ಫುಡ್‌ಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಈ ಬಾರಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ 'ಸಿರಿಧಾನ್ಯ' ಅರಿವು ಮೂಡಿಸಲು ದಸರಾ ಆಹಾರ ಮೇಳ ಉಪ ಸಮಿತಿ ಮುಂದಾಗಿದೆ.
ಜನರ ಸಮಕಾಲಿನ ಆಹಾರ ಅಭ್ಯಾಸಗಳನ್ನು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ ಮತ್ತು ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ನಿರ್ಧರಿಸಲಾಗಿದೆ.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ ಆಹಾರ ಮೇಳದಲ್ಲಿ ಬೊಂಬು ಬಿರಿಯಾನಿ ಜತೆಗೆ ಕಾಡು ಸೊಪ್ಪಿನ ಪಲ್ಯ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದ್ದಾರೆ.
ಬೆಳಗ್ಗೆಯಿಂದ ರಾತ್ರಿವರೆಗೂ ನಡೆಯುವ ಆಹಾರ ಮೇಳದಲ್ಲಿ ಮಾಂಸಹಾರ ಮತ್ತು ಸಸ್ಯಹಾರಕ್ಕೆ ಸಂಬಂಧಿಸಿದಂತೆ ನೂರಾರು ಬಗೆಯ ತಿನಿಸುಗಳು ತಯಾರಾಗುವುದರಿಂದ ಜನ ತಮಗೆ ಇಷ್ಟವಾದುದನ್ನು ತಿಂದು ಖುಷಿ ಪಡಲು ಅವಕಾಶವಿದೆ. ಆಹಾರ ಮೇಳದಲ್ಲಿ ಆದಿವಾಸಿ ಫೌಂಡೇಷನ್ ಮಳಿಗೆ ತೆರೆಯುತ್ತಿದ್ದು, ನಳ್ಳಿ ಸಾರು, ಮುದ್ದೆ, ಕಾಡುಗೆಣಸು ಜೇನುತುಪ್ಪ ಮಿಶ್ರಣ, ಬಿದಿರಕ್ಕಿ ಪಾಯಸ, ಮಾಕಳಿ ಬೇರಿನ ಟೀ ಸೇರಿದಂತೆ ಹಲವು ಕಾಡಿನ ಖಾದ್ಯಗಳ ರುಚಿ ಸವಿಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರಿನ 2 ಕಡೆ ಆಹಾರ ಮೇಳ
ಈ ಬಾರಿಯೂ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ದಸರಾ ಆಹಾರ ಮೇಳಕ್ಕೆ ಸಿದ್ಧತೆ ಶುರುವಾಗಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ಆಹಾರ ಮೇಳ ನಡೆಯಲಿದೆ. ಆಹಾರ ಮೇಳ ನಡೆಯುವ ಎರಡು ಕಡೆಗಳಿಂದ 150 ರಿಂದ 170 ಮಳಿಗೆಗಳಿಗೆ ಅವಕಾಶ ನೀಡಲು ಚಿಂತಿಸಲಾಗಿದೆ. ಈ ಪೈಕಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 90 ರಿಂದ 100 ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ 60 ರಿಂದ 70 ಮಳಿಗೆ ನಿರ್ಮಿಸಲು ಯೋಜಿಸಲಾಗಿದೆ.

