ಕೊರೊನಾನಂತರ ಮೂಳೆ ಸವೆತ; ಸೋಂಕಿಗೂ ಮೂಳೆ ಸವೆತಕ್ಕೂ ಏನು ಸಂಬಂಧ?
ನವದೆಹಲಿ, ಜುಲೈ 05: ಕೊರೊನಾ ಸೋಂಕಿನಿಂದ ಗುಣಮುಖರಾದವರ ಆರೋಗ್ಯದಲ್ಲಿ ಇನ್ನಿತರೆ ಸಮಸ್ಯೆಗಳು ಗೋಚರಿಸುತ್ತಿವೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮೊದಲು "ಬ್ಲ್ಯಾಕ್ ಫಂಗಸ್" ಶಿಲೀಂಧ್ರ ಸೋಂಕು ಕಾಣಿಸಿಕೊಂಡಿತ್ತು. ಇದೀಗ "ಅವಾಸ್ಕುಲರ್ ನೆಕ್ರೋಸಿಸ್" ಅಥವಾ ಮೂಳೆಗಳ ಅಂಗಾಂಶ ನಾಶ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.
ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಮೂಳೆ ಸವೆತ ಅಥವಾ ಮೂಳೆ ಅಂಗಾಂಶ ನಾಶದ ಮೂರು ಪ್ರಕರಣಗಳು ವರದಿಯಾಗಿವೆ. ಇನ್ನು ಕೆಲವು ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅವಾಸ್ಕುಲರ್ ನೆಕ್ರೋಸಿಸ್ ಎಂದರೆ ಏನು? ಕೊರೊನಾದಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವುದು ಏಕೆ? ಮುಂದಿದೆ ವಿವರ...

ಕೊರೊನಾದಿಂದ ಗುಣಮುಖರಾದವರಲ್ಲಿ ಮೂಳೆ ನೋವು
ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ 40 ವರ್ಷದೊಳಗಿನ ಮೂರು ಮಂದಿಯಲ್ಲಿ ಈ ಸಮಸ್ಯೆ ಗೋಚರಿಸಿದೆ. "ಕೊರೊನಾ ಸೋಂಕಿನಿಂದ ಗುಣಮುಖರಾದ ಎರಡು ತಿಂಗಳ ನಂತರ ಅವರಲ್ಲಿ ಈ ಸಮಸ್ಯೆ ಕಂಡುಬಂದಿದೆ. ಈ ರೋಗಿಗಳಲ್ಲಿ ಮೊದಲು ಹಿಂಭಾಗ ಹಾಗೂ ಕೀಲುಗಳ ಮೂಳೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಅವರು ಕೂಡ ವೈದ್ಯರಾಗಿರುವ ಕಾರಣ ಮೂಳೆ ಸವೆತ ಅಥವಾ ಮೂಳೆ ಅಂಗಾಂಶ ನಾಶದ ಲಕ್ಷಣ ಕಂಡುಬಂದ ಕೂಡಲೇ ಚಿಕಿತ್ಸೆಗೆ ಮುಂದಾಗಿದ್ದಾರೆ" ಎಂದು ಹಿಂದುಜಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಂಜಯ್ ಅಗರ್‌ವಾಲ್ ತಿಳಿಸಿದ್ದಾರೆ.

