ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುತ್ತಾ? ಸಂಶೋಧನೆಯಿಂದ ತಿಳಿದು ಬಂದ 'ಸತ್ಯ'
ಮಾನವನ ದೇಹದೊಳಗೆ ಮಾರಣಾಂತಿಕ ಕೊರೊನಾ ವೈರಸ್ ಹೇಗೆ ಪ್ರವೇಶಿಸುತ್ತದೆ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿ, ಆಗಾಗ ಸೋಪಿನಿಂದ ಕೈತೊಳೆದುಕೊಳ್ಳಿ, ಕಣ್ಣು-ಮೂಗು-ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ ಎಂಬ ಸಂದೇಶ ವೈದ್ಯರಿಂದಲೇ ರವಾನೆಯಾಗಿದೆ.
ಈ ನಡುವೆ ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುತ್ತಾ ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ, ಸಂಪೂರ್ಣವಾಗಿ ಗುಣಮುಖರಾದ ಮೇಲೂ ರೋಗಿಗಳ ವೀರ್ಯದಲ್ಲಿ ಡೆಡ್ಲಿ ವೈರಸ್ ಗಳಾದ ಎಬೋಲಾ ಮತ್ತು ಝೀಕಾ ತಿಂಗಳಾನುಗಟ್ಟಲೆ ಬದುಕಿದ್ದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದರು.
ಹೀಗಾಗಿ, ಕೊರೊನಾ ವೈರಸ್ ಕೂಡ ರೋಗಿಯ ವೀರ್ಯದಲ್ಲಿ ಇರಬಹುದಾ.? ಈ ಪ್ರಶ್ನೆಗೆ ಚೀನಾದಲ್ಲಿ ನಡೆದ ಒಂದು ಅಧ್ಯಯನ ಉತ್ತರ ನೀಡಿದೆ.

ವೀರ್ಯದಲ್ಲಿ ಕೊರೊನಾ ವೈರಸ್ ಇಲ್ಲ.!
ರೋಗಿಯ ವೀರ್ಯದಲ್ಲಿ ಕೊರೊನಾ ವೈರಸ್ ಇರುವುದನ್ನು ಪತ್ತೆ ಹಚ್ಚಲು ಕೊರೊನಾ ವೈರಸ್ ನ ತವರು.. ಕೋವಿಡ್-19 ಜನ್ಮಭೂಮಿ ವುಹಾನ್ ನಲ್ಲಿ ಅಧ್ಯಯನವೊಂದನ್ನು ನಡೆಸಲಾಗಿದೆ. ರೋಗಿಯ ವೀರ್ಯದಲ್ಲಿ ಕೊರೊನಾ ವೈರಸ್ ಕುರುಹು ಪತ್ತೆಯಾಗಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ವೀರ್ಯದಲ್ಲಿ ಕೊರೊನಾ ಕಂಡುಬಂದಿಲ್ಲ
ವುಹಾನ್ ನಲ್ಲಿ 34 ಕೋವಿಡ್-19 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 31-49 ವರ್ಷದ ನಡುವಿನ ಯುವಕರ ಗುಂಪಿನ ಮೇಲೆ ನಡೆದ ಪರೀಕ್ಷೆಯಲ್ಲಿ ವೀರ್ಯದಲ್ಲಿ ಕೊರೊನಾ ವೈರಸ್ ಇಲ್ಲದಿರುವುದು ಸಾಬೀತಾಗಿದೆ. ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟ ಒಂದು ತಿಂಗಳ ಬಳಿಕ ಯುವಕರ ಗುಂಪಿನ ಮೇಲೆ ಪರೀಕ್ಷೆ ನಡೆಸಲಾಗಿದೆ.

ಅಂತಿಮ ತೀರ್ಮಾನಕ್ಕೆ ಬರಬೇಡಿ
ಹಾಗಂತ ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂಬ ಅಂತಿಮ ತೀರ್ಮಾನಕ್ಕೆ ಬರಬೇಡಿ. ಯಾಕಂದ್ರೆ, ವೀರ್ಯದಲ್ಲಿರುವ ಕೊರೊನಾ ವೈರಸ್ ಬಗ್ಗೆ ಮಾತ್ರ ಈ ಅಧ್ಯಯನ ಸೀಮಿತವಾಗಿತ್ತು. ಎಂಜಲು ಮತ್ತು ಬೆವರಿನ ಮೂಲಕ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಈ ಅಧ್ಯಯನ ಉತ್ತರ ಕಂಡುಕೊಂಡಿಲ್ಲ.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರೆ...
ಅಂದ್ಹಾಗೆ, ಈ ಅಧ್ಯಯನದಲ್ಲಿ ಪಾಲ್ಗೊಂಡ ಯುವಕರ ಗುಂಪಿಗೆ ಕೊರೊನಾ ವೈರಸ್ ನಿಂದ ತೀವ್ರ ಬಾಧೆ ಉಂಟಾಗಿರಲಿಲ್ಲ. ಕೋವಿಡ್-19 ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದವರಲ್ಲಿ ವೈರಸ್ ಲೋಡ್ ಹೆಚ್ಚು ಇರಲಿದ್ದು, ಅದು ವೀರ್ಯದಲ್ಲೂ ಕಾಣಿಸಿಕೊಳ್ಳುವ ಸಂಭವವಿದೆ ಎನ್ನುತ್ತಾರೆ ಸಂಶೋಧಕರು. ಹಾಗೇ, ಪುರುಷ ಸಂತಾನೋತ್ಪತ್ತಿ ಕ್ರಿಯೆಯ ಮೇಲೆ ಕೋವಿಡ್-19 ನ ದೀರ್ಘಕಾಲದ ಪರಿಣಾಮಗಳ ಕುರಿತು ಅಧ್ಯಯನ ನಡೆದಿಲ್ಲ.

ಆತಂಕಕಾರಿ ಅಂಶ
ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟ ಸಂದರ್ಭದಲ್ಲಿ ಆರು ರೋಗಿಗಳಲ್ಲಿ ವೃಷಣಗಳಲ್ಲಿ ಉರಿಯೂತದ ಸಮಸ್ಯೆ ಕಂಡುಬಂದಿತ್ತು ಎಂಬುದು ಮತ್ತೊಂದು ಆತಂಕಕಾರಿ ಅಂಶ.












Click it and Unblock the Notifications