ಬುಡಕಟ್ಟು ಜನರ ಬೊಂಬು ಬಿರಿಯಾನಿ
ಬುಡಕಟ್ಟು ಜನರು ಸಾಕಿದ ನಾಟಿ ಕೋಳಿಯಿಂದ ಬೊಂಬು ಬಿರಿಯಾನಿ ಸಿದ್ಧಪಡಿಸಲಾಗುವುದು. ಇದಕ್ಕೆ ಮಸಾಲೆಯನ್ನು ಕೂಡ ಅರಣ್ಯದಲ್ಲಿ ಬೆಳೆದ ಸೊಪ್ಪು ಮತ್ತಿತರ ವಸ್ತುಗಳಿಂದ ಸಿದ್ಧಪಡಿಸಲಾಗುವುದು. ಬೊಂಬಿನಲ್ಲಿ ತುಂಬಿ, ಸೌದೆಯಲ್ಲಿ ಬೇಯಿಸಿ ಪೂರೈಸಲಾಗುವುದು. ಬುಡ್ಡಕಟ್ಟು ಜನರು ಬಿರಿಯಾನಿಯನ್ನು ತಯಾರಿಸಲು ಬೊಂಬಿನೊಳಗೆ ಅಕ್ಕಿ, ಮಸಾಲೆ ಸೇರಿದಂತೆ ವಿವಿಧ ಪದಾರ್ಥಗಳನ್ನು ತುಂಬಿ ಬೆಣೆ ಹಾಕಿ ಮುಚ್ಚುತ್ತಾರೆ. ಅರ್ಧಗಂಟೆ ಸೌದೆಯ ಒಲೆಯಲ್ಲಿ ಬೇಯಿಸಿ ಭೋಜನ ಪ್ರಿಯರಿಗೆ ಸವಿಯಲು ನೀಡುತ್ತಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೊಪ್ಪಿನ ತಿನಿಸು
2014ರಿಂದಲೂ ಆದಿವಾಸಿ ಫೌಂಡೇಷನ್ ಟ್ರಸ್ಟ್‌ನಿಂದ ಮಳಿಗೆ ತೆರೆದು, ಗ್ರಾಹಕರಿಗೆ ರುಚಿ ರುಚಿಯಾದ ಊಟ ಬಡಿಸಲಾಗುತ್ತಿದೆ. ಮಾಗಡೆ ಸೊಪ್ಪು, ಜಾಗಡಿ ಸೊಪ್ಪು, ಆಲೆ ಸೊಪ್ಪು, ಗಣಿಕೆ ಸೊಪ್ಪುಗಳನ್ನು ಒಳಗೊಂಡ ವಿಶೇಷ ಪಲ್ಯ ಮಾಡಲಾಗುವುದು. ಇನ್ನು ತುಂಬೆ ಸೊಪ್ಪನ್ನು ಹಾವು ಕಡಿತಕ್ಕೂ ಆದಿವಾಸಿಗಳು ಔಷಧವಾಗಿ ಬೆಳೆಸುತ್ತಾರೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಎಂ ಕೃಷ್ಣಯ್ಯ ವಿವರಿಸಿದ್ದಾರೆ.

ದೇಶಿ-ಖಂಡಾಂತರ ಆಹಾರ ಪದ್ದತಿ ಪರಿಚಯ
ವಿವಿಧ ರೀತಿಯ ಚಾಕೊಲೇಟ್, ಹಣ್ಣು ಮತ್ತು ಹಣ್ಣಿನ ರಸ, ಸಾಂಪ್ರದಾಯಿಕ ಸಿಹಿ ತಿಂಡಿಗಳು, ಚಾಟ್ಸ್ ಸೇರಿದಂತೆ ನಾನಾ ಬಗೆಯ ತಿಂಡಿಗಳು ಮೇಳದಲ್ಲಿ ಸಿಗಲಿವೆ. ವಿಶೇಷವಾಗಿ ಚೈನೀಸ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಶೈಲಿಯ ವಿಭಿನ್ನ ತಿನಿಸುಗಳನ್ನು ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ. ಎಲ್ಲ ವರ್ಗದ ಜನರ ಅಭಿರುಚಿ ಗಮನದಲ್ಲಿರಿಸಿಕೊಂಡು ವೈವಿಧ್ಯಮಯವಾಗಿಸಲು ಉದ್ದೇಶಿಸಲಾಗಿದೆ. ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜತೆಗೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯಮಯ ಊಟೋಪಚಾರಗಳನ್ನು ಅಳವಡಿಸಲಾಗುತ್ತದೆ.
''ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧ್ಯಾನಗಳು, ಹಣ್ಣು-ಹಂಪಲು, ತರಕಾರಿ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಉಣಬಡಿಸಲು ಉದ್ದೇಶಿಸಲಾಗಿದೆ" ಎಂದು ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷೆ ಕುಮುದಾ ತಿಳಿಸಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications