ಮದುವೆ ಆಗದಿದ್ರೆ ಕೆಲಸದಿಂದ ತೆಗೆದು ಹಾಕ್ತೀವಿ: ಉದ್ಯೋಗಿಗಳಿಗೆ ಕಂಪನಿ ಡೆಡ್‌ಲೈನ್
ಮದುವೆ ಆಗಿದ್ರೆ ಕೆಲಸದಲ್ಲಿ ಆಸಕ್ತಿ ಕಡಿಮೆ ಆಗುತ್ತೆ ಎಂದು ಎಷ್ಟೋ ಕಂಪನಿಗಳು ಸಿಂಗಲ್ ಹಾಗೂ ಬ್ಯಾಚುಲರ್ ಅಭ್ಯರ್ಥಿಗಳಿಗೆ ಜಾಬ್ ಕೊಡ್ತಿರೋ ಕಾಲದಲ್ಲಿ ನಾವಿದ್ದೇವೆ. ಏಕಂದ್ರೆ ಮದುವೆಯಾಗದವರು ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಚೂರು ಹೆಚ್ಚು ಕೆಲಸ ಕೊಟ್ರೂ ಓಕೆ ಅಂತಾರೆ ಅನ್ನೋ ಪ್ಲ್ಯಾನ್ ಕಂಪನಿಗಳದ್ದು. ಆದ್ರೆ, ಮದುವೆ ಆಗದಿದ್ರೆ ಕೆಲಸದಿಂದಲೇ ಕಿತ್ತು ಬಿಸಾಡುತ್ತೇವೆ ಎಂದು ಕಂಪನಿಯೇ ತನ್ನ ಉದ್ಯೋಗಿಗಳಿಗೆ ಡೆಡ್‌ಲೈನ್ ನೀಡಿ ಗಮನ ಸೆಳೆದಿದೆ.
ಹೌದು, ಚೀನಾದ ಕಂಪನಿಯೊಂದು ಸೆಪ್ಟೆಂಬರ್ ಒಳಗೆ ನೀವೇನಾದ್ರೂ ಮದುವೆಯಾಗದೆ ಇದ್ದರೆ, ಅಥವಾ ಡಿವೋರ್ಸ್ ಪಡೆದು ಸಿಂಗಲ್ ಆಗಿದ್ದರೂ ಅಂತಹ ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದೆ. ಈ ನಿಯಮದ ಬಗ್ಗೆ ಕೆಲವರು ತಮಾಷೆ ಮಾಡಿದ್ರೆ, ಹಲವರು ಟೀಕಿಸಿದ್ದಾರೆ. ಸಾರ್ವಜನಿಕರಿಂದಲೂ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದಲ್ಲಿರುವ ಶುಂಟಿಯನ್ ಕೆಮಿಕಲ್ ಗ್ರೂಪ್ ಎನ್ನುವ ಕಂಪನಿಯು ತನ್ನ ಉದ್ಯೋಗಿಗಳೆಲ್ಲರೂ ಮದುವೆಯಾಗಿರಬೇಕು ಎಂಬ ಉದ್ದೇಶದಲ್ಲಿ ಕಳೆದ ತಿಂಗಳು ಈ ನೀತಿಯನ್ನು ಘೋಷಿಸಿತ್ತು ಎನ್ನಲಾಗಿದೆ. ಸುಮಾರು 1,200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯು ತನ್ನ 28ರಿಂದ 58 ವರ್ಷ ವಯಸ್ಸಿನ ಅವಿವಾಹಿತ ಉದ್ಯೋಗಿಗಳಿಗೆ ಈ ರೂಲ್ಸ್ ಜಾರಿ ಮಾಡಿದೆ.
ಡಿವೋರ್ಸ್ ಪಡೆದವರೂ ಸೇರಿದಂತೆ ಎಲ್ಲರೂ ಮುಂದಿನ ಸೆಪ್ಟೆಂಬರ್ 30ರೊಳಗೆ ವಿವಾಹವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಕೆಲಸ ಹೋಗುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದೆ. ಮದುವೆಯಾಗಬೇಕು ಎಂದು ಮೊದಲು ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಬಳಿಕ ಕಂಪನಿಯು ನಿಮ್ಮನ್ನು ಮೌಲ್ಯಮಾಪನ ಮಾಡುತ್ತದೆ. ಗಡುವಿನಲ್ಲಿ ನೀವು ಮದುವೆಯಾಗಲು ಸಾಧ್ಯವಾಗದಿದ್ದರೆ, ಕಂಪನಿಯು ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಿದೆ ಎಂದು ಪ್ರಕಟಣೆ ಹೊರಡಿಸಿದೆ ಎಂದು ವರದಿಯಾಗಿದೆ.
ಮದುವೆ ಮತ್ತು ಜನನ ದರವನ್ನು ಹೆಚ್ಚಿಸಲು ಚೀನಾ ಸರ್ಕಾರದ ಪ್ರಯತ್ನದ ನಡುವೆ ಕಂಪನಿಯ ಈ ಪ್ರಕಟಣೆಯು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಕೆಲವರು "ಇದು ಉದ್ಯೋಗಿಯನ್ನು ಕೆಲಸದಿಂದ ಕಿತ್ತು ಹಾಕಲು ಮಾಡಿರುವ ಹೊಸ ಉಪಾಯ" ಎಂದು ದೂರಿದ್ದಾರೆ. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಬ್ಯೂರೋದ ಅಧಿಕಾರಿಗಳು ಈ ಕಂಪನಿಗೆ ಭೇಟಿ ನೀಡಿದ್ದಾರೆ. ಈ ನೀತಿಯು ಚೀನೀ ಕಾರ್ಮಿಕ ಕಾನೂನನ್ನು ಉಲ್ಲಂಘಿಸಿದೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಂಪನಿಯು ಮರುದಿನವೇ ಈ ನಿಯಮವನ್ನು ವಾಪಸ್ ಪಡೆದಿದೆ.

ಭಾರತದ ನಂತರ ಚೀನಾ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಆದರೆ ಇತ್ತೀಚೆಗೆ ಅಲ್ಲಿ ವಯಸ್ಸಾದವರ ಜನಸಂಖ್ಯೆ ಹೆಚ್ಚಾಗಿ, ಯುವಜನರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಯುವ ಪೀಳಿಗೆಗೆ ಮದುವೆಯಾಗುವಂತೆ ಹಾಗೂ ಮಕ್ಕಳಿಗೆ ಹೆಚ್ಚು ಜನ್ಮ ನೀಡುವಂತೆ ಚೀನಾ ಸರ್ಕಾರವೇ ಉತ್ತೇಜನ ನೀಡುತ್ತಿದೆ.












Click it and Unblock the Notifications