ಅವಾಸ್ಕುಲರ್ ನೆಕ್ರೋಸಿಸ್ ಎಂದರೆ ಏನು?
ದೇಹದಲ್ಲಿ ಮೂಳೆಯ ಅಂಗಾಂಶಗಳಿಗೆ ರಕ್ತ ಪೂರೈಕೆ ಸೂಕ್ತವಾಗಿರದಿದ್ದಾಗ ಮೂಳೆಗಳ ಅಂಗಾಂಶ ನಾಶವಾಗುತ್ತದೆ, ಇದನ್ನೇ ಅವಾಸ್ಕುಲರ್ ನೆಕ್ರೋಸಿಸ್ Avascular Necrosis (AVN)/Bone Death ಎಂದು ಕರೆಯುತ್ತಾರೆ. ಕ್ರಮೇಣ ಈ ಸಮಸ್ಯೆ ಗಂಭೀರ ರೂಪ ಪಡೆದು ಮೂಳೆಗಳು ಕರಗಲು ಪ್ರಾರಂಭಿಸುತ್ತವೆ. ಹಿಂಭಾಗ, ಕೀಲು ಮೂಳೆಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಅತಿಯಾದ ಸ್ಟೆರಾಯ್ಡ್‌ಗಳ ಬಳಕೆ ಅಥವಾ ಅತಿಯಾದ ಮದ್ಯಸೇವನೆ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಇದು 30ರಿಂದ 60 ವಯಸ್ಸಿನವರಲ್ಲಿ ಕಂಡುಬರುತ್ತದೆ.

ಮೂಳೆ ಸವೆತದ ಲಕ್ಷಣಗಳೇನು?
ಈ ಸಮಸ್ಯೆಯಲ್ಲಿ ಮೊದಮೊದಲು ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಭಾರ ಎತ್ತಿದಾಗ ಕ್ರಮೇಣ ಹಿಂಭಾಗದ ಅಥವಾ ಕೀಲು ಮೂಳೆಯಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಗುರುತಿಸದೇ ಚಿಕಿತ್ಸೆ ಪಡೆಯದೇ ಇದ್ದರೆ ಮೂಳೆಯೇ ನಾಶವಾಗಬಹುದು. ಇದಕ್ಕೆ ಫಿಸಿಯೋಥೆರಪಿ, ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ.

ಕೊರೊನಾದಿಂದ ಗುಣಮುಖರಾದವರಲ್ಲಿ ಏಕೆ ಮೂಳೆ ಸಮಸ್ಯೆ?
ಬ್ಲ್ಯಾಕ್ ಫಂಗಸ್ ಹಾಗೂ ಮೂಳೆ ಸವೆತ ಈ ಎರಡು ಸಮಸ್ಯೆಗಳಿಗೂ ಕೊರೊನಾ ಸೋಂಕಿಗೆ ನೀಡಲಾಗಿದ್ದ ಔಷಧವೇ ಕಾರಣ ಎನ್ನಲಾಗಿದೆ. ಮುಂಬೈನಲ್ಲಿ "ಬಿಎಂಜೆ ಕೇಸ್ ಸ್ಟಡೀಸ್" ಎಂಬ ನಿಯತಕಾಲಿಕೆಯಲ್ಲಿ "ಕೊರೊನಾ ಸೋಂಕಿನ ಭಾಗ ಅವಾಸ್ಕುಲರ್ ನೆಕ್ರೋಸಿಸ್" ಎಂಬ ಅಧ್ಯಯನ ಪ್ರಕಟಿಸಲಾಗಿದ್ದು, ಅದರಲ್ಲಿ ಸ್ಟೆರಾಯ್ಡ್‌ಗಳ ಅತಿಯಾದ ಬಳಕೆ ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಈ ಎವಿಎನ್ ಪ್ರಕರಣ ಕಂಡುಬರಲು ಕಾರಣ ಎಂದು ಉಲ್ಲೇಖಿಸಲಾಗಿದೆ. "ಈ ಸಮಸ್ಯೆಯನ್ನು ಗುರುತಿಸದೇ ನಿರ್ಲಕ್ಷಿಸಿದರೆ ಕೆಲವೇ ದಿನಗಳಲ್ಲಿ ಬ್ಲ್ಯಾಕ್ ಫಂಗಸ್‌ನಂತೆಯೇ ಅವಾಸ್ಕುಲರ್ ನೆಕ್ರೋಸಿಸ್ ಪ್ರಕರಣವೂ ಹೆಚ್ಚಾಗುತ್ತದೆ" ಎಂದು ವೈದ್ಯ ಸಂಜಯ್ ಅಗರ್‌ವಾಲ್ ಎಚ್ಚರಿಸಿದ್ದಾರೆ.












Click it and Unblock the Notifications